ಬೆಳಗಾವಿ: ರಾಜ್ಯ ಸಚಿವ ಸಂಪುಟ (Cabinet) ಪುನಾರಚನೆ ವಿಚಾರಕ್ಕೆ ಸಂಬಂಧಿಸಿ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಆಹಾರ ಸಚಿವ ಉಮೇಶ್ ಕತ್ತಿ (Umesh Katti) ನೇತೃತ್ವದಲ್ಲಿ ನಿನ್ನೆ (ಜ.22) ಗೌಪ್ಯ ಸಭೆ ನಡೆದಿದೆ. ಜಾರಕಿಹೊಳಿ ಸಹೋದರರನ್ನ ಹೊರಗಿಟ್ಟು ಉಮೇಶ್ ಕತ್ತಿ ಜಿಲ್ಲೆಯ ಬಿಜೆಪಿ ನಾಯಕರೊಂದಿಗೆ ಸಭೆ ನಡೆಸಿದ್ದಾರೆ. ಉಮೇಶ್ ಕತ್ತಿ ನಿವಾಸದಲ್ಲಿ ಸಭೆ ನಡೆದಿದ್ದು, ಬೆಳಗಾವಿ ಪಾಲಿಕೆ ಮೇಯರ್, ಉಪ ಮೇಯರ್ ಆಯ್ಕೆ ವಿಚಾರದ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.
ಅಲ್ಲದೆ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆ ನಡೆಸಲಾಗಿದ್ದು, ಲಕ್ಷ್ಮಣ ಸವದಿ, ಅಣ್ಣಾ ಸಾಹೇಬ್ ಜೊಲ್ಲೆ, ಈರಣ್ಣ ಕಡಾಡಿ, ಅಭಯ್ ಪಾಟೀಲ್, ಅನಿಲ್ ಬೆನಕೆ, ಮಹಾಂತೇಶ ದೊಡ್ಡಗೌಡರ, ಪಿ.ರಾಜೀವ್, ಮಹಾಂತೇಶ ಕವಟಗಿಮಠ ಸಭೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ, 2 ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ವರಿಷ್ಠರ ಮುಂದೆ ಬೇಡಿಕೆ ಇಡುವ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿರುವ ಬಗ್ಗೆ ಮಾಹಿತಿ ಇದೆ.
ಬಿಜೆಪಿ ನಾಯಕರ ಗೌಪ್ಯ ಸಭೆ ವಿಚಾರಕ್ಕೆ ಟಿವಿ9ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಅಭಯ್ ಪಾಟೀಲ್, ನಿನ್ನೆ ನಡೆದಿರುವುದು ಗೌಪ್ಯ ಸಭೆಯಲ್ಲ. ಬರುವ ಬಜೆಟ್ ಅಧಿವೇಶನದಲ್ಲಿ ಜಿಲ್ಲೆಗೆ ಅನುಕೂಲ ಆಗುವ ಯೋಜನೆ ಕುರಿತು ಚರ್ಚೆ ಮಾಡಿದ್ದೇವೆ. ಆ ಯೋಜನೆ ಸರ್ಕಾರದಿಂದ ಅಪ್ರೂವಲ್ ಮಾಡುವ ಕುರಿತು ಚರ್ಚಿಸಿದ್ದೇವೆ. ನಾನು ನಿನ್ನೆಯ ಸಭೆಗೆ ತಡವಾಗಿ ಹಾಜರಾಗಿದ್ದು ಯಾರೆಲ್ಲಾ ಭಾಗಿಯಾಗಿದ್ದಾರೆ ಗೊತ್ತಿಲ್ಲ. ಯಾರೂ ದೂರ ಯಾರೂ ಸಮೀಪ ಅನ್ನುವ ಪ್ರಶ್ನೆ ಇಲ್ಲ. ಬಜೆಟ್ಗೆ ಸಂಬಂಧಿಸಿದ ಪ್ರಶ್ನೆಗಳು ಇರುವವರೂ ಸಭೆಗೆ ಬಂದಿರಬಹುದು. ನಾನು ಸಭೆಗೆ ಹೋದ ಬಳಿಕ ಮಂತ್ರಿ ಮಂಡಲದ ವಿಷಯ ಚರ್ಚೆಗೆ ಬಂದಿಲ್ಲ. ಯಾವ ಶಾಸಕರು ಇರಲಿಲ್ಲ ಎಂಬುದು ಆಯಾ ಶಾಸಕರನ್ನ ಕೇಳಬೇಕು ಅಂತ ಹೇಳಿದರು.
ಮಂತ್ರಿ ಮನೆಗೆ ಬಿಜೆಪಿ ಶಾಸಕರು, ಕಾರ್ಯಕರ್ತರು ಹೋಗ್ತಾರೆ ಕಾಂಗ್ರೆಸ್ ಕಾರ್ಯಕರ್ತರು ಹೋಗಲ್ಲ. ನನ್ನ ಕೆಲಸ ಏನಿತ್ತು, ಅದನ್ನು ಹೇಳಿ ಟೀ ಕುಡಿದೆ ವಾಪಾಸ್ ಬಂದೆ. ಬೆಳಗಾವಿ ಬಿಜೆಪಿಯಲ್ಲಿ ಎಲ್ಲವೂ ಸರಿ ಇರುವುದಕ್ಕೆ ನಿನ್ನೆ ಸಭೆ ಆಗಿದೆ ಅಂತ ಅಭಯ್ ಪಾಟೀಲ್ ಅಭಿಪ್ರಾಯಪಟ್ಟರು.
ಇದನ್ನೂ ಓದಿ
ಸುಭಾಷ್ ಚಂದ್ರ ಬೋಸ್ ಬ್ರಿಟಿಷರ ವಿರುದ್ಧ ಸೈನ್ಯವನ್ನು ಕಟ್ಟಿದ ಅಪ್ರತಿಮ ನಾಯಕ; ಸಿಎಂ ಬೊಮ್ಮಾಯಿ ಮಾತು
Published On - 1:01 pm, Sun, 23 January 22