ಬಾಗಲಕೋಟೆ, ಮೇ 30: ಜಿಲ್ಲೆಯ ಮಹಾಲಿಂಗಪುರದಲ್ಲಿ (Mahalingpur) ಗರ್ಭಪಾತ ಮತ್ತು ಮಹಿಳೆ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 7 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರಕರಣದಲ್ಲಿ ಪ್ರಮುಖವಾಗಿ ಗರ್ಭಪಾತ (Abortion) ಮಾಡಿರುವ ಮಹಾಲಿಂಗಪುರದ ಆರೋಪಿ ಕವಿತಾ ಬಾದನ್ನವರ ಬಗ್ಗೆ ಕೆದಕಿದಷ್ಟು ಕೃತ್ಯಗಳು ಹೊರ ಬರತ್ತಿವೆ. 2019 ಹಾಗೂ 2022 ರಲ್ಲೂ ಗರ್ಭಪಾತ ಆರೋಪ ಹೊತ್ತಿದ್ದ ಕವಿತಾ, 2019ರಲ್ಲಿ ದಾಳಿ ನಡೆದಾಗ ನಾನು ನಕಲಿ ವೈದ್ಯೆ ಇದ್ದು, ಇನ್ಮುಂದೆ ಇಂತ ತಪ್ಪು ಮಾಡಲ್ಲ ಅಂತ ಮುಚ್ಚಳಕೆ ಪತ್ರ ಬರೆದುಕೊಟ್ಟಿದ್ದರು.
2022 ರಲ್ಲಿ ದಾಳಿ ನಡೆದಾಗ ಮನೆಯಲ್ಲಿ ಪ್ರಸವಪೂರ್ವ ಸಲಕರಣೆಗಳು, ಔಷಧೋಪಚಾರಗಳು, ಬೆಡ್ ಪತ್ತೆ ಆಗಿತ್ತು. ಆಗ ಆರೋಗ್ಯ ಇಲಾಖೆಯಿಂದ ಬನಹಟ್ಟಿ ಜೆಎಂಎಫ್ಸಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಆ ಕೇಸ್ ಇನ್ನೂ ನಡೆಯುತ್ತಿದೆ. ಅಷ್ಟರಲ್ಲೇ ಈಗ ಗರ್ಭಪಾತ ಮಾಡಿದ್ದಲ್ಲದೇ ಮಹಿಳೆ ಸಾವಿಗೂ ಕಾರಣ ಆಗಿದ್ದಾರೆ.
2022 ರಲ್ಲಿ ಕವಿತಾ ಮನೆ ರೇಡ್ ಮಾಡಿದಾಗ ಆಕೆ ಹೆರಿಗೆ ಮಾಡಿಸುತ್ತಿದ್ದ ಕೊಠಡಿಯನ್ನು ಅಧಿಕಾರಿಗಳು ಸೀಜ್ ಮಾಡಿದ್ದರು. ಕೊಠಡಿಯ ಇನ್ನೊಂದು ಬಾಗಿಲು ಒಳಗಿನಿಂದ ಬಂದ್ ಮಾಡಿದ್ದರು. ಆದರೆ ಕವಿತಾ ಮನೆಯ ಹಿಂಬಾಗಿಲು ಹೊಡೆದು, ಕೋಣೆ ಬಾಗಿಲು ತೆಗೆದಿದ್ದರು. ಮತ್ತೆ ಗರ್ಭಪಾತ ಕೃತ್ಯ ಮುಂದುವರೆಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಮಹಾಲಿಂಗಪುರದಲ್ಲಿ ಭ್ರೂಣಹತ್ಯೆ, ಮಹಿಳೆ ಸಾವು ಕೇಸ್: ಏಳು ಜನರ ವಿರುದ್ಧ ಎಫ್ಐಆರ್ ದಾಖಲು
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳ ತಂಡದಿಂದ ನಿನ್ನೆ ಕವಿತಾ ಮನೆಯ ಕೆಳ ಅಂತಸ್ತಿನ ಮನೆ ಸಂಪೂರ್ಣ ಸೀಜ್ ಮಾಡಲಾಗಿದೆ. 2019 ಹಾಗೂ 2022 ರ ಪ್ರಕರಣದ ದಾಖಲೆಗಳನ್ನು ಕಲೆಹಾಕಿದ್ದಾರೆ. ಇದೀಗ ಆ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಆರೋಪಿಗೆ ಜಾಮೀನು ಕೊಡದಂತೆ ಮನವಿ ಸಲ್ಲಿಸಲಾಗಿದೆ. ಕವಿತಾ ಜಸ್ಟ್ ಪಿಯುಸಿ ಮುಗಿಸಿ, ಅನಧಿಕೃತವಾಗಿ ಗರ್ಭಪಾತ ಮಾಡುತ್ತಿದ್ದ ಆರೋಪ ಇದೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಸ್ಕ್ಯಾನಿಂಗ್, ಕರ್ನಾಟಕದಲ್ಲಿ ಗರ್ಭಪಾತ: ಮೂವರು ವಶಕ್ಕೆ
ಬಾಗಲಕೋಟೆ ಡಿಎಚ್ಒ ಡಾ.ರಾಜಕುಮಾರ ಯರಗಲ್ ಪ್ರಕ್ರಿಯಿಸಿದ್ದು, 2015 ರಿಂದ 2024 ರ ಜನವರಿವರೆಗೂ ಭ್ರೂಣಪತ್ತೆ, ಅಹರ್ತೆ ಇಲ್ಲದೇ ಸ್ಕ್ಯಾನಿಂಗ್ ಮಾಡುವ ಆರೋಪ ಇದೆ. ಸದ್ಯ ಆರೋಗ್ಯ ಇಲಾಖೆ ಒಟ್ಟು ಆರು ಕೇಸ್ ದಾಖಲಿಸಿದೆ. ಆ ಎಲ್ಲ ಕೇಸ್ಗಳು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿವೆ. ಈಗ ಕವಿತಾ ಬಾದನ್ನವರ ಅವರದ್ದು ಎರಡನೇ ಭಾರಿಯ ಕೇಸ್ ಆಗಿದೆ ಎಂದು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಜಮಖಂಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೊಂಡ, ಡಿಹೆಚ್ಓ ಡಾ. ರಾಜಕುಮಾರ್ ಯರಗಲ್ ಹಾಗೂ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಡಿ.ಬಿ. ಪಟ್ಟಣಶೆಟ್ಟಿ ನೋಟಿಸ್ ನೀಡಲಾಗಿದೆ.
ಈ ಕುರಿತು ಮಾತನಾಡಿರುವ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಇಂತಹವುಗಳ ಬಗ್ಗೆ ಸಾರ್ವಜನಿಕರು ಗಮನಕ್ಕೆ ತರಬೇಕು. ಪ್ರಕರಣದ ಬಳಿಕ ಆಡಳಿತಕ್ಕೆ ಅಲರ್ಟ್ ಮೆಸೆಜ್ ನೀಡಿದ್ದೇನೆ. ಜೊತೆಗೆ ಆರೋಪಿ ಕವಿತಾ ಮನೆ ಕುರಿತು ಮಾಹಿತಿ ನೀಡುವಂತೆ ಮಹಾಲಿಂಗಪುರ ಪುರಸಭೆ ಮುಖ್ಯಾಧಿಕಾರಿಗೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:04 pm, Thu, 30 May 24