ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ನಿವಾಸದಲ್ಲಿ ಲೆಕ್ಕಕ್ಕೆ ಸಿಗದ 31 ಲಕ್ಷ ಪತ್ತೆ: ಮಾಹಿತಿ ನೀಡಿದ ಇಡಿ
ಬಳ್ಳಾರಿ ನಗರ ಕಾಂಗ್ರೆಸ್ ಶಾಸಕ ನಾರಾಭರತ್ ರೆಡ್ಡಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ ದಾಳಿ) ಅಧಿಕಾರಿಗಳು ಫೆಬ್ರವರಿ 10 ರಂದು ದಾಳಿ ನಡೆಸಿದ್ದರು. ಬೆಳಗ್ಗೆ 6.30ಕ್ಕೆ ಏಕಕಾಲಕ್ಕೆ ಶಾಸಕ ನಾರಾಭರತ ರೆಡ್ಡಿ ಮನೆ, ತಂದೆಯ ಕಚೇರಿ, ಚಿಕ್ಕಪ್ಪ ಪ್ರತಾಪ ರೆಡ್ಡಿ ಮನೆ ಮತ್ತು ಕಚೇರಿಯ ಮೇಲೆ ದಾಳಿ ಮಾಡಿ, ಪರಿಶೀಲನೆ ನಡೆಸಲಾಗಿತ್ತು. ಈ ಬಗ್ಗೆ ಇಡಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಪತ್ತೆಯಾದ ಮೊತ್ತದ ಮಾಹಿತಿ ನೀಡಿದೆ.
ಬಳ್ಳಾರಿ, ಫೆ.13: ಬಳ್ಳಾರಿ ನಗರ ಕಾಂಗ್ರೆಸ್ ಶಾಸಕ ನಾರಾಭರತ್ ರೆಡ್ಡಿ ನಿವಾಸದ ಮೇಲೆ ದಾಳಿ ನಡೆಸಿದ್ದರ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ ಜಾರಿ ನಿರ್ದೇಶನಾಲಯ (Enforcement Directorate-ED), ಲೆಕ್ಕಕ್ಕೆ ಸಿಗದ 31 ಲಕ್ಷ ರೂಪಾಯಿ ಪತ್ತೆಯಾಗಿರುವುದಾಗಿ ತಿಳಿಸಿದೆ. ನಾರಾಭರತ್ ರೆಡ್ಡಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಫೆಬ್ರವರಿ 10 ರಂದು ದಾಳಿ ನಡೆಸಿ ಪರಿಶೀಲನೆ ನಡೆಸಿತ್ತು.
ಈ ಬಗ್ಗೆ ಟ್ವೀಟ್ ಮಾಡಿದ ಜಾರಿ ನಿರ್ದೇಶನಾಲಯ, ಸೂರ್ಯ ನಾರಾಯಣ ರೆಡ್ಡಿ, ಭರತ್ ರೆಡ್ಡಿ ಮತ್ತು ಇತರರಿಗೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ಆಂಧ್ರಪ್ರದೇಶದ ಅನೇಕ ಸ್ಥಳಗಳಲ್ಲಿ 2002 ರ PMLA ನಿಬಂಧನೆಗಳ ಅಡಿಯಲ್ಲಿ ಇಡಿ 10.02.2024 ರಂದು ಶೋಧಕಾರ್ಯ ನಡೆಸಿದೆ. ಈ ಸಮಯದಲ್ಲಿ, ವಿವಿಧ ದಾಖಲೆಗಳು, ವ್ಯವಹಾರ ದಾಖಲೆಗಳು, ಸ್ಥಿರ ಮತ್ತು ಚರ ಆಸ್ತಿಗಳ ವಿವರಗಳು ಮತ್ತು ಲೆಕ್ಕಕ್ಕೆ ಬಾರದ 31 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ.
ನಗರದ ನೆಹರು ಕಾಲೋನಿಯಲ್ಲಿರುವ ಶಾಸಕ ಭರತ್ ರೆಡ್ಡಿ ಮತ್ತು ಅವರ ಚಿಕ್ಕಪ್ಪ ಪ್ರತಾಪರೆಡ್ಡಿ ಅವರ ಮನೆ ಮೇಲೆ ಹಾಗೂ ಗಾಂಧಿನಗರದಲ್ಲಿರುವ ಶಾಸಕರ ತಂದೆ ಸೂರ್ಯನಾರಾಯಣ ರೆಡ್ಡಿ ಕಚೇರಿ, ಶಾಸಕರ ಆಪ್ತ ರತ್ನಬಾಬು, ಸೋದರ ಸಂಬಂಧಿ ಅನಿಲ್ ಮನೆ ಮೇಲೆ ದಾಳಿ ಮಾಡಿ, ದಾಖಲೆಗಳನ್ನು ಪರಿಶೀಲನೆ ನಡೆಸಲಾಗಿತ್ತು.
ಇದನ್ನೂ ಓದಿ: ಹೇಮಂತ್ ಸೊರೆನ್ ಮನೆಯಲ್ಲಿ ಪತ್ತೆಯಾದ ಬಿಎಂಡಬ್ಲ್ಯು ಕಾರು ಕಾಂಗ್ರೆಸ್ ಸಂಸದರದ್ದು: ಇಡಿ
ಬೆಂಗಳೂರಿನಿಂದ ಏಳು ವಾಹನಗಳಲ್ಲಿ 20ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಸಿಆರ್ ಪಿಎಫ್ ಭದ್ರತಾ ಸಿಬ್ಬಂದಿಗಳೊಂದಿಗೆ ಆಗಮಿಸಿ ದಾಳಿ ಮಾಡಲಾಗಿತ್ತು. ಶಾಸಕ ಕಚೇರಿಯಲ್ಲಿ ನಿಲ್ಲಿಸಿರುವ ಸ್ಕಾರ್ಫಿಯೋ ವಾಹನದಲ್ಲಿನ ವಸ್ತುಗಳನ್ನು ಪರಿಶೀಲಿಸಲಾಗಿತ್ತು. ದಾಳಿಯ ಸಂದರ್ಭದಲ್ಲಿ ಶಾಸಕರು ಬಳ್ಳಾರಿ ನಗರದಲ್ಲಿಯೇ ಇದ್ದಾರೆ ಎಂದು ಹೇಳಲಾಗುತ್ತಿದೆ. ಶಾಸಕರ ಕುಟುಂಬಕ್ಕೆ ಸಂಬಂಧಿಸಿದಂತೆ ಗ್ರಾನೈಟ್ ವ್ಯವಹಾರ ಇದೆ. ಒಂದು ವರ್ಷದ ಹಿಂದೆ ಶಾಸಕರ ತಂದೆ ಸೂರ್ಯನಾರಾಯಣ ರೆಡ್ಡಿ ಅವರ ಕಚೇರಿಯ ಮೇಲೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ದಾಳಿ ಮಾಡಿದ್ದರು. ನಂತರದಲ್ಲಿ ಈಗ ಇಡಿ ದಾಳಿ ನಡೆಸಿದೆ.
ಶಾಸಕರ ಚಿಕ್ಕಪ್ಪ ನಾರಾ ಪ್ರತಾಪ ರೆಡ್ಡಿ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ ಅಲ್ಲೂ ಪರಿಶೀಲನೆ ನಡೆಸಿದ್ದರು. ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಗಾವರಾಳ ಗ್ರಾಮದಲ್ಲಿ ಬಳ್ಳಾರಿ ಶಾಸಕ ಭರತ್ ರೆಡ್ಡಿ ಅವರಿಗೆ ಸೇರಿದ ಗ್ರಾನೈಟ್ ಕ್ವಾರಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಗಾವರಾಳ ಗ್ರಾಮದಲ್ಲಿರುವ ಎಸ್ಆರ್ಇ ಗ್ರಾನೈಟ್ ಕ್ವಾರಿಗಳು ಒಟ್ಟು ಮೂರು ಕ್ವಾರಿಗಳ ಮೇಲೆ ದಾಳಿ ನಡಸಿ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದ್ದರು.
ದಾಳಿಯ ವಿಷಯ ತಿಳಿಯುತ್ತಿದ್ದಂತೆ ಕಾಂಗ್ರೆಸ್ ನಾಯಕರು ಶಾಸಕರ ಕಚೇರಿಯ ಮುಂದೆ ಧಾವಿಸಿ, ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದರು. ದಾಳಿಯ ಹಿಂದೆ ಕೇಂದ್ರದ ಕೈವಾಡ ಇದೆ, ಕೇವಲ ಕಾಂಗ್ರೆಸ್ ನಾಯಕರ ಮನೆ ಮೇಲೆ ದಾಳಿಯಾಗುತ್ತದೆ. ಯಾಕೆ ಬಿಜೆಪಿ ನಾಯಕರು ಯಾವುದೇ ಬಿಸಿನೆಸ್ ಮಾಡಲ್ವಾ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ದಾಳಿ ಮಾಡಲಾಗಿದೆ ಎಂದು ಆರೋಪಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ