ಬೆಳಗಾವಿ, ಆ.17: ಮಹಾನಗರ ಪಾಲಿಕೆಯಲ್ಲಿ ಹಲವು ವರ್ಷಗಳಿಂದ ಠಿಕಾಣಿ ಹೂಡಿದ್ದ ಅಧಿಕಾರಿಗಳಿಗೆ ಇದೀಗ ಶಾಕ್ ಹೊಡೆದಂತಾಗಿದೆ. ಮೂರು ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಕಡೆ ಇರುವ ಅಧಿಕಾರಿಗಳ ವರ್ಗಾವಣೆಗೆ ಠರಾವ್ ಪಾಸ್ ಆಗಿದೆ. 1991ರಿಂದ ಬೆಳಗಾವಿ (Belagavi) ಪಾಲಿಕೆಯಲ್ಲಿಯೇ ಅನೇಕ ಅಧಿಕಾರಿಗಳು ಇದ್ದು, ನಿಯಮದ ಪ್ರಕಾರ ಗ್ರೆಡ್ Aಮತ್ತು B ವರ್ಗದ ಅಧಿಕಾರಿಗಳು ಒಂದು ಹುದ್ದೆಯಲ್ಲಿ ಮೂರು ವರ್ಷ, C ಗ್ರೆಡ್ ಅಧಿಕಾರಿಗಳು ನಾಲ್ಕು ವರ್ಷ ಹಾಗೂ D ಗ್ರೆಡ್ ನೌಕರರು 7 ವರ್ಷ ಇರಬೇಕು. ಈ ನಿಯಮ ಬೆಳಗಾವಿ ಪಾಲಿಕೆಯಲ್ಲಿ ಮಾತ್ರ ಪಾಲನೆ ಆಗಿಲ್ಲ. ಈ ಹಿನ್ನಲೆ ಇದೀಗ ಅಧಿಕಾರಿಗಳಿಗೆ ದಿಢೀರ್ ವರ್ಗಾವಣೆ ಶಾಕ್ ನೀಡಿದೆ.
ಒಂದೇ ಕಡೆ ಇರುವ ಅಧಿಕಾರಿಗಳು, ತಮ್ಮ ಕೆಲಸದಲ್ಲಿ ಉದಾಸೀನ ಹಾಗೂ ನಿರ್ಲಕ್ಷ್ಯ ಭಾವನೆ ತೋರಿಸುತ್ತಿದ್ದಾರೆ. ಇದರಿಂದ ಬೆಳಗಾವಿ ಮಹಾನಗರ ಅಭಿವೃದ್ಧಿ ಕುಂಠಿತವಾಗಿದೆ. ಇದರಿಂದ ಅನೇಕ ವರ್ಷಗಳಿಂದ ಠಿಕಾಣಿ ಹೂಡಿರುವ ಅಧಿಕಾರಿಗಳ ವರ್ಗಾವಣೆಗೆ ಠರಾವ್ ಪಾಸ್ ಮಾಡುವಂತೆ ಪಾಲಿಕೆ ಸದಸ್ಯ ಡಾ. ಶಂಕರಗೌಡ ಪಾಟೀಲ್ ಆಗ್ರಹಿಸಿದ್ದರು. ಈ ಹಿನ್ನಲೆ ನಿನ್ನೆ(ಆ.16) ಪಾಲಿಕೆ ಸಾಮಾನ್ಯ ಸಭೆಯಲ್ಲಿ ವರ್ಗಾವಣೆ ಠರಾವ್ ಅಂಗೀಕಾರವಾಗಿದೆ.
ಇದನ್ನೂ ಓದಿ:ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆ: ಮರಾಠಿಯಲ್ಲಿ ಸಭೆಯ ನೋಟಿಸ್ ನೀಡಿಲ್ಲವೆಂದು ಕ್ಯಾತೆ ತೆಗೆದ ಎಂಇಎಸ್
ಇನ್ನು ನಿನ್ನೆ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಎಲ್ಲಾ ಅಧಿಕಾರಿಗಳನ್ನು ಒಂದೇ ದೃಷ್ಟಿಯಿಂದ ನೋಡುವುದು ಬೇಡ. ಇದರಿಂದ ಪ್ರಾಮಾಣಿಕ ಅಧಿಕಾರಿಗಳ ಮನೋಬಲ ಕಡಿಮೆ ಆಗಲಿದೆ ಎಂದು ವರ್ಗಾವಣೆ ಪ್ರಸ್ತಾಪಕ್ಕೆ ಶಾಸಕ ರಾಜು ಸೇಠ್ ವಿರೋಧ ವ್ಯಕ್ತಪಡಿಸಿದ್ದರು. ಈ ವೇಳೆ ಕಾನೂನಿನಲ್ಲಿ ಇದ್ದರೆ ಠರಾವ್ ಪಾಸ್ ಮಾಡಿ ಎಂದು ಬಿಜೆಪಿ ಶಾಸಕ ಅಭಯ್ ಪಾಟೀಲ್ ಹೇಳಿದ್ದರು. ಪಾಲಿಕೆಯಲ್ಲಿ ಅಧಿಕಾರ ಇರುವ ಬಿಜೆಪಿ ಸದಸ್ಯರಿಂದ ಸಹಮತ ಬಂದಿದ್ದು, ಮೇಯರ್ ಶೋಭಾ ಸೋಮನಾಚೆ ಸರ್ವಾನುಮತದಿಂದ ಠರಾವ್ ಪಾಸ್ ಮಾಡಿದರು.
ಮತ್ತಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:03 am, Thu, 17 August 23