
ಬೆಳಗಾವಿ, ಡಿಸೆಂಬರ್ 4: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕರ್ನಾಟಕ ವಿಧಾನಸಭೆಯ ಚಳಿಗಾಲದ ಅಧಿವೇಶನವನ್ನು (Assembly Session) ಆಯೋಜಿಸುವ ವೆಚ್ಚ ಹೆಚ್ಚುತ್ತಲೇ ಇರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಡಿಸೆಂಬರ್ 8 ರಿಂದ 19 ರವರೆಗೆ ನಡೆಯಲಿರುವ ಹತ್ತು ದಿನಗಳ ಅಧಿವೇಶನಕ್ಕೆ ಜಿಲ್ಲಾಡಳಿತವು 21 ಕೋಟಿ ರೂ. ವೆಚ್ಚವನ್ನು ಅಂದಾಜಿಸಿದೆ. ಕಳೆದ ವರ್ಷ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನಕ್ಕೆ ಸರ್ಕಾರ 15.30 ಕೋಟಿ ರೂ. ಖರ್ಚು ಮಾಡಿತ್ತು. ಈ ವರ್ಷ 5.70 ಕೋಟಿ ರೂ. ಹೆಚ್ಚಳವಾಗಿದೆ. 2012 ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನಗಳಿಗೆ ರಾಜ್ಯ ಸರ್ಕಾರ 169.6 ಕೋಟಿ ರೂ. ಖರ್ಚು ಮಾಡಿದೆ.
ಉತ್ತರ ಕರ್ನಾಟಕದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಉತ್ತೇಜನ ನೀಡುವುದು ಮತ್ತು ಆಡಳಿತ ವಿಕೇಂದ್ರೀಕರಣ, ಇಲಾಖಾ ಸಮತೋಲನವನ್ನು ಖಚಿತಪಡಿಸಿಕೊಳ್ಳುವ ಉದ್ದೇಶದೊಂದಿಗೆ ಬೆಳಗಾವಿಯಲ್ಲಿ ಅಧಿವೇಶನ ನಡೆಸಲಗುತ್ತದೆ. ಆದಾಗ್ಯೂ ಈ ಉದ್ದೇಶಗಳು ಎಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿವೆ ಎಂಬುದರ ಬಗ್ಗೆ ಪ್ರಶ್ನೆಗಳು ಹಾಗೆಯೇ ಉಳಿದುಕೊಂಡಿದೆ.
ಕಲಾಪದ ದಿನಗಳ ಸಂಖ್ಯೆ, ಶಾಸಕರ ಹಾಜರಾತಿ ಪ್ರಮಾಣ ಮತ್ತು ಚರ್ಚೆಗಳ ಗಂಭೀರತೆ ಹೊರತಾಗಿ ಅಧಿವೇಶನದ ಹೆಚ್ಚಿನ ವೆಚ್ಚವು ಪ್ರಯಾಣ, ವಸತಿ, ಭದ್ರತೆ, ಅತಿಥಿಗಳ ನಿರ್ವಹಣೆ, ತಾಂತ್ರಿಕ ಬೆಂಬಲ, ವಿಶೇಷ ಸಿಬ್ಬಂದಿಯ ನಿಯೋಜನೆ, ಸಾರಿಗೆ ಮತ್ತು ಸುವರ್ಣ ಸೌಧದ ನಿರ್ವಹಣೆ ಸೇರಿದಂತೆ ಇತರ ಕೆಲಸಗಳಿಗೇ ಹೆಚ್ಚಿನ ವೆಚ್ಚ ವಿನಿಯೋಗವಾಗುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಇದನ್ನೂ ಓದಿ: ಬೆಳಗಾವಿ ಅಧಿವೇಶನಕ್ಕೆ ಸುವರ್ಣಸೌಧ ಸಜ್ಜು: 12 ಸಾವಿರ ಸಿಬ್ಬಂದಿ, 3 ಸಾವಿರ ರೂಮ್ಗಳು ಬುಕ್
ಉಳಿದಂತೆ ಸಂಪುಟ ಸಭೆಗಳು, ವಿಶೇಷ ಶಾಸಕಾಂಗ ಸಭೆಗಳು, ಮಾಧ್ಯಮ ಸೌಲಭ್ಯ, ಪೊಲೀಸ್ ವ್ಯವಸ್ಥೆ, ಸಾರಿಗೆ ಲಾಜಿಸ್ಟಿಕ್ಸ್ ಮತ್ತು ಶಿಷ್ಟಾಚಾರ ನಿರ್ವಹಣೆಗೆ ಹಣವನ್ನು ಹಂಚಿಕೆ ಮಾಡಲಾಗುತ್ತದೆ. ಪ್ರತಿ ವರ್ಷ ಬೆಳಗಾವಿ ಅಧಿವೇಶನಕ್ಕೆ ಖರ್ಚು ಹೆಚ್ಚುತ್ತಿದೆ. ಇದರೊಂದಿಗೆ, ಬೆಳಗಾವಿಯಲ್ಲಿ ಅಧಿವೇಶನವನ್ನು ನಡೆಸುವ ಅನಿವಾರ್ಯ, ಅಗತ್ಯತೆಯ ಕುರಿತಾದ ಚರ್ಚೆ ಹೆಚ್ಚಾಗಿದೆ ಎಂದು ವರದಿ ಉಲ್ಲೇಖಿಸಿದೆ.