ಮೂರು ವರ್ಷಗಳ ಬಳಿಕ ಬಳ್ಳಾರಿಗೆ ಕಾಲಿಟ್ಟ ಜನಾರ್ದನ ರೆಡ್ಡಿ ಕುಟುಂಬದಿಂದ ವರಮಹಾಲಕ್ಷ್ಮಿ ಪೂಜೆ
ಬಳ್ಳಾರಿಗೆ ತೆರಳಲು ಸರ್ವೋಚ್ಛ ನ್ಯಾಯಾಲಯ ಷರತ್ತುಬದ್ಧ ಅನುಮತಿ ನೀಡಿರುವ ಹಿನ್ನೆಲೆ ಕುಟುಂಬಸ್ಥರ ಜತೆ ಬಳ್ಳಾರಿಗೆ ಬಂದಿರುವ ಜನಾರ್ದನ ರೆಡ್ಡಿ ಇಂದು ವರಮಹಾಲಕ್ಷ್ಮೀ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ.
ಬಳ್ಳಾರಿ: ಅಕ್ರಮ ಗಣಿಗಾರಿಕೆ ವಿಚಾರಕ್ಕೆ ಸಂಬಂದಿಸಿದಂತೆ ಆರೋಪಿಯಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ (Janardhan Reddy) ಸುಮಾರು 3 ವರ್ಷದ ಬಳಿಕ ತವರೂರು ಬಳ್ಳಾರಿಗೆ ಕಾಲಿಟ್ಟಿದ್ದಾರೆ. ಬಳ್ಳಾರಿಗೆ ತೆರಳಲು ಸರ್ವೋಚ್ಛ ನ್ಯಾಯಾಲಯ (Supreme Court) ಷರತ್ತುಬದ್ಧ ಅನುಮತಿ ನೀಡಿರುವ ಹಿನ್ನೆಲೆ ಕುಟುಂಬಸ್ಥರ ಜತೆ ಬಳ್ಳಾರಿಗೆ ಬಂದಿರುವ ಜನಾರ್ಧನ ರೆಡ್ಡಿ ಇಂದು ವರಮಹಾಲಕ್ಷ್ಮೀ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. 8 ವಾರ ಕಾಲ ಬಳ್ಳಾರಿಯಲ್ಲಿ ತಂಗಬಹುದು ಎಂದು ಸರ್ವೋಚ್ಛ ನ್ಯಾಯಾಲಯ ಅನುಮತಿ ನೀಡಿದ್ದು 3 ವರ್ಷಗಳ ಬಳಿಕ ಬಳ್ಳಾರಿಗೆ ಆಗಮಿಸಿದ್ದಾರೆ.
ಬೆಳಗ್ಗಿನ ಜಾವವೇ ಬಳ್ಳಾರಿಗೆ ಬಂದಿರುವ ಗಾಲಿ ಜನಾರ್ದನ ರೆಡ್ಡಿ, ಬಳ್ಳಾರಿಯ ಸಿರುಗುಪ್ಪ ರಸ್ತೆಯ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಕುಟುಂಬಸ್ಥರ ಜತೆ ಪೂಜೆಯಲ್ಲಿ ಭಾಗಿಯಾದ ಜನಾರ್ದನ ರೆಡ್ಡಿ ಬಳ್ಳಾರಿಗೆ ಬಂದಿರುವ ಬಗ್ಗೆ ಎಸ್‌ಪಿಗೆ ಮಾಹಿತಿ ನೀಡಿದ್ದಾರೆ ಎಂದು ಟಿವಿ9ಗೆ ಗಾಲಿ ಜನಾರ್ದನ ರೆಡ್ಡಿ ಆಪ್ತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಬಳ್ಳಾರಿಗೆ ತೆರಳಲು ನಿನ್ನೆ ಸುಪ್ರೀಂಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದ ಹಿನ್ನೆಲೆಯಲ್ಲೇ ಅವರು ಕುಟುಂಬ ಸಮೇತರಾಗಿ ಆಗಮಿಸಿದ್ದು, ಕುಟುಂಬಸ್ಥರ ಜತೆ ಭಕ್ತಿ ಭಾವದಿಂದ ಲಕ್ಷ್ಮಿಗೆ ಪೂಜೆ ಸಲ್ಲಿಸಿದ್ದಾರೆ.
ಬಳ್ಳಾರಿಗೆ ತೆರಳಲು 8 ವಾರಗಳ ಕಾಲ ಅನುಮತಿ ನೀಡುವಂತೆ ಜಾಮೀನು ಅರ್ಜಿ ಕೋರಿ ಮಾಜಿ ಸಚಿವ ಜನಾರ್ದನ ರೆಡ್ಡಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಬಳ್ಳಾರಿಗೆ ತೆರಳಲು ಷರತ್ತುಬದ್ಧ ಅನುಮತಿ ನೀಡಿದೆ. ಬಳ್ಳಾರಿಗೆ ಭೇಟಿ ನೀಡಿದ ಪ್ರತಿಸಲವೂ ಎಸ್‌ಪಿಗೆ ಮಾಹಿತಿ ನೀಡಬೇಕು ಎಂದು ಕೋರ್ಟ್ ಷರತ್ತು ವಿಧಿಸಿದೆ. ಜನಾರ್ದನ ರೆಡ್ಡಿ ಜಾಮೀನು ಷರತ್ತಿನಲ್ಲಿಯೂ ಸುಪ್ರೀಂಕೋರ್ಟ್ ಮಾರ್ಪಾಟು ಮಾಡಿದ್ದು, ಜಾಮೀನು ಷರತ್ತು ಸಡಿಲಿಕೆ ಕೋರಿ ಜನಾರ್ದನ ರೆಡ್ಡಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ. ಆದರೆ ಜಾಮೀನಿನ ಷರತ್ತಿನಲ್ಲಿ ಯಾವುದೇ ಬದಲಾವಣೆ ಮಾಡಬಾರದೆಂದು ಸಿಬಿಐ ಪ್ರತಿಪಾದಿಸಿತ್ತು. ಜನಾರ್ದನ ರೆಡ್ಡಿ ಬಳ್ಳಾರಿಗೆ ಭೇಟಿ ಕೊಟ್ಟಾಗ ಕಡಪ, ಅನಂತಪುರ ಜಿಲ್ಲಾ ಎಸ್ಪಿಗಳಿಗೂ ಮಾಹಿತಿ ನೀಡಬೇಕು ಎಂದು ತಿಳಿಸಿದ ಸುಪ್ರೀಂಕೋರ್ಟ್, ವಿಚಾರಣಾ ನ್ಯಾಯಾಲಯದಲ್ಲಿ ತ್ವರಿತ ಗತಿಯಲ್ಲಿ ವಿಚಾರಣೆ ನಡೆಸಲು ನಿರ್ದೇಶನ ನೀಡಿದೆ.
Janardhan Reddy: ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ತೆರಳಲು ಷರತ್ತುಬದ್ಧ ಅನುಮತಿ ನೀಡಿದ ಸುಪ್ರೀಂಕೋರ್ಟ್