ಎಸ್ಸೆಸ್ಸೆಲ್ಸಿಯಲ್ಲಿ ಶೇ 94 ಅಂಕ ಪಡೆದಿದ್ದ ವಿದ್ಯಾರ್ಥಿನಿಗೆ ವಿವಾಹ ಯತ್ನ, ಸಹಾಯವಾಣಿಗೆ ಕರೆ ಮಾಡಿ ದಿಟ್ಟತನ ಮೆರೆದ ಬಾಲಕಿ

ಬಳ್ಳಾರಿಯಲ್ಲಿ ಶೇ 94 ಅಂಕಗಳೊಂದಿಗೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾದ ವಿದ್ಯಾರ್ಥಿನಿಯನ್ನು ಪೋಷಕರು ಮದುವೆ ಮಾಡಲು ಯತ್ನಿಸಿದ್ದು, ಬಾಲಕಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ದಿಟ್ಟತನ ಮೆರೆದಿದ್ದಾಳೆ. ತಹಶೀಲ್ದಾರ್, ಪೊಲೀಸರು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಆಕೆಯನ್ನು ರಕ್ಷಿಸಿ ಕಾಲೇಜೊಂದರ ವಸತಿನಿಲಯದಲ್ಲಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

ಎಸ್ಸೆಸ್ಸೆಲ್ಸಿಯಲ್ಲಿ ಶೇ 94 ಅಂಕ ಪಡೆದಿದ್ದ ವಿದ್ಯಾರ್ಥಿನಿಗೆ ವಿವಾಹ ಯತ್ನ, ಸಹಾಯವಾಣಿಗೆ ಕರೆ ಮಾಡಿ ದಿಟ್ಟತನ ಮೆರೆದ ಬಾಲಕಿ
ಸಾಂದರ್ಭಿಕ ಚಿತ್ರ
Updated By: Ganapathi Sharma

Updated on: Aug 20, 2025 | 12:58 PM

ಬಳ್ಳಾರಿ, ಆಗಸ್ಟ್ 20: ಎಸ್​​ಎಸ್​​ಎಲ್​ಸಿ ಪರೀಕ್ಷೆಯಲ್ಲಿ (SSLC Exam) ಶೇ 94 ಅಂಕಗಳೊಂದಿಗೆ ತೇರ್ಗಡೆ ಹೊಂದಿದ ವಿದ್ಯಾರ್ಥಿನಿಗೆ ಪೋಷಕರು ವಿವಾಹ (Child Marriage) ಮಾಡಲು ಯತ್ನಿಸಿದ ವಿದ್ಯಮಾನ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಹಗರಿಬೊಮ್ಮನಹಳ್ಳಿ ತಹಶೀಲ್ದಾರ್​​​​, ಪೊಲೀಸರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಬಾಲಕಿಯನ್ನು ರಕ್ಷಿಸಿದ್ದಾರೆ. ಎಸ್​​ಎಸ್​​ಎಲ್​ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿರುವ ವಿದ್ಯಾರ್ಥಿನಿ ಉನ್ನತ ಶಿಕ್ಷಣದ ಕನಸು ಕಂಡಿದ್ದಳು. ಆದರೆ, ಪೋಷಕರು ಮದುವೆ ಮಾಡಿಸಲು ಮುಂದಾಗಿದ್​ದರು.

ಹುಡುಗನೊಬ್ಬನನ್ನು ನೋಡಿ ಒಂದು ತಿಂಗಳ ಒಳಗೆ ಮದುವೆ ಮಾಡಿಸಲು ಪೊಲೀಸರು ಮುಂದಾಗಿದ್ದರು. ಆದರೆ, ದಿಟ್ಟತನ ತೋರಿದ ಬಾಲಕಿ ‘ಮಕ್ಕಳ ಸಹಾಯವಾಣಿ’ಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ತಕ್ಷಣವೇ ಎಚ್ಚೆತ್ತ ಅಧಿಕಾರಿಗಳು ಆಕೆಯ ಮನೆಗೆ ತೆರಳಿ ಪೋಷಕರಿಗೆ ಬುದ್ಧಿವಾದ ಹೇಳಿದ್ದಾರೆ. ಬಾಲಕಿಯನ್ನು ರಕ್ಷಿಸಿ ಆಕೆಗೆ ಕಾಲೇಜೊಂದರಲ್ಲಿ ವಸತಿನಿಯಲಯದ ವ್ಯವಸ್ಥೆ ಮಾಡಿದ್ದಾರೆ.

ಕರ್ನಾಟಕದಲ್ಲಿ ಬಾಲ್ಯ ವಿವಾಹ ತುಸು ಇಳಿಕೆ

ಪರಿಣಾಮಕಾರಿ ಕ್ರಮಗಳ ಕಾರಣ ಕರ್ನಾಟಕದಲ್ಲಿ ಬಾಲ್ಯ ವಿವಾಹ ಪ್ರಕರಣಗಳಲ್ಲಿ ಈ ವರ್ಷ ತುಸು ಇಳಿಕೆಯಾಗಿರುವುದು ಅಂಕಿಅಂಶಗಳಿಂದ ತಿಳಿದುಬಂದಿದೆ. 2024-25ರಲ್ಲಿ 700 ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿವೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಬಾಲ್ಯ ವಿವಾಹ ಪ್ರಕರಣಗಳಲ್ಲಿ ಸುಮಾರು ಶೇ 3 ರ ಇಳಿಕೆ ಕಂಡುಬಂದಿದೆ. ಆದಾಗ್ಯೂ, ಒಟ್ಟು ಸಂಖ್ಯೆಗಳು ಆತಂಕಕಾರಿಯಾಗಿವೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿಧಾನಸಭೆಯಲ್ಲಿ ನೀಡಿದ ಮಾಹಿತಿ ಪ್ರಕಾರ, 2023-24ರಲ್ಲಿ ರಾಜ್ಯದಲ್ಲಿ ಸುಮಾರು 719 ಬಾಲ್ಯ ವಿವಾಹಗಳು ನಡೆದಿದ್ದವು.

ಬಾಲ್ಯ ವಿವಾಹ ಪ್ರಕರಣಗಳ ಜಿಲ್ಲಾವಾರು ವಿಂಗಡಣೆಯಲ್ಲಿ ಶಿವಮೊಗ್ಗ, ಬೆಳಗಾವಿ ಮತ್ತು ಚಿತ್ರದುರ್ಗ ಮೊದಲ ಮೂರು ಸ್ಥಾನಗಳಲ್ಲಿವೆ. ಮೈಸೂರು ಮತ್ತು ಮಂಡ್ಯ ಕ್ರಮವಾಗಿ ಐದು ಮತ್ತು ಆರನೇ ಸ್ಥಾನಗಳಲ್ಲಿವೆ. ಈ ವರ್ಷ, ಏಪ್ರಿಲ್ ಮತ್ತು ಜೂನ್ 2025 ರ ನಡುವೆ, ರಾಜ್ಯದಲ್ಲಿ 211 ಪ್ರಕರಣಗಳು ವರದಿಯಾಗಿವೆ.

ಇದನ್ನೂ ಓದಿ: ಚಿತ್ರದುರ್ಗ: ಕ್ಯಾನ್ಸರ್ ಮೂರನೇ ಹಂತದಲ್ಲಿರುವ ಯುವಕನಿಂದಲೇ ವಿದ್ಯಾರ್ಥಿನಿಯ ಕೊಲೆ

ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಇಲಾಖೆ ಕೈಗೊಂಡಿರುವ ಕ್ರಮಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವೆ ಹೆಬ್ಬಾಳ್ಕರ್, ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹಿರಿಯ ಪೊಲೀಸ್ ಮತ್ತು ಜಿಲ್ಲಾ ಆಡಳಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ