ಅದು ಅಂತಿಂಥ ಮನೆಯಲ್ಲ, ಅಕ್ಷರಶ ಅರಮನೆ ಅದು. ಹತ್ತಾರು ಕೋಟಿ ರೂಪಾಯಿ ಖರ್ಚು ಮಾಡಿ ಸಚಿವರು ಆ ಭವ್ಯ ಬಂಗಲೆ ಕಟ್ಟಿದ್ದಾರೆ. ಆದರೆ ಸರ್ಕಾರಿ ಜಾಗ ಒತ್ತುವರಿ ಮಾಡಿ ಅರಮನೆ ನಿರ್ಮಾಣ ಮಾಡಿದ ಆರೋಪ ಆ ಸಚಿವರ ಮೇಲಿದೆ. ಹೀಗಾಗಿ ಹೈಕೋರ್ಟ್ 8 ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಿದೆ. ಅಷ್ಟಕ್ಕೂ ಅದ್ಯಾವ ಸಚಿವರ ಅರಮನೆ ನಿರ್ಮಿಸಿದ್ದಾರೆ. ಒತ್ತುವರಿ ಆರೋಪವೇನು ಅನ್ನೋ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ
ಅದು ವಿಜಯನಗರ ಜಿಲ್ಲೆಯ ರೂವಾರಿ ರಾಜ್ಯ ಪ್ರವಾಸೋದ್ಯಮ ಸಚಿವ ಆನಂದಸಿಂಗ್ ವಾಸಿಸುವ ಅರಮನೆ. ಇದೀಗ ಈ ಅರಮನೆ ವಿಚಾರವಾಗಿ ಆನಂದಸಿಂಗ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಅದು ಸಚಿವರು ಸರ್ಕಾರಿ ಜಾಗ ಒತ್ತುವರಿ ಮಾಡಿ ಭವ್ಯ ಬಂಗಲೆ ನಿರ್ಮಿಸಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಇದು ಇಲ್ಲಿಯವರೆಗೂ ಆರೋಪ ಪ್ರತ್ಯಾರೋಪವಾಗಿತ್ತು. ಆದರೆ ಈಗ ಸಚಿವರು ಸರ್ಕಾರಿ ಜಾಗ ಒತ್ತುವರಿ ಮಾಡಿ ಅರಮನೆ ನಿರ್ಮಿಸಿದ್ದಾರೆಂದು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಹೊಸಪೇಟೆ ಪಟ್ಟಣದ ಸರ್ವೇ ನಂಬರ್ 73,74,75ರಲ್ಲಿ ಸುರಕ್ಷಾ ಎಂಟರ್‌ಪ್ರೈಸೆಸ್‌ನವರು ಭೂ ಕಬಳಿಕೆ ಮಾಡಿ ಲೇಔಟ್ ನಿರ್ಮಿಸಿದ ಆರೋಪವಿದೆ. ಜೊತೆಗೆ ಸಣ್ಣ ನೀರಾವರಿ ಇಲಾಖೆಗೆ ಸೇರಿದ ಸರ್ವೆ ನಂಬರ್ 63 ರಲ್ಲಿ 0.30 ಸೆಂಟ್ಸ್ ಹಾಗೂ ಸರ್ವೆ ನಂಬರ್ 67 ರಲ್ಲಿ ಒಳಚರಂಡಿಗೆ ಸೇರಿದ 0.5 ಸೆಂಟ್ಸ್ ಜಾಗವನ್ನ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಭೂ ಒತ್ತುವರಿ ಮಾಡಿದ ಗಂಭೀರ ಆರೋಪವಿದೆ.
ಸುರಕ್ಷಾ ಎಂಟರ್‌ಪ್ರೈಸೆಸ್ ಹೆಸರಿನಲ್ಲಿರುವ ಹಾಲಿ ಜಮೀನು ಮಾರಾಟ ಮಾಡುವ ಮುನ್ನವೆ ಸಚಿವ ಆನಂದಸಿಂಗ್ ಅದನ್ನು ಭೂ ಪರಿವರ್ತನೆ ಮಾಡಿಸಿಕೊಂಡಿದ್ದರು. ಸಚಿವರು ಒಳಚರಂಡಿ ಹಾಗೂ ಸಣ್ಣ ನೀರಾವರಿ ಇಲಾಖೆಗೆ ಸೇರಿದ ಜಮೀನು ಒತ್ತುವರಿ ಮಾಡಿದ ಬಗ್ಗೆ ನಗರಸಭೆ ಸದಸ್ಯ ಅಬ್ದುಲ್ ಖದೀರ್ ಹಾಗೂ ಮಾಜಿ ನಗರಸಭೆ ಸದಸ್ಯ ವೇಣುಗೋಪಾಲ ಹೈಕೋರ್ಟ ಪೀಠದಲ್ಲಿ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಸದ್ಯ ಹೈಕೋರ್ಟ್ ರಿಟ್ ಅರ್ಜಿಯನ್ನು ಕೈಗೆತ್ತಿಕೊಂಡಿದ್ದು, ಪ್ರಾಥಮಿಕ ವಿಚಾರಣೆ ನಡೆಸಿದ ಬಳಿಕ ಅಕ್ಷೇಪಣೆಗಳಿದ್ದಲ್ಲಿ ತಕ್ಷಣವೇ ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ಸೂಚಿಸಿದ್ದಾರೆ. ಜೊತೆಗೆ ಪ್ರಕರಣಕ್ಕೆ ಸಂಭಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶೀ, ನಗರಾಭಿವೃದ್ದಿ, ಕಂದಾಯ, ಸಣ್ಣ ನೀರಾವರಿ ಇಲಾಖೆಯ ಪ್ರಧಾನ ಕಾರ್ಯದರ್ಶೀಗಳು, ವಿಜಯನಗರ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಹೊಸಪೇಟೆ ತಹಶೀಲ್ದಾರ್ ವಾದಿಗಳಾಗಿದ್ದು ಎಲ್ಲರಿಗೂ ತಮ್ಮಲ್ಲಿರುವ ಮೂಲ ದಾಖಲೆಗಳು ಮತ್ತು ವಿವರಣೆಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಹೈಕೋರ್ಟ್ ಅಡ್ವೋಕೇಟ್ ಜನರಲ್ರವರು ನೋಟಿಸ್ ಜಾರಿ ಮಾಡಿದ್ದಾರೆ. ಹೈಕೋರ್ಟ್ ನೋಟಿಸ್ ಜಾರಿ ಬೆನ್ನಲ್ಲೆ ಹಿಂದಿನ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದು ಸರ್ವೆ ನಡೆಸಿ ತುರ್ತಾಗಿ ವರದಿ ಸಲ್ಲಿಸುವಂತೆ ಆದೇಶ ನೀಡಿದರು. ಆದರೆ ಈಗ ನೋಟಿಸ್ ಜಾರಿಯಾದ ಬೆನ್ನಲ್ಲೆ ಜಿಲ್ಲಾಧಿಕಾರಿಗಳ ವರ್ಗಾವಣೆಯಾಗಿದೆ.
ಹೈಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಕೆ, ನೋಟಿಸ್ ಜಾರಿ, ಸರ್ಕಾರಿ ಜಾಗ ಒತ್ತುವರಿ ಮಾಡಿ ಅರಮನೆ ನಿರ್ಮಿಸಿದ ವಿಚಾರವಾಗಿ ಸಚಿವರನ್ನು ಪ್ರಶ್ನೆ ಮಾಡಿದರೇ ಸಚಿವರು ಹೇಳೋದೆ ಬೇರೆ. ಅಧಿಕಾರಿಗಳನ್ನು ಪಾರ್ಟಿ ಮಾಡಿದ್ದಾರೆ. ಅತಿಕ್ರಮ ಮಾಡಿ ಮನೆ ಕಟ್ಟಿದರೇ ಒಡೆದು ಹಾಕಿ ಅಂತಾರೆ. ನಾನು ಅಕ್ರಮದಲ್ಲಿ ಭಾಗಿಯಾಗಿದ್ದರೇ ನನ್ನನ್ನೂ ಸಹ ಪಾರ್ಟಿ ಮಾಡಬೇಕಾಗಿತ್ತು. ನಾನು ಪ್ರಾಮಾಣಿಕವಾಗಿ ಮನೆ ಕಟ್ಟಿರುವೆ, ಇದರ ಹಿಂದಿನ ಉದ್ದೇಶ ಬೇರೆ ಇದೆ ಎಂದು ಆನಂದ್ ಸಿಂಗ್ ಹೇಳಿದ್ದಾರೆ.
ಸಚಿವ ಆನಂದಸಿಂಗ್ ಅರಮನೆ ನಿರ್ಮಾಣಕ್ಕಾಗಿ ರಾಜಕಾಲುವೆ ಒತ್ತುವರಿ ಮಾಡಿದ್ದರಿಂದ ಹೊಸಪೇಟೆ ಪಟ್ಟಣದಲ್ಲಿ ಮಳೆಯಾದರೇ ಜನಸಾಮಾನ್ಯರು ಕಷ್ಟ ಅನುಭವಿಸುವಂತಾಗಿದೆ ಅಂತಾ ದೂರುದಾರರು ದೂರಿದ್ದಾರೆ. ಆದರೇ ಸಚಿವ ಆನಂದಸಿಂಗ್ ಅತಿಕ್ರಮಣ ಮಾಡದೇ ಪ್ರಾಮಾಣಿಕವಾಗಿ ಮನೆ ನಿರ್ಮಿಸಿರುವುದಾಗಿ ಹೇಳುತ್ತಿದ್ದಾರೆ. ಹೀಗಾಗಿ ಸಚಿವರ ಅರಮನೆ ನಿರ್ಮಾಣದ ಜಾಗದ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳು ಹೈಕೋರ್ಟ್ಗೆ ಅದ್ಯಾವ ದಾಖಲೆಗಳನ್ನು ಸಲ್ಲಿಸುತ್ತಾರೆ ಅನ್ನೋದನ್ನು ಕಾಯ್ದು ನೋಡಬೇಕಿದೆ. ಅಲ್ಲದೆ ಸಚಿವರ ಅರಮನೆ ನಿರ್ಮಾಣ ಅಕ್ರಮವೋ ಸಕ್ರಮವೋ ಅನ್ನೋದು ಇನ್ನೂ ಕೆಲ ದಿನಗಳಲ್ಲಿ ಬಯಲಾಗಿದೆ.
ವರದಿ-ವಿರೇಶ್ ದಾನಿ ಟಿವಿ9 ವಿಜಯನಗರ
Published On - 6:15 pm, Fri, 11 November 22