
ಬೆಂಗಳೂರು, ನವೆಂಬರ್ 25: ‘ಬಸವ ಮಂಟಪ’ ಪುಸ್ತಕದಲ್ಲಿ ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎನ್ನುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಲೇಖಕ ರವಿ ಹಂಜಗಿಮಠ್ ಅವರಿಗೆ ಜಾಮೀನು ಸಿಕ್ಕಿದೆ. ಅರವಿಂದ ಜತ್ತಿ ನೀಡಿದ ದೂರಿನ ಮೇರೆಗೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ರವಿ ಹಂಜ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಿ ಬೆಂಗಳೂರಿನ 56ನೇ ಸಿಸಿಹೆಚ್ ಕೋರ್ಟ್ ಇಂದು (ನವೆಂಬರ್ 25) ಆದೇಶ ಹೊರಡಿಸಿದೆ. ಇನ್ನು ಇದೇ ಪ್ರಕರಣದಲ್ಲಿ ಪತ್ರಕರ್ತ ವಿಶ್ವೇಶ್ವರ ಭಟ್ ಅವರಿಗೂ ಜಾಮೀನು ದೊರೆತಿದೆ.
ಬಸವಣ್ಣನವರನ್ನು ಅವಹೇಳನ ಮಾಡಲಾಗಿದೆ ಎಂದು ಬಸವ ಮಂಟಪ ಪುಸ್ತಕದ ಲೇಖಕ ರವಿ ಹಂಜ್ ವಿರುದ್ಧ ಅರವಿಂದ ಜತ್ತಿ ಎಂಬುವರು ದೂರು ನೀಡಿದ್ದು, ಈ ದೂರಿನ ಮೇರೆಗೆ ಬೆಂಗಳೂರಿಗೆ ಹೈಗ್ರೌಂಡ್ಸ್ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಇದರ ಬೆನ್ನಲ್ಲೇ ಜಾಮೀನು ಕೋರಿ ರವಿ ಹಂಜ್ ಬೆಂಗಳೂರಿನ ಬೆಂಗಳೂರಿನ 56ನೇ ಸಿಸಿಹೆಚ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿ ಆದೇಶ ಹೊರಡಿಸಿದೆ.
ಇನ್ನೊಂದೆಡೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಕೋರಿ ರವಿ ಹಂಜ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಬಸವ ಸಮಿತಿಯ ಅಕ್ರಮಗಳ ವಿರುದ್ಧ ಲೇಖನ ಬರೆದಿದ್ದೆ. ಆ ವೈಯಕ್ತಿಕ ದ್ವೇಷದಿಂದ ಅರವಿಂದ ಜತ್ತಿ ದೂರು ನೀಡಿದ್ದಾರೆ. ಸಿಎಂ, ಸಚಿವರ ಹೇಳಿಕೆಯಿಂದಾಗಿ ಪೊಲೀಸರ ಮೇಲೆ ಒತ್ತಡವಿದೆ. ಹೀಗಾಗಿ ಕಾನೂನು ದುರುಪಯೋಗಪಡಿಸಿಕೊಂಡು ಎಫ್‌ಐಆರ್ ದಾಖಲಿಸಲಾಗಿದ್ದು, ಪೊಲೀಸರಿಂದ ನ್ಯಾಯಸಮ್ಮತ ತನಿಖೆ ಸಾಧ್ಯವಿಲ್ಲವೆಂದು ಉಲ್ಲೇಖಿಸಿದ್ದಾರೆ. ಅರ್ಜಿಯಲ್ಲಿ ದೂರುದಾರ ಅರವಿಂದ ಜತ್ತಿ ಮತ್ತು ಹೈಗ್ರೌಂಡ್ಸ್ ಠಾಣೆಯ ಪೊಲೀಸರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದ್ದು, ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.
ವಿವಾದಿತ ‘ಬಸವ ಮಂಟಪ’ ಪುಸ್ತಕ ಲೇಖಕ ರವಿ ಹಂಜ್ ವಿರುದ್ಧದ ರಾಜ್ಯಾದ್ಯಂತ ಆಕ್ರೋಶ ಮುಂದುವರೆದಿದ್ದು, ಬಸವಣ್ಣನವರನ್ನು ಅವಹೇಳನ ಮಾಡಿದ ರವಿ ಹಂಜ್ ವಿರುದ್ಧ ಕಠಿಣ ಕ್ರವಾಗಬೇಕೆಂಬ ಆಗ್ರಹಗಳು ವ್ಯಕ್ತವಾಗುತ್ತಿವೆ. ಇನ್ನು ಬೆಳಗಾವಿ ಮಾರ್ಕೆಟ್ ಠಾಣೆಯಲ್ಲೂ ಸಹ ರವಿ ಹಂಜ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಈ ಸಂಬಂಧ ನವೆಂಬರ್ 26ರ ಒಳಗೆ ವಿಚಾರಣೆಗೆ ಹಾಜರಾಗುವಂತೆ ರವಿ ಹಂಜ್ಗೆ ಇ-ಮೇಲ್ ಮೂಲಕ ನೋಟಿಸ್ ಕಳುಹಿಸಿದ್ದಾರೆ.
Published On - 6:22 pm, Wed, 25 November 26