ಬಳ್ಳಾರಿ: ಜಿಲ್ಲೆಯ ರೈತರು ಮುಖ್ಯವಾಗಿ ಮೆಣಸಿನಕಾಯಿಯನ್ನು ಬೆಳೆಯುತ್ತಾರೆ. ಆದರೆ ಕಳೆದ ಭಾರಿ ಮೆಣಸಿನಕಾಯಿ ಬೆಳೆ ಬೆಳೆದು ನಷ್ಟ ಅನುಭವಿಸಿದ್ದ ರೈತರು ಈ ಭಾರಿ ಬಿಳಿ ಬಂಗಾರದಲ್ಲಾದರೂ ಲಾಭ ಬರಲಿ ಎಂದು ಹತ್ತಿ ಬೆಳೆಯಲು ಮುಂದಾಗಿದ್ದು, ಗಂಗಾ ಕಾವೇರಿ ಬ್ರಾಂಡ್ನ ಜಿಕೆ-231(ganga kaveri brand GK-231) ಹತ್ತಿ ಬೀಜ ಬಿತ್ತಿ ಮತ್ತೆ ಕೈ ಸುಟ್ಟುಕೊಂಡಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಹತ್ತಿ ಬೀಜ ಖರೀದಿಸಿದ್ದ ರೈತರು, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹತ್ತಿ ಬೆಳೆ ಬೆಳೆದಿದ್ದರು. ಹತ್ತಿ ಬೆಳೆ ಎದೆಯೆತ್ತರಕ್ಕೆ ಬೆಳೆದು ಗಿಡದಲ್ಲಿ ನೂರಾರು ಕಾಯಿಗಳನ್ನು ಬಿಟ್ಟಾಗ ರೈತರ ಮುಖದಲ್ಲಿ ಸಂತಸ ಮೂಡಿತ್ತು. ಆದರೆ ಗಿಡದಲ್ಲಿ ಬಿಟ್ಟ ಕಾಯಿಗಳು ಅರಳದೇ, ಫಸಲು ಬಾರದೇ ಇರುವುದರಿಂದ ಹತ್ತಿ ಬೆಳೆದ ರೈತರು ಇದೀಗ ಬೆಳೆ ಸಿಗದೇ ಕಂಗಾಲಾಗಿ ಹೋಗಿದ್ದಾರೆ.
ಬಳ್ಳಾರಿ ತಾಲೂಕಿನ ಅಸುಂಡಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ರೈತರು ಗಂಗಾ ಕಾವೇರಿ ಬ್ರಾಂಡ್ನ ಜಿಕೆ-231 ಹತ್ತಿ ಬೀಜ ಬಿತ್ತಿದ್ದು, ಆದರೆ ಬಳ್ಳಾರಿಯ ವರದಾ ಆಗ್ರೋ ಸರ್ವಿಸ್ ಸೆಂಟರ್ನಲ್ಲಿ ಖರೀದಿಸಿದ ಬೀಜಗಳೆಲ್ಲಾ ಕಳಪೆ ಗುಣಮಟ್ಟದಾಗಿದೆ. ಇದೇ ತಳಿಯ ಹತ್ತಿ ಬಿತ್ತಿದರೆ ಉತ್ತಮ ಬೆಳೆ ಬರುತ್ತದೆ. ಎಂಬ ಭರವಸೆ ನೀಡಿದ ಕಂಪನಿಯವರು ಇದೀಗ ರೈತರು ಬೆಳೆ ಕಳೆದುಕೊಂಡ ನಂತರ ಕೈ ಎತ್ತಿದ್ದಾರೆ. ಹೀಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದಿರುವ ರೈತರಿಗೆ ಇದೀಗ ಫಸಲು ಕೈ ಸಿಗದಿರುವುದರಿಂದ ಅನ್ನದಾತರು ಕಂಗಾಲಾಗಿದ್ದಾರೆ. ಹತ್ತಿ ಬೆಳೆ ಬೆಳೆದರು ಫಸಲು ಬಾರದ ಪರಿಣಾಮ ರೈತರು ಹತ್ತಿ ಬೆಳೆಯನ್ನು ಕಿತ್ತು ಹಾಕುತ್ತಿದ್ದಾರೆ. ನಕಲಿ ಹತ್ತಿ ಬೀಜ ಮಾರಾಟ ಮಾಡಿದವರು ಮತ್ತು ನಕಲಿ ಬೀಜ ತಯಾರಿಸಿದ ಕಂಪನಿ ವಿರುದ್ದ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡು ರೈತರಿಗೆ ಬೆಳೆ ನಷ್ಟ ತುಂಬಿಸಿಕೊಡುವಂತೆ ರೈತರು ಇದೀಗ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.
ಇದನ್ನೂ ಓದಿ:ಬಳ್ಳಾರಿ ನಗರ ಕ್ಷೇತ್ರದ ಟಿಕೇಟ್ಗಾಗಿ ಶುರುವಾಗಿದೆ ಬಿಗ್ ಫೈಟ್: ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ 20 ಆಕಾಂಕ್ಷಿ ಅರ್ಜಿ
ನೂರಾರು ಎಕರೆ ಪ್ರದೇಶದಲ್ಲಿ ಬಿತ್ತಿದ ಹತ್ತಿ ಬೆಳೆ ಸಂಪೂರ್ಣವಾಗಿ ಫಸಲು ಬಾರದ ಪರಿಣಾಮ ನಕಲಿ ಬೀಜಗಳ ಸಮಸ್ಯೆಯೇ ಇದಕ್ಕೆ ಕಾರಣ ಎಂದು ರುಜುವಾತಾಗಿದೆ. ಈಗಾಗಲೇ ಕೃಷಿ ಇಲಾಖೆ ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆ ಕಳೆದುಕೊಂಡಿರುವ ರೈತರಿಗೆ ಸರ್ಕಾರ. ಜಿಲ್ಲಾಡಳಿತ ಸೂಕ್ತ ಪರಿಹಾರ ಕೊಡಿಸಲು ಮುಂದಾಗಬೇಕಾಗಿದೆ. ಇಲ್ಲದಿದ್ದರೆ ಬಳ್ಳಾರಿ ಜಿಲ್ಲೆಯ ರೈತರು ಆತ್ಮಹತ್ಯೆಯ ಹಾದಿ ಹಿಡಿದರು ಆಶ್ಚರ್ಯಪಡಬೇಕಿಲ್ಲ.
ವರದಿ: ವೀರೇಶ್ ದಾನಿ ಟಿವಿ9 ಬಳ್ಳಾರಿ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ