ಬೆಳಗಾವಿ: ತಗಡಿನ ಪತ್ರಾಸ್ ತೆರವಿಗೆ ಹಿಂದೂಪರ ಸಂಘಟನೆಗಳ ವಿರೋಧ; ಭವ್ಯ ಮಂದಿರ ನಿರ್ಮಾಣದ ಭರವಸೆ ನೀಡಿದ ಅಧಿಕಾರಿಗಳು

ಬೆಳಗಾವಿಯಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿ ಒತ್ತುವರಿ ತೆರವು ಕಾರ್ಯಾಚರಣೆಗೆ ಅಖಾಡಕ್ಕಿಳಿದಾಗ ಸ್ಥಳದಲ್ಲಿ ಗೊಂದಲಗಳು ಮತ್ತು ಗದ್ದಲಗಳು ಏರ್ಪಟ್ಟವು. ಹಿಂದೂ ಸಂಘಟನೆಗಳ ವಿರೋಧದ ನಡುವೆ ಅಧಿಕಾರಿಗಳು ಗಣೇಶ ದೇವಸ್ಥಾನದ ತಗಡಿನ ಪತ್ರಾಸ್ ತೆರವುಗೊಳಿಸಿದರು.

ಬೆಳಗಾವಿ: ತಗಡಿನ ಪತ್ರಾಸ್ ತೆರವಿಗೆ ಹಿಂದೂಪರ ಸಂಘಟನೆಗಳ ವಿರೋಧ; ಭವ್ಯ ಮಂದಿರ ನಿರ್ಮಾಣದ ಭರವಸೆ ನೀಡಿದ ಅಧಿಕಾರಿಗಳು
ಬೆಳಗಾವಿಯಲ್ಲಿ ಒತ್ತುವರಿ ತೆರವು
Follow us
TV9 Web
| Updated By: Rakesh Nayak Manchi

Updated on:Oct 20, 2022 | 11:37 AM

ಬೆಳಗಾವಿ: ಬಸವೇಶ್ವರ ವೃತ್ತದಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿ ಒತ್ತುವರಿ ತೆರವು ಕಾರ್ಯಾಚರಣೆಗೆ ಅಖಾಡಕ್ಕಿಳಿದಾಗ ಒತ್ತುವರಿಯಾದ ಜಾಗದಲ್ಲಿ ಅಧಿಕಾರಿಗಳು ಸವಾಲುಗಳನ್ನು ಎದುರಿಸಿದರು. ಕುಟುಂಬಸ್ಥರ ವಿರೋಧದ ನಡುವೆ ಮುಸ್ಲಿಂ ಸಮುದಾಯದ ಮನೆ ತೆರವು ಮಾಡಿದ್ದ ಸಿಬ್ಬಂದಿ ಸಂಜೆಯಾಗುತ್ತಿದ್ದಂತೆ ದೇವಸ್ಥಾನ ಎದುರಿನ ತಗಡಿನ ಪತ್ರಾಸ್ ತೆರವುಗೊಳಿಸಿದರು. ಈ ವೇಳೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಜಮಾವಣೆಗೊಂಡರು. ಸ್ಥಳಕ್ಕೆ ಆಗಮಿಸಿದ ಶ್ರೀರಾಮಸೇನೆ ಹಿಂದೂಸ್ತಾನ್ ಸಂಘಟ‌ನೆ ಅಧ್ಯಕ್ಷ ರಮಾಕಾಂತ ಕೊಂಡುಸ್ಕರ್ ಯಾವುದೇ ಕಾರಣಕ್ಕೂ ದೇವಸ್ಥಾನ ಎದುರು ಇರುವ ಶೆಡ್ ತೆರವಿಗೆ ಅವಕಾಶ ನೀಡಲ್ಲ ಎಂದು ಪಟ್ಟು ಹಿಡಿದ ಪ್ರಸಂಗ ನಡೆಯಿತು.

ಈಗಾಗಲೇ ಒತ್ತುವರಿಯಾಗಿರುವ ಮನೆಗಳನ್ನ ತೆರವು ಮಾಡಿದ್ದೇವೆ. ದೇವಸ್ಥಾನ ಎದುರು ಇರುವ ಶೆಡ್ ಮಾತ್ರ ತೆರವು ಮಾಡುತ್ತೇವೆ, ಇದಕ್ಕೆ ಅವಕಾಶ ಕೊಡಿ ಅಂತಾ ಮಹಾನಗರ ಪಾಲಿಕೆ ಅಧಿಕಾರಿಗಳು, ಪೊಲೀಸರು ಮನವಿ ಮಾಡಿಕೊಂಡರು. ಈ ವೇಳೆ ಸ್ಥಳಕ್ಕೆ ಬಂದಿದ್ದ ಪಾಲಿಕೆ ಸದಸ್ಯ ಗಿರೀಶ್ ಧೋಂಗಡಿ ದೇವಸ್ಥಾನ ಆಡಳಿತ ಮಂಡಳಿ ಜೊತೆ ಮಾತನಾಡಿದರು. ಅಷ್ಟೇ ಅಲ್ಲದೇ ಬೆಳಗಾವಿಯ ದಕ್ಷಿಣ ಬಿಜೆಪಿ ಶಾಸಕ ಅಭಯ್ ಪಾಟೀಲ್ ಜೊತೆ ಮಾತುಕತೆ ನಡೆಸಿ ಒತ್ತುವರಿಯಾದ ಸ್ಥಳ ತೆರವು ಮಾಡಿ ಮುಂದೆ ದೇವಸ್ಥಾನ ಅಭಿವೃದ್ಧಿ ಮಾಡೋದಾಗಿ ಭರವಸೆ ನೀಡಿದರು. ಬಳಿಕ ದೇವಸ್ಥಾನ ಎದುರು ನಿರ್ಮಿಸಿದ್ದ ಶೆಡ್ ಅನ್ನು ನಾವೇ ತೆರವು ಮಾಡುತ್ತೇವೆ ಎಂದು ಹೇಳಿದ ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು ಶೆಡ್ ತೆರವಿಗೆ ಮುಂದಾದರು.

ಇದೇ ವೇಳೆ ಮಾತನಾಡಿದ ಶ್ರೀರಾಮಸೇನೆ ಹಿಂದೂಸ್ತಾನ್ ಸಂಘಟನೆ ಅಧ್ಯಕ್ಷ ರಮಾಕಾಂತ ಕೊಂಡುಸ್ಕರ್, ನಗರದಲ್ಲಿ ಮಹಾನಗರ ಪಾಲಿಕೆ ಜಾಗ ಒತ್ತುವರಿ ಮಾಡಿ ವಾಣಿಜ್ಯ‌ ಕಟ್ಟಡ ಮನೆ ನಿರ್ಮಿಸಿದ್ದಾರೆ‌. ಮೊದಲು ಅವುಗಳನ್ನು ತೆರವು ಮಾಡಿ ಅಂತಾ ಆಗ್ರಹಿಸಿದರು. ಇದೇ ವೇಳೆ ಮಾತನಾಡಿದ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ ಗಿರೀಶ್ ಧೋಂಗಡಿ, ಬೆಳಗ್ಗೆಯಿಂದ ಕೆಲ ಕಾಲ ಗೊಂದಲ ವಾತಾವರಣ ನಿರ್ಮಾಣ ಆಗಿತ್ತು. ಸದ್ಯ ಶಾಸಕರು ದೇವಸ್ಥಾನ ಆಡಳಿತ ಮಂಡಳಿ ಜೊತೆ ಮಾತನಾಡಿದ್ದಾರೆ‌‌. ದೇವಸ್ಥಾನ ಎದುರು ಇರುವ ಶೆಡ್ ತೆರವು ಮಾಡಿ ಮುಂಬರುವ ದಿನಗಳಲ್ಲಿ ಭವ್ಯ ಮಂದಿರ ಕಟ್ಟಿ ಅಭಿವೃದ್ಧಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದು ಅದಕ್ಕೆ ದೇವಸ್ಥಾನ ಆಡಳಿತ ಮಂಡಳಿ ಸಮ್ಮತಿ ಸೂಚಿಸಿದ್ದಾಗಿ ತಿಳಿಸಿದರು.

ಒಟ್ಟಾರೆ ತೀವ್ರ ಗೊಂದಲ ಮಧ್ಯೆ ಒತ್ತುವರಿ ತೆರವು ಕಾರ್ಯ ಮುಗಿದಿದ್ದು, ಒತ್ತುವರಿ ತೆರವು ಮಾಡಿದ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಮುಸ್ಲಿಂ ಸಮುದಾಯದ ಕುಟುಂಬಗಳು ಪಟ್ಟು ಹಿಡಿದಿವೆ. ಇತ್ತ ದೇವಸ್ಥಾನ ಆಡಳಿತ ಮಂಡಳಿಯವರು ಸದ್ಯಕ್ಕೆ ಶೆಡ್ ತೆರವು ಮಾಡಿದ್ದು ಮುಂಬರುವ ದಿನಗಳಲ್ಲಿ ದೇವಸ್ಥಾನ ಅಭಿವೃದ್ಧಿ ನಿರೀಕ್ಷೆಯಲ್ಲಿ ಆಡಳಿತ ಮಂಡಳಿ ಇದೆ‌. ಆದರೆ ಬೆಳಗಾವಿ ನಗರದಲ್ಲಿ ಬರೀ ಒಂದೇ ಪ್ರದೇಶದಲ್ಲಿ ಈ ರೀತಿ ಒತ್ತುವರಿಯಾಗಿಲ್ಲ. ಇನ್ನೂ ಅನೇಕ ಕಡೆಗಳಲ್ಲಿ ಒತ್ತುವರಿ ಮಾಡಿಕೊಂಡಿದ್ದು ಅದನ್ನ ತೆರವು ಮಾಡಿ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟು ಪಾಲಿಕೆ ಆಸ್ತಿ ಮರಳಿ ಪಡೆಯುವ ಕೆಲಸ ಮಾಡಲಿ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ವರದಿ: ಸಹದೇವ ಮಾನೆ, ಟಿವಿ9 ಬೆಳಗಾವಿ

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:36 am, Thu, 20 October 22