Karnataka Bypolls 2021: ಬೆಳಗಾವಿ ಲೋಕಸಭೆ, ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಉಪ-ಚುನಾವಣೆ; ಮತದಾನಕ್ಕೆ ಕ್ಷಣಗಣನೆ

Karnataka Bypolls 2021: ಬೆಳಗಾವಿ ಲೋಕಸಭೆ, ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಉಪ-ಚುನಾವಣೆ; ಮತದಾನಕ್ಕೆ ಕ್ಷಣಗಣನೆ
ಚುನಾವಣೆ (ಪ್ರಾತಿನಿಧಿಕ ಚಿತ್ರ)

ರಾಜ್ಯದ ಎರಡು ವಿಧಾನಸಭೆ ಮತ್ತು ಒಂದು ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಶನಿವಾರ (ಏಪ್ರಿಲ್ 17) ಮತದಾನ ನಡೆಯಲಿದೆ. ಮಸ್ಕಿ, ಬಸವಕಲ್ಯಾಣ ಮತ್ತು ಬೆಳಗಾವಿಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಗೆಲುವಿಗಾಗಿ ಜಿದ್ದಾಜಿದ್ದಿ ಹೋರಾಟ ಮಾಡುತ್ತಿವೆ.

Ghanashyam D M | ಡಿ.ಎಂ.ಘನಶ್ಯಾಮ

|

Apr 16, 2021 | 10:43 PM


ಬೆಂಗಳೂರು: ರಾಜ್ಯದ ಎರಡು ವಿಧಾನಸಭೆ ಮತ್ತು ಒಂದು ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಶನಿವಾರ (ಏಪ್ರಿಲ್ 17) ಮತದಾನ ನಡೆಯಲಿದೆ. ಮಸ್ಕಿ, ಬಸವಕಲ್ಯಾಣ ಮತ್ತು ಬೆಳಗಾವಿಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಗೆಲುವಿಗಾಗಿ ಜಿದ್ದಾಜಿದ್ದಿ ಹೋರಾಟ ಮಾಡುತ್ತಿವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಪಕ್ಷದ ಅಭ್ಯರ್ಥಿಗಳ ಪ್ರಚಾರ ನಡೆಸಿದ್ದರು. ಉಪಚುನಾವಣೆಗೆ ಬೆಳಿಗ್ಗೆ 7 ರಿಂದ ಸಂಜೆ 7 ಗಂಟೆಯವರೆಗೆ ಮತದಾನ ನಡೆಯಲಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ದಿವಂಗತ ಸಚಿವ ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಸುರೇಶ್ ಅಂಗಡಿ ಕಣದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷವು ಸತೀಶ್ ಜಾರಕಿಹೊಳಿ ಅವರಿಗೆ ಟಿಕೆಟ್ ನೀಡಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 2566 ಮತಗಟ್ಟೆ ಸ್ಥಾಪಿಸಲಾಗಿದೆ. ಮತದಾನ ನಿರ್ವಹಣೆಗಾಗಿ 11,290 ಸಿಬ್ಬಂದಿ ನಿಯೋಜಿಸಲಾಗಿದೆ. ಕ್ಷೇತ್ರದಲ್ಲಿ 80 ವರ್ಷಕ್ಕಿಂತ ಮೇಲ್ಪಟ್ಟ 41,535 ಮತದಾರರಿದ್ದಾರೆ. 12,290 7,925 ಸೇವಾ ಮತದಾರರಿಗೆ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 18,07,250. ಈ ಪೈಕಿ 9,08,103 ಪುರುಷರು ಮತ್ತು 8,99,091 ಮಹಿಳೆಯರು ಇದ್ದಾರೆ.

ಮಸ್ಕಿಯಲ್ಲಿ ಬಿಜೆಪಿ-ಕಾಂಗ್ರೆಸ್ ಹಣಾಹಣಿ
2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಟಿಕೆಟ್ ಮೇಲೆ ಜಯಗಳಿಸಿದ್ದ ಪ್ರತಾಪ್​ಗೌಡ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೂ ಶನಿವಾರವೇ ಮತದಾನ ನಡೆಯಲಿದೆ. ಈ ಬಾರಿ ಬಿಜೆಪಿಯಿಂದ ಪ್ರತಾಪಗೌಡ ಪಾಟೀಲ, ಕಾಂಗ್ರೆಸ್​ನಿಂದ ಬಸನಗೌಡ ತುರುವಿಹಾಳ ನಡುವೆ ನೇರ ಹಣಾಹಣಿ ಇದೆ. ಕಣದಲ್ಲಿ 8 ಅಭ್ಯರ್ಥಿಗಳಿದ್ದಾರೆ.

ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ಧತ ಮಾಡಿಕೊಂಡಿದೆ. ಒಟ್ಟು 305 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಮೊದಲು 231 ಮತಗಟ್ಟೆಗಳಿದ್ದವು. ಕೊವಿಡ್ ಹಿನ್ನಲೆಯಲ್ಲಿ 74 ಹೆಚ್ಚುವರಿ ಮತಗಟ್ಟೆಗಳನ್ನು ಈ ಬಾರಿ ಸ್ಥಾಪಿಸಲಾಗಿದೆ. ಅದರಲ್ಲಿ 62 ಸೂಕ್ಷ್ಮ, 7 ಅತಿ ಸೂಕ್ಷ್ಮ ಮತಗಟ್ಟೆಗಳು. ಒಟ್ಟು 2309 ಮತಗಟ್ಟೆ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 2,06,429. ಈ ಪೈಕಿ 1,01,340 ಪುರುಷ ಮತದಾರರು. ಕ್ಷೇತ್ರದಲ್ಲಿ ಒಟ್ಟು 2 ಸಖಿ ಮತಗಟ್ಟೆಗಳು ಹಾಗೂ 153 ವೆಬ್ ಕಾಸ್ಟಿಂಗ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಭದ್ರತೆಗಾಗಿ ಒಟ್ಟು 847 ಪೊಲೀಸರನ್ನು ನಿಯೋಜಿಸಲಾಗಿದೆ. ಮೂರು ಸಿಆರ್​ಪಿಎಫ್, ಕೆಎಸ್ಆರ್​ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಕೊರೊನಾ ಸೋಂಕಿತರಿಗಾಗಿ ಮತಗಟ್ಟೆಗಳಲ್ಲಿ ಸಂಜೆ 6 ರಿಂದ 7 ರವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ.

ಯಾರಿಗೆ ಒಲಿಯಲಿದೆ ಬಸವಕಲ್ಯಾಣ
ಬೀದರ್ ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರದಲ್ಲಿಯೂ ಶನಿವಾರ ಮತದಾನ ನಡೆಯಲಿದೆ. ಬಿಜೆಪಿಯಿಂದ ಶರಣು ಸಲಗರ, ಜೆಡಿಎಸ್‌ನ ಸಯ್ಯದ್ ಯಸ್ರಬ್ ಅಲಿ ಖಾದ್ರಿ ಮತ್ತು ಕಾಂಗ್ರೆಸ್​ನಿಂದ ಮಾಲಾ ನಾರಾಯಣರಾವ್ ಸ್ಪರ್ಧಿಸಿದ್ದಾರೆ. ಶಾಸಕ ನಾರಾಯಣರಾವ್ ನಿಧನರಾದ ಕಾರಣ ಬಸವಕಲ್ಯಾಣ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದೆ. ಒಟ್ಟು 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಬಸವಕಲ್ಯಾಣ ಕ್ಷೇತ್ರದಲ್ಲಿ ಈ ಬಾರಿ ಕೊರೊನಾ ಸೋಂಕಿನ ಕಾರಣದಿಂದಾಗಿ ಹೆಚ್ಚುವರಿಯಾಗಿ 62 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 326 ಮತಗಟ್ಟೆ ಪೈಕಿ 95 ಸೂಕ್ಷ್ಮ, 23 ಸಾಮಾನ್ಯ ಮತಗಟ್ಟೆಗಳಾಗಿವೆ. ಬಸವಕಲ್ಯಾಣ ಕ್ಷೇತ್ರದಲ್ಲಿ ಒಟ್ಟು 2,39,782 ಮತದಾರರಿದ್ದಾರೆ. ಈ ಪೈಕಿ 1,14,794 ಮಹಿಳಾ ಮತದಾರರು ಮತ್ತು 1,24,984 ಮಂದಿ ಪುರುಷರು. ಚುನಾವಣಾ ಕರ್ತವ್ಯದಲ್ಲಿ ಒಟ್ಟು 1,568 ಸಿಬ್ಬಂದಿ ಭಾಗಿಯಾಗಿದ್ದಾರೆ. ಇದೇ ಮೊದಲ ಬಾರಿಗೆ 3,547 ಯುವ ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಭದ್ರತೆಗಾಗಿ ಒಟ್ಟು 1000 ಪೊಲೀಸರನ್ನು ನಿಯೋಜಿಸಲಾಗಿದೆ. 163 ಮತಗಟ್ಟೆಗಳಿಗೆ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

(Belagavi Loksabha Maski Basavakalyan Assemby Byelection 2021 BJP JDS congress candidates)

ಇದನ್ನೂ ಓದಿ: Mangli: ಮಸ್ಕಿಯಲ್ಲಿ ಮತಬೇಟೆಗಿಳಿದ ಮಂಗ್ಲಿ; ಬಿಜೆಪಿ ಅಭ್ಯರ್ಥಿ ಪರ ಅಬ್ಬರದ ಪ್ರಚಾರ

ಇದನ್ನೂ ಓದಿ: ಜನರ ಜೀವ, ಜೀವನಕ್ಕಿಂತ ಇವರಿಗೆ ಉಪಚುನಾವಣೆಯೇ ಮುಖ್ಯ: ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಎಚ್​.ಡಿ.ಕುಮಾರಸ್ವಾಮಿ


Follow us on

Most Read Stories

Click on your DTH Provider to Add TV9 Kannada