
ಬಾಗಲಕೋಟೆ,ನವೆಂಬರ್ 10: ಬಾಗಲಕೋಟೆ (Bagalakote) ಜಿಲ್ಲೆಯ ಮುಧೋಳದಲ್ಲಿ 3,300 ರೂ. ಬೆಂಬಲ ಬೆಲೆಗೆ ಒಪ್ಪದ ಕಬ್ಬು ಬೆಳೆಗಾರರು, ಒಂದು ಟನ್ ಕಬ್ಬಿಗೆ 3,500 ರೂ. ಬೆಂಬಲ ಬೆಲೆ ನಿಗದಿಪಡಿಸುವಂತೆ ಹಾಗೂ ಹಿಂದಿನ ಬಾಕಿ ಹಣ ಪಾವತಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಈ ಕುರಿತು ಜಿಲ್ಲಾಧಿಕಾರಿ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಭೆ ನಡೆಸಿ ಚರ್ಚಿಸಿದ್ದು, ಸಭೆಯಲ್ಲಿ ಸುಮಾರು ಹದಿಮೂರು ಕಾರ್ಖಾನೆಗಳ ಮಾಲೀಕರು ಭಾಗವಹಿಸಿದ್ದರು. ಇದೀಗ ಮುಧೋಳ ರೈತರು ಹೋರಾಟ ತೀವ್ರಗೊಳಿಸಿದ್ದು, ಟನ್ ಕಬ್ಬಿಗೆ 3,500 ಬೆಲೆ ಬೇಕೇ ಬೇಕು ಎಂದು ಪಟ್ಟು ಹಿಡಿದು ಕೂತಿದ್ದಾರೆ.
ನಿರಂತರ ಹೋರಾಟದ ಫಲವಾಗಿ ಕಬ್ಬು ಬೆಳೆಗೆ ಸಿಎಂ ಬೆಲೆ ಘೋಷಣೆ ಮಾಡಿದ್ದಾರೆ. ರಾಜ್ಯಾದ್ಯಂತ ರೈತರು ಸಂಭ್ರಮಿಸಿದರೂ ಬಾಗಲಕೋಟೆಯ ರೈತರು ಮಾತ್ರ ಸಿಎಂ ಅದೇಶವನ್ನು ಒಪ್ಪುತ್ತಿಲ್ಲ. ರೈತರ ಮನವೊಲಿಸಲು ನಡೆದ ಸಂಧಾನ ಸಭೆಯೂ ವಿಫಲವಾಗಿದ್ದು, ಹೋರಾಟ ತೀವ್ರಗೊಂಡಿದೆ. ಕಬ್ಬು ಬೆಳೆಗಾರರ ಹೋರಾಟದಿಂದ ಎಚ್ಚೆತ್ತ ಜಿಲ್ಲಾಧಿಕಾರಿ, ಬಾಗಲಕೋಟೆ ಡಿಸಿ ಕಚೇರಿಯಲ್ಲಿ ಕಾರ್ಖಾನೆ ಮಾಲೀಕರ ಜೊತೆ ಸಭೆ ನಡೆಸಿದರು. ಸರ್ಕಾರದ ಆದೇಶವನ್ನು ಕಾರ್ಖಾನೆ ಮಾಲೀಕರು ಒಪ್ಪಿದರೂ ರೈತರು ಮಾತ್ರ ಒಪ್ಪಲಿಲ್ಲ.
ರೈತರ ಹೋರಾಟದ ಕಿಚ್ಚು ಹೆಚ್ಚಾದಾಗ ಕೂಡಲೇ ಮುಧೋಳ ಐಬಿಯಲ್ಲಿ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ರೈತರೊಂದಿಗೆ ಮತ್ತು ಮಾಜಿ ಸಚಿವ ಎಸ್.ಆರ್. ಪಾಟೀಲ್ ಒಡೆತನದ ಬೀಳಗಿ ಶುಗರ್ಸ್, ನಿರಾಣಿ ಶುಗರ್ಸ್, ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಸೇರಿದಂತೆ ಹದಿಮೂರು ಕಾರ್ಖಾನೆಗಳ ಮಾಲೀಕರೊಂದಿಗೆ ಸಭೆ ನಡೆಸಿದರು. ಸಿಎಂ ಘೋಷಿಸಿದ ಬೆಲೆ ಒಪ್ಪಿಕೊಳ್ಳಿ ಎಂದು ರೈತರ ಮನವೊಲಿಸಲು ಪ್ರಯತ್ನಿಸಿದರು. ಆದರೆ ರೈತರು, ಟನ್ ಕಬ್ಬಿಗೆ 3,500 ರೂಪಾಯಿ ಬೇಕೆ ಬೇಕು ಹಾಗೂ ಹೆಚ್ಚುವರಿ 500 ರೂ. ನೀಡಬೇಕೆಂದು ಪಟ್ಟು ಹಿಡಿದಿದ್ದರಿಂದ ಸಂಧಾನ ಸಭೆ ವಿಫಲವಾಗಿದ್ದು, ಸಿಡಿದೆದ್ದ ರೈತರು ಮಧ್ಯರಾತ್ರಿಯವರೆಗೂ ರಸ್ತೆಯಲ್ಲಿಯೇ ಧರಣಿ ಮಾಡಿದ್ದಾರೆ. ಅದರೊದಿಗೆ ಮುಧೋಳದಲ್ಲಿ ಹೆದ್ದಾರಿ ಬಂದ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ರೈತರ ಪ್ರಮುಖ ಬೇಡಿಕೆಗಳಲ್ಲಿ ಕಬ್ಬಿಗೆ ಟನ್‌ಗೆ 3500 ರೂ. ಬೆಲೆ ನಿಗದಿಪಡಿಸುವುದು ಮತ್ತು ಕಳೆದ ಮೂರು ವರ್ಷಗಳಿಂದ ಬಾಕಿ ಉಳಿದಿರುವ 500 ರೂ. ಎರಡನೇ ಕಂತನ್ನು ತಕ್ಷಣವೇ ಪಾವತಿಸುವುದು ಸೇರಿವೆ. ಬೆಳಗಾವಿ ಮತ್ತು ಬಾಗಲಕೋಟೆ ಸೇರಿದಂತೆ ರಾಜ್ಯಾದ್ಯಂತ ಯಾವುದೇ ಕಾರ್ಖಾನೆಗಳು ಈ ಎರಡನೇ ಕಂತನ್ನು ಪಾವತಿಸಿಲ್ಲ ಎಂದು ರೈತರು ಆರೋಪಿಸಿದ್ದಾರೆ. 11.25% ರಿಕವರಿ ಪ್ರಕಾರ ಪ್ರಸ್ತುತ ನೀಡುತ್ತಿರುವ 330 ರೂ. ದರವನ್ನು ರೈತರು ಒಪ್ಪುತ್ತಿಲ್ಲ ಎಂದು ತಿಮ್ಮಾಪುರ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ Sugarcane Farmers Protest: 3,300 ರೂ ಬೆಂಬಲ ಬೆಲೆಗೆ ಒಪ್ಪದ ರೈತರ ಹೋರಾಟ
ಹಾವೇರಿ ಜಿಲ್ಲೆಯಲ್ಲೂ ಕಬ್ಬು ಬೆಳೆಗಾರರ ಹೋರಾಟದ ಕಿಚ್ಚು ಹೆಚ್ಚಾಗಿದೆ. ಸರ್ಕಾರ ಆದೇಶ ಮಾಡಿದರೂ ಬೆಲೆ ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ರೈತರು ಪ್ರತಿಭಟನೆ ನಡೆಸಿದ್ದಾರೆ. ಎಚ್ಚೆತ್ತ ಡಿಸಿ, ಕಾರ್ಖಾನೆ ಮಾಲೀಕರು, ರೈತರ ಜೊತೆ ಸಭೆ ನಡೆಸಿದ್ದು, ಒಮ್ಮತಕ್ಕೆ ಬಾರದ ಹಿನ್ನೆಲೆಯಲ್ಲಿ ಸಭೆ ಧಿಕ್ಕರಿಸಿದ ರೈತರು ಡಿಸಿ ಕಚೇರಿ ಬಳಿಯೇ ಪ್ರತಿಭಟನೆ ನಡೆಸಿದ್ದಾರೆ. ಹೋರಾಟವನ್ನು ತೀವ್ರಗೊಳಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ನೀರು ಪಾಲಾಗಿತ್ತು. ಆದಾಗ್ಯೂ ರೈತರು ಮೆಕ್ಕೆಜೋಳ ಬೆಳೆಯನ್ನು ರಕ್ಷಿಸಿಕೊಂಡಿದ್ದರು.ಆದರೀಗ ಮೆಕ್ಕೆಜೋಳದ ದರ ಕುಸಿತ ಕಂಡಿದೆ. ದಲ್ಲಾಳಿಗಳು ಬಾಯಿಗೆ ಬಂದ ದರಕ್ಕೆ ಕೇಳುತ್ತಿದ್ದಾರೆ ಮುಂದೇನು ಮಾಡಬೇಕೆಂದು ತಿಳಿಯದ ರೈತರು ಕಂಗಾಲಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:39 am, Mon, 10 November 25