ಬೆಂಗಳೂರಿನ ಬಿಬಿಎ ವಿದ್ಯಾರ್ಥಿನಿ ಸನಾ ಆತ್ಮಹತ್ಯೆ: ಯುವಕನ ಕಿರುಕುಳಕ್ಕೆ ಪ್ರಾಣಬಿಟ್ಲಾ ಯುವತಿ?
ಬಾಗಲೂರಿನ ಖಾಸಗಿ ಕಾಲೇಜಿನಲ್ಲಿ ಬಿಬಿಎ ದ್ವಿತೀಯ ವರ್ಷ ವ್ಯಾಸಂಗ ಮಾಡುತ್ತಿದ್ದ ಯುವತಿ ಸನಾ, ಪಿಜಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆಕೆಯ ಕಾಲೇಜಿನಲ್ಲಿ ಓದುತ್ತಿದ್ದ ರಿಫಾಸ್ ಎಂಬ ಯುವಕನಿಂದ ನಿರಂತರ ಕಿರುಕುಳ ಹಾಗೂ ಬೆದರಿಕೆಗೆ ಒಳಗಾಗಿಯೇ ಸನಾ ಈ ನಿರ್ಧಾರ ತೆಗೆದುಕೊಂಡಿದ್ದಾಳೆಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಬೆಂಗಳೂರು, (ಅಕ್ಟೋಬರ್ 18): ಪಿಜಿಯಲ್ಲಿ ಬಿಬಿಎ ದ್ವಿತೀಯ ವರ್ಷದ ವಿದ್ಯಾರ್ಥಿನಿ (Student) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಬಾಗಲೂರಿನಲ್ಲಿ ನಡೆದಿದೆ. ಸನಾ ಪರ್ವಿನ್ (19) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿ. ಕಾಲೇಜಿನಲ್ಲಿ ಓದುತ್ತಿದ್ದ ರಿಫಾಸ್ ಎಂಬ ಯುವಕನಿಂದ ನಿರಂತರ ಕಿರುಕುಳ ಹಾಗೂ ಬೆದರಿಕೆಯಿಂದ ಸನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ.
ಕ್ಲಾಸ್ಮೇಟ್ ಯುವಕನೊಬ್ಬನ ಕಿರುಕುಳಕ್ಕೆ ಯುವತಿ ಬಲಿಯಾಗಿರುವುದಾಗಿ ಕುಟುಂಬಸ್ಥರ ಆರೋಪ
ಸನಾ ಬಾಗಲೂರಿನ ಖಾಸಗಿ ಕಾಲೇಜಿನಲ್ಲಿ ಬಿಬಿಎ ದ್ವಿತೀಯ ವರ್ಷ ವ್ಯಾಸಂಗ ಮಾಡುತ್ತಿದ್ದಳು. ನಿನ್ನೆ (ಅ.17) ಬೆಳಿಗ್ಗೆ 10 ಗಂಟೆ ಸುಮಾರಿಗೆ ಸನಾ ಪರ್ವಿನ್ ತನ್ನ ವಸತಿಗೃಹದ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆಯನ್ನು ಗಮನಿಸಿದ ಸಹವಾಸಿಗಳು ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸನಾ ಸಂಬಂಧಿಯಾದ ಮುಸ್ತಾಫ್, “ಕಾಲೇಜಿನಲ್ಲಿ ಓದಿದ್ದ ರಿಫಾಸ್ ಪಾಸ್ ಔಟ್ ಆದ ಬಳಿಕವೂ ಆಗಾಗ ಕಾಲೇಜಿಗೆ ಬಂದು ಸನಾಗೆ ಕಿರುಕುಳ ನೀಡುತ್ತಿದ್ದ. ಅವಳನ್ನು ಬಿಡುವುದಿಲ್ಲ ಎಂದು ಬೆದರಿಸುತ್ತಿದ್ದ. ಇದೇ ಕಾರಣಕ್ಕೆ ಮಾನಸಿಕ ಒತ್ತಡಕ್ಕೆ ಒಳಗಾಗಿ ಸನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ” ಎಂದು ಆರೋಪಿಸಿದ್ದಾರೆ.
ಮೃತಳ ಮಾವ ಉಬೇದುಲ್ಲಾ , “ಕಾಲೇಜಿನಲ್ಲಿ ಸೂಕ್ತ ಭದ್ರತೆ ಇಲ್ಲ. ಯಾರ್ಯಾರೂ ಬಂದು ಹೋಗ್ತಾರೆ. ಕಾಲೇಜಿನವರು ಈ ವಿಚಾರದಲ್ಲಿ ಗಂಭೀರವಾಗಿ ವರ್ತಿಸಿಲ್ಲ. ನಿನ್ನೆ ಕೂಡ ಯುವಕ ಬಂದು ಟಾರ್ಚರ್ ಮಾಡಿದ್ದಾನೆ. ಅದರಿಂದ ಹೆದರಿ ಸನಾ ನೇಣು ಹಾಕಿಕೊಂಡಿದ್ದಾಳೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಘಟನೆಯ ಹಿನ್ನೆಲೆಯಲ್ಲಿ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರಿಫಾಸ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಚಿಕ್ಕಬಳ್ಳಾಪುರದ ಯುವಕನ ಆತ್ಮಹತ್ಯೆ
ಚಿಕ್ಕಬಳ್ಳಾಪುರ ತಾಲ್ಲೂಕಿನ ಹೊನ್ನೇನಹಳ್ಳಿ ಗೇಟ್ ಬಳಿ ವಿದ್ಯುತ್ ತಂತಿ ಹಿಡಿದುಕೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಡಿಕೆ ಡಾಬಾದಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ ಯುವಕ ಪದಮ್(25) ಆತ್ಮಹತ್ಯೆ ಮಾಡಿಕೊಂಡ ಯುವಕ . ಪೆಟ್ಟಿಗೆ ಅಂಗಡಿ ಮೇಲೆ ಹತ್ತಿ ವಿದ್ಯುತ್ ತಂತಿ ಹಿಡಿದುಕೊಂಡು ಸಾವನ್ನಪ್ಪಿದ್ದಾನೆ. ಈ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



