ಬಳ್ಳಾರಿ, ಡಿ.20: ಸರ್ಕಾರಿ ಶಾಲೆಗಳ (Government School) ಗುಣಮಟ್ಟ ಹೆಚ್ಚಿಸಲು ಸರ್ಕಾರ ಹೊಸ, ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿದೆ. ಆದರೂ ರಾಜ್ಯದಲ್ಲಿ ಸಾವಿರಾರು ಶಾಲೆಗಳು ಶಿಥಿಲಾ ವ್ಯವಸ್ಥೆಯಲ್ಲಿವೆ. ಜನಪ್ರತಿನಿಧಿಗಳು, ಅಧಿಕಾರಿಗಳು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕಾಣುತ್ತಿಲ್ಲ. ಈಗಾಗಲೇ ಟಿವಿ9 ಈ ಬಗ್ಗೆ ಅಭಿಯಾನ ನಡೆಸುತ್ತಿದ್ದು ಪ್ರತಿ ದಿನ ರಾಜ್ಯದ ಸರ್ಕಾರಿ ಶಾಲೆಗಳ ಅವ್ಯವಸ್ಥೆ ಬಗ್ಗೆ ವರದಿ ಮಾಡುತ್ತಿದೆ. ಒಳ್ಳಾರಿಯಲ್ಲಿ ಶಿಥಿಲಾ ವ್ಯವಸ್ಥೆಯಲ್ಲಿರುವ ಮತ್ತೊಂದು ಶಾಲೆ ಪತ್ತೆಯಾಗಿದೆ. ಕಟ್ಟಡದ ಮೇಲ್ಛಾವಣಿ ಕುಸಿಯುವ ಆತಂಕದಲ್ಲಿಯೇ ಮಕ್ಕಳು ಪಾಠ ಕೇಳುವಂತಹ ಸ್ಥಿತಿ ಇಲ್ಲಿದೆ.
ಸರ್ಕಾರಿ ಶಾಲೆಗಳನ್ನು ಬೆಳೆಸಬೇಕು. ಮಕ್ಕಳನ್ನ ಸರ್ಕಾರಿ ಶಾಲೆಯಲ್ಲೇ ಓದಿಸಿ ಎಂದು ಹೇಳುವ ರಾಜಕಾರಣಿಗಳು ಸರ್ಕಾರಿ ಶಾಲೆಗಳಿಗೊಮ್ಮೆ ಭೇಟಿ ನೀಡಬೇಕು. ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿ ಹೇಳತೀರದ್ದಾಗಿದೆ. ಎಲ್ಲೋ ಅಲ್ಲೊಂದು ಇಲ್ಲೊಂದು ಶಾಲೆಗಳು ಮಾತ್ರ ಮಾದರಿ ಶಾಲೆಗಳಾಗಿವೆ. ಸಿನಿಮಾ ಟಾಕೀಸ್ನಲ್ಲಿ ವಸತಿ ಶಾಲೆ ನಡೆಸಲಾಗುತ್ತಿರುವ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡಿತ್ತು. ಬಳಿಕ ಸಿರಗುಪ್ಪ ತಾಲೂಕಿನ ಕರೂರು ಗ್ರಾಮದ ಅಂಬೇಡ್ಕರ್ ವಸತಿ ಶಾಲೆ ಎಪಿಎಂಸಿ ಗೋದಾಮಿನಲ್ಲಿ ನಡೆಯುತ್ತಿರುವ ಬಗ್ಗೆಯೂ ವರದಿ ಮಾಡಿತ್ತು. ಇದೀಗ ಇದೇ ರೀತಿಯ ಅವ್ಯವಸ್ಥೆಯಲ್ಲಿ ಮಕ್ಕಳು ಕಲಿಯುತ್ತಿರವ ಸರ್ಕಾರಿ ಶಾಲೆಯೊಂದು ಅವನತಿಗೆ ತಲುಪಿದೆ. ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ಹೆರಕಲ್ಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಕುಸಿದು ಅಲ್ಲಲ್ಲಿ ಸಿಮೆಂಟ್ ನೆಲಕ್ಕೆ ಬಿದ್ದಿದೆ. ಕಬ್ಬಿಣದ ರಾಡುಗಳು ಮೇಲ್ಛಾವಣಿಯಿಂದ ಕೆಳಗೆ ಜೋತು ಬಿದ್ದಿವೆ. ಇಂದೋ, ನಾಳೆಯೋ ಈ ಕಟ್ಟಡ ಬೀಳುವಂತಿದೆ. ಎಲ್ಲೆಂದರಲ್ಲಿ ಗೋಡೆಗಳು ಬಿರುಕು ಬಿಟ್ಟಿವೆ. ಆದರೂ ಕೂಡ ಈ ಕಟ್ಟಡದಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಯಾರ ತಲೆ ಮೇಲೆ ಸಿಮೆಂಟ್ ಬಿದ್ದು ಏನು ಅನಾಹುತವಾಗುತ್ತೋ ಎಂಬ ಆತಂಕದಲ್ಲೇ ಶಿಕ್ಷಕರು ಪಾಠ ಮಾಡುವಂತಹ ಸ್ಥಿತಿ ಇಲ್ಲಿದೆ. ಸದ್ಯ ಕೊಠಡಿಗಳು ಬೀಳುವ ಆತಂಕ ಹೆಚ್ಚಾಗುತ್ತಿದ್ದಂತೆ ಶಾಲಾ ಅಂಗಳದಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡಲಾಗುತ್ತಿದೆ.
ಇದನ್ನೂ ಓದಿ: ಬಳ್ಳಾರಿ: 27 ಕೋಟಿ ವೆಚ್ಚದ ಕಟ್ಟಡ ಇದ್ದರೂ ಎಪಿಎಂಸಿ ಗೋದಾಮಿನಲ್ಲಿ ವಸತಿ ಶಾಲೆ!
ಮಳೆ ಬಂದಾಗ ಈ ಶಾಲಾ ಕಟ್ಟಡ ಸಂಪೂರ್ಣ ಸೋರುತ್ತೆ. ಅವ್ಯವಸ್ಥೆಯ ಆಗರವಾಗಿರುವ ಹೆರಕಲ್ಲು ಗ್ರಾಮದ ಶಾಲೆಯ ಶಿಥಿಲಾವ್ಯವಸ್ಥೆ ಕಟ್ಟಡದಲ್ಲಿ 1 ರಿಂದ 8ನೇ ತರಗತಿ ವರಗೆ ಮಕ್ಕಳು ಓದುತ್ತಿದ್ದಾರೆ. ಸುಮಾರು 420ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಶಾಲೆ ಬೀಳುವ ಸ್ಥಿತಿಯಲ್ಲಿದ್ದರೂ ಯಾವ ಅಧಿಕಾರಿಗಳು ಮಾತ್ರ ಈ ಬಗ್ಗೆ ಗಮನ ಹರಿಸಿಲ್ಲ. ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಐದು ವರ್ಷಗಳಿಂದ ಈ ಶಾಲೆ ಕಟ್ಟಡ ಇದೇ ಪರಿಸ್ಥಿತಿಯಲ್ಲಿದೆ.
ಇನ್ನು ಈ ಬಗ್ಗೆ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಮಕ್ಕಳನ್ನ ಶಾಲೆಗೆ ಕಳಿಸಲು ಆತಂಕವಾಗುತ್ತಿದೆ. ಶಾಲಾ ಕಟ್ಟಡ ಕುಸಿದು ಬೀಳುವ ಹಂತದಲ್ಲಿದೆ. ಮಕ್ಕಳಿಗೆ ವಿದ್ಯಾಭ್ಯಾಸ ಬೇಕು ಅಂತಾ ಅನಿವಾರ್ಯವಾಗಿ ಶಾಲೆಗೆ ಕಳಿಸುತ್ತಿದ್ದೇವೆ. ಈ ಶಾಲೆಗೆ ಬಹುತೇಕ ಬಡ ಮಕ್ಕಳು, ರೈತರ ಮಕ್ಕಳು ಬರುತ್ತಾರೆ ಎಂದು ಹೊಸ ಕಟ್ಟಡ ನಿರ್ಮಾಣ ಮಾಡಿಕೊಡುವಂತೆ ಪೋಷಕರು ಒತ್ತಾಯಿಸಿದ್ದಾರೆ.
ಸುಮಾರು 25 ವರ್ಷಗಳಷ್ಟು ಹಳೇ ಶಾಲೆ ಇದು. ಐದಾರು ವರ್ಷಗಳಿಂದ ಇದೇ ಪರಿಸ್ಥಿತಿ ಇದೆ. ಸರ್ಕಾರ ಅನಾವಶ್ಯಕವಾಗಿ ಯಾವುದ್ಯಾವುದಕ್ಕೊ ಹಣ ಖರ್ಚು ಮಾಡುತ್ತೆ. ಶಿಕ್ಷಣಕ್ಕೆ ಹಣ ಖರ್ಚ ಮಾಡಬೇಕು ಎಂದು ಪೋಷಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:54 am, Wed, 20 December 23