ಬಳ್ಳಾರಿ, ಮಾರ್ಚ್.14: ಬೆಂಗಳೂರಿನ ರಾಮೇಶ್ವರಂ ಕೆಫೆ (Bangalore Rameshwaram Cafe) ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧ ಶಂಕಿತ ಉಗ್ರನನ್ನ ಬೆನ್ನಟ್ಟಿರುವ ಎನ್ಐಎ (NIA) ಅಧಿಕಾರಿಗಳಿಗೆ ಮತ್ತಷ್ಟು ಕ್ಲೂಗಳು ಸಿಕ್ಕಿವೆ. ಬಾಂಬರ್‌ನೊಂದಿಗೆ ಸಂಪರ್ಕದಲ್ಲಿದ್ದಾ ಎಂಬ ಅನುಮಾನದ ಮೇರೆಗೆ ನಿನ್ನೆ (ಮಾರ್ಚ್.13 ಬಳ್ಳಾರಿ ನಗರದ ಶಬ್ಬೀರ್ ಎಂಬ ಓರ್ವನನ್ನ ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸಿದ್ದರು. ಸದ್ಯ ವಿಚಾರಣೆ ಮುಗಿದಿದ್ದು ಬಿಟ್ಟು ಕಳುಹಿಸಿದ್ದಾರೆ. ಬಂಧಿತರೊಂದಿಗೆ ಸಂಪರ್ಕವಿದ್ದ ಶಬ್ಬೀರ್ ವಿಚಾರಣೆ ಅಂತ್ಯವಾಗಿದ್ದು ಬಿಟ್ಟು ಕಳುಹಿಸಲಾಗಿದೆ.
ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಳ್ಳಾರಿಯ ಟ್ಯಾಂಕ್ ಬಂಡೂ ರಸ್ತೆಯ ನಿವಾಸಿ ಶಬ್ಬೀರ್, ಬಾಂಬರ್‌ನೊಂದಿಗೆ ಸಂಪರ್ಕದಲ್ಲಿದ್ದ ಎಂಬ ಅನುಮಾನದ ಮೇರೆಗೆ ಎನ್‌ಐಎ ಅಧಿಕಾರಿಗಳು ಮಾರ್ಚ್.13ರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬಳ್ಳಾರಿಗೆ ಆಗಮನಿಸಿ ಆತನನ್ನ ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿದ್ದರು. ಮಾರ್ಚ್ 01ನೇ ತಾರೀಖು ರಾತ್ರಿ 9 ಗಂಟೆ ಒಂದು ನಿಮಿಷಕ್ಕೆ ಬಳ್ಳಾರಿ ಹೊಸ ಬಸ್ ನಿಲ್ದಾಣಕ್ಕೆ ಬಂದಿದ್ದ ಶಂಕಿತ ಬಾಂಬರ್, ಬಸ್ ನಿಲ್ದಾಣದಿಂದ ಆಟೋ ಹತ್ತಿ ಅಲ್ಲಿಂದ 500 ಮೀಟರ್ ದೂರ ಇರುವ ಬುಡಾ ಕಾಂಪ್ಲೆಕ್ಸ್ ಬಳಿ ಬಂದು ಅಲ್ಲಿ ಶಬ್ಬೀರನನ್ನ ಭೇಟಿ ಮಾಡಿದ್ದ ಎಂದು ಹೇಳಲಾಗುತ್ತಿದೆ. ಹೀಗಾಗಿ ಸಿಸಿ ಕ್ಯಾಮರಾ ಫೋಟೋಸ್ ಆಧಾರದ ಮೇಲೆ ಶಬ್ಬೀರನನ್ನ ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದು ಬೆಂಗಳೂರಿಗೆ ತೆರಳಿ ಆತನನ್ನ ವಿಚಾರಣೆ ನಡೆಸಿದ್ದರು. ಸದ್ಯ ವಿಚಾರಣೆ ಅಂತ್ಯಗೊಂಡಿದೆ.
ಇದನ್ನೂ ಓದಿ: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ; ಬಳ್ಳಾರಿಯಲ್ಲಿ ಓರ್ವನನ್ನು ಅರೆಸ್ಟ್ ಮಾಡಿದ ಎನ್‌ಐಎ
ಇನ್ನು ಶಂಕಿತ ಬಾಂಬರ್ ನೊಂದಿಗೆ ಶಬ್ಬೀರ್ ಬುಡಾ ಕಾಂಪ್ಲೆಕ್ಸ್ ನಿಂದ 200 ಮೀಟರ್ ದೂರದಲ್ಲಿರುವ ಮೋತಿ ವೃತ್ತದ ವರಗೆ ಆತನೊಂದಿಗೆ ಮಾತನಾಡುತ್ತಾ ಕಾಲ್ನಡಿಗೆಯಲ್ಲಿ ಬಂದಿದ್ದ ಎಂದು ಹೇಳಲಾಗುತ್ತಿದೆ. ಹೀಗಾಗಿ ಎನ್‌ಐಎ ಅಧಿಕಾರಿಗಳು ಬಳ್ಳಾರಿ ನಗರದ ಟ್ಯಾಂಕ್ ಬಂಡೂ ರಸ್ತೆಯ ಅಕ್ಕಪಕ್ಕದಲ್ಲಿ ಬಿಡು ಬಿಟ್ಟು ಆತನ ಚಲನವಲನ ಗಮನಿಸಿ ವಶಕ್ಕೆ ಪಡೆದಿದ್ದರು. ಶಬ್ಬೀರನು ತೋರಣಗಲ್ ಬಳಿಯ ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಬಾಂಬರ್ನನ್ನ ಭೇಟಿ ಮಾಡಿದ್ದ ಶಬ್ಬೀರ ಮೋತಿ ವೃತ್ತದಿಂದ ಮರಳಿ ಬಸ್ ನಿಲ್ದಾಣಕ್ಕೆ ಆತನೊಂದಿಗೆ ಬಂದು ಕಲ್ಬುರ್ಗಿ ಬಸ್ ಹತ್ತಿಸಿದ್ದ ಎಂಬ ಅನುಮಾನ ಮೂಡಿದೆ. ಜೊತೆಗೆ ಬುಡಾ ಕಾಂಪ್ಲೆಕ್ಸ್ ಬಳಿ ಬಾಂಬರ್‌ಗೆ ಬಟ್ಟೆ ಬದಲಾಯಿಸಲು ಈತನೇ ಹೇಳಿದ್ದಾ ಎಂದು ಹೇಳಲಾಗುತ್ತಿದೆ. ಸದ್ಯ ನಿನ್ನೆ ನಡೆದ ವಿಚಾರಣೆಯಲ್ಲಿ ಶಬ್ಬೀರ್ ಅನೇಕ ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ ಎನ್ನಲಾಗುತ್ತಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ