ಆಸ್ಪತ್ರೆಯಲ್ಲಿ ಬೆಡ್​ ಇಲ್ಲದೇ ಪರದಾಟ; ಬೇರೆಡೆಗೆ ಕರೆದೊಯ್ದು ಕಾಪಾಡುವಷ್ಟರಲ್ಲಿ ಹಾರಿ ಹೋದ ಪ್ರಾಣಪಕ್ಷಿ

|

Updated on: Apr 16, 2021 | 12:34 PM

ವ್ಯಕ್ತಿಯ ಆರೋಗ್ಯದಲ್ಲಿ ಅನಾರೋಗ್ಯ ಕಾಣಿಸಿಕೊಂಡ ಕಾರಣ ಮೊದಲು ಅವರನ್ನು ಕರೆದುಕೊಂಡು ಹೆಬ್ಬಾಳದ ಬ್ಯಾಪಿಸ್ಟ್ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ಕೊರೊನಾ ಟೆಸ್ಟ್​ ಮಾಡಿಸಿದಾಗ ಕೊವಿಡ್​ ನೆಗೆಟಿವ್​ ರಿಪೋರ್ಟ್​ ಬಂದಿದೆ. ಬೆಡ್​ಗಾಗಿ ಅಲೆದಾಡಿ ಪ್ರಾಣಪಕ್ಷಿಯೇ ಹಾರಿ ಹೋಗಿದೆ.

ಆಸ್ಪತ್ರೆಯಲ್ಲಿ ಬೆಡ್​ ಇಲ್ಲದೇ ಪರದಾಟ; ಬೇರೆಡೆಗೆ ಕರೆದೊಯ್ದು ಕಾಪಾಡುವಷ್ಟರಲ್ಲಿ ಹಾರಿ ಹೋದ ಪ್ರಾಣಪಕ್ಷಿ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕೊರೊನಾ ಎರಡನೇ ಅಲೆ ಆರ್ಭಟ ಹೆಚ್ಚಾಗುತ್ತಿದ್ದು, ಆಸ್ಪತ್ರೆಗಳಲ್ಲಿ ಸೋಂಕಿತರನ್ನು ದಾಖಲಿಸಲು ಬೆಡ್​ಗಳಿಲ್ಲದೇ ಜನರೆಲ್ಲ ಸಾವಿಗೀಡಾಗುತ್ತಿರುವ ಪರಿಸ್ಥಿತಿ ಎದುರಾಗಿದೆ. ಕೊರೊನಾ ಮಹಾಮಾರಿಯ ಹಾವಳಿ ಅಷ್ಟರ ಮಟ್ಟಿಗೆ ದೇಶಾದ್ಯಂತ ಆವರಿಸಿಕೊಂಡಿದೆ. ಬೆಂಗಳೂರಿನಲ್ಲಿ ಹಲವು ಸೋಂಕಿತರು ಸೂಕ್ತ ವ್ಯವಸ್ಥೆ ಇಲ್ಲದೇ ಪ್ರಾಣಾಪಾಯಕ್ಕೆ ಸಿಲುಕುತ್ತಿದ್ದು, ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ನಗರದಲ್ಲಿ ಕಳೆದ 3 ದಿನಗಳ ಹಿಂದೆ ಅನಾರೋಗ್ಯಕ್ಕೀಡಾದ ವ್ಯಕ್ತಿಯ ಕುಟುಂಬಸ್ಥರು ಅವರಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗಳಿಗೆ ಅಲೆದಾಡಿ  ಬೆಡ್​ಗಾಗಿ ಹುಡುಕಾಟ ನಡೆಸುವಷ್ಟರಲ್ಲಿ ವ್ಯಕ್ತಿಯ ಪ್ರಾಣಪಕ್ಷಿಯೇ ಹಾರಿಹೋದ ದಾರುಣ ಘಟನೆ ನಡೆದಿದೆ.

ವ್ಯಕ್ತಿಯ ಆರೋಗ್ಯದಲ್ಲಿ ಅನಾರೋಗ್ಯ ಕಾಣಿಸಿಕೊಂಡ ಕಾರಣ ಮೊದಲು ಅವರನ್ನು ಕರೆದುಕೊಂಡು ಹೆಬ್ಬಾಳದ ಬ್ಯಾಪಿಸ್ಟ್ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ಕೊರೊನಾ ಟೆಸ್ಟ್​ ಮಾಡಿಸಿದಾಗ ಕೊವಿಡ್​ ನೆಗೆಟಿವ್​ ರಿಪೋರ್ಟ್​ ಬಂದಿದೆ. ಆದರೆ ನಂತರ ಜ್ವರ, ಉಸಿರಾಟದ ಸಮಸ್ಯೆ ಕಾಡುತ್ತಿತ್ತು. ಆದ್ದರಿಂದ ಮತ್ತೊಮ್ಮೆ ಕೊರೊನಾ ಟೆಸ್ಟ್​ ಮಾಡಿಸಲಾಗಿ ಪಾಸಿಟಿವ್​ ರಿಪೋರ್ಟ್​ ಬಂದಿದೆ. ದುರದೃಷ್ಟವಶಾತ್​ ಆಸ್ಪತ್ರೆಯಲ್ಲಿ ದಾಖಲಿಸಲು ಬೆಡ್​ಗಳ ಕೊರತೆ ಇದೆ ಎಂದು ತಿಳಿಸಿದ್ದರಿಂದ ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ಅವರನ್ನು ಕರೆದುಕೊಂಡು ಹೋಗಿದ್ದಾರೆ. ದುರಂತವೆಂದರೆ ರಾಮಯ್ಯ ಆಸ್ಪತ್ರೆಯಲ್ಲಿಯೂ ಬೆಡ್​ ಸಮಸ್ಯೆ ಎದುರಾಗಿದೆ. ನಂತರ ಬೇರೆ ದಾರಿಯಿಲ್ಲದೇ ರಾಜನಕುಂಟೆಯ ಚಿಗುರು ಆಸ್ಪತ್ರೆಗೆ ಹೋಗುವ ಸಂದರ್ಭ ಎದುರಾಗಿದೆ. ಆದರೆ, ಅಲ್ಲಿಗೆ ಹೋಗಿ ತಲುಪಿ ಚಿಕಿತ್ಸೆ ಪಡೆಯುವಾಗ ವ್ಯಕ್ತಿಯ ಪ್ರಾಣ ಪಕ್ಷಿಯೇ ಹಾರಿ ಹೋಗಿದೆ.

ವ್ಯಕ್ತಿಯ ಕುಟುಂಬಸ್ಥರು ಎರಡು ಮೂರು ಆಸ್ಪತ್ರೆಗಳ ಮೆಟ್ಟಿಲು ಹತ್ತಿಳಿದು ಜೀವ ಉಳಿಸಿಕೊಳ್ಳಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಆದರೆ, ಇತ್ತಕಡೆ ಅವರ ಮೇಲೆ ಚಿಕಿತ್ಸೆ ವೆಚ್ಚ ಬೀಳುವುದೂ ತಪ್ಪಿಲ್ಲ. ಚಿಗುರು ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆಗೆ 5 ರಿಂದ 6 ಸಾವಿರ ಹಣ ಖರ್ಚಾಗಿದೆ. ಆಸ್ಪತ್ರೆಗೆ ಕರೆದೊಯ್ದ ಆ್ಯಂಬುಲೆನ್ಸ್​ನವರೂ​ ಹೆಚ್ಚುವರಿ ಹಣ ಪಡೆದಿದ್ದಾರೆ. ಒಟ್ಟಾರೆಯಾಗಿ ಬರೋಬ್ಬರಿ 16,500 ರೂಪಾಯಿ ಹಣ ಕೇಳಿದ್ದಾರೆ. ಅತ್ತ ಜೀವವೂ ಇಲ್ಲ, ಇತ್ತ ನೆಮ್ಮದಿಯೂ ಇಲ್ಲ ಎಂಬ ಪರಿಸ್ಥಿತಿ ಎದುರಿಸಿದ ಕುಟುಂಬಸ್ಥರು ಸದ್ಯ ಮೇಡಿ ಅಗ್ರಹಾರದಲ್ಲಿ ಬೆಳಗ್ಗೆ 7:30ರಿಂದಲೇ ಅಂತ್ಯಸಂಸ್ಕಾರಕ್ಕೆ ಕಾಯುತ್ತಿದ್ದಾರೆ.

ಇದನ್ನೂ ಓದಿ: ಭಾರತದ ಫುಟ್ಬಾಲ್ ಮಾಂತ್ರಿಕ ಸುನಿಲ್ ಛೆತ್ರಿಗೆ ಕೊರೊನಾ ವೈರಸ್ ಪಾಸಿಟಿವ್

ಕೊರೊನಾ ಸೋಂಕಿತರಿಗೆ ಸೀಲ್​, ಬೆಂಗಳೂರು ನಗರದ ಚಟುವಟಿಕೆಗಳ ಮೇಲೆ ನಿಯಂತ್ರಣ: ಡಾ.ಕೆ.ಸುಧಾಕರ್

(Bangalore Covid patient died on the way to another hospital after 2-3 hospitals rejects to admit due to lack of beds)