ಜನರ ಜೀವ, ಜೀವನಕ್ಕಿಂತ ಇವರಿಗೆ ಉಪಚುನಾವಣೆಯೇ ಮುಖ್ಯ: ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಎಚ್.ಡಿ.ಕುಮಾರಸ್ವಾಮಿ
ಕೊರೊನಾ ವಿಚಾರದಲ್ಲಿ ಸರ್ಕಾರ ಹುಡುಗಾಟಿಕೆ ಆಡುತ್ತಿದೆ. ಈಗ ರಾಜ್ಯದಲ್ಲಿ ಕಾಣಿಸಿಕೊಂಡಿರುವ ಕೊರೊನಾ 2ನೇ ಅಲೆ ಏಕಾಏಕಿ ಬಂದಿರುವುದಲ್ಲ. ಸರ್ಕಾರ ಏನೂ ಸಿದ್ಧತೆ ಮಾಡಿಕೊಂಡಿಲ್ಲ.
ಬೀದರ್: ಕೊರೊನಾ ಬಂದಾಗ ಕೊಡುವ ಇಂಜೆಕ್ಷನ್ಗಳ ಲಭ್ಯತೆಯಲ್ಲಿ ಸಮಸ್ಯೆಯಿದೆ. ಕೊರೊನಾ ನಿರ್ವಹಣೆ ವಿಚಾರದಲ್ಲಿ ಸರ್ಕಾರ ಹುಡುಗಾಟವಾಡುತ್ತಿದೆ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ದೂರಿದರು. ಜಿಲ್ಲೆಯ ಬಸವಕಲ್ಯಾಣದಲ್ಲಿ ಬುಧವಾರ (ಏಪ್ರಿಲ್ 14) ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ , ‘ಕೊರೊನಾ ತಡೆಗೆ ಲಾಕ್‌ಡೌನ್ ಮಾಡುವುದು ಪರಿಹಾರವಲ್ಲ. ಈ ಹಿಂದೆ ತಜ್ಞರು ವರದಿ ಕೊಟ್ಟಾಗಲೇ ಸರ್ಕಾರ ಕ್ರಮ ತೆಗೆದುಕೊಳ್ಳಬೇಕಿತ್ತು. ಆದರೆ ಮೊದಲ ಅಲೆಯ ಅನಾಹುತಗಳಿಂದಲೂ ಸರ್ಕಾರ ಪಾಠ ಕಲಿತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಸರ್ಕಾರದ ಹೊಣೆಗೇಡಿತನ, ಮುಟ್ಠಾಳತನದಿಂದ ಈ ಪರಿಸ್ಥಿತಿ ಬಂದಿದೆ. ನೈಟ್ ಕರ್ಫ್ಯೂ ಜಾರಿಯಿಂದ ಯಾವುದೇ ಪ್ರಯೋಜನವಿಲ್ಲ. ಶೇ 90ರಷ್ಟು ಜನರು ಮನೆಗೆ ಹೋಗಿರುತ್ತಾರೆ. ಬೆಳಗ್ಗೆ ವೇಳೆ ಜನರನ್ನು ಓಡಾಡಲು ಬಿಟ್ಟಿದ್ದಾರೆ. ಬಿಜೆಪಿ ಸರ್ಕಾರಕ್ಕೆ ಜನರ ಜೀವದ ಬಗ್ಗೆ ಕಾಳಜಿ ಇದ್ದಿದ್ದರೆ ತಜ್ಞರು ಮಾಹಿತಿ ಕೊಟ್ಟಾಗಲೇ ಕ್ರಮ ಕೈಗೊಳ್ಳುತ್ತಿತ್ತು. ಈಗ ಯಾವ ಪುರುಷಾರ್ಥಕ್ಕೆ ಸರ್ವಪಕ್ಷ ಸಭೆ ಕರೆಯುತ್ತಿದ್ದಾರೆ’ ಎಂದು ಪ್ರಶ್ನಿಸಿದರು.
‘ಊರೆಲ್ಲಾ ಕೊರೊನಾ ಹರಡಿದ ಮೇಲೆ ಈಗ ಏನು ಚರ್ಚೆ ಮಾಡುವುದು? ಕೊರೊನಾ ವಿಚಾರದಲ್ಲಿ ಸರ್ಕಾರ ಹುಡುಗಾಟಿಕೆ ಆಡುತ್ತಿದೆ. ರಾಜ್ಯದಲ್ಲಿ ಹಲವು ಅನಾಹುತಗಳು ಸಂಭವಿಸಿದಾಗಲೂ ನಾನು ಮಾತನಾಡಿರಲಿಲ್ಲ. ಈಗ ರಾಜ್ಯದಲ್ಲಿ ಕಾಣಿಸಿಕೊಂಡಿರುವ ಕೊರೊನಾ 2ನೇ ಅಲೆ ಏಕಾಏಕಿ ಬಂದಿರುವುದಲ್ಲ. ಕೊರೊನಾ ಸೋಂಕಿನ ಬಗ್ಗೆ ತಜ್ಞರು ಕೂಡ ವರದಿ ನೀಡಿದ್ದಾರೆ. ಮೊದಲು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಸಿಗಬೇಕು. ಅದಕ್ಕೆ ಯಾವ ಸಿದ್ಧತೆ ಮಾಡಿಕೊಂಡಿದ್ದೀರಿ’ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಸರಿಯಾಗಿ ಕೊರೊನಾ ಲಸಿಕೆಯೇ ಸಿಗುತ್ತಿಲ್ಲ. ಮುಖ್ಯಮಂತ್ರಿ ಮತ್ತು ಸಚಿವರು ಉಪಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ. ಇವರಿಗೆ ಜನರ ಜೀವಕ್ಕಿಂತ ಬೈಎಲೆಕ್ಷನ್ ಮುಖ್ಯವಾಗಿದೆ. ಕರ್ನಾಟಕದಲ್ಲಿ ಇಂತಹ ಕೆಟ್ಟ ಸರ್ಕಾರವನ್ನ ನೋಡಿರಲಿಲ್ಲ. ಇಂಥ ಸರ್ಕಾರ ಈ ಹಿಂದೆಯೂ ಇರಲಿಲ್ಲ, ಮುಂದೆಯೂ ಬರುವುದಿಲ್ಲ. ಕೊರೊನಾದಿಂದ ಜನರನ್ನು ಆ ದೇವರೇ ಕಾಪಾಡಬೇಕು ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
(Karnataka Government Least Bothered about People life alleges HD Kumaraswamy)
ಇದನ್ನೂ ಓದಿ: Covid India Update: ಭಾರತದಲ್ಲಿ ಒಂದೇ ದಿನ 1027 ಮಂದಿ ಸಾವು; 1.84 ಲಕ್ಷ ಹೊಸ ಕೊವಿಡ್ ಪ್ರಕರಣ ಪತ್ತೆ