RSS ಚಟುವಟಿಕೆ ನಿಷೇಧಕ್ಕೆ ಮನವಿ: ಸಿಎಂಗೆ ಪ್ರಿಯಾಂಕ್ ಖರ್ಗೆ ಬರೆದ ಪತ್ರದಲ್ಲೇನಿದೆ?

ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆ ಆರ್ ಎಸ್ ಎಸ್ ಪಥಸಂಚಲನ ನಡೆಯುತ್ತಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಾಬ್ದಿ ಸಂಭ್ರಮದ ನಡುವೆ ಸಚಿವ ಪ್ರಿಯಾಂಕ್ ಖರ್ಗೆ ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದ ಆರ್​ ಎಸ್​ಎಸ್ ನಿಷೇಧಕ್ಕೆ ಮನವಿ ಮಾಡಿದ್ದಾರೆ. ಹಾಗಾದ್ರೆ, ಪ್ರಿಯಾಂಕ್ ಖರ್ಗೆ ಬರೆದ ಪತ್ರದಲ್ಲೇನಿದೆ ಎನ್ನುವ ವಿವರ ಇಲ್ಲಿದೆ.

RSS ಚಟುವಟಿಕೆ ನಿಷೇಧಕ್ಕೆ ಮನವಿ: ಸಿಎಂಗೆ ಪ್ರಿಯಾಂಕ್ ಖರ್ಗೆ ಬರೆದ ಪತ್ರದಲ್ಲೇನಿದೆ?
ಪ್ರಿಯಾಂಕ್ ಖರ್ಗೆ, ಸಿದ್ದರಾಮಯ್ಯ

Updated on: Oct 12, 2025 | 4:21 PM

ಬೆಂಗಳೂರು, (ಅಕ್ಟೋಬರ್ 12): ಸರ್ಕಾರಿ ಮತ್ತು ಅನುದಾನಿತ ಶಾಲಾ ಆವರಣಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ( RSS) ಚಟುವಟಿಕೆಗಳು ಹಾಗೂ ಶಾಖೆ ನಡೆಸಲು ಅನುಮತಿ ನಿರಾಕರಿಸುವಂತೆ ಕೋರಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಸಿಎಂ ಸಿದ್ದರಾಮಯ್ಯಗೆ (Siddaramaiah) ಮನವಿ ಮಾಡಿದ್ದಾರೆ. ಈ ಮನವಿಯನ್ನು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲು ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ. ಸರ್ಕಾರಿ ಶಾಲಾ ಕಾಲೇಜುಗಳ (School And collges) ಆವರಣ, ಉದ್ಯಾನವನ, ಸರ್ಕಾರಿ ಮೈದಾನ ಮತ್ತು ಹಾಸ್ಟೆಲ್ ಕ್ಯಾಂಪಸ್​ನಲ್ಲಿ RSS ಚಟುವಟಿಕೆ ನಿರ್ಬಂಧಿಸಲು ಆಗ್ರಹಿಸಲಾಗಿದೆ.

ಪ್ರಿಯಾಂಕ್ ಖರ್ಗೆ ಮನವಿ ಪತ್ರದಲ್ಲೇನಿದೆ?

ಜನ ಸಮುದಾಯದಲ್ಲಿ ದ್ವೇಷ ಬಿತ್ತುವ ವಿಭಜಕ ಶಕ್ತಿಗಳು ತಲೆ ಎತ್ತಿದಾಗ ಅವುಗಳನ್ನು ನಿಗ್ರಹಿಸುವುಕ್ಕಾಗಿ ಹಾಗೂ ದೇಶದ ಜಾತ್ಯತೀತ ಮೌಲ್ಯಗಳನ್ನು ಎತ್ತಿ ಹಿಡಿಯುವುದಕ್ಕಾಗಿ ಸಮಗ್ರತೆ, ಸಮಾನತೆ ಮತ್ತು ಏಕತೆಯ ಮೂಲಭೂತ ತತ್ವಗಳನ್ನೊಳಗೊಂಡ ಸಂವಿಧಾನವು ನಮಗೆ ಅಧಿಕಾರವನ್ನು ನೀಡುತ್ತದೆ.

ಇದನ್ನೂ ಓದಿ: ರಾಜ್ಯದಲ್ಲಿ RSS ಚಟುವಟಿಕೆಗೆ ಬ್ರೇಕ್ ಹಾಕಲಿದೆಯಾ ಸರ್ಕಾರ?: ಪ್ರಸ್ತಾವನೆಯಲ್ಲಿ ಏನಿದೆ?

ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂಬ ಹೆಸರಿನ ಸಂಘಟನೆಯು ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಹಾಗೂ ಸಾರ್ವಜನಿಕ ಸರ್ಕಾರಿ ಮೈದಾನಗಳನ್ನು ಬಳಸಿಕೊಂಡು ಶಾಖೆ ನಡೆಸುತ್ತಾ ಘೋಷಣೆಗಳನ್ನು ಕೂಗು್ತ್ತಾ ಮಕ್ಕಳು ಮ್ತುಯುವ ಸಮುದಾಯದ ಮನಸ್ಸಿನಲ್ಲಿ ಭಾರತ ಐಕ್ಯತೆಯ ವಿರುದ್ಧವಾಗಿ ಹಾಗೂ ಸಂವಿಧಾನದ ಆಶಯಗಳ ವಿರುದ್ಧವಾಗಿ ನಕರಾತ್ಮಕ ಆಲೋಚನೆಗಳನ್ನು ತುಂಬಲಾಗುತ್ತಿದೆ.

ಪೊಲೀಸ್ ಅನುಮತಿ ಪಡೆಯದೆ ದೊಣ್ಣೆಗಳನ್ನು ಹಿಡಿದು ಆಕ್ರಮಣಕಾರಿ ಪ್ರದರ್ಶನ ನಡೆಸುವ ಮೂಲಕ ಮುಗ್ಗ ಮಕ್ಕಳು ಹಾಗೂ ಯುವಜನರ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಲಾಗುತ್ತಿದೆ. ನಾಡಿನ ಮಕ್ಕಳು, ಯುವ ಸಮುದಾಯ, ಸಾರ್ವಜನಿಕರು ಮತ್ತು ಸಮಾಜದ ಸ್ವಾಸ್ಥ್ಯದ ಹಿತದೃಷ್ಟಿಯಿಂದ ಸರ್ಕಾರಿ ಶಾಲೆಗಳು ಹಾಗೂ ಸರ್ಕಾರದ ಅನುದಾನಿತ ಶಾಲೆಗಳು ಮತ್ತು ಮೈದಾನಗಳು, ಉದ್ಯಾನವನಗಳು, ಮುಜರಾಯಿ ಇಲಾಖೆಯ ದೇವಸ್ಥಾನಗಳು, ಪುರಾತತ್ವ ಇಲಾಖೆಯ ಸ್ಥಳಗಳು ಸೇರಿದಂತೆ ಯಾವುದೇ ಸರ್ಕಾರಿ ಸ್ಥಳಗಳಲ್ಲಿ ಆರ್ ಎಸ್ ಎಸ್ ಸಂಘಟನೆಯು ಶಾಖೆ, ಸಾಂಘಿಕ್ ಅಥವಾ ಬೈಠಕ್ ಹೆಸರಲ್ಲಿ ನಡೆಸುವ ಎಲ್ಲಾ ಬಗೆಯ ಚಟುವಟಿಕೆಗಳಿಗೆ ನಿಷೇಧ ಹೇರಬೇಕು ಎಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ಸಿಎಂಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕ್ರಮಕ್ಕೆ ಸಿಎಂ ಸೂಚನೆ

ಇನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರ ಪತ್ರದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಈ ಕುರಿತಾಗಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ಎನ್ನಲಾಗಿದೆ. ಈ ಸಂಬಂಧ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ರಾಜಕೀಯ ಕಿತ್ತಾಟ ಜೋರಾಗಿದೆ.

ಇನ್ನು ಸಿಎಂಗೆ ಪತ್ರದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ಧರ್ಮ ರಕ್ಷಣೆ, ಗೋರಕ್ಷಣೆ ಹೆಸರಿನಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಧರ್ಮ ರಕ್ಷಣೆ, ಗೋರಕ್ಷಣೆ ತತ್ವ ಸಿದ್ಧಾಂತ ಬಡವರ ಮಕ್ಕಳಿಗೆ ಯಾಕೆ? ಇತ್ತೀಚೆಗೆ ಬಿಜೆಪಿಯ ದೊಡ್ಡ ನಾಯಕರು ಗಣವೇಷ ಹಾಕುತ್ತಿದ್ದಾರೆ. ಮೊದಲೆಲ್ಲ ಬಿಜೆಪಿಯ ದೊಡ್ಡ ನಾಯಕರು ಗಣವೇಷ ಹಾಕ್ತಿರಲಿಲ್ಲ. ಬಿಜೆಪಿ ನಾಯಕರ ಮಕ್ಕಳು ಎಲ್ಲಿದ್ದಾರೆ? ಅವರ್ಯಾಕೆ ಗಣವೇಷ ಹಾಕಲ್ಲ. ಈ ಸಿದ್ಧಾಂತ ಕೇವಲ ಬಡವರು, ಹಿಂದುಳಿದವರಿಗೆ ಮಾತ್ರ ಯಾಕೆ ಎಂದು ಪ್ರಶ್ನಿಸಿದರು.

ಹೆಚ್ಚು ಮಕ್ಕಳನ್ನು ಹುಟ್ಟಿಸಬೇಕೆ ಎಂದು ಹೇಳುವ ಇವರು ಪಾಲಿಸಲ್ಲ

ಹೆಚ್ಚು ಮಕ್ಕಳನ್ನು ಹುಟ್ಟಿಸಬೇಕೆ ಎಂದು ಹೇಳುವ ಇವರು ಪಾಲಿಸಲ್ಲ. ಹೀಗೆ ಹೇಳುವವರು ಯಾಕೆ ಬ್ರಹ್ಮಚಾರಿಗಳಾಗಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಆರ್​ಎಸ್ಎಸ್ ಬೈಠಕ್ ನಡೆಸಬಾರದು. ನಮ್ಮದು ಬಸವ ತತ್ವದ ಮೇಲೆ ನಡೆಯುವುದು. ಆರ್​ಎಸ್ಎಸ್​ಗೂ ತಾಲಿಬಾನ್​ಗೂ ಯಾವುದೇ ವ್ಯತ್ಯಾಸವೇ ಇಲ್ಲ.ಆರ್​ಎಸ್ಎಸ್ ಅವರ ಮಕ್ಕಳಿಗೆ ಯಾಕೆ ತ್ರಿಶೂಲ್ ದೀಕ್ಷೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಮೋಹನ್ ಭಾಗವಾತ್ ಗೆ ಯಾಕೆ ಅಷ್ಟು ಸಕ್ಯೂರಿಟಿ?

ಡಿಕೆ ಶಿವಕುಮಾರ್ ಸದನದಲ್ಲಿ ವ್ಯಂಗ್ಯ ಮಾಡಿದ್ದು ಅದನ್ನು ಭೆರೆ ರೀತಿಯಲ್ಲಿ ತಿರುಚಿ ಹಾಕಿದ್ದು.
ಬೇರೆ ಸಂಘಟನೆ ಇತಿಹಾಸ ತಿಳಿಯುವುದು ತಪ್ಪಲ್ಲ ಅವರಿಗೆ ನಮ್ಮ ಇತಿಹಾಸ ಗೊತ್ತಿಲ್ವ. ಸಂವಿಧಾನ ಬೇಡ ಮನುಸ್ಮೃತಿ ಬೇಕು ಅಂದವರು ಯಾರು? ವೀರ ಸಾವರ್ಕರ್ ಗೆ ವೀರ ಬಿರುದು ಕೊಟ್ಟವರು ಯಾರು? ಮೋಹನ್ ಭಾಗವಾತ್ ಯಾರು? ಅವರಿಗೆ ಯಾಕೆ ಅಷ್ಟು ಸೆಕ್ಯೂರಿಟಿ ? ಶೇ. 70-80ರಷ್ಟು ಹಿಂದು ರಾಷ್ಟ್ರದಲ್ಲಿ ಯಾಕೆ ಅಷ್ಟು ಸಕ್ಯೂರಿಟಿ? ಅಷ್ಟು ಅಭದ್ರತೆ ಇದೆಯಾ? ಕೇಂದ್ರ ಗೃಹ ಸಚಿವರ ಬಗ್ಗೆ ನಂಬಿಕೆ ಇಲ್ವಾ? ಎಂದು ಪ್ರಶ್ನಿಸಿದರು.

ಹಾಫ್ ಚಡ್ಡಿಯನ್ನ ಫುಲ್ ಚಡ್ಡಿ ಮಾಡಿದ್ದು ಸಾಧನೆ

ನನ್ನ ಕೈಯಲ್ಲಿ ಇದ್ದಿದ್ದರೆ ಬ್ಯಾನ್ ಮಾಡುತ್ತಿದ್ದೆ‌ ಆಗಲ್ಲ ಅದಕ್ಕೆ ಪತ್ರ ಬರೆದಿದ್ದೇನೆ. ಹಾಫ್ ಚಡ್ಡಿಯನ್ನ ಫುಲ್ ಚಡ್ಡಿ ಮಾಡಿದ್ದು ಸಾಧನೆ ಅಂತೆ. ಪಥ ಸಂಚಲನ ಒಂದು ಸಾಧನೆ ಅಂತೆ. ಎಲ್ಲೇ ವೈಪರೀತ್ಯ ಆದರೂ ಹೋಗ್ತಾರಂತೆ ಎಲ್ಲಿಗೆ ಹೋಗಿದ್ದಾರೆ? ಒಂದು ಫೋಟೋ ಇಲ್ಲ ಏನಿಲ್ಲಾ ಎಂದು ಕಿಡಿಕಾರಿದರು.

ಪ್ರಿಯಾಂಕ್​​ ಖರ್ಗೆಗೆ ಯತ್ನಾಳ್ ಟಾಂಗ್

ಸರ್ಕಾರಿ ಆಸ್ತಿಗಳಲ್ಲಿ ಆರ್​ಎಸ್ಎಸ್ ಚಟುವಟಿಕೆಗೆ ನಿರ್ಬಂಧ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ. ‘X’ ಖಾತೆಯಲ್ಲಿ ಪೋಸ್ಟ್ ಮಾಡಿರುವ ಯತ್ನಾಳ್, ವಿಶ್ವದ ದೊಡ್ಡ ಸ್ವಯಂಸೇವಕರ ಪಡೆ ಹೊಂದಿರುವ ಆರ್ ಎಸ್​ಎಸ್​. ಇದರ ನಿಷೇಧದ ಪ್ರಸ್ತಾವನೆ ಬೌದ್ಧಿಕ ದಾರಿದ್ರ್ಯತನ ತೋರಿಸುತ್ತದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ನಿಷೇಧಿಸಲು ಯಾರಿಂದಲೂ ಸಾಧ್ಯವಿಲ್ಲ. ವಿರೋಧಿಗಳು ಪ್ರೀತಿಸುವ, ಗೌರವಿಸುವ ಏಕೈಕ ಸಂಘಟನೆಯೇ ಆರೆಸ್ಸೆಸ್. ರಾಜಕೀಯ ಪ್ರೇರಿತ ಹೇಳಿಕೆ ನೀಡೋದನ್ನು ಬಿಟ್ಟು ಕ್ಷೇತ್ರ ಅಭಿವೃದ್ಧಿ ಮಾಡಿ ಎಂದು ಟಾಂಗ್ ಕೊಟ್ಟರು.

ಸ್ವಕ್ಷೇತ್ರ ಅಭಿವೃದ್ಧಿಗೆ ಪ್ರಿಯಾಂಕ್ ಖರ್ಗೆ ಶ್ರಮಿಸಲಿ. ನಿಷೇಧಿಸಬೇಕಿದ್ದರೆ SDPIನಂತಹ ದೇಶವಿರೋಧಿ ಸಂಘಟನೆ ನಿಷೇಧಿಸಿ. ಅನ್ಯಕೋಮಿನ ಹಬ್ಬಗಳಂದು ತಲ್ವಾರ್ ತೋರಿಸಿ ದರ್ಪ ತೋರುವವರು, ಹೆಲ್ಮೆಟ್ ಧರಿಸದೆ ಓಡಾಡುವ ಪುಂಡರ ಹೆಡೆಮುರಿ ಕಟ್ಟಿ. ಬಕ್ರೀದ್ ಸೇರಿದಂತೆ ಇತರೆ ಹಬ್ಬಗಳಲ್ಲಿ ನಡೆಯುವ ಪ್ರಾಣಿಬಲಿ ನಿಷೇಧಿಸಲಿ ಎಂದು ಸವಾಲು ಹಾಕಿದರು.

ವಿಜ್ಞಾನ, ಗಣಿತ, ಸಮಾಜ, ಇಂಗ್ಲಿಷ್ ಹೇಳಿಕೊಡದೆ ದ್ವೇಷವನ್ನೇ ಕಲಿಸುವ ಬೇರೆ ಧರ್ಮಗಳ ಬಗ್ಗೆ ತಪ್ಪು ವಿಚಾರ ಕಲಿಸುವ ಮದರಸಾಗಳನ್ನ ನಿಷೇಧಿಸಲಿ. ಸ್ವಾತಂತ್ರ್ಯ ಬಂದು 7 ದಶಕಗಳಾದರೂ ಹಿಂದುಳಿದ ಜಿಲ್ಲೆ ಎಂದು ಕರೆಸಿಕೊಳ್ಳುವ ಪ್ರಿಯಾಂಕ್ ಪ್ರತಿನಿಧಿಸುವ ಕಲಬುರಗಿಯನ್ನ ಮಾದರಿ ಜಿಲ್ಲೆಯಾಗಿ ಮಾಡಲಿ ಎಂದು ಪ್ರಿಯಾಂಕ್ ಖರ್ಗೆಗೆ ಟಾಂಗ್ ಕೊಟ್ಟರು.

Published On - 4:19 pm, Sun, 12 October 25