ಬೆಳಗಾವಿ ಅಧಿವೇಶನಕ್ಕೆ ಸುವರ್ಣಸೌಧ ಸಜ್ಜು: 12 ಸಾವಿರ ಸಿಬ್ಬಂದಿ, 3 ಸಾವಿರ ರೂಮ್ಗಳು ಬುಕ್
ಡಿಸೆಂಬರ್ 8ರಿಂದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಇಡೀ ಸರ್ಕಾರವೇ ಬೆಳಗಾವಿಯಲ್ಲಿರಲಿದ್ದು, ಅಚ್ಚುಕಟ್ಟಾಗಿ ಅಧಿವೇಶನ ನಡೆಸಲು ಜಿಲ್ಲಾಡಳಿತ ಸಜ್ಜಾಗಿದೆ. ದೆಹಲಿ ಬಾಂಬ್ ಬ್ಲಾಸ್ಟ್ ಹಿನ್ನೆಲೆ ಹೈ ಅಲರ್ಟ್ ಘೋಷಿಸಲಾಗಿದೆ. ಹೀಗಾಗಿ ಬಿಗಿ ಬಂದೋಬಸ್ತ್ ಸಹ ಮಾಡಲಾಗಿದೆ.

ಬೆಳಗಾವಿ, ಡಿಸೆಂಬರ್ 4: ಡಿಸೆಂಬರ್ 8ರಿಂದ ಬೆಳಗಾವಿಯಲ್ಲಿ (Belagavi) ವಿಧಾನಸಭೆಯ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಇದಕ್ಕೆ ಬೇಕಾದ ಸಿದ್ದತೆಗೆ ಜಿಲ್ಲಾಡಳಿತ ಈಗಾಗಲೇ ಸಜ್ಜಾಗಿದೆ. ಸಚಿವರು, ಶಾಸಕರು, ಸಚಿವಾಲಯದ ಪ್ರತಿನಿಧಿಗಳು, ಪೊಲೀಸರು ಸೇರಿದಂತೆ ಸುಮಾರು 12ಸಾವಿರಕ್ಕೂ ಅಧಿಕ ಸಿಬ್ಬಂದಿ ಅಧಿವೇಶನ ಕಾರ್ಯಕ್ಕೆ ಆಗಮಿಸುತ್ತಿದ್ದಾರೆ. ಹೀಗೆ ಅಧಿವೇಶನಕ್ಕೆ ಬರುವವರಿಗೆ 3 ಸಾವಿರ ರೂಮ್ಗಳು ಬುಕ್ ಆಗಿದ್ದು, ಊಟದ ವ್ಯವಸ್ಥೆ ಮಾಡಲಾಗುತ್ತಿದೆ.
ಮತ್ತೊಂದೆಡೆ, ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿಲು ವಿಪಕ್ಷಗಳು ಸಿದ್ಧತೆ ನಡೆಸಿವೆ.
ಅಧಿವೇಶನ ಹೊತ್ತಲ್ಲಿ ಅನಾಹುತ ಆಗಬಾರದೆಂಬ ಕಾರಣಕ್ಕೆ, ಬಾರಿಗೆ ಮೂರು ಸಾವಿರ ಬದಲಿಗೆ ಏಳೆಂಟು ಸಾವಿರ ಪೊಲೀಸ್ ಸಿಬ್ಬಂದಿಯ ನಿಯೋಜನೆ ಮಾಡಲಾಗುತ್ತಿದೆ. ನಿತ್ಯ ಹತ್ತರಿಂದ ಹದಿನೈದು ಸಂಘಟನೆಗಳು ಸುವರ್ಣ ವಿಧಾನಸೌಧದ ಪಕ್ಕದಲ್ಲಿ ಪ್ರತಿಭಟನೆ ನಡೆಯಲಿವೆ.
ಸದ್ಯ ಅಧಿವೇಶನಕ್ಕೆ ತಯಾರಿ ಒಂದೆಡೆಯಾದರೆ ಸಿಸಿ ಕ್ಯಾಮರಾ, ಡ್ರೋನ್ ಬಳಕೆ, ಹೆಚ್ಚು ಸಿಬ್ಬಂದಿ ಬಳಕೆ ಮಾಡಿಕೊಂಡು ಸಸೂತ್ರವಾಗಿ ಅಧಿವೇಶನ ನಡೆಸಲು ಕುಂದಾನಗರಿ ಸಜ್ಜಾಗಿದೆ. ಈ ಬಾರಿ ರೈತರು, ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳು, ಮೀಸಲಾತಿಗಾಗಿ ಸಮುದಾಯಗಳು ಬೃಹತ್ ಪ್ರತಿಭಟನೆಗೆ ನಡೆಸಲು ಮುಂದಾಗಿದ್ದು ಹೀಗಾಗಿ ಹೆಚ್ಚಿನ ಅಲರ್ಟ್ ಮಾಡಿಕೊಳ್ಳಲಾಗಿದೆ.
ದ್ವೇಷ ಭಾಷಣದ ವಿರುದ್ಧ ವಿಧೇಯಕ ಮಂಡನೆಗೆ ಸರ್ಕಾರದ ಸಿದ್ಧತೆ
ಕರ್ನಾಟಕ ದ್ವೇಷ ಭಾಷಣ & ದ್ವೇಷ ಅಪರಾಧ ವಿಧೇಯಕ-2025 ಅನ್ನು ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆ ಬೆಂಗಳೂರಿನಲ್ಲಿ ನಡೆಯಲಿದ್ದು, ವಿಧೇಯಕದ ಮೇಲೆ ಚರ್ಚೆ ನಡೆಯಲಿದೆ. ನಂತರ ಸಂಪುಟ ಅನುಮೋದನೆ ಪಡೆದು, ಬೆಳಗಾವಿ ಅಧಿವೇಶನದಲ್ಲಿ ವಿಧೇಯಕ ಮಂಡಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಇದನ್ನೂ ಓದಿ: ಬೆಳಗಾವಿ ಅಧಿವೇಶನ: ಕಟ್ಟೆಚ್ಚರಕ್ಕೆ ಸೂಚಿಸಿದ ಕೇಂದ್ರ ಗುಪ್ತಚರ ಇಲಾಖೆ, ಪೊಲೀಸರು ಹೈ ಅಲರ್ಟ್
ಚಳಿಗಾಲದ ಅಧಿವೇಶನ ಸಂಬಂಧ ಪೂರ್ವಭಾವಿಯಾಗಿ ಸಚಿವರ ಜೊತೆ ಸಿಎಂ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಸಭೆ ನಡೆಸಲಿದ್ದಾರೆ.



