AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪು ಕನಸಿನ ಶಕ್ತಿಧಾಮದ ಮೂಲಕ ಮತ್ತೊಂದು ಶಾಲೆ ದತ್ತು ಪಡೆದ ಗೀತಾ ಶಿವರಾಜಕುಮಾರ್; ಯಾವುದು ಆ ಶಾಲೆ? ಇಲ್ಲಿದೆ ನೋಡಿ

ದೊಡ್ಮನೆ ಕುಟುಂಬ ಯಾರಿಗೆ ಗೊತ್ತಿಲ್ಲ ಹೇಳಿ. ಅಭಿಮಾನಿಗಳೇ ನಮ್ಮ ಮನೆ ದೇವರು ಅಂತಿದ್ದ ದೊಡ್ಮನೆ, ಸಮಾಜಮುಖಿ ಕಾರ್ಯಗಳಲ್ಲಿ ಸದಾ ಮುಂದು. ಬಡಮಕ್ಕಳು, ಅನಾಥರು, ಅಬಲೆಯರಿಗಾಗಿ ಆಶ್ರಯ ಶಿಕ್ಷಣ ಕೊಡಿಸಲೆಂದೇ ದೊಡ್ಮನೆ ಶಕ್ತಿಧಾಮ ಸ್ಥಾಪನೆ ಮಾಡಿದೆ. ಈ ಶಕ್ತಿಧಾಮದ ಮೂಲಕ ಇದೀಗ ದೊಡ್ಮನೆ ಕುಟುಂಬಸ್ಥರು ಮತ್ತೊಂದು ಬಡ ಶಾಲೆಯನ್ನ ದತ್ತು ಪಡೆಯುವ ಮೂಲಕ ಬಡ ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾಗಿದ್ದಾರೆ. ಮೈಸೂರಿನ ನಂತರ ಕಲ್ಯಾಣ ಕರ್ನಾಟಕದಲ್ಲಿ ಶಕ್ತಿಧಾಮ ಇದೀಗ ಮತ್ತೊಂದು ಶಾಲೆಯ ಜವಾಬ್ದಾರಿ ವಹಿಸಿಕೊಂಡಿದೆ.

ಅಪ್ಪು ಕನಸಿನ ಶಕ್ತಿಧಾಮದ ಮೂಲಕ ಮತ್ತೊಂದು ಶಾಲೆ ದತ್ತು ಪಡೆದ ಗೀತಾ ಶಿವರಾಜಕುಮಾರ್; ಯಾವುದು ಆ ಶಾಲೆ? ಇಲ್ಲಿದೆ ನೋಡಿ
ಗೀತಾ ಶಿವರಾಜ್​ ಕುಮಾರ್​
ಕಿರಣ್ ಹನುಮಂತ್​ ಮಾದಾರ್
|

Updated on: May 17, 2023 | 1:15 PM

Share

ಬಳ್ಳಾರಿ: ಶಕ್ತಿಧಾಮ ಹೆಸರಿನಲ್ಲೆ ಶಕ್ತಿಯಿದೆ. ದೊಡ್ಮನೆ ಕುಟುಂಬ ಸ್ಥಾಪನೆ ಮಾಡಿದ ಈ ಶಕ್ತಿಧಾಮದಲ್ಲಿ ಸಾವಿರಾರು ಮಕ್ಕಳು ಆಶ್ರಯ ಪಡೆಯುತ್ತಿದ್ದಾರೆ. ಮೈಸೂರಿನಲ್ಲಿ ಸ್ಥಾಪನೆಯಾಗಿರುವ ಶಕ್ತಿಧಾಮದಲ್ಲಿ ಸಾವಿರಾರು ಅಬಲೆಯರು, ಅನಾಥ ಮಕ್ಕಳು, ಬಡ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಈ ಶಕ್ತಿಧಾಮ(Shakthidhama)ಇದೀಗ ಮತ್ತೊಂದು ಬಡ ಶಾಲೆಯನ್ನ ದತ್ತು ಪಡೆಯುವ ಮೂಲಕ ಬಡ ಮಕ್ಕಳ ಶಿಕ್ಷಣಕ್ಕಾಗಿ ಮತ್ತಷ್ಟು ಶಕ್ತಿ ತುಂಬಲು ಮುಂದಾಗಿದೆ. ಹೌದು ಇದು ಹೊಸಪೇಟೆ (Hosapete) ತಾಲೂಕಿನ ಇಂಗಳಗಿ ಗ್ರಾಮದಲ್ಲಿರುವ ಅನ್ನಪೂಣೇಶ್ವರಿ ವಿದ್ಯಾಪೀಠ. 2012ರಲ್ಲಿ ಸ್ಪಾಪನೆಯಾದ ಈ ಉಚಿತ ವಸತಿಯುತ ಪ್ರೌಢಶಾಲೆಯಲ್ಲಿ ನೂರಾರು ಬಡ ಮಕ್ಕಳು ವಿದ್ಯಾಭ್ಯಾಸ ಮಾಡ್ತಿದ್ದಾರೆ. 8ರಿಂದ 10ನೇ ತರಗತಿಯವರೆಗೂ ಈ ಶಾಲೆಯಲ್ಲಿ ಸಧ್ಯ 123 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದ್ರೆ, ಅನುದಾನವಿಲ್ಲದೇ ಮಕ್ಕಳಿಗೆ ಉತ್ತಮ ಶಿಕ್ಷಣ, ಆಶ್ರಯ ಸಿಗದೇ ಈ ಶಾಲೆ ಸೊರಗಿಹೋಗಿತ್ತು. ಇನ್ನೇನೂ ಈ ಶಾಲೆಗೆ ಬೀಗ ಹಾಕಬೇಕು ಅನ್ನುವಷ್ಟರಲ್ಲಿ ಈ ಶಾಲೆಗೆ ದೊಡ್ಮನೆಯವರ ಆಶ್ರಯ ದೊರೆತಿದೆ.

ಹೌದು ಶೈಕ್ಷಣಿಕವಾಗಿ ಹಿಂದುಳಿದ ಶಾಲೆಯನ್ನ ದೊಡ್ಮನೆಯವರಾದ ಡಾ. ರಾಜ ಕುಟುಂಬ ದತ್ತು ಪಡೆಯಬೇಕು ಅನ್ನೋ ಆಶಯ ಇದೀಗ ಈಡೇರಿದೆ. ಸಂಡೂರು ತಾಲೂಕಿನ ಜೋಗದ ದಿಗಂಬರ ರಾಜಭಾರತಿ ಸ್ವಾಮೀಜಿ ಬಡ ಮಕ್ಕಳು ಶಿಕ್ಷಣ, ಆಶ್ರಯದಿಂದ ವಂಚಿತರಾಗಬಾರದೆಂದು ಸ್ಥಾಪನೆ ಮಾಡಿದ್ದ ಶಾಲೆಗೆ ಅನುದಾನದ ಕೊರೆತೆಯಿಂದ ಕಷ್ಟಕ್ಕೆ ಸಿಲುಕಿತ್ತು. ಸ್ವಾಮೀಜಿ ಮಾಡಿಕೊಂಡಿದ್ದ ಮನವಿಗೆ ದೊಡ್ಮನೆ ಕುಟುಂಬ ಆಸರೆಯಾಗಿದೆ. ಕಳೆದ ಡಿಸೆಂಬರ್ ತಿಂಗಳಿನಲ್ಲಿ ವೇದ ಚಿತ್ರದ ಪ್ರಮೋಷನ್ ಗೆ ಹೊಸಪೇಟೆಗೆ ಆಗಮಿಸಿದ್ದ ಡಾ ಶಿವರಾಜ್​ ಕುಮಾರ್​ ದಂಪತಿಗಳೊಂದಿಗೆ ಶಾಲೆಗೆ ಭೇಟಿ ಮಾಡಿದ್ರು. ಈ ವೇಳೆ ಅನ್ನಪೂಣೇಶ್ವರಿ ವಿದ್ಯಾಪೀಠದ ಮಕ್ಕಳ ಅಳಲು ಆಲಿಸಿದ್ದ ಗೀತಾ ಶಿವರಾಜಕುಮಾರ್ ಶಾಲೆಯನ್ನ ದತ್ತು ಪಡೆಯುವ ಭರವಸೆ ನೀಡಿದ್ರು. ದೊಡ್ಮನೆಯವರು ಕೊಟ್ಟ ಮಾತಿನಂತೆ ಇದೀಗ ಅನ್ನಪೂಣೇಶ್ವರಿ ವಿದ್ಯಾಪೀಠವನ್ನ ದತ್ತು ಪಡೆಯಲು ಮುಂದಾಗಿದ್ದಾರೆ.

ಇದನ್ನೂ ಓದಿ:ಶಕ್ತಿಧಾಮದ ಮಕ್ಕಳಿಗೆ ಲಾಲ್​ಬಾಗ್ ತೋರಿಸಿದ ಶಿವಣ್ಣ

ಇನ್ನು ಶಾಲೆಗೆ ಗೀತಾ ಶಿವರಾಜಕುಮಾರ್ ಭೇಟಿ ಮಾಡಿ ದತ್ತು ಪ್ರಕ್ರಿಯೆ ಬಗ್ಗೆ ಮಾತುಕತೆ ನಡೆಸಿ, ಶಾಲೆ ದತ್ತು ತಗೆದುಕೊಳ್ಳುವುದಾಗಿ ಘೋಷಿಸಿದ್ದು. ಶ್ರೀಘ್ರದಲ್ಲೆ ಟ್ರಸ್ಟ್ ರಚಿಸಿ ಪಧಾಧಿಕಾರಿಗಳನ್ನ ನೇಮಕ ಮಾಡಿ ಶಾಲೆಯ ಅಭಿವೃದ್ದಿ ಮಾಡುವುದಾಗಿ ಘೋಷಿಸಿದ್ದಾರೆ. ಜೊತೆಗೆ ಕನ್ನಡ ಶಾಲೆಯಲ್ಲಿ ಪ್ರಯೋಗಾಲಯ, ಗ್ರಂಥಾಲಯ, ಲೈಬ್ರರಿ, ಉತ್ತಮ ಶಿಕ್ಷಣಕ್ಕಾಗಿ ಅಗತ್ಯ ಸೌಕರ್ಯ ಕಲ್ಪಿಸುವ ಭರವಸೆ ದೊಡ್ಮನೆಯವರಿಂದ ದೊರೆತಿದೆ. ಹೀಗಾಗಿ ಈಗಾಗಲೇ ಶಕ್ತಿಧಾಮಕ್ಕೆ ಭೇಟಿ ನೀಡಿ ಅಲ್ಲಿನ ಶಾಲೆಯ ಬಗ್ಗೆ ತಿಳಿದುಕೊಂಡು ಬಂದಿರುವ ಶಿಕ್ಷಕರು ಸಹ ಇದೀಗ ಹರ್ಷಗೊಂಡಿದ್ದು. ಅನ್ನಪೂಣೇಶ್ವರಿ ವಿದ್ಯಾಪೀಠದ ಮಕ್ಕಳಿಗೂ ದೊಡ್ಮನೆ ಕುಟುಂಬ ಉತ್ತಮ ಶಿಕ್ಷಣ ಕೊಡಿಸಲು ಸಾಥ್​ ನೀಡಿರುವುದು ಶಿಕ್ಷಕರಲ್ಲೂ ಸಂತಸ ಮೂಡಿಸಿದೆ.

ದೊಡ್ಮನೆ ಕುಟುಂಬ ದೊಡ್ಡ ಮನಸ್ಸು ಮಾಡಿ ಹೊಸಪೇಟೆ ತಾಲೂಕಿನ ಅನ್ನಪೂಣೇಶ್ವರಿ ವಿದ್ಯಾಪೀಠವನ್ನ ದತ್ತು ಪಡೆದಿರುವುದು ಮಕ್ಕಳಿಗೂ ಇನ್ನಿಲ್ಲದ ಖುಷಿ ತಂದಿದೆ. ಇದೂವರೆಗೂ ಅಲ್ಪ ಸ್ವಲ್ಪ ಸೌಕರ್ಯಗಳ ಮಧ್ಯೆ ಶಿಕ್ಷಣ ಪಡೆಯುತ್ತಿದ್ದ ಬಡ ಮಕ್ಕಳು ಇದೀಗ ಉತ್ತಮ ಶಿಕ್ಷಕರೊಂದಿಗೆ ಗುಣಮಟ್ಟದ ಶಿಕ್ಷಣ ಸಿಗುವ ಭರವಸೆ ಹೊಂದಿದ್ದಾರೆ. ಶಕ್ತಿಧಾಮದಲ್ಲಿರುವ ಸೌಕರ್ಯಗಳು ನಮ್ಮ ಶಾಲೆಗೂ ಸಿಕ್ಕರೆ ನಾವೂ ಉತ್ತಮವಾಗಿ ವಿದ್ಯಾಭ್ಯಾಸ ಮಾಡ್ತೇವಿ ಅಂತಿದ್ದಾರೆ. ಅಲ್ಲದೇ ಗೀತಾ ಶಿವರಾಜಕುಮಾರ್ ಶಾಲೆಯನ್ನ ದತ್ತು ಪಡೆದಿರುವುದರಿಂದ ನಮಗೆ ದೊಡ್ಮನೆಯ ಆಸರೆ ದೊರೆತಿದೆ ಎಂದು ಬಡಮಕ್ಕಳು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ:Vishal: ‘ಶಕ್ತಿಧಾಮದ ಮಕ್ಕಳನ್ನು ದತ್ತು ಪಡೆಯಲು ಸಿದ್ಧನಿದ್ದೇನೆ, ಆದರೆ..’: ವಾಸ್ತವ ಸ್ಥಿತಿ ವಿವರಿಸಿದ ನಟ ವಿಶಾಲ್​

ದಿವಂಗತ ಪಾರ್ವತಮ್ಮ ರಾಜಕುಮಾರ್​ ಮೈಸೂರಿನಲ್ಲಿ ಆರಂಭಿಸಿದ ಶಕ್ತಿಧಾಮದಲ್ಲಿ ಈಗಾಗಲೇ ಸಾವಿರಾರು ಬಡಮಕ್ಕಳು, ಅನಾಥ ಮಕ್ಕಳು, ಅಬಲೆಯರಿಗೆ ಆಶ್ರಮ ದೊರೆತಿದೆ. ಇದೀಗ ದೊಡ್ಮನೆಯವರು ಮತ್ತೊಂದು ಬಡಶಾಲೆಯನ್ನ ದತ್ತು ಪಡೆಯುವ ಮೂಲಕ ಬಡ ಮಕ್ಕಳ ಆಶ್ರಯಕ್ಕೆ ಧಾವಿಸಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ