ಬೆಂಗಳೂರು ನಗರ ವ್ಯಾಪ್ತಿಯಲ್ಲಿ 1,074 ಐಸಿಯು, ಜನರಲ್​ ಬೆಡ್​​ ಖಾಲಿ ಇವೆ: ಬಿಬಿಎಂಪಿ

| Updated By: ಆಯೇಷಾ ಬಾನು

Updated on: Apr 15, 2021 | 7:39 AM

ಬಿಬಿಎಂಬಿ ಬಳಿ ಒಟ್ಟು 3,819 ಐಸಿಯು ಹಾಗೂ ಜನರಲ್ ಬೆಡ್​ಗಳಿದ್ದು ಆ ಪೈಕಿ ಈಗಾಗಲೇ 2,745 ಬೆಡ್​ಗಳನ್ನು ಬಳಕೆ ಮಾಡಲಾಗಿದೆ ಹಾಗೂ 1,074 ಜನರಲ್​ ಬೆಡ್​ಗಳು ಖಾಲಿ ಇವೆ ಎಂದು ತಿಳಿದುಬಂದಿದೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ 1,074 ಐಸಿಯು, ಜನರಲ್​ ಬೆಡ್​​ ಖಾಲಿ ಇವೆ: ಬಿಬಿಎಂಪಿ
ಸಂಗ್ರಹ ಚಿತ್ರ
Follow us on

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಹೊಡೆತ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹರಸಾಹಸಪಡುತ್ತಿದೆ. ಈ ಮಧ್ಯೆ ಬೆಂಗಳೂರಿನಲ್ಲಿ ಐಸಿಯು ಬೆಡ್​ ಕೊರತೆ ಉಂಟಾಗಿದೆ, ಕೊರೊನಾ ಸೋಂಕಿತರನ್ನು ಆಸ್ಪತ್ರೆಗೆ ಸೇರಿಸಿಕೊಳ್ಳಲು ಜಾಗವೇ ಇಲ್ಲ ಎಂಬೆಲ್ಲಾ ವಿಚಾರಗಳು ಹರಿದಾಡುತ್ತಿದ್ದು ಈ ಕುರಿತಾಗಿ ಬಿಬಿಎಂಪಿ ತನ್ನ ವ್ಯಾಪ್ತಿಯಲ್ಲಿ ಎಷ್ಟು ಬೆಡ್​ಗಳು ಖಾಲಿ ಇವೆ ಎಂಬ ಮಾಹಿತಿಯನ್ನು ಹೊರಹಾಕಿದೆ.

ಬಿಬಿಎಂಬಿ ಬಳಿ ಒಟ್ಟು 3,819 ಐಸಿಯು ಹಾಗೂ ಜನರಲ್ ಬೆಡ್​ಗಳಿದ್ದು ಆ ಪೈಕಿ ಈಗಾಗಲೇ 2,745 ಬೆಡ್​ಗಳನ್ನು ಬಳಕೆ ಮಾಡಲಾಗಿದೆ ಹಾಗೂ 1,074 ಜನರಲ್​ ಬೆಡ್​ಗಳು ಖಾಲಿ ಇವೆ ಎಂದು ತಿಳಿದುಬಂದಿದೆ. ಆದರೆ, ಅಂಕಿ ಸಂಖ್ಯೆಯ ಲೆಕ್ಕಾಚಾರದಲ್ಲಿ ಬೆಡ್​ಗಳು ಖಾಲಿ ಇದ್ದರೂ ಖಾಸಗಿ ಆಸ್ಪತ್ರೆಗಳು ಸರ್ಕಾರಕ್ಕೆ ಮೀಸಲಿಡಬೇಕಾದ ಬೆಡ್​ಗಳನ್ನು ಖಾಲಿ ಇಡದೇ ಕಳ್ಳಾಟ ನಡೆಸುತ್ತಿವೆ ಎಂಬ ಆರೋಪ ಕೇಳಿಬರುತ್ತಿದೆ.

ಬಿಬಿಎಂಪಿ ಪ್ರಕಾರ ಸರ್ಕಾರಿ ಮೆಡಿಕಲ್ ಕಾಲೇಜ್​ನಲ್ಲಿ 380 ಐಸಿಯು, ಜನರಲ್ ಬೆಡ್, ಸರ್ಕಾರಿ ಆಸ್ಪತ್ರೆಯಲ್ಲಿ 872 ಐಸಿಯು, ಜನರಲ್ ಬೆಡ್, ಖಾಸಗಿ ಮೆಡಿಕಲ್ ಕಾಲೇಜ್​ನಲ್ಲಿ 1,722 ಐಸಿಯು, ಜನರಲ್ ಬೆಡ್ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 819 ಐಸಿಯು, ಜನರಲ್ ಬೆಡ್ ಇದೆ. ಇದರಲ್ಲಿ ಇನ್ನೂ 1,074 ಬೆಡ್​ಗಳು ಖಾಲಿ ಇವೆ.

ರಾಜ್ಯದಲ್ಲಿ ಬುಧವಾರದಂದು 11 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ
ಕರ್ನಾಟಕದಲ್ಲಿ ಬುಧವಾರ (ಏಪ್ರಿಲ್ 14) ದಾಖಲೆ ಸಂಖ್ಯೆಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 11 ಸಾವಿರದ ಗಡಿ ದಾಟಿದೆ. ರಾಜ್ಯದಲ್ಲಿಂದು ಹೊಸದಾಗಿ 11,265 ಜನರಿಗೆ ಕೊರೊನಾ ದೃಢಪಟ್ಟಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 10,94,912ಕ್ಕೆ (10.94 ಲಕ್ಷ) ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 38 ಜನರ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 13,046ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 9,96,367 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 85,480 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರು ನಗರದಲ್ಲಿ ಅತಿಹೆಚ್ಚು, ಅಂದರೆ 8,155 ಜನರಿಗೆ ಸೋಂಕು ದೃಢಪಟ್ಟಿದೆ.

ಇದರೊಂದಿಗೆ ಬೆಂಗಳೂರಲ್ಲಿ ಕೊರೊನಾ ಪೀಡಿತರ ಒಟ್ಟು ಸಂಖ್ಯೆ 5,02,024ಕ್ಕೆ (5 ಲಕ್ಷ) ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 23 ಜನರು ಮೃತಪಟ್ಟಿದ್ದಾರೆ. ಕೊರೊನಾದಿಂದ ಈವರೆಗೆ ನಗರದಲ್ಲಿ 4,933 ಜನರು ಸಾವನ್ನಪ್ಪಿದ್ದಾರೆ. 5,02,024 ಸೋಂಕಿತರ ಪೈಕಿ 4,33,923 ಜನ ಗುಣಮುಖರಾಗಿದ್ದಾರೆ. 63,167 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ:
ಕೊರೊನಾದಿಂದ ಉಸಿರಾಟದ ಸಮಸ್ಯೆಗೆ ಸಿಲುಕಿದವರಿಗೆ ರೆಮ್​​ಡೆಸಿವರ್​ ನೀಡುವುದೇಕೆ? ಯಾರಿಗೆ ಇದು ಅತ್ಯವಶ್ಯಕ?