Bengaluru Rain: ಬಿಸಿಲಿನಿಂದ ಬೆಂದಿದ್ದ ಸಿಲಿಕಾನ್ ಸಿಟಿಗೆ ತಂಪೆರೆದ ವರುಣ; ರಾಜಧಾನಿಯ ಹಲವೆಡೆ ಜಿಟಿಜಿಟಿ ಮಳೆ
Bangalore Rain Updates: ರಾಜಧಾನಿ ಬೆಂಗಳೂರಿನಲ್ಲಿ ಒಂದೇ ಅಲ್ಲದೇ, ಮಡಿಕೇರಿಯಲ್ಲಿಯೂ ಧಾರಾಕಾರ ಮಳೆ ಸುರಿಯುತ್ತಿದೆ. ಕೊಡಗಿನ ಅತ್ಯಂತ ಪ್ರಮುಖ ಪ್ರವಾಸಿ ಕೇಂದ್ರ ರಾಜಾಸೀಟ್ನಲ್ಲಿ ದೈತ್ಯಾಕಾರದ ಮರವೊಂದು ಉರುಳಿಬಿದ್ದಿದೆ.
ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಜಿಟಿಜಿಟಿ ಮಳೆಯಾಗಿದೆ. ವಿಪರೀತ ಸೆಕೆಯಿಂದ ಬಳಲುತ್ತಿದ್ದ ಸಿಲಿಕಾನ್ ಸಿಟಿ ಮಂದಿಗೆ ಇದೀಗ ಖುಷಿಯಾಗಿದೆ. ವಾತಾವರಣ ತಂಪಾಗಿದ್ದು, ನಗರದ ಹಲವೆಡೆ ತಣ್ಣನೆ ಗಾಳಿ ಬೀಸುತ್ತಿದೆ. ನಗರದ ಮೆಜೆಸ್ಟಿಕ್, ಗಾಂಧಿನಗರ, ಮೈಸೂರು ಬ್ಯಾಂಕ್ ಸರ್ಕಲ್, ಶಿವನಾಂದ ವೃತ್ತ, ಶೇಷಾದ್ರಿಪುರಂ ಸೇರಿದಂತೆ ಹಲವೆಡೆ ಮಳೆಯಾಗಿದೆ.
ಬೆಂಗಳೂರಿನ ಕೆಲವು ಕಡೆ ಮಳೆಯಾದರೆ, ಇನ್ನು ಕೆಲವು ಕಡೆ ಮೋಡ ಕವಿದ ವಾತಾವರಣವಿದೆ. ನಾಳೆ ಸಹ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್.ಪಾಟೀಲ್ ಮಾಹಿತಿ ನೀಡಿದ್ದಾರೆ. ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನದಲ್ಲಿ ಮುಂದಿನ 3 ದಿನ ಭಾರಿ ಮಳೆ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ರಾಜಧಾನಿ ಬೆಂಗಳೂರಿನಲ್ಲಿ ಒಂದೇ ಅಲ್ಲದೇ, ಮಡಿಕೇರಿಯಲ್ಲಿಯೂ ಧಾರಾಕಾರ ಮಳೆ ಸುರಿಯುತ್ತಿದೆ. ಕೊಡಗಿನ ಅತ್ಯಂತ ಪ್ರಮುಖ ಪ್ರವಾಸಿ ಕೇಂದ್ರ ರಾಜಾಸೀಟ್ನಲ್ಲಿ ದೈತ್ಯಾಕಾರದ ಮರವೊಂದು ಉರುಳಿಬಿದ್ದಿದೆ. ರಾಜಾಸೀಟ್ ಬಳಿಯೇ ಮುಖ್ಯದ್ವಾರದ ಬಳಿಯೇ ಬೃಹತ್ ಮರ ಉರುಳಿಬಿದ್ದಿದೆ. ಇದರಿಂದ ರಾಜಾಸೀಟಿನ ಅಲಂಕಾರಿಕ ತಡೆಬೇಲಿಗೆ ಹಾನಿ ಉಂಟಾಗಿದೆ. ತೋಟಗಾರಿಕಾ ಇಲಾಖೆಯ ಸಿಬ್ಬಂದಿಗಳು ಮರ ತೆರವುಗೊಳಿಸುತ್ತಿದ್ದಾರೆ.
ಹಾಸನಕ್ಕೆ ತಂಪೆರೆದ ವರುಣ ಹಾಸನದಲ್ಲಿ ಬಹಳ ದಿನಗಳ ಬಳಿಕ ಜಿಲ್ಲೆಯಲ್ಲಿ ಇಂದು ಭರ್ಜರಿ ಮಳೆಯಾಗುತ್ತಿದೆ. ಕಳೆದ ಅರ್ಧ ಗಂಟೆಯಿಂದ ಧಾರಾಕಾರ ಮಳೆಸುರಿಯುತ್ತಿದೆ.
ಕಾಫಿನಾಡಿನಲ್ಲಿ ವರುಣನ ಅಬ್ಬರ ಚಿಕ್ಕಮಗಳೂರು ಜಿಲ್ಲೆಯಲ್ಲೂ ಇಂದು ವರುಣನ ಅಬ್ಬರ ಜೋರಾಗಿದೆ. ಚಿಕ್ಕಮಗಳೂರು, ಎನ್ಆರ್ಪುರ, ಮೂಡಿಗೆರೆ, ತರೀಕೆರೆ, ಕೊಪ್ಪ ತಾಲೂಕಿನಲ್ಲಿ ಮಧ್ಯಾಹ್ನದ ನಂತರ ಧಾರಾಕಾರ ಮಳೆ ಸುರಿಯುತ್ತಿದೆ. ಕಳೆದೊಂದು ಗಂಟೆಯಿಂದ ಮಳೆ ಸುರಿಯುತ್ತಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜಿಲ್ಲೆಯಲ್ಲಿ ಇದೀಗ ತಂಪೆರೆದಂತಾಗಿದೆ.
ನೆಲಕ್ಕುರುಳಿದ ಮರ ಕೊಡಗು ಜಿಲ್ಲೆಯಾದ್ಯಂತ ಭಾರಿ ಮಳೆಯಾಗಿದೆ. ಮಡಿಕೇರಿ, ಮೂರ್ನಾಡು, ಬೇತ್ರಿ, ನಾಪೋಕ್ಲು, ಕಕ್ಕಬ್ಬೆ, ಮಕ್ಕಂದೂರು, ಮರಗೋಡು ವ್ಯಾಪ್ತಿಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದೆ. ಏಕಾಏಕಿ ಮಳೆಯಿಂದಾಗಿ ವಾಹನ ಸವಾರರು, ಪಾದಚಾರಿಗಳ ಪರದಾಟ ಪಡುತ್ತಿದ್ದಾರೆ. ಧಾರಾಕಾರ ಮಳೆ ಹಿನ್ನೆಲೆ ಪ್ರವಾಸಿ ಕೇಂದ್ರ ರಾಜಾಸೀಟಿನಲ್ಲಿ ಬೃಹತ್ ಮರ ನೆಲಕ್ಕುರುಳಿದೆ.
ಇದನ್ನೂ ಓದಿ: Karnataka Weather: ಮುಂದಿನ ನಾಲ್ಕೈದು ದಿನಗಳಲ್ಲಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ
ತೆಲಂಗಾಣದ ಹಲವೆಡೆ ಅಕಾಲಿಕ ಮಳೆ, ಬೆಳೆ ನಾಶ
(Bengaluru Rain updates light to moderate rain in many parts of Bangalore )
Published On - 3:35 pm, Wed, 14 April 21