ಸರ್ಕಾರಿ ನಿವಾಸ ಹಂಚಿಕೆ ಮಾಡದಿದ್ದಕ್ಕೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಗರಂ
Basavaraj Horatti: ಮನೆ ಹಂಚಿಕೆ ಮಾಡಲು ನಾನು, ಸ್ಪೀಕರ್ ಪತ್ರ ಬರೆದಿದ್ದೇವೆ. ನನಗೆ ಗಾಂಧಿ ಭವನ ರಸ್ತೆಯ ನಿವಾಸವನ್ನು ಕೊಟ್ಟರೆ ಕೊಡಲಿ. ಇಲ್ಲದಿದ್ದರೆ ನನಗೆ ಸರ್ಕಾರಿ ನಿವಾಸ ಬೇಡ ಎಂದು ಹೊರಟ್ಟಿ ಹೇಳಿದ್ದಾರೆ.
ಬೆಂಗಳೂರು: ಸರ್ಕಾರಿ ನಿವಾಸ ಹಂಚಿಕೆ ಮಾಡದಿದ್ದಕ್ಕೆ ಹೊರಟ್ಟಿ ಗರಂ ಆಗಿದ್ದಾರೆ. ಏಳು ಪತ್ರದ ಜೊತೆಗೆ ಇಂದು ಎಂಟನೇ ಪತ್ರ ಬರೆದಿದ್ದೇನೆ. ಮತ್ತೆ ಭಿಕ್ಷೆ ಬೇಡೋದಿಲ್ಲವೆಂದೂ ನಾನು ಹೇಳಿದ್ದೇನೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿಕೆ ನೀಡಿದ್ದಾರೆ. ಎಲ್ಲರಿಗೂ ನಿವಾಸ ಇದೆ, ಆದ್ರೆ ನಮ್ಮ ಹಣೆಬರಹ ನೋಡಿ. ಪ್ರೊಟೋಕಾಲ್ ಪ್ರಕಾರ ಸಿಎಂಗಿಂತ ನಾವು ಮೇಲಿನವರು. ಆದ್ರೂ ಸರ್ಕಾರ ನಮಗೆ ಸರ್ಕಾರಿ ನಿವಾಸ ಹಂಚಿಕೆ ಮಾಡಿಲ್ಲ. ಇಂದು ಕೂಡ ಮತ್ತೆ ಪತ್ರ ಬರೆದಿದ್ದೇನೆ, ನಿವಾಸ ನೀಡಿಲ್ಲ. ನಮಗೆ ಶಕ್ತಿ ಇಲ್ಲವೆಂದುಕೊಂಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಕಾವೇರಿ ನಿವಾಸ ನಿಗದಿತ ನಿವಾಸ ಅಲ್ಲ. ಆದರೂ ಕಾವೇರಿ ನಿವಾಸದಲ್ಲಿ ಸಿಎಂ ಆದವರು ಇರ್ತಾರೆ. ಏರ್‌ಪೋರ್ಟ್‌ನಲ್ಲಿ ಸಿಎಂ, ಗೃಹಸಚಿವರು ನೇರ ಹೋಗ್ತಾರೆ. ಸಾಂವಿಧಾನಿಕವಾಗಿ ನಾವು ಅವರಿಗಿಂತ ಮೇಲಿನವರು. ಆದರೆ, ನಮಗೆ ಮಾತ್ರ ಎಲ್ಲಾ ತಪಾಸಣೆ ಮಾಡುತ್ತಾರೆ ಎಂದು ಹೊರಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮನೆ ಹಂಚಿಕೆ ಮಾಡಲು ನಾನು, ಸ್ಪೀಕರ್ ಪತ್ರ ಬರೆದಿದ್ದೇವೆ. ನನಗೆ ಗಾಂಧಿ ಭವನ ರಸ್ತೆಯ ನಿವಾಸವನ್ನು ಕೊಟ್ಟರೆ ಕೊಡಲಿ. ಇಲ್ಲದಿದ್ದರೆ ನನಗೆ ಸರ್ಕಾರಿ ನಿವಾಸ ಬೇಡ ಎಂದು ಹೊರಟ್ಟಿ ಹೇಳಿದ್ದಾರೆ.
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ವಿಚಾರವಾಗಿ ಹೊರಟ್ಟಿ ಪ್ರತಿಕ್ರಿಯಿಸಿದ್ದಾರೆ. ಈ ವರ್ಷದ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಬಿಡುಗಡೆ ಮಾಡಿದ್ದಾರೆ. 600 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಪ್ರತಿ ವರ್ಷ ಜೂನ್ ಅಂತ್ಯದ ವೇಳೆಗೆ ಕ್ರಿಯಾ ಯೋಜನೆ ರೂಪಿಸುವುದಕ್ಕೆ ಸೂಚಿಸಲಾಗಿದೆ. 2018- 19 ರಿಂದ 20- 21 ನೇ ಸಾಲಿನ ಹಣ ರಿಲೀಸ್ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಬಳಿ ಈಗಲೂ ಹಣ ಇದೆ. ಆದರೆ ಪರಿಷತ್ ಸದಸ್ಯರಿಗೆ ಹಣ ಬಿಡುಗಡೆ ಆಗುತ್ತಿಲ್ಲ. ಯೋಜನಾ ಇಲಾಖೆ ಅನುದಾನ ಕ್ಷೇತ್ರವಾರು ಬದಲು ಜಿಲ್ಲಾವಾರು ಬಿಡುಗಡೆಗೆ ಆದೇಶ ಮಾಡಲಾಗಿದೆ. ಇನ್ಮುಂದೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ವಿಳಂಬ ಅಗಲ್ಲ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿಕೆ ನೀಡಿದ್ದಾರೆ.
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಬಗ್ಗೆ ಸಭೆ ನಡೆಸಲಾಗಿದೆ. ಪ್ರದೇಶಾಭಿವೃದ್ಧಿ ಅನುದಾನ ಕುರಿತ ಸಮಿತಿ ಅಂತಿಮ ಸಭೆ ವಿಧಾನಸೌಧದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಇಂದು (ಸಪ್ಟೆಂಬರ್ 4) ನಡೆದಿದೆ. ಪ್ರದೇಶಾಭಿವೃದ್ಧಿ ನಿಧಿ ಬಿಡುಗಡೆಯಲ್ಲಿ ತಾರತಮ್ಯ ಸರಿಪಡಿಸುವ ಸಂಬಂಧ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಹಣಕಾಸು ಇಲಾಖೆ ಅಧಿಕಾರಿಗಳು, ಎಂಎಲ್ಸಿಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ: ಮುಜುಗರ ತರಬಲ್ಲ ವಿವಾದಾತ್ಮಕ ಹೇಳಿಕೆ ನೀಡದಿರುವಂತೆ ಸಚಿವರಿಗೆ ಖಡಕ್ ಸಲಹೆ ನೀಡಿದ ಸಿಎಂ ಬೊಮ್ಮಾಯಿ
ಇದನ್ನೂ ಓದಿ: ಕೊರೊನಾ ಪ್ರಕರಣ ಹೆಚ್ಚಿರುವ ಜಿಲ್ಲಾಡಳಿತಗಳ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ