ಬಳ್ಳಾರಿ, ಜುಲೈ 17: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಭ್ರಷ್ಟಾಚಾರ ಪ್ರಕರಣ ಬಗೆದಷ್ಟು ಬಯಲಾಗುತ್ತಿದೆ. ಈಗಾಗಲೇ ಎಸ್ಐಟಿ ಮತ್ತು ಇಡಿ ತನಿಖೆ ನಡೆಸುತ್ತಿದ್ದು ಹಲವು ಮಹತ್ವದ ದಾಖಲೆಗಳನ್ನ ಕಲೆಹಾಕಿವೆ. ಹೈದರಾಬಾದ್ ಮೂಲದ ಖಾಸಗಿ ಬ್ಯಾಂಕನಿಂದ ಬಳ್ಳಾರಿಗೆ 20.19 ಕೋಟಿ ರೂಪಾಯಿ ಹಣ ವರ್ಗಾವಣೆಯಾಗಿರುವುದನ್ನು ಎಸ್‌ಐಟಿ ಪತ್ತೆ ಮಾಡಿದೆ. ಬಳ್ಳಾರಿ, ರಾಯಚೂರು, ತುಮಕೂರು ಸೇರಿದಂತೆ ಸುಮಾರು 77 ಬ್ಯಾಂಕ್ ಅಕೌಂಟ್ಗಳಿಗೆ ಕೋಟಿ ಕೋಟಿ ಹಣ ವರ್ಗಾವಣೆ ಯಾಗಿರುವ ಬಗ್ಗೆ ಇಡಿ ಪತ್ತೆ ಹಚ್ಚಿದೆ. ಹೀಗಾಗಿ ಮತ್ತಷ್ಟು ಬಿಗಿ ಪಟ್ಟು ಹಿಡಿದು ವಾಲ್ಮೀಕಿ ಹಗರಣದ ತನಿಖೆ ಬಹುತೇಕ ಮಾಜಿ ಸಚಿವ ನಾಗೇಂದ್ರಗೆ ಸಂಕಷ್ಟ ತಂದೊಡ್ಡುವುದು ಪಕ್ಕಾ ಆಗಿದೆ.
ನಾಲ್ಕು ದಿನಗಳ ಹಿಂದೆ ಬಳ್ಳಾರಿಗೆ ಬಂದಿದ್ದ ಇಡಿ, ಮಾಜಿ ಸಚಿವ ನಾಗೇಂದ್ರ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಿ ಹಲವು ಮಹತ್ವದ ದಾಖಲೆಗಳನ್ನ ಕಲೆ ಹಾಕಿದೆ. ಬಳ್ಳಾರಿಗೆ ಬಂದಿರುವ ಹಣದ ಮೂಲದ ಬಗ್ಗೆ ಪತ್ತೆ ಹಚ್ಚಿದೆ.
ಲೋಕಸಭಾ ಚುನಾವಣೆ ವೇಳೆ ಬಳ್ಳಾರಿಗೆ ಬಂದಿದ್ದ 20.19 ಕೋಟಿ ಹಣ ಚುನಾವಣೆಗೆ ಬಳಕೆಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಕಾರಣ ಪಂಚಾಯತಿ ಮಟ್ಟದಲ್ಲಿ ಕುರಿಗಾಹಿಗಳ, ಆಭರಣ ಅಂಗಡಿಗಳ, ಮಧ್ಯದ ಅಂಗಡಿಗಳ, ರೈತರ ಅಕೌಂಟ್‌ಗಳಿಗರ ಲಕ್ಷ ಲಕ್ಷ ಹಣ ವರ್ಗಾವಣೆ ಮಾಡಿ ತೆಗಿಸಿಕೊಳ್ಳಲಾಗಿದೆ ಎಂಬ ಶಂಕೆ ಇದೆ. ಇಪ್ಪತ್ತು ಪರ್ಸೆಂಟ್ ಕಮಿಷನ್ ಆಸೆಗೆ ಹಣ ಹಾಕಿಸಿಕೊಂಡಿದ್ದವರಿಗೆ ಇಡಿ ಮತ್ತು ಎಸ್‌ಐಟಿ ಶಾಕ್ ನೀಡಿವೆ. ಹಾಕಿರುವ ಹಣ ವಾಪಾಸ್ ನೀಡುವಂತೆ ತಾಕಿತು ಮಾಡಿವೆ. ಇನ್ನು ಬ್ಯಾಂಕ್ ಅಕೌಂಟ್‌ಗೆ ಹಣ ಜಮೆಯಾದ ದಿನವೇ ಕಮಿಷನ್ ಪಡೆದು ಹಣ ಡ್ರಾ ಮಾಡಿಕೊಟ್ಟವರಿಗೂ ಹಣ ವಾಪಾಸ್ ನೀಡುವಂತೆ ಎಸ್‌ಐಟಿ ಮತ್ತು ಇಡಿ ನೋಟೀಸ್ ನೀಡಿದೆ ಹೀಗಾಗಿ ಅವರೆಲ್ಲ ಕಂಗಾಲಾಗಿದ್ದಾರೆ.
ಇದನ್ನೂ ಓದಿ: ಎಂಪಿ ಎಲೆಕ್ಷನ್ಗೆ ನಿಗಮದ 20 ಕೋಟಿ ರೂ. ಬಳಕೆ ಮಾಡಿಕೊಂಡ್ರಾ ನಾಗೇಂದ್ರ? ಪುಷ್ಟಿ ನೀಡುತ್ತಿದೆ ಹಗರಣದ ಟೈಮ್ ಲೈನ್
ಒಟ್ಟಿನಲ್ಲಿ ಕೋಟ್ಯಾಂತರ ರೂಪಾಯಿ ಹಗರಣ ಜಾಡನ್ನು ಪೂರ್ಣವಾಗಿ ಬಯಲಿಗೆಳೆಯಲು ಇಡಿ ಮತ್ತು ಎಸ್‌ಐಟಿ ಅಧಿಕಾರಿಗಳು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ