ಬಿಜೆಪಿ ಶಿಸ್ತು ಸಮಿತಿ ನೋಟಿಸ್: ಬಸನಗೌಡ ಪಾಟೀಲ್ ಯತ್ನಾಳ್ ಮೊದಲ ಪ್ರತಿಕ್ರಿಯೆ

|

Updated on: Dec 02, 2024 | 10:22 AM

ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದ ಬೆನ್ನಲ್ಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಆದಾಗ್ಯೂ, ವಂಶ ರಾಜಕಾರಣದ ವಿರುದ್ಧ ಹೋರಾಟ ಮುಂದುವರಿಯಲಿದೆ ಎನ್ನುವ ಮೂಲಕ ಸದ್ಯಕ್ಕೆ ವಿಜಯೇಂದ್ರ ಟೀಂ ವಿರುದ್ಧ ಹೋರಾಟ ನಿಲ್ಲಿಸುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಯತ್ನಾಳ್ ಹೇಳಿದ್ದೇನು ಎಂಬ ವಿವರ ಇಲ್ಲಿದೆ.

ಬಿಜೆಪಿ ಶಿಸ್ತು ಸಮಿತಿ ನೋಟಿಸ್: ಬಸನಗೌಡ ಪಾಟೀಲ್ ಯತ್ನಾಳ್ ಮೊದಲ ಪ್ರತಿಕ್ರಿಯೆ
ಬಸನಗೌಡ ಪಾಟೀಲ್ ಯತ್ನಾಳ್
Follow us on

ಬೆಂಗಳೂರು, ಡಿಸೆಂಬರ್ 2: ಪಕ್ಷ ವಿರೋಧಿ ಚಟುವಟಿಕೆ, ಪಕ್ಷದ ರಾಜ್ಯ ನಾಯಕತ್ವದ ವಿರುದ್ಧ ಸತತ ಹೇಳಿಕೆಗಳನ್ನು ನೀಡುವುದರ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ಗೆ ಪಕ್ಷದ ಕೇಂದ್ರೀಯ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದೆ. 10 ದಿನಗಳ ಒಳಗಾಗಿ ಉತ್ತರಿಸುವಂತೆಯೂ ಇಲ್ಲವಾದಲ್ಲಿ ಮುಂದಿನ ಕ್ರಮ ಕೈಗೊಳ್ಳುವುದಾಗಿಯೂ ಯತ್ನಾಳ್​ಗೆ ಹೈಕಮಾಂಡ್ ಎಚ್ಚರಿಕೆ ನೀಡಿದೆ. ಇದರ ಬೆನ್ನಲ್ಲೇ, ಶೋಕಾಸ್ ನೋಟಿಸ್ ಬಗ್ಗೆ ಯತ್ನಾಳ್ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷರು ಶೋಕಾಸ್ ನೋಟಿಸ್ ನೀಡಿರುವ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಸಂದೇಶ ಪ್ರಕಟಿಸಿರುವ ಯತ್ನಾಳ್, ರಾಜ್ಯ ಬಿಜೆಪಿಯ ಸ್ಥಿತಿಯ ಬಗ್ಗೆ ಹೈಕಮಾಂಡ್​ಗೆ ವಿವರ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷರು ನೀಡಿರುವ ನೋಟಿಸ್‌ಗೆ ಉತ್ತರ ನೀಡುತ್ತೇನೆ. ಕರ್ನಾಟಕದಲ್ಲಿ ಬಿಜೆಪಿಯ ಪ್ರಸ್ತುತ ಸ್ಥಿತಿಯ ಬಗ್ಗೆ ವಾಸ್ತವಾಂಶವನ್ನು ಅವರ ಮುಂದೆ ಪ್ರಸ್ತುತಪಡಿಸುತ್ತೇನೆ. ಹಿಂದುತ್ವದ ಪರ ಹೋರಾಟ, ಭ್ರಷ್ಟಾಚಾರದ ವಿರುದ್ಧದ ಹೋರಾಟ, ವಕ್ಫ್ ಸಂಬಂಧಿತ ಸಮಸ್ಯೆಗಳು ಮತ್ತು ವಂಶ ರಾಜಕಾರಣದ ವಿರುದ್ಧದ ಹೋರಾಟ ಸಂಬಂಧ ನನ್ನ ಬದ್ಧತೆ ಅಚಲವಾಗಿ ಇರಲಿದೆ ಎಂದು ಯತ್ನಾಳ್ ಎಕ್ಸ್​ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ್ ಎಕ್ಸ್ ಸಂದೇಶ


ಕೆಳೆದ ಕೆಲವು ದಿನಗಳಿಂದ ಕರ್ನಾಟಕ ಬಿಜೆಪಿಯಲ್ಲಿ ಬಣ ಸಮರ ತೀವ್ರಗೊಂಡಿದೆ. ವಕ್ಫ್ ವಿರುದ್ಧದ ಹೋರಾಟದ ವಿಚಾರದಲ್ಲಿ ಬಿಜೆಪಿ ಒಳಜಗಳ ಬೀದಿಗೆ ಬಂದಿದೆ. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಶುಕ್ರವಾರ ದೆಹಲಿಗೆ ತೆರಳಿ ಹೈಕಮಾಂಡ್ ಜತೆ ಮಾತುಕತೆ ನಡೆಸಿದ್ದರು. ಈ ಎಲ್ಲ ವಿದ್ಯಮಾನಗಳ ಬೆನ್ನಲ್ಲೇ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಯತ್ನಾಳ್​ಗೆ ಶೋಕಾಸ್ ನೋಟಿಸ್ ನೀಡಿ, ಉತ್ತರಿಸಲು 10 ದಿನಗಳ ಕಾಲಾವಕಾಶ ನೀಡಿದೆ.

ಇದನ್ನೂ ಓದಿ: ಬಿಜೆಪಿ ಬಣ ಜಗಳ: ಬಸನಗೌಡ ಪಾಟೀಲ್ ಯತ್ನಾಳ್​ಗೆ ಹೈಕಮಾಂಡ್ ಶಿಸ್ತು ಸಮಿತಿಯಿಂದ ಶೋಕಾಸ್ ನೋಟಿಸ್

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ