ಕೊರೊನಾ ಲೆಕ್ಕಾಚಾರವೇ ಬುಡಮೇಲು.. ಊಹಿಸಿದ್ದಕ್ಕಿಂತಲೂ ವೇಗವಾಗಿ ವ್ಯಾಪಿಸುತ್ತಿದೆ ಸೋಂಕು

ಕೊರೊನಾ ಲೆಕ್ಕಾಚಾರವೇ ಬುಡಮೇಲು.. ಊಹಿಸಿದ್ದಕ್ಕಿಂತಲೂ ವೇಗವಾಗಿ ವ್ಯಾಪಿಸುತ್ತಿದೆ ಸೋಂಕು
ಪ್ರಾತಿನಿಧಿಕ ಚಿತ್ರ

ಏಪ್ರಿಲ್​ ತಿಂಗಳಲ್ಲಿ ಒಟ್ಟಾರೆ ಒಂದು ಲಕ್ಷ ಕೇಸ್​ ಆಗಬಹುದು ಎಂದು ಈ ಹಿಂದೆ ತಜ್ಞರು ಅಂದಾಜಿಸಿದ್ದರಾದರೂ ಇದೀಗ ಕೇವಲ 15 ದಿನಗಳ ಅವಧಿಯಲ್ಲೇ ಕೊರೊನಾ ಪ್ರಕರಣಗಳ ಸಂಖ್ಯೆ ಒಂದು ಲಕ್ಷದ ಗಡಿದಾಟಿ ಹೋಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸಿಕೊಟ್ಟಿದೆ.

Skanda

| Edited By: guruganesh bhat

Apr 16, 2021 | 11:34 AM


ಬೆಂಗಳೂರು: ಕೊರೊನಾ ಎರಡನೇ ಅಲೆ ತಜ್ಞರ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದ್ದು ಯಾರೂ ಊಹಿಸಲಾಗದ ಮಟ್ಟದಲ್ಲಿ ಸೋಂಕು ಹಬ್ಬುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಕಳೆದ 15 ದಿನಗಳ ಅವಧಿಯಲ್ಲಿ ಬರೋಬ್ಬರಿ 1,12,646 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ತಜ್ಞರ ಲೆಕ್ಕಾಚಾರ ಸಂಪೂರ್ಣ ತಪ್ಪಾಗಿದೆ. ಏಪ್ರಿಲ್​ 19ರ ವೇಳೆಗೆ ಬೆಂಗಳೂರಿನಲ್ಲಿ 6000 ಕೇಸ್ ಗಳು ದಾಖಲಾಗಬಹುದು ಎಂದಿದ್ದ ತಜ್ಞರ ಊಹೆಯೂ ಸಂಪೂರ್ಣ ಬುಡಮೇಲಾಗಿದ್ದು ನಿನ್ನೆ ಒಂದೇ ದಿನ ಬೆಂಗಳೂರಿನಲ್ಲಿ 10,250 ಕೇಸ್​ಗಳು ದಾಖಲಾಗಿವೆ.

ಏಪ್ರಿಲ್​ ತಿಂಗಳಲ್ಲಿ ಒಟ್ಟಾರೆ ಒಂದು ಲಕ್ಷ ಕೇಸ್​ ಆಗಬಹುದು ಎಂದು ಈ ಹಿಂದೆ ತಜ್ಞರು ಅಂದಾಜಿಸಿದ್ದರಾದರೂ ಇದೀಗ ಕೇವಲ 15 ದಿನಗಳ ಅವಧಿಯಲ್ಲೇ ಕೊರೊನಾ ಪ್ರಕರಣಗಳ ಸಂಖ್ಯೆ ಒಂದು ಲಕ್ಷದ ಗಡಿದಾಟಿ ಹೋಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸಿಕೊಟ್ಟಿದೆ. ಇನ್ನೊಂದೆಡೆ ರಾಜ್ಯದ ಒಟ್ಟಾರೆ ಪ್ರಕರಣಗಳಲ್ಲಿ ಶೇಕಡಾ 66‌ ರಷ್ಟು ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗುತ್ತಿರುವ ಸುದ್ದಿಯೂ ಹೊರಬಿದ್ದಿದೆ. ಅಂದರೆ‌ ಇಡೀ ರಾಜ್ಯದಲ್ಲಿ 100 ಕೇಸ್​ಗಳು ದಾಖಲಾದರೆ ಅದರಲ್ಲಿ 66 ಕೇಸ್​ಗಳು ಬೆಂಗಳೂರಿನಲ್ಲೇ ಪತ್ತೆಯಾಗುತ್ತಿವೆ.

ಜತೆಗೆ, ಕರ್ನಾಟಕ ರಾಜ್ಯದಲ್ಲಿ ಪಾಸಿಟಿವಿಟಿ ಪ್ರಮಾಣ ಕೂಡ ಗಣನೀಯ ಏರಿಕೆ ಕಂಡಿದೆ. ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ.11.38ರಷ್ಟು ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇಕಡಾ. 7.7ರಷ್ಟು ಹೆಚ್ಚಳವಾಗಿದೆ. ಒಟ್ಟಾರೆಯಾಗಿ 100 ಟೆಸ್ಟ್ ‌ಮಾಡಿದಾಗ 11 ಜನರಿಗೆ ಕೊರೊನಾ ದೃಢಪಡುತ್ತಿದ್ದು, ಆ 11 ಜನರ ಪೈಕಿ 7 ಜನ ಸೋಂಕಿತರು ಬೆಂಗಳೂರಿನಲ್ಲೇ ಪತ್ತೆಯಾಗುತ್ತಿದ್ದಾರೆ ಎನ್ನುವುದು ಆತಂಕಕ್ಕೆ‌ ಕಾರಣವಾಗಿದೆ.

ಏತನ್ಮಧ್ಯೆ, ಕೊವಿಡ್ ನಿಯಂತ್ರಣದ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಒಂದೂವರೆ ಗಂಟೆಗಳ ಕಾಲ ತಜ್ಞರ ಜತೆ ಚರ್ಚಿಸಿದ್ದು, ಏಪ್ರಿಲ್ 20ರವರೆಗೆ 8 ನಗರಗಳಲ್ಲಿ ಈಗಿನಂತೆಯೇ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಉಳಿದಂತೆ ಬೇರೆ ಯಾವುದೇ ತೀರ್ಮಾನವನ್ನು ಇಂದು ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ. ವಾರದ ಬಳಿಕ ಕುಳಿತು ಮತ್ತೊಮ್ಮೆ ಚರ್ಚೆ ಮಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಸಲಹೆಯನ್ನು ಸಹ ಪಡೆಯುತ್ತೇವೆ ಎಂದು ಬೆಂಗಳೂರಿನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಇದರೊಂದಿಗೆ, ಬೆಂಗಳೂರಿನಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸುವುದು ಬಹುತೇಕ ಖಚಿತಗೊಂಡಿದ್ದು, ಸಿಎಂ ಯಡಿಯೂರಪ್ಪ ನೇತೃತ್ವದ ತುರ್ತು ಸಭೆಯಲ್ಲಿ ಈ ಕುರಿತು ತಜ್ಞರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿಗಳಿಗೆ ನಗರದಲ್ಲಿ ಪರಿಸ್ಥಿತಿ ಕೈಮೀರಿದ ಬಗ್ಗೆ ತಜ್ಞರು, ಉನ್ನತ ಅಧಿಕಾರಿಗಳು ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನುವುದು ತಿಳಿದುಬಂದಿದೆ.

ಇದನ್ನೂ ಓದಿ:
Corona in Karnataka: ಏಪ್ರಿಲ್ 20ರ ತನಕ ನೈಟ್ ಕರ್ಫ್ಯೂ ಮುಂದುವರಿಕೆ; ಆನಂತರ ಕೊರೊನಾ ತಡೆಗೆ ಸೂಕ್ತ ನಿರ್ಧಾರ: ಸಿಎಂ ಯಡಿಯೂರಪ್ಪ 

ಕೊರೊನಾ ಎರಡನೇ ಅಲೆ ಆರ್ಭಟಕ್ಕೆ ಐತಿಹಾಸಿಕ ಸ್ಮಾರಕಗಳ ವೀಕ್ಷಣೆ ಬಂದ್: ಭಾರತೀಯ ಪುರಾತತ್ವ ಇಲಾಖೆ ಆದೇಶ

(Karnataka state facing highest risk as Coronavirus get spike)

Follow us on

Related Stories

Most Read Stories

Click on your DTH Provider to Add TV9 Kannada