ಮಳೆಯ ಅವಾಂತರ; ಕಂಪ್ಲಿ-ಗಂಗಾವತಿ ಸೇತುವೆಯ ಮೇಲೆ ಸಂಚಾರ ಸ್ಥಗಿತ, ಅರ್ಧಗಂಟೆಗೂ ಹೆಚ್ಚು ಕಾಲ ಆಟೋದಲ್ಲೇ ನರಳಾಡಿದ ರೋಗಿ
ಕಂಪ್ಲಿ-ಗಂಗಾವತಿ ಸೇತುವೆಯ ಮೇಲೆ ಸಂಚಾರ ಸ್ಥಗಿತ ಹಿನ್ನೆಲೆ ಸೇತುವೆ ದಾಟಲು ಆಟೋದಲ್ಲಿ ತೆರಳುತ್ತಿದ್ದ ರೋಗಿ ಪರದಾಡುತ್ತಿದ್ದಾರೆ. ಬಳ್ಳಾರಿಯಿಂದ ಗಂಗಾವತಿಗೆ ತೆರಳುತ್ತಿದ್ದ ಹನೀಫ್ ಅರ್ಧಗಂಟೆಗೂ ಹೆಚ್ಚು ಕಾಲ ಆಟೋದಲ್ಲೇ ನರಳಾಡಿದ್ದಾರೆ.
ಬಳ್ಳಾರಿ: ರಾಜ್ಯದ ಹಲವೆಡೆ ರಣಮಳೆ ಒಂದೇ ಸಮನೆ ಸುರಿಯುತ್ತಿದೆ. ಇನ್ನೂ ಕೆಲವಡೆ ಮಳೆ ಕಡಿಮೆಯಾದ್ರೂ, ಮಳೆ ಅವಾಂತರಗಳು ಮಾತ್ರ ತಗ್ಗುತ್ತಲೇ ಇಲ್ಲ. ವ್ಯಾಪಕ ವರ್ಷಧಾರೆಯಿಂದ ಜನರ ಬದುಕು ಬೀದಿಗೆ ಬಂದಿದೆ. ಮನೆಗಳು, ಗುಡ್ಡ, ರಸ್ತೆಗಳೇ ಕುಸಿದು ಬೀಳುತ್ತಿವೆ. ಜಲಾಶಯಗಳ ಅಪಾರ ನೀರಿನಿಂದ ನದಿಪಾತ್ರದ ಜನರು ಸಂಕಷ್ಟಕ್ಕೆ ಸಿಲುಕಿದ್ರೆ, ಸಾವಿರಾರು ಹೆಕ್ಟೇರ್ ಪ್ರದೇಶದ ಬೆಳೆ ಜಲಸಮಾಧಿಯಾಗಿದೆ. ಸೇತುವೆಗಳು ಮುಳುಗಿ ಜನರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗದಂತಾಗಿದೆ. ಅದರಂತೆಯೇ ಕಂಪ್ಲಿ-ಗಂಗಾವತಿ ಸೇತುವೆಯ ಮೇಲೆ ಸಂಚಾರ ಸ್ಥಗಿತ ಹಿನ್ನೆಲೆ ರೋಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಕಂಪ್ಲಿ-ಗಂಗಾವತಿ ಸೇತುವೆಯ ಮೇಲೆ ಸಂಚಾರ ಸ್ಥಗಿತ ಹಿನ್ನೆಲೆ ಸೇತುವೆ ದಾಟಲು ಆಟೋದಲ್ಲಿ ತೆರಳುತ್ತಿದ್ದ ರೋಗಿ ಪರದಾಡುತ್ತಿದ್ದಾರೆ. ಬಳ್ಳಾರಿಯಿಂದ ಗಂಗಾವತಿಗೆ ತೆರಳುತ್ತಿದ್ದ ಹನೀಫ್ ಅರ್ಧಗಂಟೆಗೂ ಹೆಚ್ಚು ಕಾಲ ಆಟೋದಲ್ಲೇ ನರಳಾಡಿದ್ದಾರೆ. ಚಿಕಿತ್ಸೆಯ ದಾಖಲಾತಿ ತೋರಿಸಿದರೂ ಪೊಲೀಸರು ಹನೀಫ್ರನ್ನ ತಡೆದಿದ್ದು ಸ್ಥಳೀಯರ ಮನವಿಯ ಮೇರೆಗೆ ರೋಗಿ ತೆರಳಲು ಅನುಮತಿ ನೀಡಲಾಗಿದೆ. ಬಳ್ಳಾರಿಯ ಟಿಬಿ ಸ್ಯಾನಟರಿ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆದು ಊರಿಗೆ ತೆರಳುವ ವೇಳೆ ರೋಗಿ ಹನೀಫ್ ಪರದಾಡಿದ್ದಾರೆ.
ಮುಳ್ಳಿನ ಬೇಲಿ ದಾಟಿ ಕಿರು ಸೇತುವೆ ಮೇಲೆ ಹೋದ ಜನ ಇನ್ನು ಮತ್ತೊಂದು ಕಡೆ ಕೊಪ್ಪಳ ತಾಲೂಕಿನ ಮುನಿರಾಬಾದ್ ತುಂಗಭದ್ರಾ ಜಲಾಶಯದ ಮುಂಭಾಗ ಇರುವ ಸೇತುವೆಗೆ ಮುಳ್ಳಿನ ಬೇಲಿ ಹಾಕಿದ್ದು ಅದನ್ನೇ ದಾಟಿ ಜನ ಹೋಗುವ ದೃಶ್ಯಗಳು ಕಂಡು ಬಂದಿವೆ. ಅಧಿಕಾರಿಗಳು, ಪೊಲೀಸರು ಹೋಗುತ್ತಲೇ ಸೇತುವೆ ಮೇಲೆ ನುಗ್ಗಿದ ಜನ ಮುಳ್ಳಿನ ಬೇಲಿ ದಾಟಿ ಕಿರು ಸೇತುವೆ ಮೇಲೆ ಹೋಗಿದ್ದಾರೆ.
ಈ ಕಿರು ಸೇತುವೆ ಮುನಿರಾಬಾದ್ – ಟಿಬಿ ಡ್ಯಾಮ್ ಗೆ ಸಂಪರ್ಕ ಕಲ್ಲಿಸುತ್ತೆ. ಸೇತುವೆ ಮೇಲೆ ಜನ ಓಡಾಡದಂತೆ ಮುಳ್ಳಿನ ಬೇಲಿ ಹಾಕಲಾಗಿತ್ತು. ಮುಳ್ಳಿನ ಬೇಲಿ ಹಾಕಿ ಪೊಲೀಸರು, ಅಧಿಕಾರಿಗಳು ಹೋದ ತಕ್ಷಣ ಮತ್ತೆ ಕಿರು ಸೇತುವೆ ಮೇಲೆ ಜನ ಓಡಾಟ ಶುರು ಮಾಡಿದ್ದಾರೆ. ಅಲ್ಲದೆ ಕಿರು ಸೇತುವೆ ಮುಂಭಾಗ ಯುವಕರು ಸೆಲ್ಪಿಗೆ ಪೋಜ್ ಕೊಟ್ಟು ಫೋಟೋ ತೆಗೆದುಕೊಳ್ಳುತ್ತಿದ್ದಾರೆ.
Published On - 4:55 pm, Wed, 13 July 22