
ಬಳ್ಳಾರಿ, ಜ.14: ಜಿಲ್ಲೆಯ ಗಲಭೆಗೆ ಅಮಿತ್ ಶಾ (Amit Shah) ಕಾರಣ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಹೇಳಿರುವ ಹೇಳಿಕೆಗೆ ಸಂಬಂಧಿಸಿದಂತೆ ಪೊಲೀಸ್ ಮಹಾ ನಿರ್ದೇಶಕರಿಗೆ ಬಿಜೆಪಿ ಶಾಸಕ ಶ್ರೀವತ್ಸ ದೂರು ನೀಡಿದ್ದಾರೆ. ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಬಳ್ಳಾರಿ ಗಲಾಟೆಗೆ ಅಮಿತ್ ಶಾ ಕಾರಣ ಎಂದು ಸಾರ್ವಜನಿಕವಾಗಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ. ಹೆಣ ಬೀಳಿಸಿ ರಾಜಕಾರಣ ಮಾಡಿ ಎಂದು ಅಮಿತ್ ಶಾ ವಿ.ಸೋಮಣ್ಣ ಮೂಲಕ ಜರ್ನಾದನ ರೆಡ್ಡಿ, ರಾಮುಲುಗೆ ಸಂದೇಶ ಕೊಟ್ಟಿದ್ದಾರೆ ವಿ.ಸೋಮಣ್ಣ ಬ್ರೈನ್ ಮ್ಯಾಪಿಂಗ್ ಮಾಡಿದರೆ ಎಲ್ಲವೂ ಗೊತ್ತಾಗತ್ತೆ ಅಂತ ಲಕ್ಷ್ಮಣ್ ಸುಳ್ಳು ಆರೋಪವನ್ನು ಮಾಡಿದ್ದಾರೆ. ಇದೆಲ್ಲವೂ ಸುಳ್ಳು ಹಾಗೂ ಸಮಾಜದಲ್ಲಿ ಶಾಂತಿ ಕಾದಾಡುವ ಹೇಳಿಕೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಂಗಳೂರಿನಲ್ಲಿ ರಾಜ್ಯದ ಪೊಲೀಸ್ ನಿರ್ದೇಶಕ ಡಾ. ಎಂ. ಎ. ಸಲೀಂ ಅವರನ್ನು ಭೇಟಿ ಮಾಡಿದ್ದೇವೆ. ಖಂಡಿತ ಅವರು ಕ್ರಮ ತೆಗೆದುಕೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದು ಬಿಜೆಪಿ ಶಾಸಕ ಶ್ರೀವತ್ಸ ಹೇಳಿದ್ದಾರೆ. ಸಾರ್ವಜನಿಕರಲ್ಲಿ ಅಶಾಂತಿ ಮತ್ತು ದ್ವೇಷವನ್ನು ಪ್ರಚೋದಿಸುವ ಸುಳ್ಳು ಹೇಳಿಕೆಯನ್ನು ನೀಡುವುದು ತಪ್ಪು, ಅದು ಕೂಡ ಒಳ್ಳೆಯ ಸ್ಥಾನಮಾನದಲ್ಲಿರುವ ವ್ಯಕ್ತಿಗಳೇ ಇಂತಹ ಹೇಳಿಕೆಯನ್ನು ನೀಡಬಾರದು ಎಂದು ಹೇಳಿದ್ದಾರೆ.
ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಂ. ಲಕ್ಷ್ಮಣ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರಚೋದನೆಯಿಂದ ಬಳ್ಳಾರಿಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಇದರ ಪರಿಣಾಮವಾಗಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಸಾವನ್ನಪ್ಪಿದ್ದಾನೆ. ಈ ಘಟನೆಯ ಸಂಪೂರ್ಣ ಜವಾಬ್ದಾರಿಯನ್ನು ಅಮಿತ್ ಶಾ ಹೊತ್ತಿದ್ದಾರೆ. ಸಚಿವ ಸೋಮಣ್ಣ ಅವರನ್ನು ಬ್ರೈನ್ ಮ್ಯಾಪಿಂಗ್‌ಗೆ ಒಳಪಡಿಸಿದರೆ, ಈ ಬಗ್ಗೆ ಖಂಡಿತ ಸದ್ಯದಲೇ ಎಲ್ಲರಿಗೂ ತಿಳಿಯುತ್ತದೆ. “ಕೇಂದ್ರ ಸಚಿವ ಸೋಮಣ್ಣ ಬಳ್ಳಾರಿಗೆ ಭೇಟಿ ನೀಡಿ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಮತ್ತು ಕರ್ನಾಟಕದ ಮಾಜಿ ಸಚಿವ ಶ್ರೀರಾಮುಲು ಅವರೊಂದಿಗೆ ಚರ್ಚೆ ನಡೆಸಿದ ನಂತರ ಹಿಂಸಾಚಾರ ಸಂಭವಿಸಿದೆ. ಪತ್ರಿಕಾ ಸಭೆಗಳನ್ನು ನಡೆಸಿ ನಿಷ್ಪ್ರಯೋಜಕವಾಗಿ ಮಾತನಾಡುವುದರಿಂದ ಯಾವುದೇ ಪ್ರಯೋಜನವಿಲ್ಲ, ಒಂದು ದೇಹವನ್ನು ಉರುಳಿಸಿ ರಾಜಕೀಯ ಮಾಡಿ ಎಂಬಂತಹ ಹೇಳಿಕೆಗಳನ್ನು ಕೇಂದ್ರ ಸಚಿವ ಸೋಮಣ್ಣ ನೀಡಿದ್ದಾರೆ. ಈ ಹೇಳಿಕೆಯಿಂದಲ್ಲೇ ಗೊತ್ತಾಗುತ್ತದೆ ಕೇಂದ್ರ ಸಚಿವ ಸೋಮಣ್ಣ ಅವರು ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರಿಗೆ ಗೃಹ ಸಚಿವ ಅಮಿತ್ ಶಾ ಸಂದೇಶ ರವಾನಿಸಿದ್ದಾರೆ“ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಲಕ್ಷ್ಮಣ್ ತಮ್ಮ ಹೇಳಿಕೆಯಲ್ಲಿ ಕೇಂದ್ರ ಗೃಹ ಸಚಿವ ಶಾ ಮತ್ತು ಕೇಂದ್ರ ಸಚಿವ ಸೋಮಣ್ಣ ಅವರನ್ನು ನೇರವಾಗಿ ಹೆಸರಿಸಿ, ಯಾವುದೇ ದಾಖಲೆಗಳು, ಪುರಾವೆಗಳು ಅಥವಾ ಆಧಾರಗಳಿಲ್ಲದೆ “ಒಂದು ದೇಹ ಬೀಳಬೇಕು ಮತ್ತು ಅದರ ಮೇಲೆ ರಾಜಕೀಯ ಮಾಡಬೇಕು” ಎಂಬಂತಹ ಅತ್ಯಂತ ಗಂಭೀರ ಮತ್ತು ಪ್ರಚೋದನಕಾರಿ ಹೇಳಿಕೆಯನ್ನು ನೀಡಿದ್ದಾರೆ. ಇಂತಹ ಸುಳ್ಳು ಹೇಳಿಕೆಗಳು ಸಾರ್ವಜನಿಕರಲ್ಲಿ ಭಯ, ಆತಂಕ ಮತ್ತು ಅಶಾಂತಿಯನ್ನು ಉಂಟುಮಾಡುತ್ತವೆ. ಸಾರ್ವಜನಿಕರಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಕದಡುವ ದುರುದ್ದೇಶಪೂರಿತ ಉದ್ದೇಶದಿಂದ, ಆಧಾರರಹಿತ ಮತ್ತು ಕಪೋಲಕಲ್ಪಿತ ಆರೋಪಗಳನ್ನು ಮಾಡಲಾಗಿದೆ. ಆಡಳಿತ ಪಕ್ಷದ (ಕಾಂಗ್ರೆಸ್) ಅಧಿಕೃತ ವಕ್ತಾರರು ಕೇಂದ್ರ ಸಚಿವರ ವಿರುದ್ಧ ಸುಳ್ಳು ಆರೋಪಗಳನ್ನು ಹರಡುವ ಮೂಲಕ ಜನರನ್ನು ಪ್ರಚೋದಿಸುತ್ತಿರುವುದು ಖಂಡನೀಯ ಎಂದು ಬಿಜೆಪಿ ಹೇಳಿದೆ.
ಇದನ್ನೂ ಓದಿ: ಬಳ್ಳಾರಿ ಗಲಭೆ: ರೆಡ್ಡಿ ಬೆನ್ನಿಗೆ ನಿಂತ ಬಿಜೆಪಿ ಹೈಕಮಾಂಡ್, ದೆಹಲಿಯಿಂದ ಬಂತು ಮಹತ್ವದ ಸೂಚನೆ
ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಪದೇ ಪದೇ ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ, ನಿಂದನೀಯ ಭಾಷೆಯನ್ನು ಬಳಸಿದ್ದಾರೆ ಮತ್ತು ಸಾರ್ವಜನಿಕರು ಹಾಗೂ ವಿವಿಧ ಮಾಧ್ಯಮ ವೇದಿಕೆಗಳ ಮುಂದೆ ತಪ್ಪು ಮಾಹಿತಿಯನ್ನು ಹರಡಿದ್ದಾರೆ. ರಾಜ್ಯದಲ್ಲಿ ತಮ್ಮ ಪಕ್ಷ ಅಧಿಕಾರದಲ್ಲಿರುವುದರಿಂದ ಅವರಿಗೆ ವಿನಾಯಿತಿ ನೀಡುವುದು ಮತ್ತು ಅವರ ಇಂತಹ ಮಾತುಗಳನ್ನು ನಿಯಂತ್ರಣ ಮಾಡಿದ್ದರೆ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಅವರ ವಿರುದ್ಧ ಈಗಾಗಲೇ ಹಲವಾರು ಮಾನನಷ್ಟ ಪ್ರಕರಣಗಳು ದಾಖಲಾಗಿವೆ ಮತ್ತು ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿವೆ. ಇದರ ಹೊರತಾಗಿಯೂ, ಅವರು ಮಾತನಾಡಲು ಸರ್ಕಾರವೇ ಅವಕಾಶ ನೀಡಿದೆ ಎಂದು ಶಾಸಕ ಶ್ರೀವತ್ಸ ಹೇಳಿದರು. ಕಾಂಗ್ರೆಸ್ ನಾಯಕ ಲಕ್ಷ್ಮಣ್ ನೀಡಿದ ಹೇಳಿಕೆಯೂ ಭಾರತೀಯ ನ್ಯಾಯ ಸಂಹಿತಾ, 2023 ರ ಸೆಕ್ಷನ್ 125, 351 ಮತ್ತು 353 ರ ಅಡಿಯಲ್ಲಿ ಶಿಕ್ಷಾರ್ಹ ಗಂಭೀರ ಕ್ರಿಮಿನಲ್ ಅಪರಾಧವಾಗಿದೆ ಹೇಳಿದ್ದಾರೆ.
ಈಗಾಗಲೇ ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಗೊಂಡಿರುವ ಸಿಐಡಿ, ತನ್ನ ತನಿಖೆಗೆ ವೇಗ ನೀಡಿದೆ. ಘಟನಾ ಸ್ಥಳಕ್ಕೆ CID ADGP ಬಿಕೆ ಸಿಂಗ್ ಭೇಟಿ ನೀಡಿ, ಸಂಪೂರ್ಣ ಮಾಹಿತಿ ಕಲೆ ಹಾಕಿದ್ದಾರೆ. ಘಟನೆಯ ಮೂಲ ಬಗ್ಗೆ ಮಾಹಿತಿ ಪಡೆಯುತ್ತಿದ್ದು, ಪೊಲೀಸರು ತಾವು ನಡೆಸಿದ ತನಿಖೆಯ ದಾಖಲೆಗಳನ್ನು ಕೂಡ ನೀಡಿದ್ದಾರೆ. ಜತೆಗೆ ವಿಡಿಯೋ ಸಾಕ್ಷಗಳ ಆಧಾರಿತವಾಗಿ ವಿಚಾರಣೆ ಕರೆಯಲು ಸಿದ್ದತೆಗಳನ್ನು ನಡೆಸಲು ಮುಂದಾಗಿದ್ದಾರೆ. ಇದು ರಾಜಕೀಯ ಪ್ರೇರೆಪಿತ ಘಟನೆ ಆಗಿರುವ ಕಾರಣ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಘಟನೆ ಬಳಿಕ ನಾಪತ್ತೆಯಾದವರ ಜನರ ಮಾಹಿತಿಯನ್ನು ಕೂಡ ADGP ಬಿಕೆ ಸಿಂಗ್ ಕೇಳಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:34 am, Wed, 14 January 26