ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಬೈಕ್ ಸವಾರ

ರಸ್ತೆ ಗುಂಡಿಗಳಿಂದಾಗಿ ಸಾವು-ನೋವು ಸಂಭವಿಸುತ್ತಿದ್ದರೂ ರಸ್ತೆ ಗುಂಡಿಗಳನ್ನು ಮುಚ್ಚುವ ಗೋಜಿಗೆ ಹೋಗದ ಬಿಬಿಎಂಪಿ ವಿರುದ್ಧ ನಗರವಾಸಿಗಳು ಹಿಡಿ ಶಾಪ ಹಾಕುತ್ತಿದ್ದಾರೆ.

ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಬೈಕ್ ಸವಾರ
ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಕೋಮದಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸ್ತಿರೋ ಬೈಕ್ ಸವಾರ
Follow us
TV9 Web
| Updated By: Rakesh Nayak Manchi

Updated on:Nov 05, 2022 | 9:51 AM

ಬೆಂಗಳೂರು: ರಸ್ತೆ ಗುಂಡಿಗೆ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರನ ಸ್ಥಿತಿ ಚಿಂತಾಜನಕವಾಗಿದ್ದು, ಕೋಮಾ ಸ್ಥಿತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಸ್ತೆ ಗುಂಡಿಗಳಿಂದಾಗಿ ಅನೇಕ ಸಾವು-ನೋವುಗಳಾಗಿವೆ. ಸ್ಥಿತಿ ಹೀಗಿದ್ದರೂ ಬಿಬಿಎಂಪಿ ಮಾತ್ರ ರಸ್ತೆ ಗುಂಡಿಗಳನ್ನು ಮುಚ್ಚುವಲ್ಲಿ ನಿರ್ಲಕ್ಷ್ಯ ತೋರುತ್ತಿದೆ. ಸಹಜವಾಗಿ ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆ ಗುಂಡಿಗಳಿಂದಾಗಿ ವಾಹನ ಸವಾರರ ಜೀವ ಹಾನಿಯಾಗುತ್ತಿದ್ದರೂ ಎಚ್ಚೆತ್ತುಕೊಳ್ಳದ ಬಿಬಿಎಂಪಿಗೆ ಇನ್ನೆಷ್ಟು ಬಲಿ ಬೇಕು ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಜಾಲಹಳ್ಳಿಯ ಗಂಗಮ್ಮ ಸರ್ಕಲ್ ಬಳಿ ಗುಂಡಿಗೆ ಬಿದ್ದಿದ್ದ ವಿದ್ಯಾರಣ್ಯಪುರದ ನಿವಾಸಿ 37 ವರ್ಷದ ಬೈಕ್ ಸವಾರ ಸಂದೀಪ್ ತಲೆಗೆ ಗಂಭೀರವಾಗಿ ಗಾಯಗಳಾಗಿದ್ದವು. ಮಂಗಳವಾರ ರಾತ್ರಿ 9.30 ಸ್ನೇಹಿತರ ಜೊತೆ ಕ್ರಿಕೆಟ್ ಆಟ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿತ್ತು. ತಲೆಗೆ ಗಂಭೀರ ಏಟು ಆಗಿದ್ದ ಹಿನ್ನೆಲೆ ಕೂಡಲೇ ಹೆಚ್​​ಎಮ್​ಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿಲಾಗಿತ್ತು. ವ್ಯಕ್ತಿಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆ ಹೆಚ್​ಎಮ್​ಟಿ ಆಸ್ಪತ್ರೆ ಸಿಬ್ಬಂದಿ ಬೇರೆ ಆಸ್ಪತ್ರೆಗೆ ಕೊಂಡೊಯ್ಯುವಂತೆ ಸೂಚಿಸಿದ್ದರು. ಅದರಂತೆ ಹೆಬ್ಬಾಳದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಗೆ ತೀವ್ರವಾಗಿ ಗಾಯವಾಗಿದ್ದಂತೆ ಶಸ್ತ್ರಚಿಕಿತ್ಸೆ ನಡೆಸಿ ಕೋಮಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನನ್ನ ಪತಿಯ ಸ್ಥಿತಿಗೆ ಸರ್ಕಾರ ಮತ್ತು ಬಿಬಿಎಂಪಿ ಕಾರಣ

ಸಾವು ಬದುಕಿನ ನಡುವೆ ಹೋರಾಡುತ್ತಿರುವ ಸಂದೀಪ್ ಪತ್ನಿ ಟಿವಿ9 ಜೊತೆ ಮಾತನಾಡುತ್ತಾ, ನನಗೆ 7 ವರ್ಷದ ಮಗುವಿದೆ, ಸರ್ಕಾರ ಹಾಗೂ ಬಿಬಿಎಂಪಿ ತಪ್ಪಿಗೆ ನಾವು ಶಿಕ್ಷೆ ಅನುಭವಿಸುತ್ತಿದ್ದೇವೆ. ನನ್ನ ಗಂಡ ಇವತ್ತು ಕೋಮದಲ್ಲಿರಲು ಬಿಬಿಎಂಪಿಯೇ ಕಾರಣ. ಸದ್ಯ ಆಸ್ಪತ್ರೆಗೆ ಕಟ್ಟಲು ನಮ್ಮ ಬಳಿ ಹಣ ಕೂಡ ಇಲ್ಲ. ಈ ಅಪಘಾತಕ್ಕೆ ಬಿಬಿಎಂಪಿಯೇ ಕಾರಣವಾಗಿದ್ದು, ಬಿಬಿಎಂಪಿಯೇ ಆಸ್ಪತ್ರೆಯ ವೆಚ್ಚವನ್ನ ಬರಿಸಬೇಕು ಎಂದಿದ್ದಾರೆ.

ನಮ್ಮ ಸ್ಥಿತಿ ಯಾರಿಗೂ ಬಾರದಿರಲಿ, ಸರ್ಕಾರ ಕೂಡಲೇ ಗುಂಡಿಗಳನ್ನ ಮುಚ್ಚಲಿ ಎಂದು ಆಗ್ರಹಿಸಿದ ಸಂದೀಪ್ ಪತ್ನಿ ಸಿಮಾ, ಈಗಾಗಲೇ ಆಪರೇಷನ್​ಗೆ ಎಂಟು ಲಕ್ಷ ವೆಚ್ಚವಾಗಿದೆ. ಪ್ರತಿದಿನ ಒಂದು ಲಕ್ಷ ಖರ್ಚು ಆಗುತ್ತಿದೆ. ಹಾಗಾಗಿ ನಮಗೆ ತುಂಬಾ ಕಷ್ಟ ಆಗುತ್ತಿದೆ ಎಂದು ಸೀಮಾ ಅವರು ನೋವು ತೋಡಿಕೊಂಡಿದ್ದಾರೆ.

ಈ ವರ್ಷ ರಸ್ತೆ ಗುಂಡಿಗಳಿಗೆ ಸಾವನ್ನಪ್ಪಿದವರು

ರಾಜಾಜಿನಗರದ ಲುಲು ಗ್ಲೋಬಲ್ ಎದುರು ರಸ್ತೆ ಗುಂಡಿಗೆ ತಪ್ಪಿಸಲು ಮುಂದಾದಾಗ ಸಾರಿಗೆ ಬಸ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನದಲ್ಲಿದ್ದ ಉಮಾದೇವಿ (42) ಸಾವನ್ನಪ್ಪಿದ್ದರು. ಈ ಘಟನೆ ಅಕ್ಟೋಬರ್ 17ರಂದು ನಡೆದಿತ್ತು. ಎಂಎಸ್​ ಪಾಳ್ಯದ ಮುನೇಶ್ವರ ಬಡಾವಣೆಯಲ್ಲಿ ಇದ್ದ ಗುಂಡಿಯಿಂದಾಗಿ ಬೈಕ್ ಉರುಳಿಬಿದ್ದು ಅಶ್ವಿನ್ ಜುಗ್ಡೆ ಎಂಬವರು ಸಾವನ್ನಪ್ಪಿದ್ದರು. ಈ ಘಟನೆ ಮಾರ್ಚ್ 13ರಂದು ನಡೆದಿತ್ತು. ಬ್ಯಾಡರಹಳ್ಳಿ ಮುಖ್ಯರಸ್ತೆಯ ಅಂಜನಾನಗರ ವೃತ್ತದಲ್ಲಿ ರಸ್ತೆ ಗುಂಡಿ ಅಪಘಾತಕ್ಕೆ ಶಿಕ್ಷಕಿ ಶರ್ಮಿಳಾ ಅವರು ಮೃತಪಟ್ಟಿದ್ದರು. ಈ ಘಟನೆ ಜನವರಿ 29ರಂದು ನಡೆದಿತ್ತು.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:51 am, Sat, 5 November 22