Rekha Kadiresh: ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್​ರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

| Updated By: ಆಯೇಷಾ ಬಾನು

Updated on: Jun 24, 2021 | 1:13 PM

ಛಲವಾದಿಪಾಳ್ಯದ ಫ್ಲವರ್ಗಾರ್ಡನ್ನ ಮನೆಯಲ್ಲಿದ್ದ ರೇಖಾ ಕದಿರೇಶ್​ರನ್ನು ಹೊರಗೆ ಕರೆದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಸದ್ಯ ಗಾಯಾಳು ರೇಖಾರನ್ನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಸಾವು ಬದುಕಿನ ನಡುವೆ ರೇಖಾ ಹೋರಾಡುತ್ತಿದ್ದಾರೆ.

Rekha Kadiresh: ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್​ರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ
ರೇಖಾ ಕದಿರೇಶ್
Follow us on

ಬೆಂಗಳೂರು: ಬಿಬಿಎಂಪಿ ಛಲವಾದಿಪಾಳ್ಯ ವಾರ್ಡ್ನ ಮಾಜಿ ಸದಸ್ಯೆ ರೇಖಾ ಕದಿರೇಶ್​ರನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಛಲವಾದಿಪಾಳ್ಯದ ಫ್ಲವರ್​ ಗಾರ್ಡನ್​ನ ಮನೆಯಲ್ಲಿದ್ದ ರೇಖಾ ಕದಿರೇಶ್​ರನ್ನು ಹೊರಗೆ ಕರೆದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿತ್ತು. ಗಾಯಾಳು ರೇಖಾರನ್ನ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ರೇಖಾ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ರೇಖಾ ಮೃತಪಟ್ಟ ಬಗ್ಗೆ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಚಿಕ್ಕಪೇಟೆ ಎಸಿಪಿ, ಕಾಟನ್ಪೇಟೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಟನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನಿಮ್ಮ ತಮ್ಮನ ಹೆಂಡತಿಯನ್ನು ಸಾಯಿಸಿಬಿಟ್ರು ಅಂತ ಹೇಳಿದ್ರು. ನಾನು ಮನೆಯಿಂದ ಓಡಿ ಬಂದೆ. ನಾನು ನೋಡಿದ್ದಾಗ ಕೆಳಗಡೆ ಬಿದ್ದಿದ್ಳು. ಸ್ಟೀಫನ್, ರಾಬರ್ಟ್ ಎಲ್ಲಾರು ಜತೆಗೇ ಇದ್ದರು. ಅವರಿಂದ ಯಾವುದೇ ಗಲಾಟೆ ಇರಲಿಲ್ಲ ಎಂದು ಕದಿರೇಶ್ ಸಹೋದರಿ ಹೇಳಿಕೆ ನೀಡಿದ್ದಾರೆ. ಇನ್ನು ಕಿಮ್ಸ್ ಆಸ್ಪತ್ರೆಯ ತುರ್ತು ವಿಭಾಗದಲ್ಲಿರುವ ಮೃತದೇಹ ಇಡಿಸಲಾಗಿದ್ದು ಕಿಮ್ಸ್ ಆಸ್ಪತ್ರೆಯತ್ತ ಬಿಜೆಪಿ ಕಾರ್ಯಕರ್ತರು ಆಗಮಿಸುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಿಮ್ಸ್ ಆಸ್ಪತ್ರೆಯ ಬಳಿ ಪೊಲೀಸ್ ಬಿಗಿಬಂದೋಬಸ್ತ್ ಮಾಡಲಾಗಿದೆ. ಆಸ್ಪತ್ರೆ ಎದುರು ಬೆಂಬಲಿಗರ, ಸಂಬಂಧಿಕರ ಕಣ್ಣೀರು ಹಾಕುತ್ತಿದ್ದಾರೆ.

ಪ್ಲ್ಯಾನ್ ಮಾಡಿ ರೇಖಾ ಕೊಲೆ ಮಾಡಿರುವ ದುಷ್ಕರ್ಮಿಗಳು
ರೇಖಾರನ್ನು ಕೊಲೆ ಮಾಡಲು ಬಂದಿದ್ದ ದುಷ್ಕರ್ಮಿಗಳು ಘಟನಾ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾವನ್ನು ತಿರುಗಿಸಿದ್ದಾರೆ. ಘಟನಾ ಸ್ಥಳದಲ್ಲಿ ಎರಡೂ ಬದಿಯೂ ಸಿಸಿ ಕ್ಯಾಮರಾ ಇತ್ತು. ಆದರೆ ಕೊಲೆ ದೃಶ್ಯ ಕಾಣದಂತೆ ಸಿಸಿ ಕ್ಯಾಮರಾ ತಿರುಗಿಸಿದ್ದಾರೆ. ಕಚೇರಿಯ ಒಳಗಿದ್ದ ರೇಖಾರನ್ನು ಹೊರಗೆ ಕರೆಸಿಕೊಂಡು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಟೆಂಡರ್ ವಿಚಾರಕ್ಕೆ ರೇಖಾ ಕದಿರೇಶ್ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.

2018ರ ಫೆಬ್ರವರಿ 8ರಂದು ರೇಖಾ ಪತಿ ಕದಿರೇಶ್ನನ್ನು ಮುನೇಶ್ವರ ದೇವಸ್ಥಾನದ ಬಳಿ ಶೋಭನ್ ಗ್ಯಾಂಗ್ ಸಹಚರರು, ಕೊಚ್ಚಿ ಕೊಲೆ ಮಾಡಿದ್ದರು. ಕದಿರೇಶ್ ಕೊಲೆ ಮಾಡಿದ್ದ ಆರೋಪಿಗಳು ತಾವೇ ಕೋರ್ಟ್ಗೆ ಶರಣಾಗಿದ್ದರು. ಸಹೋದರರಾದ ನವೀನ್, ವಿನಯ್ ತಲೆ ಬೋಳಿಸಿಕೊಂಡು ವಕೀಲರ ವೇಷದಲ್ಲಿ ಹಾಜರಾಗಿದ್ದರು. ಕದಿರೇಶ್ನನ್ನು ಕೊಂದಿದ್ದು ನಾವೇ ಎಂದು ಜಡ್ಜ್ ಎದುರು ತಪ್ಪೊಪ್ಪಿಕೊಂಡಿದ್ದರು. ಮುನೇಶ್ವರ ದೇವಾಲಯದ ಬಳಿ ನಾಲ್ವರು ಸೇರಿ ಕದಿರೇಶ್ ಕೊಲೆ ಮಾಡಿದ್ದರು.

ರೇಖಾ ಕದಿರೇಶ್​ ಮೇಲೆ ಇಬ್ಬರು ಹಲ್ಲೆ ನಡೆಸಿ ಕೊಂದಿದ್ದಾರೆ
ಇನ್ನು ಘಟನೆ ಬಗ್ಗೆ ಮಾತನಾಡಿದ ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ಮುರುಗನ್​, ರೇಖಾ ಕದಿರೇಶ್​ ಮೇಲೆ ಇಬ್ಬರು ಹಲ್ಲೆ ನಡೆಸಿ ಕೊಂದಿದ್ದಾರೆ. ರೇಖಾ ಕದಿರೇಶ್​ ಕಚೇರಿ ಬಳಿ ಫುಡ್​ ಕಿಟ್​ ವಿತರಿಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದಿದ್ದ ಇಬ್ಬರು ರೇಖಾ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಯಾಳು ರೇಖಾರನ್ನು ಆಸ್ಪತ್ರೆಗೆ ಸೇರಿಸಿದ್ದರೂ ಬದುಕಿಲ್ಲ. ಆರೋಪಿಗಳ ಪತ್ತೆಗಾಗಿ ಪೊಲೀಸರ ತಂಡ ರಚಿಸಲಾಗಿದೆ. ಪ್ರಕರಣದ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ಕೂಡಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ನನ್ನನ್ನು ಮುಂದಿನ ಮುಖ್ಯಮಂತ್ರಿ ಎನ್ನಬೇಡಿ; ಆ ಪದವೇ ನನಗೆ ಡೇಂಜರ್ ಆಗುತ್ತೆ – ಡಾ. ಪರಮೇಶ್ವರ್ ಅಳಲು

Published On - 11:33 am, Thu, 24 June 21