ಸರ್ಕಾರಿ ಕಾರು ಬಳಸದೆ ಸ್ವಂತ ಕಾರಿನಲ್ಲಿ ಓಡಾಡುತ್ತಿರುವ ಸಚಿವ ಆನಂದ್ ಸಿಂಗ್, ಬೆಂಗಳೂರಿಗೆ ಬರುವ ಸಾಧ್ಯತೆ
Anand Singh: ಕೇಳಿದ ಖಾತೆ ನೀಡದಿದ್ದಕ್ಕೆ ಅಸಮಾಧಾನಗೊಂಡಿರುವ ಆನಂದ್ ಸಿಂಗ್, ನಿನ್ನೆಯಿಂದ ಸರ್ಕಾರಿ ಕಾರು ಬಳಸುತ್ತಿಲ್ಲ. ಸ್ವಂತ ಕಾರಿನಲ್ಲಿ ಓಡಾಡುತ್ತಿದ್ದಾರೆ. ಪೊಲೀಸ್ ಎಸ್ಕಾರ್ಟ್ ಕೂಡ ಇಲ್ಲದೆ ಪ್ರಯಾಣ ಬೆಳೆಸಿದ್ದಾರೆ.
ವಿಜಯನಗರ: ಪ್ರಬಲ ಖಾತೆಯ ಮೇಲೆ ಕಣ್ಣಿಟ್ಟಿರುವ ಸಚಿವ ಆನಂದ್ ಸಿಂಗ್(Anand Singh) ರಾಜಕೀಯ ನಡೆ ಇನ್ನೂ ನಿಗೂಢವಾಗಿಯೇ ಉಳಿದಿದೆ. ಆನಂದ್ ಸಿಂಗ್ ತಮ್ಮ ಮುಂದಿನ ನಡೆ ಏನೂ ಅನ್ನೋ ಬಗ್ಗೆ ಇದುವರೆಗೆ ಗುಟ್ಟು ಬಿಟ್ಟು ಕೊಡುತ್ತಿಲ್ಲ. ಇನ್ನೂ ಕೇಳಿದ ಖಾತೆ ನೀಡದಿದ್ದಕ್ಕೆ ಅಸಮಾಧಾನಗೊಂಡಿರುವ ಆನಂದ್ ಸಿಂಗ್, ನಿನ್ನೆಯಿಂದ ಸರ್ಕಾರಿ ಕಾರು ಬಳಸುತ್ತಿಲ್ಲ. ಸ್ವಂತ ಕಾರಿನಲ್ಲಿ ಓಡಾಡುತ್ತಿದ್ದಾರೆ. ಪೊಲೀಸ್ ಎಸ್ಕಾರ್ಟ್ ಕೂಡ ಇಲ್ಲದೆ ಪ್ರಯಾಣ ಬೆಳೆಸಿದ್ದಾರೆ.
ಸದ್ಯ ಆನಂದ್ ಸಿಂಗ್ ಹೊಸಪೇಟೆಯಿಂದ ಯಲ್ಲಾಪುರದತ್ತ ಪ್ರಯಾಣ ಬೆಳೆಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರಕ್ಕೆ ತೆರಳಿದ್ದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ರಥ ನಿರ್ಮಾಣ ಕಾರ್ಯ ವೀಕ್ಷಣೆ ಮಾಡಲಿದ್ದಾರೆ. ₹1.4 ಕೋಟಿ ವೆಚ್ಚದಲ್ಲಿ ರಥ ನಿರ್ಮಾಣವಾಗುತ್ತಿದೆ. ಬಳಿಕ ಯಲ್ಲಾಪುರದಿಂದ ಬೆಂಗಳೂರಿಗೆ ತೆರಳುವ ಸಾಧ್ಯತೆ ಇದೆ.
ಇನ್ನು ವಿಜಯನಗರ ಜಿಲ್ಲೆಯ ಹೊಸಪೇಟೆ ಬಳಿಯ ತುಂಗಾಭದ್ರಾ ಜಲಾಶಯ ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೆ ಸಚಿವ ಆನಂದ್ ಸಿಂಗ್ ಗೈರಾಗಿದ್ದಾರೆ. ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಚಿವ ಹಾಲಪ್ಪ ಆಚಾರ್ಯ,ಸಂಸದರಾದ ವೈ ದೇವೇಂದ್ರಪ್ಪ,ಕರಡಿ ಸಂಗಣ್ಣ ಸೇರಿದಂತೆ ಹಲವು ಶಾಸಕರು ಭಾಗಿಯಾಗಿ ವಿಶೇಷ ಪೂಜೆ ಬಳಿಕ ಬಾಗಿನ ಅರ್ಪಣೆ ಮಾಡಿದ್ದಾರೆ.
ರಾಜ್ಯ ರಾಜಧಾನಿಗೆ ಇವತ್ತು ಬರ್ತಾರಾ ಆನಂದ್ ಸಿಂಗ್..? ಸಿಎಂ ಬೊಮ್ಮಾಯಿ ಅವ್ರಿಗೆ ಎಲ್ಲಾ ಹೇಳಿದ್ದೇನೆ. ಅವರು ಏನ್ ನಿರ್ಧಾರ ತೆಗೆದುಕೊಳ್ತಾರೋ ಕಾದು ನೋಡ್ತೀನಿ. ಪಿಕ್ಚರ್ ಅಭಿ ಬಾಕಿ ಹೈ ಅಂತಾ ಬಾಂಬ್ ಸಿಡಿಸಿದ್ದ ಆನಂದ್ ಸಿಂಗ್ ನಡೆ ಈಗಲೂ ಸಸ್ಪೆನ್ಸ್ ಆಗಿದೆ. ಎಲ್ಲದಕ್ಕೂ ಉತ್ತರ ಕೊಡ್ತೀನಿ ಎಂದಿದ್ದ ಆನಂದ್ ಸಿಂಗ್ ನಿನ್ನೆ ಕೂಡಾ ಸೈಲೆಂಟ್ ಆಗಿಯೇ ತಂತ್ರ ರೂಪಿಸ್ತಿದ್ದಾರೆ. ಇಂದು ಯಲ್ಲಾಪುರಕ್ಕೆ ಹೋಗ್ತಿರೋ ಆನಂದ್ ಸಿಂಗ್, ಅಲ್ಲಿಂದ ಎಲ್ಲಿ ಹೋಗ್ತೀನೋ ಗೊತ್ತಿಲ್ಲ. ಬೆಂಗಳೂರಿಗೆ ಹೋಗ್ತೀನೋ ಇಲ್ಲ, ವಾಪಸ್ ಹೊಸಪೇಟೆಗೆೇ ಬರ್ತೀನಾ ಅನ್ನೋದು ಗೊತ್ತಿಲ್ಲ ಅಂತಾ ಮಾರ್ಮಿಕವಾಗಿ ನುಡಿದ್ದಾರೆ.
ಸಿಎಂರಿಂದ ಯಾವುದೇ ಸೂಚನೆ ಬಂದಿಲ್ಲ ಅಂತಿರೋ ಆನಂದ್ ಸಿಂಗ್, ಬೆಂಗಳೂರಿಗೆ ಯಾವಾಗ ಬೇಕಾದ್ರೂ ಬರೋ ಸಾಧ್ಯತೆ ಇದೆ. ಖಾತೆ ಬದಲಾವಣೆಗಾಗಿ ಬಿಗಿ ಪಟ್ಟು ಹಿಡಿದರೋ ಸಿಂಗ್, ಸಿಎಂ ರಿಂದ ಯಾವುದೇ ಸಂದೇಶ ಬಂದಿಲ್ಲ ಅಂತಾ ಫುಲ್ ಸೈಲೆಂಟ್ ಆಗಿದ್ದಾರೆ. ಬಹುತೇಕೆ ಇಂದೇ ಬೆಂಗಳೂರಿಗೆ ಆನಂದ್ ಸಿಂಗ್ ಬರೋ ಸಾಧ್ಯತೆಯಿದೆ.
ಖಾತೆ ಬದಲಾಗದಿದ್ರೆ ರಾಜೀನಾಮೆ ಗ್ಯಾರಂಟಿನಾ? ಸಿಎಂ ಸೂಚನೆಗಾಗಿ, ಶುಭ ಸಂದೇಶಕ್ಕಾಗಿ ಆನಂದ್ ಸಿಂಗ್ ಕಾಯುತ್ತಿದ್ದಾರೆ. ಇವತ್ತು ಬರುತ್ತೇ ನಾಳೆ ಬರುತ್ತೆ ಅಂತಾ ತುದಿಗಾಲಲ್ಲಿ ನಿಂತಿದ್ದಾರೆ. ಸಿಎಂ ಕೊಟ್ಟ ಭರವಸೆ ಈಡೇರಿಸ್ತಾರೆ ಅನ್ನೋ ವಿಶ್ವಾಸದಲ್ಲಿರೋ ಆನಂದ್ ಸಿಂಗ್ ನಿನ್ನೆ ಒಂದು ದಿನ ಕಾದು ನೋಡೋ ತಂತ್ರಕ್ಕೆ ಮೊರೆ ಹೋಗಿದ್ರು. ಹೀಗಿದ್ರೂ ಸೈಲೆಂಟ್ ಆಗಿಯೇ ತಮ್ಮ ಮುಂದಿನ ನಿರ್ಧಾರ ಪ್ರಕಟಿಸೋಕೆ ಪ್ಲ್ಯಾನ್ ಮಾಡ್ತಿದ್ದಾರಂತೆ. ಆಪ್ತರಿಗೆ ಹೇಳಿರೋ ಪ್ರಕಾರ ಖಾತೆ ಬದಲಾವಣೆ ಆಗದಿದ್ರೆ, ರಾಜೀನಾಮೆ ನೀಡೋದು ಪಕ್ಕಾ ಎನ್ನಲಾಗ್ತಿದೆ.
ಆನಂದ್ ಸಿಂಗ್ ಹಠಕ್ಕೆ ಬಿದ್ರೂ ವರಿಷ್ಠರು ತಲೆಕೆಡಿಸಿಕೊಳ್ಳುತ್ತಿಲ್ಲ ಖಾತೆ ಬದಲಾವಣೆ ಮಾಡಲೇಬೇಕು ಅಂತಾ ಸಚಿವ ಆನಂದ್ ಸಿಂಗ್ ಹಠಕ್ಕೆ ಬಿದ್ದಿದ್ದಾರೆ. ಹೀಗಾಗಿ ಆನಂದ್ ಸಿಂಗ್ ಅಪ್ತರು ಸೇರಿದಂತೆ ಹಿತೈಷಿಗಳು, ಸಂಪುಟ ಸಹೋದ್ಯೋಗಿಗಳು, ಫೋನ್ ಮಾಡಿ, ಸಮಾಧಾನಗೊಳಿಸೋ ಪ್ರಯತ್ನ ಮಾಡ್ತಿದ್ದಾರೆ. ಆದ್ರೂ, ಆನಂದ್ ಸಿಂಗ್ ಸಿಟ್ಟು ಮಾತ್ರ ಕಡಿಮೆಯಾಗ್ತಿಲ್ಲ. ಕೇಳಿದ ಖಾತೆ ನೀಡದಿದ್ರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡ್ತೀನಿ. ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಅಂತಾ ಹೇಳಿದ್ದಾರಂತೆ. ಅಸಲಿ ವಿಚಾರ ಏನಪ್ಪ ಅಂದ್ರೆ, ಆನಂದ್ ಸಿಂಗ್ ಇಷ್ಟೆಲ್ಲಾ ಹಠಕ್ಕೆ ಬಿದ್ರೂ ಪಕ್ಷದ ವರಿಷ್ಠರು ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ.
ಸಿಂಗ್‌ಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಕಮಲ ನಾಯಕರು ಇನ್ನೂ ಪಿಕ್ಚರ್ ಅಭಿ ಬಾಕಿ ಹೈ ಅಂತಾ ಅತ್ತ ಆನಂದ್ ಸಿಂಗ್ ಮುನಿಸಿಕೊಂಡಿದ್ರೆ, ಇತ್ತ ಬಿಜೆಪಿ ನಾಯಕರೇ ಆನಂದ್ ಸಿಂಗ್ ನಡೆಯನ್ನ ಟೀಕಿಸಿದ್ದಾರೆ. ಆನಂದ್ ಸಿಂಗ್‌ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿರೋ ಸಚಿವ ಎಸ್.ಟಿ ಸೋಮಶೇಖರ್, ಫಿಲ್ಮೂ ಬಾಕಿ ಇಲ್ಲ, ಫಿಲ್ಮ್ ರೀಲೂ ಬಾಕಿ ಇಲ್ಲ, ಏನಾದ್ರೂ ವೈಮನಸ್ಸು ಇದ್ರೆ, ಸಿಎಂ ಬಳಿ ಕುಳಿತು ಮಾತಾಡಲಿ, ಅದು ಬಿಟ್ಟು ಹೊರಗಡೆ ಮಾತನಾಡಿದ್ರೆ ಪ್ರಯೋಜನವಿಲ್ಲ ಎಂದಿದ್ದಾರೆ. ಇತ್ತ ಎಂಎಲ್ಸಿ ವಿಶ್ವನಾಥ್ ಇಂಥಾದ್ದೇ ಖಾತೆ ಬೇಕು ಅಂತಾ ಕೇಳ್ತಿರಲ್ಲ, ನಿಮಗೇನು ಅನುಭವ ಇದೆ ಅಂತಾ ಕುಟುಕಿದ್ದಾರೆ.
ದೆಹಲಿಗೂ ಹೋಗಲ್ಲ ಅಂತಿರೋ ಆನಂದ್ ಸಿಂಗ್ ಸಿಎಂ ಸೂಚನೆಗೆ ಕಾದು ಕೂತಿದ್ದಾರೆ. ಇವತ್ತು ಫೈನಲ್ ಆಗಿಲ್ಲ ಅಂದ್ರೆ ಬಹುಶಃ ಆದಷ್ಟು ಬೇಗ ಆನಂದ್ ಸಿಂಗ್ ಒಂದು ನಿರ್ಧಾರಕ್ಕೆ ಬರೋದು ಪಕ್ಕಾ ಎನ್ನಲಾಗ್ತಿದೆ.
ಇದನ್ನೂ ಓದಿ: ಖಾತೆ ಬದಲಾವಣೆಗೆ ಬಿಗಿಪಟ್ಟು; ಧ್ವಜಾರೋಹಣ ಬಳಿಕ ಬೆಂಗಳೂರಿಗೆ ತೆರಳಲಿರುವ ಆನಂದ್ ಸಿಂಗ್
Published On - 9:51 am, Tue, 17 August 21