ಕೊರೊನಾ ಸೋಂಕಿತರಿಗೆ ಸೀಲ್, ಬೆಂಗಳೂರು ನಗರದ ಚಟುವಟಿಕೆಗಳ ಮೇಲೆ ನಿಯಂತ್ರಣ: ಡಾ.ಕೆ.ಸುಧಾಕರ್
ಬೆಂಗಳೂರು ನಗರದ ಚಟುವಟಿಕೆಗಳ ಮೇಲೆ ನಿಯಂತ್ರಣ ಸಾಧಿಸಲಾಗುವುದು. ಐಸೋಲೇಷನ್‌ಲ್ಲಿರುವವರ ಮೇಲೆ ಹೆಚ್ಚು ನಿಗಾ ಇಡಲಾಗುವುದು. ಸೋಂಕಿತರಿಗೆ ಸೀಲ್ ಹಾಕಲಾಗುವುದು: ಡಾ.ಕೆ.ಸುಧಾಕರ್
ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿರುವ ಬೆನ್ನಲ್ಲೇ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಯೋಚಿಸುತ್ತಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಬೆಂಗಳೂರು ನಗರದಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಬೆಂಗಳೂರು ನಗರದ ಚಟುವಟಿಕೆಗಳ ಮೇಲೆ ನಿಯಂತ್ರಣ ಸಾಧಿಸಲಾಗುವುದು. ಐಸೋಲೇಷನ್‌ಲ್ಲಿರುವವರ ಮೇಲೆ ಹೆಚ್ಚು ನಿಗಾ ಇಡಲಾಗುವುದು. ಸೋಂಕಿತರಿಗೆ ಸೀಲ್ ಹಾಕಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದ ಒಟ್ಟಾರೆ ಪ್ರಕರಣಗಳಲ್ಲಿ ಶೇಕಡಾ 66 ರಷ್ಟು ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗುತ್ತಿದ್ದು, ಇಡೀ ರಾಜ್ಯದಲ್ಲಿ 100 ಕೇಸ್ಗಳು ದಾಖಲಾದರೆ ಅದರಲ್ಲಿ 66 ಕೇಸ್ಗಳು ಬೆಂಗಳೂರಿನಲ್ಲೇ ಪತ್ತೆಯಾಗುತ್ತಿವೆ ಎಂಬ ಸುದ್ದಿ ಹೊರಬಿದ್ದ ಬೆನ್ನಲ್ಲೇ ಆರೋಗ್ಯ ಸಚಿವರು ಬೆಂಗಳೂರಿನ ಚಟುವಟಿಕೆಗಳನ್ನು ನಿಯಂತ್ರಿಸುವ ಕುರಿತು ಮಾತನಾಡಿದ್ದಾರೆ. ಕೊವಿಡ್ ಟೆಸ್ಟ್ ಸಂಖ್ಯೆ ಹೆಚ್ಚಿಸುವುದರ ಜತೆಗೆ, ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು. ಕೊರೊನಾ ಹಬ್ಬುವುದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಭಾನುವಾರ ಬೆಂಗಳೂರು ಶಾಸಕರ ಸಭೆ ಕರೆದಿದ್ದಾರೆ ಎಂದು ತಿಳಿಸಿದ್ದಾರೆ.
ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಹೊಟೇಲ್ಗಳನ್ನು ಆಸ್ಪತ್ರೆಗಳನ್ನಾಗಿ ಮಾರ್ಪಾಡು ಮಾಡಲಾಗುವುದು. ಈ ಕುರಿತು ಬೆಂಗಳೂರಿನ 10 ಹೋಟೆಲ್‌ಗಳ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. 3, 4, 5 ಸ್ಟಾರ್ ಹೋಟೆಲ್‌ಗಳ ಜತೆ ಮಾತನಾಡಿದ್ದೇವೆ. ಗಂಭೀರವಲ್ಲದ ಸೋಂಕಿತರಿಗೆ ಹೋಟೆಲ್‌ನಲ್ಲಿ ಚಿಕಿತ್ಸೆ ನೀಡುತ್ತೇವೆ. ಗಂಭೀರವಲ್ಲದ ಸೋಂಕಿತರು ತಾತ್ಕಾಲಿಕ ಆಸ್ಪತ್ರೆಗೆ ದಾಖಲಾಗಿ, ಗಂಭೀರ ಪರಿಸ್ಥಿತಿ ಇರುವವರು ಮಾತ್ರ ಆಸ್ಪತ್ರೆಗೆ ದಾಖಲಾಗಿ ಅದರ ಹೊರತಾಗಿ ಕೊರೊನಾ ಬಂದ ತಕ್ಷಣ ಆಸ್ಪತ್ರೆಗೆ ದಾಖಲಾಗಬೇಕಿಲ್ಲ. ಖಾಸಗಿ ಆಸ್ಪತ್ರೆಗಳು ಕೊರೊನಾ ಸೋಂಕಿತರಿಗೆ ಶೇ.50ರಷ್ಟು ಬೆಡ್ ಮೀಸಲಿಡಬೇಕು. 5 ಸಾವಿರ ಬೆಡ್ ನೀಡಬೇಕು. ಇದಕ್ಕೆ ಸಂಬಂಧಿಸಿದಂತೆ ಇಂದಿನಿಂದಲೇ ಆದೇಶ ಹೊರಡಿಸಲಾಗುವುದು ಎಂದು ಹೇಳಿದ್ದಾರೆ.
ಇದೆಲ್ಲದರ ಜತೆಗೆ, ಕರ್ನಾಟಕ ರಾಜ್ಯದಲ್ಲಿ ಪಾಸಿಟಿವಿಟಿ ಪ್ರಮಾಣ ಕೂಡ ಗಣನೀಯ ಏರಿಕೆ ಕಂಡಿದೆ. ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ.11.38ರಷ್ಟು ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇಕಡಾ. 7.7ರಷ್ಟು ಹೆಚ್ಚಳವಾಗಿದೆ. ಒಟ್ಟಾರೆಯಾಗಿ 100 ಟೆಸ್ಟ್ ಮಾಡಿದಾಗ 11 ಜನರಿಗೆ ಕೊರೊನಾ ದೃಢಪಡುತ್ತಿದ್ದು, ಆ 11 ಜನರ ಪೈಕಿ 7 ಜನ ಸೋಂಕಿತರು ಬೆಂಗಳೂರಿನಲ್ಲೇ ಪತ್ತೆಯಾಗುತ್ತಿದ್ದಾರೆ ಎನ್ನುವುದು ಆತಂಕಕ್ಕೆ ಕಾರಣವಾಗಿದೆ.
ಏತನ್ಮಧ್ಯೆ, ಕೊವಿಡ್ ನಿಯಂತ್ರಣದ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಒಂದೂವರೆ ಗಂಟೆಗಳ ಕಾಲ ತಜ್ಞರ ಜತೆ ಚರ್ಚಿಸಿದ್ದು, ಏಪ್ರಿಲ್ 20ರವರೆಗೆ 8 ನಗರಗಳಲ್ಲಿ ಈಗಿನಂತೆಯೇ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಉಳಿದಂತೆ ಬೇರೆ ಯಾವುದೇ ತೀರ್ಮಾನವನ್ನು ಇಂದು ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ. ವಾರದ ಬಳಿಕ ಕುಳಿತು ಮತ್ತೊಮ್ಮೆ ಚರ್ಚೆ ಮಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಸಲಹೆಯನ್ನು ಸಹ ಪಡೆಯುತ್ತೇವೆ ಎಂದು ಬೆಂಗಳೂರಿನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಇದರೊಂದಿಗೆ, ಬೆಂಗಳೂರಿನಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸುವುದು ಬಹುತೇಕ ಖಚಿತಗೊಂಡಿದ್ದು, ಸಿಎಂ ಯಡಿಯೂರಪ್ಪ ನೇತೃತ್ವದ ತುರ್ತು ಸಭೆಯಲ್ಲಿ ಈ ಕುರಿತು ತಜ್ಞರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿಗಳಿಗೆ ನಗರದಲ್ಲಿ ಪರಿಸ್ಥಿತಿ ಕೈಮೀರಿದ ಬಗ್ಗೆ ತಜ್ಞರು, ಉನ್ನತ ಅಧಿಕಾರಿಗಳು ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನುವುದು ತಿಳಿದುಬಂದಿದೆ.
ಇದನ್ನೂ ಓದಿ: ಕೊರೊನಾ ಲೆಕ್ಕಾಚಾರವೇ ಬುಡಮೇಲು.. ಊಹಿಸಿದ್ದಕ್ಕಿಂತಲೂ ವೇಗವಾಗಿ ವ್ಯಾಪಿಸುತ್ತಿದೆ ಸೋಂಕು
India Corona Cases: ಕೊರೊನಾ 2ನೇ ಅಲೆ ಅಬ್ಬರಕ್ಕೆ ತತ್ತರಿಸಿದ ಭಾರತ.. ಇಂದು 2 ಲಕ್ಷ 17 ಸಾವಿರ ಕೇಸ್ ಪತ್ತೆ
Published On - 12:08 pm, Fri, 16 April 21