ಮಹಾರಾಷ್ಟ್ರದಲ್ಲಿ ಸ್ಕ್ಯಾನಿಂಗ್, ಕರ್ನಾಟಕದಲ್ಲಿ ಗರ್ಭಪಾತ: ಮೂವರು ವಶಕ್ಕೆ
ಇತ್ತೀಚಿಗೆ ಬೆಂಗಳೂರು ಮತ್ತು ಮಂಡ್ಯದಲ್ಲಿ ಭ್ರೂಣ ಲಿಂಗ ಪತ್ತೆ ಹತ್ಯೆ ನಡೆದಿತ್ತು. ಈ ಎರಡು ಜಿಲ್ಲೆಗಳಲ್ಲಿನ ಪ್ರಕರಣಗಳು ಮಾಸುವ ಮುನ್ನವೇ ಬಾಗಲಕೋಟೆ ಜಿಲೆಯಲ್ಲಿ ಇಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಮೂವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಬಾಗಲಕೋಟೆ, ಮೇ 29: ಭ್ರೂಣ ಲಿಂಗ ಪತ್ತೆ (Fetal gender detection) ಮತ್ತು ಹತ್ಯೆ (Feticide) ಶಿಕ್ಷಾರ್ಹ ಅಪರಾಧವಾಗಿದೆ. ಆದರೂ ಕೂಡ ಇತ್ತೀಚಿಗೆ ಬೆಂಗಳೂರು ಮತ್ತು ಮಂಡ್ಯದಲ್ಲಿ ಭ್ರೂಣ ಲಿಂಗ ಪತ್ತೆ ಹತ್ಯೆ ನಡೆದಿತ್ತು. ಈ ಎರಡು ಜಿಲ್ಲೆಗಳಲ್ಲಿನ ಪ್ರಕರಣಗಳು ಮಾಸುವ ಮುನ್ನವೇ ಬಾಗಲಕೋಟೆ (Bagalkot) ಜಿಲೆಯಲ್ಲಿ ಇಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಹೌದು, ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದ (Mahalingapur) ಮನೆಯೊಂದರಲ್ಲಿ ಗರ್ಭಪಾತ ಮಾಡುತ್ತಿರುವುದು ಬಯಲಾಗಿದ್ದು, ಮೂವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಮಹಾರಾಷ್ಟ್ರದ ಕೊಲ್ಹಾಪುರ ಮೂಲದ ಸೋನಾಲಿ (33) ಎಂಬುವರು ಮಹಾರಾಷ್ಟ್ರದ ಮಿರಜ್‌ನ ಖಾಸಗಿ ಆಸ್ಪತ್ರೆಯಲ್ಲಿ ಭ್ರೂಣ ಲಿಂಗ ಪತ್ತೆಗೆ ಒಳಗಾಗಿದ್ದಾರೆ. ಈ ವೇಳೆ ಹೊಟ್ಟೆಯಲ್ಲಿ ಹೆಣ್ಣು ಮಗು ಇರುವುದು ಗೊತ್ತಾಗಿದೆ. ಸೋನಾಲಿ ದಂಪತಿಗೆ ಈಗಾಗಲೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮೂರನೆಯದ್ದೂ ಹೆಣ್ಣು ಮಗು ಅಂತ ಗೊತ್ತಾಗುತ್ತಿದ್ದಂತೆ, ಸೋನಾಲಿ ಕುಟುಂಬಸ್ಥರು ಗರ್ಭಪಾತ ಮಾಡಿಸಲು ನಿರ್ಧರಿಸಿದ್ದಾರೆ. ಆಗ, ಮಹಾಲಿಂಗಪುರದ ಮನೆಯೊಂದರಲ್ಲಿ ಗರ್ಭಪಾತ ಮಾಡುತ್ತಿದ್ದ ಕವಿತಾ ಎಂಬುವರನ್ನು ಸಂಪರ್ಕಿಸಿ, ಸೋನಾಲಿ ಅವರನ್ನು ಕರೆದುಕೊಂಡು ಸೋಮವಾರ (ಮೇ 27)ರ ಬೆಳಗ್ಗೆ ಬರುತ್ತಾರೆ.
ಇಲ್ಲಿ ಗರ್ಭಪಾತ ಬಳಿಕ ರಕ್ತಸ್ರಾವವಾಗಿ ಸೋನಾಲಿ ಅವರು ಪ್ರಜ್ಞಾ ಹೀನರಾಗುತ್ತಾರೆ. ಆಗ ಕವಿತಾ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳುತ್ತಾರೆ. ಕಾರಿನಲ್ಲಿ ಕರೆದುಕೊಂಡು ಹೋಗುವಾಗ, ಮಾರ್ಗಮಧ್ಯೆ ಸೋನಾಲಿ ನಿಧನರಾಗಿದ್ದಾರೆ.
ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?
ಮೃತ ಸೋನಾಲಿ ದೇಹವನ್ನು ಕಾರಿನಲ್ಲಿ ತೆಗೆದುಕೊಂಡು ಹೋಗುವಾಗ, ಗಡಿಯಲ್ಲಿ ಮೀರಜ್ ಪೊಲಿಸರು ಕಾರು ತಪಾಸಣೆ ಮಾಡಿದಾಗ, ಮೃತ ದೇಹ ಪತ್ತೆಯಾಗಿದೆ. ಕೂಡಲೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳುತ್ತಾರೆ. ಮಹಾರಾಷ್ಟ್ರದ ಸಾಂಗ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಹಾರಾಷ್ಟ್ರ ಉಪ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಸಾಹೇಬ್ ಜಾಧವ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಂಡ್ಯ ಭ್ರೂಣಲಿಂಗ ಪತ್ತೆ, ಹತ್ಯೆ ಪ್ರಕರಣ: ಮಾಹಿತಿ ಇದ್ದರೂ ನಿರ್ಲಕ್ಷ್ಯ ಮಾಡಿದರೇ ಅಧಿಕಾರಿಗಳು?
ಯಾರು ಈ ಕವಿತಾ?
ಕವಿತಾ ಮಹಾಲಿಂಗಪುರ ಪಟ್ಟಣದಲ್ಲಿನ ಆಸ್ಪತ್ರೆಯೊಂದರಲ್ಲಿ ಆಯಾ ಆಗಿ ಕೆಲಸ ಮಾಡಿದ್ದಳು. ಈಕೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ, ಗರ್ಭಪಾತ ಹೇಗೆ ಮಾಡುತ್ತಾರೆ ಎಂದು ನೋಡಿಕೊಂಡಿದ್ದಳು. ನಂತರ ಕವಿತಾ ಗರ್ಭಪಾತ ಮಾಡಲು ಆರಂಭಿಸಿದ್ದಾಳೆ.
ಗರ್ಭಪಾತ ವಿಚಾರಕ್ಕೆ ನಡೆದ ಸಂಭಾಷಣೆ
ಗರ್ಭಪಾತ ಮಾಡಿಸಲು ಬಂದವ: ಮೇಡಂ ಒಬ್ಬರದು ಸ್ಕ್ಯಾನ್ ಮಾಡಬೇಕು.
ಕವಿತಾ: ನನಗೆ ಪರಿಚಯ ಇಲ್ಲ ಅಂದರೆ ಹೇಗೆ ಮಾಡಲಿ ಹೇಳಿ, ನನಗೆ ರಿಸ್ಕ್ ಇದೆ ಯಾರಿಗಾದರೂ ಹೇಳಿದರೆ ಹೇಗೆ?
ಗರ್ಭಪಾತ ಮಾಡಿಸಲು ಬಂದವ: ನಮ್ಮ ಹುಡುಗ ಹೇಳಿದ್ದ, ಹಿಂದೆ ಒಮ್ಮೆ ನೀವು ಸ್ಕ್ಯಾನ್ ಮಾಡಿ ಹೇಳಿದ್ದೀರಿ ಅಂತೆ.
ಕವಿತಾ: ಎಲ್ಲಿ ಸ್ಕ್ಯಾನ್ ಮಾಡಿದ್ದು, ನನಗೆ ಯಾರು ಪರಿಚಯ ಇಲ್ಲಪಾ.
ಗರ್ಭಪಾತ ಮಾಡಿಸಲು ಬಂದವ: ಎನ್ ಸಮಸ್ಯೆ ಅಂದ್ರೆ ಮೇಡಂ ಮೂರು ಹೆಣ್ಣು ಮಗು ಆಗಿವೆ, ಒಂದಾದರೂ ಗಂಡು ಮಗು ಇರಲಿ ಅಂತ.
ಕವಿತಾ: ಈಗ ಚಕ್ ಮಾಡಿಸಿದ ಮೇಲೆ ಅದೂ ಕೂಡ ಹೆಣ್ಣು ಅಂತ ಬಂದರೆ ಎನ್ ಮಾಡೋದು.
ಗರ್ಭಪಾತ ಮಾಡಿಸಲು ಬಂದವ: ಅಬಾರ್ಷನ್ ಮಾಡಿಸೋದು ಅಷ್ಟೇ ಮೇಡಂ. ನಮಗೆ ಇಲ್ಲಿ ಯಾರೂ ಪರಿಚಯ ಇಲ್ಲ, ನಮಗೆ ನೀವೇ ಸ್ವಲ್ಪ ಅನುಕೂಲ ಮಾಡಿದರೆ ಅನುಕೂಲ ಆಗುತ್ತೆ ರಿ.
ಕವಿತಾ: ಈ ಹಿಂದೆ ಪೀಸ್ ಎಷ್ಟು ತಗೊಂಡಿದ್ದರು.
ಗರ್ಭಪಾತ ಮಾಡಿಸಲು ಬಂದವ: ನೆನಪು ಇಲ್ಲ ಮೇಡಂ..
ಕವಿತಾ: ಈ 20 ಸಾವಿರ ತಗೆದುಕೊಳ್ಳುತ್ತೇನೆ ನಾನು.
ಗರ್ಭಪಾತ ಮಾಡಿಸಲು ಬಂದವ: ಬರಿ ಚಕ್ ಮಾಡಾಕ್ ಅಷ್ಟಾ!? ಮೇಡಂ.
ಕವಿತಾ: ಹೌದು ಚಕ್ ಮಾಡಾಲು
ಗರ್ಭಪಾತ ಮಾಡಿಸಲು ಬಂದವ: ಮತ್ತ ಅದು ಹೆಣ್ಣ ಇದ್ದರೆ, ಅಬಾರ್ಷನ್ ಮಾಡಸಲು ಎಷ್ಟು? ಬೇರೆ ಫೀಸ್ ಏನು?
ಕವಿತಾ: ಹೌದು..
ಗರ್ಭಪಾತ ಮಾಡಿಸಲು ಬಂದವ: ಸ್ಕ್ಯಾನಿಂಗ್ ಮತ್ತೆ ಅಬಾರ್ಷನ್ ಎಲ್ಲ ಸೇರಿ ಎಷ್ಟು ಆಗುತ್ತೆ.
ಕವಿತಾ: ಪೇಷಂಟ್ ನೋಡಿ ಹೇಳ್ತೀನಿ, ಹೆಂಗ್ ಅದಾಳ ಏನು ಅಂತ, ಅದರ ಮೇಲೆ ಡಿಪೆಂಡ್ ಆಗುತ್ತೆ.
ಗರ್ಭಪಾತ ಮಾಡಿಸಲು ಬಂದವ: ನೋಡಿ ತಗೋರಿ ಮೇಡಂ 20 ಬಹಳ ಆಗುತ್ತೆ.
ಕವಿತಾ: ಇಲ್ಲ ಇಲ್ಲ ಇವತ್ತಿನ ಡೇಟ್ ಎಷ್ಟು ರಿ, ಇವತ್ತೇ ರಾಯಬಾಗದವರು ಬಂದಿದ್ದರು, ಅವರಿಗೆ 25 ಸಾವಿರ ತಗೊಂಡಿದ್ದೇನೆ.
ಈ ಬಗ್ಗೆ ಟಿವಿ9 ಈ ಹಿಂದೆ ವರದಿ ಪ್ರಸಾರ ಮಾಡಿತ್ತು. ಸುದ್ದಿ ನಂತರ ಮುಧೋಳ ತಾಲೂಕು ಆರೋಗ್ಯಾಧಿಕಾರಿ ಟಿಹೆಚ್ಒ ಪಿ.ಎಲ್ ಮಲಘಾಣ್ ಅವರು ದೂರು ದಾಖಲಿಸಿದ್ದರು. ಆದರೂ ಕೂಡ ಕವಿತಾ ಮತ್ತೆ ಸದ್ದಿಲ್ಲದೆ ದಂದೆ ಶುರು ಮಾಡಿ ಒಂದು ಜೀವ ಬಲಿಪಡೆದಿದ್ದಾಳೆ.
ಪ್ರಕರಣ ಸಂಬಂಧ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಎಸ್ ಪಿ ಅಮರನಾಥರೆಡ್ಡಿ ಮಾತನಾಡಿ, ಗರ್ಭಪಾತದಿಂದ ಸೋನಾಲಿ ಸಚಿನ್ ಕದಮ್ (33) ಎಂಬುವರು ಮೃತಪಟ್ಟಿದ್ದಾರೆ. ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು. ಮಿರಜ್ ಹಾಗೂ ಕುಪ್ವಾರಾದಲ್ಲಿ ಸ್ಕ್ಯಾನಿಂಗ್ ಮಾಡಿಸಿದಾಗ ಹೆಣ್ಣುಮಗು ಅಂತ ಗೊತ್ತಾಗಿದೆ. ಸ್ಕ್ಯಾನಿಂಗ್ ಮಾಡಿಸಲು ಮಾರುತಿ ಕರ್ವಾಡ್ ಎಂಬುವ ದಲ್ಲಾಳಿಯನ್ನು ಸಂಪರ್ಕಿಸಿರುತ್ತಾರೆ. ಆತನ ಮೂಲಕ ಸೋನಾಲಿ ಕುಟುಂಬಕ್ಕೆ ಕವಿತಾ ಪರಿಚಯವಾಗುತ್ತಾಳೆ.
ಗರ್ಭಪಾತ ಮಾಡಲು 60 ಸಾವಿರ ಖರ್ಚು ಆಗುತ್ತದೆ ಎಂದು ಹೇಳುತ್ತಾರೆ. ನಂತರ ದಲ್ಲಾಳಿ ಮಾರುತಿ ಹಾಗೂ ಸೋನಾಲಿ ಸಂಬಂಧಿಕ ವಿಜಯ್ ಗೌಲಿ ಮೇ 27 ರಂದು ಬೆಳಿಗ್ಗೆ ಮಹಾಲಿಂಗಪುರಕ್ಕೆ ಕರೆ ಬರುತ್ತಾರೆ. ಮಹಾಲಿಂಗಪುರದ ಕವಿತಾ ಬದನ್ನವರ ಕಡೆ ಬೆಳಗ್ಗೆ 9.30 ಯಿಂದ 10 ರ ಮಧ್ಯೆ ಗರ್ಭಪಾತ ಮಾಡುತ್ತಾರೆ.
ಆ ನಂತರ ಮಹಿಳೆಗೆ ತಲೆ ಸುತ್ತು ಬರುತ್ತದೆ. ನಂತರ ಸಲೈನ್ ಅಳವಡಿಸಿ. ಕೆಲ ಹೊತ್ತಿನ ಬಳಿಕ ಕವಿತಾ, ಸೋನಾಲಿಯನ್ನು ಕಳುಹಿಸುತ್ತಾರೆ. ನಂತರ ಕಾರಲ್ಲಿ ಸೋನಾಲಿ ನಿಧನರಾಗುತ್ತಾರೆ. ಆಗ ಸೋನಾಲಿಯನ್ನು ಮಹಾರಾಷ್ಟ್ರದ ಸಾಂಗ್ಲಿಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿನ ವೈದ್ಯರು ಡೆತ್ ಸರ್ಟಿಪಿಕೇಟ್ ಕೇಳುತ್ತಾರೆ. ಇವರ ಬಳಿ ಇರಲಿಲ್ಲ. ಈ ವಿಚಾರ ಸಾಂಗ್ಲಿ ಪೊಲೀಸರು ತಿಳಿದು, ಆಸ್ಪತ್ರೆಗೆ ಆಗಮಿಸುತ್ತಾರೆ.
ಪೊಲೀಸರು ಮಾರುತಿ ಮತ್ತು ವಿಜಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಕವಿತಾ ಬದನ್ನವರ, ಮಹಾರಾಷ್ಟ್ರ ಮೂಲದ ಮಾರುತಿ ಕರ್ವಾಡ್, ವಿಜಯ್ ಗೌಲಿ ಸೇರಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:53 am, Wed, 29 May 24