Belagavi Buffalo | 1,500 ಕೆಜಿ ತೂಗುವ ಬೆಳಗಾವಿಯ ಕೋಣ ‘ಕರ್ನಾಟಕ ಕಿಂಗ್’ ಬಿರುದಾಂಕಿತ! ಪಾಲನೆಗಾಗಿ ಪ್ರತಿದಿನ 1,200 ರೂ ಖರ್ಚು ಮಾಡುವ ರೈತ
Belagavi Buffalo | ಮೂರು ವರ್ಷದ ಈ ಕೋಣ ಮನೆಯಲ್ಲೇ ಹುಟ್ಟಿ ಬೆಳೆಯುತ್ತಿದೆ. ನಾಲ್ಕು ವರ್ಷದ ಹಿಂದೆ ಹರಿಯಾಣದಿಂದ ಮುರ್ರಾ ಎಂಬ ತಳಿ ಎಮ್ಮೆಯನ್ನ ಒಂದೂವರೆ ಲಕ್ಷ ರೂಪಾಯಿ ಕೊಟ್ಟು ತಂದಿರುತ್ತಾರೆ. ಎಮ್ಮೆ ತಂದ ಒಂದು ವರ್ಷಕ್ಕೆ ಈ ಗಜೇಂದ್ರ ಕೋಣ ಜನಿಸುತ್ತದೆ.
ಬೆಳಗಾವಿ: ಸಾಮಾನ್ಯವಾಗಿ ಅಸಾಮಾನ್ಯ ಕೋಣವೊಂದು ಹೆಚ್ಚೆಂದರೆ ಎರಡರಿಂದ ಎರಡೂವರೆ ಲಕ್ಷ ರೂಪಾಯಿ ಬೆಲೆಬಾಳುತ್ತದೆ. ಆದರೆ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ-ಐನಾಪುರ ಗ್ರಾಮದ ಒಂದು ಕೋಣ 61 ಲಕ್ಷ ರೂಪಾಯಿಗೆ ಬೆಲೆಬಾಳುತ್ತದೆ. ದಪ್ಪ ಕಾಲುಗಳು, ದೈತ್ಯಾಕಾರದ ದೇಹವನ್ನು ಹೊಂದಿರುವ ಈ ಕೋಣದ ಹೆಸರು ಗಜೇಂದ್ರ. ಅದು ಆಚೆ ಬಂದರೆ ಸಾಕು ಜನರೆಲ್ಲಾ ಕೂಗುವುದಕ್ಕೆ ಶುರು ಮಾಡುತ್ತಾರೆ. ಹುಟ್ಟುವಾಗಲೇ ಲಕ್ಷ ಬೇಡಿಕೆಯಿಂದ ಹುಟ್ಟಿದ್ದ ಗಜೇಂದ್ರ ಇದೀಗ ಕೋಟಿ ಬೆಲೆ ಬಾಳುವಂತಿದೆ. ಕರ್ನಾಟಕದ ಕಿಂಗ್ ಅಂತಾನೇ ಫೇಮಸ್ ಆಗಿರುವ ಈ ಗಜೇಂದ್ರನ ಖರ್ಚನ್ನು ನಿರ್ವಹಣೆ ಮಾಡಲು ತೀರಾ ಕಷ್ಟ. ಆದರೂ ಮನೆಯ ಮಗನಂತೆ ಸಾಕಿದ್ದಾರೆ ವಿಲಾಸ್ ನಾಯಿಕ ಎಂಬ ರೈತ.
ಮನೆಯಲ್ಲೇ ಸಾಕಿರುವ ಸಾಮಾನ್ಯ ತಳಿಯ ಕೋಣ ಗಜೇಂದ್ರ. ಮೂರು ವರ್ಷದ ಈ ಕೋಣ ಮನೆಯಲ್ಲೇ ಹುಟ್ಟಿ ಬೆಳೆಯುತ್ತಿದೆ. ನಾಲ್ಕು ವರ್ಷದ ಹಿಂದೆ ಹರಿಯಾಣದಿಂದ ಮುರ್ರಾ ಎಂಬ ತಳಿ ಎಮ್ಮೆಯನ್ನ ಒಂದೂವರೆ ಲಕ್ಷ ರೂಪಾಯಿ ಕೊಟ್ಟು ತಂದಿರುತ್ತಾರೆ. ಎಮ್ಮೆ ತಂದ ಒಂದು ವರ್ಷಕ್ಕೆ ಈ ಗಜೇಂದ್ರ ಕೋಣ ಜನಿಸುತ್ತದೆ. ಜನಿಸಿದ ವೇಳೆಯಲ್ಲಿ ಇದರ ಆಕಾರವನ್ನ ನೋಡಿದ ಕೆಲವರು ಒಂದು ಲಕ್ಷಕ್ಕೆ ಕೊಡಿ ಎಂದು ಡಿಮ್ಯಾಂಡ್ ಮಾಡುತ್ತಾರೆ. ಆದರೆ ಅದನ್ನ ಆಗ ಮಾರಾಟ ಮಾಡದೆ ಚೆನ್ನಾಗಿ ಮೇಯಿಸಿ ಮಗನಂತೆ ಈ ಮಟ್ಟಿಗೆ ಬೆಳೆಸಿದ್ದಾರೆ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ-ಐನಾಪುರ ಗ್ರಾಮದ ವಿಲಾಸ್ ನಾಯಿಕ್.
ಪ್ರತಿನಿತ್ಯ 1,200 ರೂಪಾಯಿ ಖರ್ಚು ಪ್ರತಿ ನಿತ್ಯ ಬೆಳಗ್ಗೆ, ಸಂಜೆ ಎರಡು ಹೊತ್ತು ಸೇರಿ ಸುಮಾರು 15 ಲೀಟರ್ ಹಾಲನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ಹಾಕಿ ಕುಡಿಸುತ್ತಾರೆ. ಇದಾದ ಬಳಿಕ ಐದು ಕೆ ಜಿ ಹಿಂಡಿ, ಐದು ಕೆ ಜಿ ಹಿಟ್ಟು ಗಜೇಂದ್ರನಿಗೆ ಅರ್ಪಿಸುತ್ತಾರೆ. ಜೊತೆಗೆ ಎಂದಿನಂತೆ ಜಾನುವಾರುಗಳಿಗೆ ನೀಡುವ ಮೇವನ್ನು ಹಾಕಿ ಮೇಯಿಸುತ್ತಾರೆ. ಈ ಕೋಣವನ್ನ ಸಾಕಲು ದಿನಕ್ಕೆ 1,200 ರೂಪಾಯಿ ವರೆಗೂ ಖರ್ಚಾಗುತ್ತಿದ್ದು, ಅದನ್ನ ಖರ್ಚು ಅಂದುಕೊಳ್ಳದೆ, ತನ್ನ ಮನೆಯ ಮಗನಂತೆ ಸಾಕುತ್ತಿದ್ದೇನೆ ಎಂದು ವಿಲಾಸ ನಾಯಿಕ್ ಹೇಳುತ್ತಾರೆ.
61 ಲಕ್ಷ ಡಿಮ್ಯಾಂಡ್ ದೈತ್ಯಾಕಾರದ ಗಜೇಂದ್ರ ಕೋಣದ ತೂಕ ಬರೋಬ್ಬರಿ ಒಂದೂವರೆ ಟನ್ ಅಂದರೆ 1,500 ಕೆಜಿ ಇದೆ. ಹೀಗಿದ್ದರು ಆರಾಮಾಗಿ ಓಡಾಡಿಕೊಂಡಿದೆ. ರೈತ ವಿಲಾಸ್ಗೆ ಜಮೀನು ಕೂಡ ಇಲ್ಲ. ಅಲ್ಪಸ್ವಲ್ಪ ಜಾಗವಿದ್ದು ಅದರಲ್ಲೇ ಈ ಕೋಣವನ್ನ ಸಾಕುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ನಡೆಯುವ ಕೃಷಿ ಮೇಳಗಳಿಗೆ ಪ್ರದರ್ಶನ ಮಾಡಲು ಇದನ್ನ ರೈತ ವಿಲಾಸ್ ಕರೆದುಕೊಂಡು ಹೋಗುತ್ತಿದ್ದು, ಫೆಬ್ರವರಿ 20ರಂದು ಮಹಾರಾಷ್ಟ್ರದ ತಾಸಗಾಂವದಲ್ಲಿ ನಡೆದ ಕೃಷಿ ಮೇಳದಲ್ಲಿ ಇವರು ಕೂಡ ಭಾಗವಹಿಸಿರುತ್ತಾರೆ. ಈ ವೇಳೆ ಮಹಾರಾಷ್ಟ್ರದ ಹಾಲು ಉದ್ಯಮಿ ಜಿತಳೆ ಎಂಬುವವರೂ ಇದಕ್ಕೆ 61 ಲಕ್ಷ ಕೊಡುತ್ತೀನಿ ಕೊಡಿ ಎಂದು ಕೇಳಿದ್ದರೂ ರೈತ ವಿಲಾಸ್ ನೀಡಿಲ್ಲ. ಈ ಕೋಣವನ್ನ ನೋಡಿದ ಅಲ್ಲಿನ ಕೃಷಿ ಇಲಾಖೆಯ ಅಧಿಕಾರಿಗಳು ಇದಕ್ಕೆ ‘ಕರ್ನಾಟಕ ಕಿಂಗ್’ ಅಂತಾ ಬಿರುದು ಕೊಟ್ಟು ಸರ್ಟಿಫಿಕೇಟ್ ನೀಡಿ, ರೈತ ಮತ್ತು ಕೋಣನ ಮೈದಡವಿ, ಮೆಚ್ಚುಗೆ ಸೂಚಿಸಿದ್ದಾರೆ.
ಕೆಲವೇ ದಿನಗಳಲ್ಲಿ ಇದು ಕೋಟಿ ಬೆಲೆ ಬಾಳುತ್ತೆ ಆದರೆ ಇದನ್ನ ಮಾರುವುದಿಲ್ಲ ಎಂದು ಹೇಳುವ ರೈತ ವಿಲಾಸ ನಾಯಿಕ್ ಕೋಣ ಸಾಕುವುದರ ಜೊತೆಗೆ ಉಪಜೀವನಕ್ಕೆ ಐವತ್ತು ಬೇರೆ ಬೇರೆ ತಳಿಗಳ ಎಮ್ಮೆಯನ್ನ ಸಾಕಿದ್ದು, ನಿತ್ಯವೂ 125 ಲೀಟರ್ ಹಾಲು ಉತ್ಪಾದಿಸುತ್ತಾರೆ. ಇನ್ನು, ಆರು ತಿಂಗಳಿಗೊಮ್ಮ ಒಂದು ಲಕ್ಷದಂತೆ ಎಮ್ಮೆಯ ಗೊಬ್ಬರ ಕೂಡ ಮಾರಾಟ ಮಾಡುತ್ತಾರೆ. ಜಮೀನು ಇಲ್ಲದಿದ್ದರೂ ಬೇರೆ ಕಡೆಗಳಿಂದ ಮೇವನ್ನ ಕೊಂಡು ಎಮ್ಮೆಗಳಿಗೆ ಹಾಕಿ ಸಾಕುತ್ತಿದ್ದಾರೆ.
ಇದನ್ನೂ ಓದಿ
ಹೃತಿಕ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ದೀಪಿಕಾ ಪಡುಕೋಣೆ: ಈ ಚಿತ್ರಕ್ಕೆ ನಿರ್ದೇಶಕರಾರು ಗೊತ್ತಾ?
ಜಿಂಕೆ ಮೇಲೆ ನಾಯಿ ದಾಳಿ: ಹೋರಾಟದಲ್ಲಿ ಸಾವಿಗೀಡಾದ ಸಾಧು ಪ್ರಾಣಿ ಅಂತ್ಯಸಂಸ್ಕಾರದ ವೇಳೆ ಕಣ್ಣೀರಿಟ್ಟ ಸ್ಥಳೀಯರು
Published On - 12:10 pm, Tue, 2 March 21