ವಿಜಯನಗರ: ನಾಯಕತ್ವದ ಬದಲಾವಣೆ,(Leadership Change) ನೂತನ ಸಿಎಂ ಪಟ್ಟಾಭಿಷೇಕ, ಸಂಪುಟ ರಚನೆಯ ಹಗ್ಗಜಗ್ಗಾಟದ ಬಳಿಕ ಖಾತೆ ಕಿಚ್ಚು ಕಮಲ ಪಾಳಯವನ್ನು ಕೊತ ಕೊತ ಕುದಿಯುವಂತೆ ಮಾಡಿದೆ. ನೂತನ ಸಚಿವರ ಖಾತೆ ಕ್ಯಾತೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ತಿದೆ. ಪರಿಣಾಮ ಕಮಲ ಪಾಳಯದಲ್ಲಿ ಖಾತೆ ಹಂಚಿಕೆ ಕ್ಯಾತೆ ಬೇರೆಯದೇ ಲೆವೆಲ್ಗೆ ಹೋಗಿದೆ. ಇಷ್ಟು ದಿನ ಅಸಮಾಧಾನ, ಹೇಳಿಕೆ ಕೊಡೋ ಮೂಲಕ ಹೈಕಮಾಂಡ್ಗೆ(BJP High Command) ವಾರ್ನಿಂಗ್ ಮಾಡ್ತಿದ್ದ ಸಚಿವರು ಈಗ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಕೊಟ್ಟಿರೋ ಸಚಿವ ಸ್ಥಾನಕ್ಕೇ ರಿಸೈನ್ ಕೊಟ್ಟು ಹೋಗ್ತೀನಿ ಅಂತಾ ಹೊರಟು ನಿಂತಿದ್ದಾರೆ.
ಆನಂದ್ ಸಿಂಗ್(Anand Singh)… ಸಮ್ಮಿಶ್ರ ಸರ್ಕಾರ ಪತನದ ವೇಳೆ ಮೊದಲ ಸಾಲಿನಲ್ಲಿ ನಿಂತು ರಾಜೀನಾಮೆ ನೀಡಿದ್ದ ಶಾಸಕ ಮತ್ತೆ ರಾಜೀನಾಮೆ(Anand Singh Resignation) ವಿಚಾರವಾಗೇ ಸುದ್ದಿಯಲ್ಲಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಆನಂದ್ ಸಿಂಗ್ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಬೊಮ್ಮಾಯಿ ಸರ್ಕಾರದಲ್ಲಿ ಸಚಿವರಾಗಿರೋ ಆನಂದ್ ಸಿಂಗ್ ಖಾತೆ ವಿಚಾರವಾಗಿ ಮತ್ತೆ ಸಿಡಿದೆದ್ದಿದ್ದಾರೆ. ಮೂಲಗಳ ಪ್ರಕಾರ ಇಂಧನ ಖಾತೆ ಮೇಲೆ ಕಣ್ಣಿಟ್ಟಿದ್ದ ಅನಂದ್ಸಿಂಗ್ಗೆ ಪ್ರವಾಸೋದ್ಯಮ ಇಲಾಖೆ ಕೊಡಲಾಗಿತ್ತು. ಇದ್ರಿಂದ ಸಿಡಿಮಿಡಿಗೊಂಡಿರೋ ಆನಂದ್ ಸಿಂಗ್ ಇಷ್ಟು ದಿನ ಬಾಯಿ ಮಾತಲ್ಲೇ ಎಚ್ಚರಿಕೆ ಕೊಡ್ತಿದ್ರು. ಇದೀಗ ಸಚಿವ ಸ್ಥಾನ ಮಾತ್ರವಲ್ಲ, ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಡ್ತೀನಿ ಅಂತಾ ಘಂಟಾಘೋಷವಾಗಿ ಹೇಳಿದ್ದಾರೆ.
ಕಚೇರಿ ಬೋರ್ಡ್ ತೆರವು, ಇವತ್ತೇ ರಾಜೀನಾಮೆ ಫಿಕ್ಸ್..?
ವಿಜಯನಗರ ಜಿಲ್ಲೆ ಹೊಸಪೇಟೆ ಕ್ಷೇತ್ರದಲ್ಲಿರೋ ಶಾಸಕ ಆನಂದ್ ಸಿಂಗ್ ಕಚೇರಿಯಲ್ಲಿ ಇಷ್ಟು ದಿನ ಪ್ರವೇಶ ದ್ವಾರದಲ್ಲಿ ಶಾಸಕರ ಕಾರ್ಯಾಲಯ ಅನ್ನೋ ಬೃಹತ್ ಬೋರ್ಡ್ ರಾರಾಜಿಸ್ತಿತ್ತು. ಆದ್ರೆ ನಿನ್ನೆ ಸಂಜೆಯಾಗ್ತಿದ್ದಂತೆ ಆನಂದ್ ಸಿಂಗ್ ಕಚೇರಿ ಎದುರು ಕ್ರೇನ್ ಪ್ರತ್ಯಕ್ಷವಾಗಿತ್ತು. ಕ್ಷಣ ಮಾತ್ರದಲ್ಲಿ ಆನಂದ್ ಸಿಂಗ್ ಕಚೇರಿಯ ಬೋರ್ಡ್ ಕೆಳಕ್ಕಿಳಿದಿದೆ.
ಬಿಜೆಪಿ ವರಿಷ್ಠರಿಗೂ ತಟ್ಟಿತಾ ಬಂಡಾಯದ ಬಿಸಿ?
ಆನಂದ್ ಸಿಂಗ್ ರಾಜೀನಾಮೆ ವಾರ್ನಿಂಗ್ ಮೂಲಕ ರಾಜ್ಯ ಬಿಜೆಪಿ ಪಾಳಯದಲ್ಲಿ ಬಂಡಾಯದ ಬೆಂಕಿ ಹೊತ್ತಿಕೊಂಡಿದೆ. ಕಚೇರಿ ಬೋರ್ಡ್ ತೆರವುಗೊಳಿಸೋದ್ರೊಂದಿಗೆ , ಆನಂದ್ ಸಿಂಗ್ ರಾಜೀನಾಮೆ ಪತ್ರವನ್ನೂ ರೆಡಿ ಮಾಡಿಟ್ಟುಕೊಂಡಿದ್ದಾರಂತೆ. ಸಂಪುಟ ಮಾತ್ರವಲ್ಲದೆ ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಡಲು ಮುಂದಾಗಿರೋದು ಬಿಜೆಪಿ ವರಿಷ್ಠರನ್ನು ಕಂಗೆಡಿಸಿದೆ. ಹೀಗಾಗೇ ರಾಜ್ಯ ಬಿಜೆಪಿ ಬೆಳವಣಿಗೆಗಳ ಬಗ್ಗೆ ಅರುಣ್ ಸಿಂಗ್ ಮಾಹಿತಿ ಪಡೆದುಕೊಳ್ತಿದ್ದಾರೆನ್ನಲಾಗಿದೆ.
ಎಂಟಿಬಿ ನಾಗರಾಜ್ 3 ದಿನಗಳ ಡೆಡ್ಲೈನ್ ಅಂತ್ಯ..!
ಮತ್ತೊಂದೆಡೆ ಎಂಟಿಬಿ ನಾಗರಾಜ್ ಕೂಡಾ ತಮಗೆ ಕೊಟ್ಟಿರೋ ಸಚಿವ ಸ್ಥಾನದ ಬಗ್ಗೆ ಈಗಾಗಲೇ ಅಸಮಾಧಾನ ಹೊರಹಾಕಿದ್ದಾರೆ. ಮೂರು ದಿನಗಳ ಹಿಂದೆ ಸಿಎಂ ಬೊಮ್ಮಾಯಿಯನ್ನು ಭೇಟಿ ಮಾಡಿದ್ದ ಸಚಿವ ಎಂಟಿಬಿ ನಾಗರಾಜ್, ಮೂರೇ ಮೂರು ದಿನ ಕಾಯುತ್ತೇನೆ. ಖಾತೆ ಬದಲಿಸದಿದ್ರೆ ಮುಂದಿನ ನಿರ್ಧಾರ ಅಂತಾ ವಾರ್ನಿಂಗ್ ಕೊಟ್ಟಿದ್ರು. ಆಗಸ್ಟ್ 8ರಂದು ಎಂಟಿಬಿ ನಾಗರಾಜ್ ಕೊಟ್ಟಿರೋ ಮೂರು ದಿನಗಳ ಡೆಡ್ಲೈನ್ ಇವತ್ತಿಗೆ ಅಂತ್ಯಗೊಳ್ಳಲಿದೆ. ಹೀಗಾಗಿ ಎಂಟಿಬಿ ನಾಗರಾಜ್ ಕೂಡಾ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರಾ ಅನ್ನೋ ಕುತೂಹಲ ಮನೆಮಾಡಿದೆ.
ಇದೇ ವೇಳೆ ಖಾತೆ ಬಗ್ಗೆ ಶ್ರೀರಾಮುಲು ಕೂಡಾ ಅಸಮಾಧಾನ ತೋಡಿಕೊಂಡಿದ್ದಾರೆ. ಡಿಸಿಎಂ ಪೋಸ್ಟ್ ಮೇಲೆ ಕಣ್ಣಿಟ್ಟಿದ್ದ ರಾಮುಲುಗೆ ಸಾರಿಗೆ ಇಲಾಖೆ ಕೊಟ್ಟಿದ್ದಕ್ಕೆ ಅವ್ರ ಬೆಂಬಲಿಗರೂ ಆಕ್ರೋಶ ಹೊರಹಾಕಿದ್ರು. ಖಾತೆ ನೀಡಿರೋ ಅಸಮಾಧಾನದ ಬಗ್ಗೆ ಕೇಳಿದಾಗ ಸತ್ಯ ಹರಿಶ್ಚಂದ್ರ ಕತೆ ಹೇಳಿ ತಮ್ಮ ನೋವನ್ನು ಪರೋಕ್ಷವಾಗಿ ಹೊರಹಾಕಿದ್ರು.
ಒಟ್ನಲ್ಲಿ ಖಾತೆ ಹಂಚಿಕೆಯಾಗಿ ಕೆಲವೇ ದಿನಗಳಲ್ಲಿ ಕಮಲ ಪಾಳಯ ಬಂಡಾಯದ ಬೇಗೆಯಲ್ಲಿ ಕುದಿಯುತ್ತಿದೆ. ಅಸಮಾಧಾನದ ಗೂಗ್ಲಿಗೆ ಬೊಮ್ಮಾಯಿ ಸಂಪುಟದ ಮೊದಲ ವಿಕೆಟ್ ಪತನ ಬಹುತೇಕ ಖಚಿತವಾಗಿದೆ. ನೂತನ ಸಚಿವರು, ಸಚಿವ ಸ್ಥಾನ ವಂಚಿತ ಶಾಸಕರೂ ಓಪನ್ ಸಮರ ಸಾರಿದ್ದಾರೆ. ಇವತ್ತಿಂದ ಬಂಡಾಯದ ಬೆಂಕಿ ಯಾವ ಮಟ್ಟಕ್ಕೂ ಹೊತ್ತಿಕೊಳ್ಳೋ ಎಲ್ಲಾ ಸಾಧ್ಯತೆಗಳಿವೆ.
ಇದನ್ನೂ ಓದಿ: ಶಾಸಕರ ಕಚೇರಿ ತೆರವು; ಬಯಸಿದ ಖಾತೆ ಸಿಗದೇ ರಾಜೀನಾಮೆ ನೀಡುವುದಾಗಿ ಒತ್ತಡ ಹಾಕುತ್ತಿದ್ದಾರೆಯೇ ಸಚಿವ ಆನಂದ್ ಸಿಂಗ್?