Congress President Election: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ; ಬಳ್ಳಾರಿಯಲ್ಲೇ ಮತ ಚಲಾಯಿಸಲಿದ್ದಾರೆ ರಾಹುಲ್ ಗಾಂಧಿ

ಭಾರತ್ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ಕರ್ನಾಟಕದ ಬಳ್ಳಾರಿಯ ಸಂಗನಕಲ್ಲಿನಲ್ಲಿ ವಾಸ್ತವ್ಯ ಹೂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಳ್ಳಾರಿಯಲ್ಲೇ ತಮ್ಮ ಮತ ಚಲಾಯಿಸಲಿದ್ದಾರೆ.

Congress President Election: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ; ಬಳ್ಳಾರಿಯಲ್ಲೇ ಮತ ಚಲಾಯಿಸಲಿದ್ದಾರೆ ರಾಹುಲ್ ಗಾಂಧಿ
ರಾಹುಲ್ ಗಾಂಧಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Oct 17, 2022 | 9:44 AM

ಬಳ್ಳಾರಿ: ಇಂದು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ (Congress Presidential Elections) ಚುನಾವಣೆ ನಡೆಯಲಿದ್ದು, ಅ. 19ರಂದು ಫಲಿತಾಂಶ ಹೊರಬೀಳಲಿದೆ. ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ಮತ್ತು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ನಡುವೆ ಸ್ಪರ್ಧೆ ನಡೆಯಲಿದ್ದು, ಈ ಬಾರಿ ಯಾರು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ. ಭಾರತ್ ಜೋಡೋ ಯಾತ್ರೆ (Bharat Jodo Yatra) ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಬಳ್ಳಾರಿಯಲ್ಲೇ ತಮ್ಮ ಮತ ಚಲಾಯಿಸಲಿದ್ದಾರೆ. ಬಳ್ಳಾರಿಯ ಸಂಗನಕಲ್ಲಿನಲ್ಲಿ ವಾಸ್ತವ್ಯ ಹೂಡಿರುವ ರಾಹುಲ್ ಗಾಂಧಿ ಅವರಿಗೆ ಆ ಸ್ಥಳದಲ್ಲೇ ಮತ ಚಲಾಯಿಸಲು ಬೂತ್ ನಿರ್ಮಾಣ ಮಾಡಲಾಗಿದೆ.

ಭಾರತ್ ಜೋಡೋ ಯಾತ್ರೆಯಲ್ಲಿ ಪಾದಯಾತ್ರೆ ನಡೆಸುತ್ತಿರುವ ಎಐಸಿಸಿ ಪದಾಧಿಕಾರಿಗಳು ಕೂಡ ಬಳ್ಳಾರಿಯಲ್ಲೇ ಮತದಾನ ಮಾಡಲಿದ್ದಾರೆ. ಭಾರತ್ ಜೋಡೋ ಯಾತ್ರಿಗಳು ಪಾದಯಾತ್ರೆಯಲ್ಲಿರುವ ಹಿನ್ನಲೆಯಲ್ಲಿ ರಾಹುಲ್ ಗಾಂಧಿ ಜೊತೆಗೆ ಅವರಿಗೂ ಬಳ್ಳಾರಿಯಲ್ಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಾಂಗ್ರೆಸ್ ಶಾಸಕ ನಾಗೇಂದ್ರ ಸಹ ಬಳ್ಳಾರಿಯಿಂದಲೇ ಮತ ಚಲಾಯಿಸಲಿದ್ದಾರೆ. ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಇಂದು ನಡೆಯಲಿದ್ದು, ದೇಶಾದ್ಯಂತ ಪಕ್ಷದ ಸಾವಿರಾರು ಮುಖಂಡರು ಹಾಗೂ ಕಾರ್ಯಕರ್ತರು ಮತ ಚಲಾಯಿಸಲು ಸಜ್ಜಾಗಿದ್ದಾರೆ. ಈಗಾಗಲೇ ಗಾಂಧಿ ಕುಟುಂಬಸ್ಥರು ಪಕ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ವೈಯಕ್ತಿಕವಾಗಿ ಯಾವುದೇ ಅಭ್ಯರ್ಥಿಗಳನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ಮೊದಲು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಬಾರಿ ಮತ ಚಲಾಯಿಸುವುದಿಲ್ಲ ಎಂಬ ಊಹಾಪೋಹಗಳು ಹಬ್ಬಿದ್ದವು. ಆದರೆ, ಬಳಿಕ ಈ ಬಗ್ಗೆ ಕಾಂಗ್ರೆಸ್ ಪಕ್ಷ ಸ್ಪಷ್ಟನೆ ನೀಡಿತ್ತು.

ಇದನ್ನೂ ಓದಿ: ಕಾಂಗ್ರೆಸ್‌ ಪಕ್ಷದ ಅಧ್ಯಕ್ಷೀಯ ಚುನಾವಣೆ: ಕೊನೇ ಕ್ಷಣದಲ್ಲಿ ಮೇಘಾಲಯ ಭೇಟಿ ರದ್ದು ಮಾಡಿದ ಶಶಿ ತರೂರ್

ಕಾಂಗ್ರೆಸ್ ಅಧ್ಯಕ್ಷೀಯ ರೇಸ್‌ನಲ್ಲಿ ರಾಹುಲ್ ಗಾಂಧಿ ಮತ ಚಲಾಯಿಸಲಿದ್ದಾರೆ ಎಂದು ಎಐಸಿಸಿ ಸಂವಹನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಖಚಿತಪಡಿಸಿದ್ದಾರೆ. ಪ್ರಸ್ತುತ ಭಾರತ್ ಜೋಡೋ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ಕರ್ನಾಟಕದ ಬಳ್ಳಾರಿಯಿಂದ ಮತ ಚಲಾಯಿಸಲಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಜೈರಾಮ್ ರಮೇಶ್, ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ನಾಳೆ ರಾಹುಲ್ ಗಾಂಧಿ ಅವರು ಎಲ್ಲಿ ಮತ ಚಲಾಯಿಸುತ್ತಾರೆ ಎಂಬ ಪ್ರಶ್ನೆಗಳಿವೆ. ಆ ಬಗ್ಗೆ ಯಾವುದೇ ಊಹಾಪೋಹ ಇರಬಾರದು. ಅವರು ಕಾಂಗ್ರೆಸ್ ಸಮಿತಿಯ ಪ್ರತಿನಿಧಿಗಳಾದ ಸುಮಾರು 40 ಭಾರತ್ ಯಾತ್ರಿಗಳೊಂದಿಗೆ ಬಳ್ಳಾರಿಯ ಸಂಗನಕಲ್ಲುನಲ್ಲಿರುವ ಭಾರತ್ ಜೋಡೋ ಯಾತ್ರಾ ಕ್ಯಾಂಪ್‌ಸೈಟ್‌ನಲ್ಲಿ ಮತ ಚಲಾಯಿಸಲಿದ್ದಾರೆ ಎಂದಿದ್ದಾರೆ.

ರಾಹುಲ್ ಗಾಂಧಿ ಕರ್ನಾಟಕದಿಂದ ಮತ ಚಲಾಯಿಸಲಿದ್ದು, ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ನವದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಮತ ಚಲಾಯಿಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Congress President Election: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ; ಎಲ್ಲಿ, ಹೇಗೆ ನಡೆಯುತ್ತೆ ಎಲೆಕ್ಷನ್?

ಇಂದು ಬೆಳಿಗ್ಗೆ 10 ರಿಂದ ಸಂಜೆ 4ರವರೆಗೆ ಕಾಂಗ್ರೆಸ್ ಚುನಾವಣೆಗೆ ಮತದಾನ ನಡೆಯಲಿದ್ದು, ಅಕ್ಟೋಬರ್ 19ರಂದು ನೂತನ ಕಾಂಗ್ರೆಸ್ ಅಧ್ಯಕ್ಷರನ್ನು ಘೋಷಿಸಲಾಗುವುದು. ಸುಮಾರು 9,100 ಜನರು ಮತದಾನದ ಹಕ್ಕು ಹೊಂದಿದ್ದು, ಇವರೆಲ್ಲಾ ಮತ ಚಲಾಯಿಸಲು ಅರ್ಹರಾಗಿದ್ದಾರೆ. ಪ್ರತಿ ಆಯಾ ರಾಜ್ಯಗಳ ಪ್ರದೇಶ ಕಾಂಗ್ರೆಸ್‌ ಸಮಿತಿಯ ಮುಖ್ಯ ಕಚೇರಿಯಲ್ಲಿ ಚುನಾವಣೆ ನಡೆಯಲಿದ್ದು, 200 ಮತಗಳಿಗೆ ಒಂದು ಮತಗಟ್ಟೆಯಂತೆ ಒಟ್ಟು 67 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಗುಪ್ತ ಮತದಾನ ನಡೆಯಲಿದ್ದು, ಬಳಿಕ ಕೇಂದ್ರಗಳಿಂದ ಮತಪೆಟ್ಟಿಗೆಗಳನ್ನು ದೆಹಲಿಯ ಸ್ಟ್ರಾಂಗ್ ರೂಂಗೆ ರವಾನೆ ಮಾಡಲಾಗುತ್ತದೆ. ಅ.19ರಂದು ಮತ ಎಣಿಕೆಯೂ ದೆಹಲಿಯ ಕಾಂಗ್ರೆಸ್‌ನ ಪ್ರಧಾನ ಕಚೇರಿಯಲ್ಲಿ ನಡೆಯುತ್ತದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:43 am, Mon, 17 October 22