ಕೊಡಗು: ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಈಗಾಗಲೇ ಕೆಲ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದು, ಕೊರೊನಾ ಹೆಚ್ಚಿರುವ ಜಿಲ್ಲೆಗಳಲ್ಲಿ ಅನೇಕ ಚಟುವಟಿಕೆಗಳಿಗೆ ತಡೆ ಒಡ್ಡಿದೆ. ಇದರ ಬೆನ್ನಲ್ಲೇ ಕೊಡಗು ಜಿಲ್ಲಾಡಳಿತ ಜಿಲ್ಲೆಯ ಪ್ರವಾಸಿತಾಣಗಳನ್ನು ಮುಚ್ಚಲು ನಿರ್ಧರಿಸಿದ್ದು, ಏಪ್ರಿಲ್ 20ರ ತನಕ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಿ ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶ ಹೊರಡಿಸಿದ್ದಾರೆ.
ಕೊರೊನಾ ನಿಯಂತ್ರಣದ ಸಲುವಾಗಿ ಕೊಡಗು ಜಿಲ್ಲಾಡಳಿತದಿಂದ ಮುನ್ನೆಚ್ಚರಿಕಾ ಕ್ರಮವಾಗಿ ಈ ತೀರ್ಮಾನವನ್ನು ಕೈಗೊಂಡಿದ್ದು, ಮೂರು ವಾರಗಳ ಕಾಲ ಎಲ್ಲಾ ಪ್ರವಾಸಿತಾಣಗಳನ್ನೂ ಮುಚ್ಚಲಾಗುತ್ತದೆ. ಒಂದು ವೇಳೆ ಯಾರಾದರೂ ನಿಯಮ ಉಲ್ಲಂಘಿಸಿ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರೆ ಅದನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ಸದ್ಯ ಪ್ರವಾಸಿತಾಣಗಳ ಮೇಲೆ ಮಾತ್ರ ನಿರ್ಬಂಧ ವಿಧಿಸಲಾಗುತ್ತಿದೆ. ರೆಸಾರ್ಟ್, ಹೋಂ ಸ್ಟೇಗಳಿಗೆ ಯಾವುದೇ ನಿಷೇಧವಿರುವುದಿಲ್ಲ. ಆದರೂ ಕೊರೊನಾ ನಿಯಮಾವಳಿಗಳನ್ನು ಚಾಚೂತಪ್ಪದೆ ಪಾಲಿಸಬೇಕಾಗಿರುವುದು ಕಡ್ಡಾಯ. ಕೊರೊನಾ ನಿಯಂತ್ರಿಸಲು ಇಂತಹ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕಾಗಿರುವುದು ಅನಿವಾರ್ಯ ಎಂದು ಜಿಲ್ಲಾಡಳಿತ ತಿಳಿಸಿದೆ.
ವಸತಿ ಶಾಲೆಯಲ್ಲಿದ್ದ 12 ವಿದ್ಯಾರ್ಥಿಗಳಿಗೆ ಕೊರೊನಾ ದೃಢ
ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿದ್ದ 12 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 7ರಿಂದ 10ನೇ ತರಗತಿವರೆಗೆ 162 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ವಸತಿ ಶಾಲೆಯಲ್ಲಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಕೊವಿಡ್ ಪರೀಕ್ಷೆ ಮಾಡಿಸಲಾಗಿದ್ದು, 12 ವಿದ್ಯಾರ್ಥಿಗಳಲ್ಲಿ ಪಾಸಿಟಿವ್ ಪತ್ತೆಯಾಗಿದೆ. ಇನ್ನೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವ ಶಂಕೆ ಇದ್ದು, ಸೋಂಕಿತ ವಿದ್ಯಾರ್ಥಿಗಳಿದ್ದ ವಸತಿ ಶಾಲೆಯನ್ನು ಸೀಲ್‌ಡೌನ್ ಮಾಡಲಾಗಿದೆ.
ಇದನ್ನೂ ಓದಿ:
IPL 2021: ಕೊರೊನಾ ಕಪಿಮುಷ್ಠಿಯಲ್ಲಿ ಐಪಿಎಲ್.. ಕೊಲ್ಕತ್ತಾ, ಡೆಲ್ಲಿ ನಂತರ ಚೆನ್ನೈ ಮೇಲೆ ದಾಳಿ ನಡೆಸಿದ ಮಹಾಮಾರಿ!
IPL 2021: ಡೆಲ್ಲಿ ಕ್ಯಾಪಿಟಲ್ಸ್ಗೆ ಆಘಾತ! ಕೊರೊನಾಗೆ ತುತ್ತಾದ ಅಕ್ಷರ್ ಪಟೇಲ್.. ಆತಂಕದಲ್ಲಿ ಧವನ್, ಪಂತ್