ಪ್ರತಿಷ್ಠೆಯ ಕಣವಾದ ಬಸವಕಲ್ಯಾಣ ಉಪಚುನಾವಣೆ: ಕುತೂಹಲ ಮೂಡಿಸಿದ ಜೆಡಿಎಸ್ ನಡೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 08, 2020 | 6:33 PM

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆಯ ಗಾಳಿ ನಿಧಾನವಾಗಿ ವೇಗ ಪಡೆಯುತ್ತಿದೆ. ಕೊರೊನಾ ಮತ್ತು ಬಹು ಅಂಗಾಂಗ ವೈಫಲ್ಯದಿಂದ ಶಾಸಕ ಬಿ.ನಾರಾಯಣರಾವ್ ನಿಧನರಾಗಿದ್ದರು. ಹೀಗಾಗಿ ಬಸವಕಲ್ಯಾಣ ಉಪ ಚುನಾವಣೆ ಎದುರಿಸಲಿದೆ.

ಪ್ರತಿಷ್ಠೆಯ ಕಣವಾದ ಬಸವಕಲ್ಯಾಣ ಉಪಚುನಾವಣೆ: ಕುತೂಹಲ ಮೂಡಿಸಿದ ಜೆಡಿಎಸ್ ನಡೆ
ಬಸವಕಲ್ಯಾಣ (ಸಾಂಕೇತಿಕ ಚಿತ್ರ)
Follow us on

ಬೀದರ್: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆಯ ಗಾಳಿ ನಿಧಾನವಾಗಿ ವೇಗ ಪಡೆಯುತ್ತಿದೆ. ಕೊರೊನಾ ಮತ್ತು ಬಹು ಅಂಗಾಂಗ ವೈಫಲ್ಯದಿಂದ ಶಾಸಕ ಬಿ.ನಾರಾಯಣರಾವ್ ನಿಧನರಾಗಿದ್ದರು. ಹೀಗಾಗಿ ಬಸವಕಲ್ಯಾಣದಲ್ಲಿ ಉಪ ಚುನಾವಣೆ ನಡೆಯಲಿದೆ.

ಬಿಜೆಪಿ ಉಪ ಚುನಾವಣೆಗೆ ಭಾರಿ ಮಹತ್ವ ನೀಡಿದೆ. ಸಿಎಂ ಪುತ್ರ ಬಿ.ವೈ ವಿಜಯೇಂದ್ರ, ಡಿಸಿಎಂ ಲಕ್ಷ್ಮಣ್ ಸವದಿ, ಬೀದರ್ ಸಂಸದ ಭಗವಂತ ಖೂಬಾ ಚುನಾವಣಾ ಉಸ್ತುವಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಚಾರವನ್ನೂ ಭರ್ಜರಿಯಾಗಿಯೇ ನಡೆಸುತ್ತಿದ್ದಾರೆ.

ತಾನೇನೂ ಕಡಿಮೆಯಿಲ್ಲ ಎಂದಿರುವ ಕಾಂಗ್ರೆಸ್, ಟಿಕೆಟ್ ನೀಡಲೆಂದೇ ಸಮಿತಿ ರಚಿಸಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸಮಿತಿಯ ಹೊಣೆ ಹೊತ್ತಿದ್ದಾರೆ. ತಮ್ಮ ತವರು ಜಿಲ್ಲೆಯ ವಿಧಾನಸಭಾ ಕ್ಷೇತ್ರವಾದ ಕಾರಣ ಖಂಡ್ರೆಗೆ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ರನ್ನು ಬಸವಕಲ್ಯಾಣಕ್ಕೆ ಕರೆಸುವಲ್ಲಿ ಖಂಡ್ರೆ ಯಶ ಕಂಡಿದ್ದಾರೆ.

ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ಜೆಡಿಎಸ್ ಈಗಾಗಲೇ ಘೋಷಿಸಿದೆ. ಆದರೆ ಕೊನೆ ಘಳಿಗೆಯಲ್ಲಿ ಈ ನಿರ್ಧಾರ ಬದಲಾಗುವ ಎಲ್ಲ ಸಾಧ್ಯತೆಯಿದೆ. ಸ್ಥಳೀಯ ಜೆಡಿಎಸ್ ಮುಖಂಡ ಮಾಜಿ ಶಾಸಕ ಎಂ.ಜಿ ಮುಳೆ ಪಕ್ಷ ಅಭ್ಯರ್ಥಿ ಹಾಕದಿದ್ದರೂ ವರಿಷ್ಟರನ್ನು ಒಲಿಸಿ ಬಿ. ಫಾರಂ ತರುವುದಾಗಿ ಹೇಳಿದ್ದಾರೆ.

ಈವರೆಗೆ ಏಳು ಚುನಾವಣೆ ಎದುರಿಸಿರುವ ಎಂ.ಜಿ ಮುಳೆ, 1999ರಲ್ಲಿ ಒಮ್ಮೆ ಶಾಸಕರಾಗಿದ್ದರು. ನಂತರದ ಚುನಾವಣೆಗಳಲ್ಲಿ ಬಿಜೆಪಿಯೇತರ ಪಕ್ಷದಿಂದ ಸ್ಪರ್ಧಿಸಿ ಬಿಜೆಪಿಯ ವೋಟ್ ಬ್ಯಾಂಕ್​ನ್ನು ಸೆಳೆದಿದ್ದಾರೆ ಎಂದೇ ಕ್ಷೇತ್ರ ಬಲ್ಲವರು ಹೇಳುತ್ತಾರೆ. ಕಳೆದ ಬಾರಿ ಬಿ.ನಾರಾಯಣರಾವ್ ಗೆಲುವಿಗೆ ಜೆಡಿಎಸ್​‌ನ ಪಿಜಿಆರ್ ಸಿಂಧ್ಯಾ ಸ್ಪರ್ಧೆ ಮತ್ತು ಮುಳೆಯವರ ಬೆಂಬಲವೇ ಕಾರಣ ಎಂಬ ವಿಶ್ಲೇಷಣೆಗಳು ಕ್ಷೇತ್ರದಲ್ಲಿ ಹರಿದಾಡಿದ್ದವು.

-ಸುರೇಶ್ ನಾಯಕ್