ಬಳ್ಳಾರಿ: ಬಂಪರ್ ಬೆಳೆ ಬಂದ್ರು ಆರಂಭವಾಗದ ಖರೀದಿ ಕೇಂದ್ರ: ರೈತರ ಕಣ್ಣೀರು

ಬಳ್ಳಾರಿಯಲ್ಲಿ ಲಕ್ಷಾಂತರ ಹೆಕ್ಟರ್ ಪ್ರದೇಶದಲ್ಲಿ ಬೆಳೆದ ಭತ್ತವನ್ನು ಖರೀದಿ ಮಾಡಬೇಕಾದ ಖರೀದಿ ಕೇಂದ್ರವೇ ಇಲ್ಲದೇ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸಾಲ ಸೋಲ ಮಾಡಿ ಭತ್ತ ಬೆಳೆದ ಬೆಳಗಾರರು ಕೈಗೆ ಬಂದ ಬೆಲೆಗೆ ಬೆಳೆ ಮಾರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಬಳ್ಳಾರಿ: ಬಂಪರ್ ಬೆಳೆ ಬಂದ್ರು ಆರಂಭವಾಗದ ಖರೀದಿ ಕೇಂದ್ರ: ರೈತರ ಕಣ್ಣೀರು
ಬಳ್ಳಾರಿ
TV9kannada Web Team

| Edited By: Kiran Hanumant Madar

Nov 25, 2022 | 3:22 PM

ಬಳ್ಳಾರಿ: ಭತ್ತದ ಕಣಜವೆಂದೇ ಪ್ರಸಿದ್ಧಿ ಪಡೆದಿರುವ ಬಳ್ಳಾರಿಯ ರೈತರು ಭತ್ತ ಮಾರಾಟ ಮಾಡಲು ಇನ್ನಿಲ್ಲದ ಕಷ್ಟಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬಳ್ಳಾರಿ, ಸಿರಗುಪ್ಪ, ಕಂಪ್ಲಿ, ಕುರಗೋಡ್ ತಾಲೂಕಿನ ಸಾವಿರಾರು ರೈತರು ಲಕ್ಷಾಂತರ ಹೆಕ್ಟರ್ ಪ್ರದೇಶದಲ್ಲಿ ಭತ್ತದ ಬೆಳೆ ಬೆಳೆಯುತ್ತಾರೆ. ತುಂಗಭದ್ರಾ ಜಲಾಶಯದ ನೀರನ್ನು ಬಳಸಿಕೊಂಡು ಭತ್ತ ಬೆಳೆಯುವ ರೈತರು ಈ ಭಾರಿ ಮೊದಲ ಫಸಲನ್ನು ಈಗಾಗಲೇ ಕಟಾವ್ ಮಾಡಿದ್ದಾರೆ. ಆದರೆ ಲಕ್ಷಾಂತರ ಹೆಕ್ಟರ್ ಪ್ರದೇಶದಲ್ಲಿ ಬೆಳೆದ ಭತ್ತವನ್ನು ಖರೀದಿ ಮಾಡಬೇಕಾದ ಖರೀದಿ ಕೇಂದ್ರವೇ ಇನ್ನು ಆರಂಭವಾಗಿಲ್ಲ. ಹೀಗಾಗಿ ರೈತರು ಬೆಳೆದ ಭತ್ತವನ್ನು ಹೇಗೆ ಮಾರಾಟ ಮಾಡುವುದು ಎಂದು ಕಂಗಾಲಾಗಿದ್ದಾರೆ.

ಮಧ್ಯವರ್ತಿಗಳ ಹಾವಳಿಗೆ ಕಂಗಾಲಾದ ಅನ್ನದಾತ

ಭತ್ತ ಖರೀದಿ ಕೇಂದ್ರ ಇನ್ನು ಆರಂಭವಾಗದ ಪರಿಣಾಮ ಮಧ್ಯವರ್ತಿಗಳು ಬಾಯಿಗೆ ಬಂದ ಬೆಲೆಗೆ ಭತ್ತ ಖರೀದಿ ಮಾಡಲು ಮುಂದಾಗಿದ್ದಾರೆ, ಇದರಿಂದ ರೈತರಿಗೆ ನಷ್ಟವುಂಟಾಗುವಂತಾಗಿದೆ. ತುಂಗಭದ್ರಾ ಜಲಾಶಯ ಭರ್ತಿಯಾಗಿರುವ ಪರಿಣಾಮ ಈ ಭಾರಿ ರೈತರು ಎರಡು ಬೆಳೆ ಬೆಳೆಯುವ ಸಂಭ್ರಮದಲ್ಲಿದ್ದಾರೆ. ಈಗಾಗಲೇ ಮೊದಲ ಬೆಳೆ ಕಟಾವ್ ಮಾಡಿರುವ ಅನ್ನದಾತರು ಎರಡನೇ ಬೆಳೆಗೆ ಭತ್ತ ನಾಟಿ ಮಾಡಲು ಸಜ್ಜಾಗಿದ್ದಾರೆ. ಆದರೆ ಬಂಪರ್ ಆಗಿ ಬಂದಿರುವ ಮೊದಲ ಬೆಳೆಯ ಫಸಲನ್ನು ಖರೀದಿ ಮಾಡಬೇಕಾದ ಭತ್ತ ಖರೀದಿ ಕೇಂದ್ರವೇ ಇನ್ನು ಆರಂಭವಾಗಿಲ್ಲ. ಅಲ್ಲದೇ ಮೊದಲ ಬೆಳೆ ಕಟಾವ್ ಮಾಡಿ ಕಣ ರಾಶಿ ಮಾಡಿರುವ ರೈತರಿಗೆ ಮಳೆಯ ಕಾಟ ಶುರುವಾಗಿದೆ. ಹೀಗಾಗಿ ಲಕ್ಷಾಂತರ ರೂಪಾಯಿ ಸಾಲ ಸೋಲ ಮಾಡಿ ಭತ್ತ ಬೆಳೆದಿರುವ ರೈತರು ಭತ್ತ ಮಾರಾಟ ಮಾಡಲು ಇನ್ನಿಲ್ಲದಂತೆ ಪರದಾಡಬೇಕಾಗಿದೆ. ಹೀಗಾಗಿ ಕೂಡಲೇ ಸರ್ಕಾರ ಭತ್ತ ಖರೀದಿ ಕೇಂದ್ರ ಆರಂಭ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಭತ್ತ ಬೆಳೆಗಾರರು ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:ಬಳ್ಳಾರಿ: ಮೊದಲ ಬಾರಿ ವೇದಿಕೆಯಲ್ಲಿ ಕಾಣಿಸಿಕೊಂಡ ಸಚಿವ ಶ್ರೀರಾಮುಲು ಪುತ್ರ; ಕುತೂಹಲ ಮೂಡಿಸಿದ ಧನುಷ್ ನಡೆ

ಭತ್ತ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದರೆ ಉತ್ತಮ ಬೆಲೆ

ಬೆಳೆಯನ್ನು ಭತ್ತ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದರೆ ರೈತರಿಗೆ ಉತ್ತಮ ಬೆಲೆ ಸಿಗುವ ನಿರೀಕ್ಷೆಯಿದೆ. ಆದರೆ ಖರೀದಿ ಕೇಂದ್ರ ಆರಂಭವಾಗದ ಪರಿಣಾಮ ಮಧ್ಯವರ್ತಿಗಳು. ದಲ್ಲಾಳಿಗಳು ಬಾಯಿಗೆ ಬಂದ ಬೆಲೆಗೆ ಭತ್ತ ಖರೀದಿ ಮಾಡಲು ಮುಂದಾಗಿದ್ದಾರೆ. ಜೊತೆಗೆ ಕೆಲವು ದಲ್ಲಾಳಿಗಳು ಭತ್ತ ಖರೀದಿ ಮಾಡಿ ನಂತರ ರೈತರಿಗೆ ಮೋಸ ಮಾಡಿದ ಸಾಕಷ್ಟು ಉದಾಹರಣೆಗಳು ಬಳ್ಳಾರಿಯಲ್ಲಿವೆ. ಹೀಗಾಗಿ ಬಳ್ಳಾರಿ ಜಿಲ್ಲಾಡಳಿತ ಇನ್ನಾದರೂ ಭತ್ತ ಖರೀದಿ ಕೇಂದ್ರ ಆರಂಭ ಮಾಡುತ್ತದೆಯೋ ಇಲ್ಲ ಅನ್ನದಾತರನ್ನು ಸಂಕಷ್ಟಕ್ಕೆ ದೂಡುತ್ತದೆಯೆ ಕಾದುನೋಡಬೇಕಾಗಿದೆ.

ವರದಿ: ವೀರೇಶ್​ ದಾನಿ ಟಿವಿ 9 ಬಳ್ಳಾರಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada