ದೇವದಾರಿ ಹಿಲ್ಸ್​ನಲ್ಲಿ ಗಣಿಗಾರಿಕೆಗೆ ಸರ್ಕಾರ ಅನುಮತಿ ನಿರಾಕರಣೆ; ಗುತ್ತಿಗೆಗೆ ಸಹಿ ಹಾಕದಂತೆ ಈಶ್ವರ ಖಂಡ್ರೆ ಸೂಚನೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 22, 2024 | 9:37 PM

ಅದು ಬಿಸಲ ನಾಡಿನಲ್ಲಿ ಪ್ರಕೃತಿಯ ಸೊಬಗನ್ನ ಹೊತ್ತ ಸುಂದರ ತಾಲೂಕು. ಅಲ್ಲಿಯ ನೈಸರ್ಗಿಕ ತಾಣವನ್ನ ನೋಡವುದೇ ಕಣ್ಣಿಗೆ ಹಬ್ಬ, ಕೋಟ್ಯಂತರ ಮರಗಳಿಂದ ಕಂಗೊಳಿಸುವ ಆ ತಾಲೂಕಿಗೆ ಈಗ ಮತ್ತಷ್ಟು ಗಣಿಗಾರಿಕೆ ವಿಸ್ತರಣೆಯ ಆತಂಕ ಸೃಷ್ಟಿಯಾಗಿದೆ. ಹೀಗಾಗಿ ಗಣಿ ವಿಸ್ತರಣೆಯನ್ನು ಖಂಡಿಸಿ ಪರಿಸರವಾದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಂಚೆ ಪತ್ರಗಳ ಮೂಲಕ ಅರಣ್ಯ ಉಳಿಸಿ ಎಂದು ಅಭಿಯಾನ ಶುರು ಮಾಡಿದ್ದಾರೆ. ಸದ್ಯ ಅರಣ್ಯ ತಿರುವಳಿ ಗುತ್ತಿಗೆಗೆ ಸಹಿ ಹಾಕದಂತೆ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ಓದಿ.

ದೇವದಾರಿ ಹಿಲ್ಸ್​ನಲ್ಲಿ ಗಣಿಗಾರಿಕೆಗೆ ಸರ್ಕಾರ ಅನುಮತಿ ನಿರಾಕರಣೆ; ಗುತ್ತಿಗೆಗೆ ಸಹಿ ಹಾಕದಂತೆ ಈಶ್ವರ ಖಂಡ್ರೆ ಸೂಚನೆ
ದೇವದಾರಿ ಹಿಲ್ಸ್​ನಲ್ಲಿ ಗಣಿಗಾರಿಕೆಗೆ ಸರ್ಕಾರ ಅನುಮತಿ ನಿರಾಕರಣೆ
Follow us on

ಬೆಂಗಳೂರು, ಜೂ.22: ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೇವದಾರಿ ಕಬ್ಬಿಣದ ಅದಿರು ಗಣಿ ಕಾರ್ಯಾಚರಣೆಗೆ ಸಂಬಂಧಿಸಿದ ಕುದುರೆಮುಖ ಕಬ್ಬಿಣದ ಅದಿರು ಕಂಪನಿಯ (KIOCL) ಕಡತಕ್ಕೆ ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಸಹಿ ಹಾಕಿರುವುದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನಲೆ ದೇವದಾರಿ ಹಿಲ್ಸ್​ನಲ್ಲಿ ಗಣಿಗಾರಿಕೆಗೆ ಸರ್ಕಾರ ಅನುಮತಿ ನಿರಾಕರಣೆ ಮಾಡಿದ್ದು, ಉದ್ದೇಶಿತ ಗಣಿ ಪ್ರದೇಶ ಸ್ವಾಮಿಮಲೈ ಮೀಸಲು ಅರಣ್ಯ ವ್ಯಾಪ್ತಿಯಲ್ಲಿದೆ. ಇಲ್ಲಿ ಗಣಿಗಾರಿಕೆಯಿಂದ 99,330 ಮರಗಳು ಕಡಿದು ನಾಶವಾಗಲಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ (Eshwar Khandre) ಹೇಳಿದರು.

ದಟ್ಟ ಕಾಡು ನಾಶವಾದರೆ ಮಣ್ಣಿನ ಸವಕಳಿ ಪ್ರವಾಹದ ಸಮಸ್ಯೆ ಕಾಡಲಿದೆ. ಇನ್ನು ಅರಣ್ಯ ಪ್ರದೇಶದಲ್ಲಿ ಹೊಸ ಗಣಿ ಗುತ್ತಿಗೆಗೆ ಅನುಮತಿ ನೀಡದಂತೆ ಈ ಹಿಂದೆ, ಅಂದರೆ 2016ರ ಮಾರ್ಚ್ 28ರಂದು ಅರಣ್ಯ ಇಲಾಖೆಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅಧ್ಯಕ್ಷತೆಯಲ್ಲಿ ನಿರ್ಣಯಿಸಲಾಗಿದೆ. ಗಣಿಗಾರಿಕೆ ನಡೆಯಲಿರುವ ಜಾಗ ದರೋಜಿ ಕರಡಿ ಧಾಮದಿಂದ ಕೇವಲ 19 ಕಿಲೋಮೀಟರ್ ದೂರದಲ್ಲಿದೆ. ಶ್ರೀಗಂಧ, ತೇಗ, ಬಿದಿರು, ದಿಂಡಾಲ, ಹೊನ್ನೆ, ರಕ್ತ ಭೂತಾಳ, ಅಂಟುವಾಳ, ಬಿಲ್ವ, ಕಲ್ಲು, ಮಾವು, ಅರಳಿ, ಕಾಡುಬನ್ನಿ ಸೇರಿದಂತೆ ಸಾವಿರಾರು ಮರಗಳಿಗೆ ಕುತ್ತು ಬರಲಿದೆ.

ಇದನ್ನೂ ಓದಿ:ಸಂಡೂರು ಅರಣ್ಯದಲ್ಲಿ ಗಣಿಗಾರಿಕೆಗೆ ಅನುಮತಿ: ಮಾತು ತಪ್ಪಿದ ಆರೋಪಕ್ಕೆ ಕುಮಾರಸ್ವಾಮಿ ಸ್ಪಷ್ಟನೆ

ಹೀಗಾಗಿ ಗಣಿಗಾರಿಕೆಗೆ ಅನುಮತಿ ನೀಡದಂತೆ ಸಾಮಾಜಿಕ ಹೋರಾಟಗಾರರು ಪರಿಸರ ಹೋರಾಟಗಾರರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗಣಿಗಾರಿಕೆ ನಡೆಸಲು ಹೊರಟ ಕಂಪನಿಯ ವಿರುದ್ಧವು ಸಾಕಷ್ಟು ಲೋಪದೋಷಗಳ ಆರೋಪವಿದೆ. ಅರಣ್ಯ ನಿಯಮಗಳನ್ನ ಈ ಹಿಂದೆ ಉಲ್ಲಂಘನೆ ಮಾಡಿ ಈ ಕಂಪನಿ ಇಕ್ಕಟ್ಟಿಗೆ ಸಿಲುಕಿತ್ತು. ಈ ಎಲ್ಲಾ ದೃಷ್ಟಿಯಿಂದ ಸದ್ಯ ಅರಣ್ಯ ತಿರುವಳಿ ಗುತ್ತಿಗೆಗೆ ಸಹಿ ಹಾಕದಂತೆ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.

ಸೇವ್ ಸಂಡೂರು ಫಾರೆಸ್ಟ್” ಎಂಬ ಅಭಿಯಾನ

ಗಣಿಗಾರಿಕೆ ವಿರೋಧಿಸಿ “ಸೇವ್ ಸಂಡೂರು ಫಾರೆಸ್ಟ್” ಎಂಬ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿದ್ದು, ಗಣಿ ವಿರುದ್ಧದ ದನಿ ನಿಧಾನವಾಗಿ ವ್ಯಾಪಕಗೊಳ್ಳುತ್ತಿದೆ. ಸರ್ಕಾರದ ನಿರ್ಧಾರದಂತೆ ಸಂಡೂರು ಅರಣ್ಯದ ಸ್ವಾಮಿಮಲೈ ಬ್ಲಾಕ್‌ನ ಒಟ್ಟು 470.40 8 (1162.38 28) ಪ್ರದೇಶದಲ್ಲಿ ಕೆಐಒಸಿಎಲ್ ಗಣಿಗಾರಿಕೆ ನಡೆಸಲಿದೆ. ಗಣಿಗಾರಿಕೆಗೆ ಹಂತ ಹಂತವಾಗಿ ಒಟ್ಟಾರೆ 99 ಸಾವಿರಕ್ಕೂ ಅಧಿಕ ಮರಗಳು ಕಡಿಯಬೇಕಾಗುತ್ತದೆ ಎಂದು ಅರಣ್ಯ ಇಲಾಖೆಯ ದಾಖಲೆಗಳಿಂದಲೂ ಗೊತ್ತಾಗಿದೆ. ಹೀಗಾಗಿ ಕೇಂದ್ರ ಸಚಿವ ಕುಮಾರಸ್ವಾಮಿ ಹಾಕಿರುವ ಸಹಿಗೆ ಬಳ್ಳಾರಿ ಸೇರಿದಂತೆ ಇಡೀ ರಾಜ್ಯದಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈಗಾಗಲೇ ರಾಜ್ಯಾದ್ಯಂತ ಸೇವ್ ಸಂಡೂರು ಅಭಿಯಾನ ಶುರುವಾಗಿದ್ದು, ಸರ್ಕಾರ ಮಾಡಿರುವ ನಿರ್ಧಾರ ಕೈ ಬಿಡಬೇಕು ಇಲ್ಲವಾದಲ್ಲಿ ಉಗ್ರ ಹೋರಾಟದ ಎಚ್ಚರಿಗೆ ಜನ ನೀಡುತ್ತಿದ್ದಾರೆ.

ಒಟ್ಟಿನಲ್ಲಿ ಗಣಿನಾಡು ಬಳ್ಳಾರಿ ಅಲ್ಲದೆ ಉತ್ತರ ಕರ್ನಾಟಕದ ಆಕ್ಸಿಜನ್ ಬ್ಯಾಂಕ್‌ಗೆ ಕೊಡಲಿ ಪೆಟ್ಟು ಬಿಳುವ ಆತಂಕ ಶುರುವಾಗಿದ್ದು, ಪರಿಸರ ವಾದಿಗಳು ಎಚ್ಚೆತ್ತು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಹೋರಾಟ ಯಾವು ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನ ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:35 pm, Sat, 22 June 24