ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ದನಿಗೂಡಿಸಿದ ಬಿಜೆಪಿ ಸಂಸದ ಜೊಲ್ಲೆ, ಬೆಳಗಾವಿ ವಿಭಜಿಸುತ್ತಾ ಕಾಂಗ್ರೆಸ್ ಸರ್ಕಾರ?
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಮತ್ತೆ ಬೆಳಗಾವಿ ಜಿಲ್ಲಾ ವಿಭಜನೆ ಕೂಗು ಮುನ್ನಲೆಗೆ ಬಂದಿದೆ.ಈ ಮಾತನ್ನು ಸ್ವತಃ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯವರೇ ಹೇಳಿದ್ದು, ತಾವು ಸಹ ಬೆಳಗಾವಿ ಜಿಲ್ಲೆ ವಿಭಜಿಸಿ ಚಿಕ್ಕೋಡಿ, ಗೋಕಾಕ್ ಜಿಲ್ಲೆ ಮಾಡಲು ಆಗ್ರಹಿಸುವುದಾಗಿ ತಿಳಿಸಿದ್ದಾರೆ.
ಬೆಳಗಾವಿ, ಆಗಸ್ಟ್ 17: ರಾಜ್ಯದ ಎರಡನೇ ಅತಿದೊಡ್ಡ ಜಿಲ್ಲೆ ಬೆಳಗಾವಿ (Belagavi) ವಿಭಜನೆ ಆಗಬೇಕು. ಚಿಕ್ಕೋಡಿ, ಗೋಕಾಕ ಜಿಲ್ಲೆ ಆಗಬೇಕು ಎಂಬುದು ಕಳೆದ ಮೂರು ದಶಕಗಳ ಹೋರಾಟ. ಬೆಳಗಾವಿ ಜಿಲ್ಲಾ ವಿಭಜನೆ ಬಗ್ಗೆ ಶಾಸಕರ ಸಭೆಯಲ್ಲಿ ಒತ್ತಾಯ ಕೇಳಿ ಬಂದಿದ್ದು, ಜಿಲ್ಲೆ ವಿಭಜನೆ ಆಗಬೇಕೆಂಬುದು ನಮ್ಮದೂ ಆಗ್ರಹ ಇದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೆ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಮುಖಂಡರಲ್ಲಿ ಹೊಸ ಆಶಾಭಾವ ಹುಟ್ಟಿದೆ. ಇತ್ತ ಸತೀಶ್ ಹೇಳಿಕೆಗೆ ಚಿಕ್ಕೋಡಿ ಬಿಜೆಪಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಸಹ ದನಿಗೂಡಿಸಿದ್ದು, ಬೆಳಗಾವಿ ಜಿಲ್ಲಾ ವಿಭಜನೆಗೆ ಆಗ್ರಹಿಸಿದ್ದಾರೆ.
ಚಿಕ್ಕೋಡಿ, ಗೋಕಾಕ್ ಜಿಲ್ಲೆ ಆಗಬೇಕು ಎಂಬ ಹೋರಾಟ ಇಂದು ನಿನ್ನೆಯದಲ್ಲ. ಕಳೆದ ಮೂರು ದಶಕಗಳಿಂದ ಚಿಕ್ಕೋಡಿ ಜಿಲ್ಲೆ ಆಗಬೇಕು ಅಂತಾ ಹೋರಾಟ ಮಾಡಲಾಗುತ್ತಿದೆ. ಬೆಳಗಾವಿ ಜಿಲ್ಲೆ ಭೌಗೋಳಿಕವಾಗಿ ಅತಿದೊಡ್ಡ ಜಿಲ್ಲೆ. 506 ಗ್ರಾಮ ಪಂಚಾಯತಿಗಳು, 90 ಜಿಲ್ಲಾ ಪಂಚಾಯತಿ, 345 ತಾಲೂಕು ಪಂಚಾಯಿತಿ ಸ್ಥಾನಗಳಿವೆ. ಅಷ್ಟೇ ಅಲ್ಲದೇ ಬರೋಬ್ಬರಿ 14 ತಾಲೂಕು, 18 ವಿಧಾನಸಭಾ ಕ್ಷೇತ್ರ ಹಾಗೂ ಬೆಳಗಾವಿ, ಚಿಕ್ಕೋಡಿ ಹಾಗೂ ಉತ್ತರ ಕನ್ನಡದ ಒಂದಿಷ್ಟು ಭಾಗ ಸೇರಿ ಎರಡೂವರೆ ಲೋಕಸಭಾ ಕ್ಷೇತ್ರಗಳು ಬೆಳಗಾವಿ ಜಿಲ್ಲೆಯ ವ್ಯಾಪ್ತಿಗೆ ಬರುತ್ತೆ.
ಅಥಣಿ ತಾಲೂಕಿನ ಗಡಿ ಗ್ರಾಮದಿಂದ ಜಿಲ್ಲಾ ಕೇಂದ್ರಕ್ಕೆ ಬರಬೇಕಂದ್ರೆ ಬರೋಬ್ಬರಿ 200 ರಿಂದ 250 ಕಿಮೀನಷ್ಟು ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆ ವಿಭಜನೆ ಆಗಬೇಕು ಎಂದು 1997ರಲ್ಲಿಯೇ ಜೆ.ಹೆಚ್.ಪಟೇಲ್ ಸರ್ಕಾರ ನಿರ್ಣಯ ಮಾಡಿತ್ತು. ಆ ವೇಳೆ ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ಇರೋದ್ರಿಂದ ಜಿಲ್ಲೆ ವಿಭಜನೆ ಮಾಡಿದ್ರೆ ಮರಾಠಿಗರ ಪ್ರಾಬಲ್ಯ ಹೆಚ್ಚಾಗುತ್ತೆ ಅಂತಾ ಕನ್ನಡಪರ ಸಂಘಟನೆಗಳು ಹೋರಾಟ ನಡೆಸಿದ್ದವು. ಪರಿಣಾಮ ಬೆಳಗಾವಿ ಜಿಲ್ಲಾ ವಿಭಜನೆಯಿಂದ ಜೆ.ಹೆಚ್.ಪಟೇಲ್ ಸರ್ಕಾರ ಹಿಂದೆ ಸರಿದಿತ್ತು. ಬಳಿಕ ಯಾವ ಸರ್ಕಾರಗಳು ಬೆಳಗಾವಿ ಜಿಲ್ಲಾ ವಿಭಜನೆ ಮಾಡುವ ಗೋಜಿಗೆ ಹೋಗಿರಲಿಲ್ಲ.
ಇದನ್ನೂ ಓದಿ: ಬೆಳಗಾವಿ ಪಾಲಿಕೆಯಲ್ಲಿ ಹಲವು ವರ್ಷಗಳಿಂದ ಠಿಕಾಣಿ ಹೂಡಿದ್ದ ಅಧಿಕಾರಿಗಳಿಗೆ ಶಾಕ್; ವರ್ಗಾವಣೆಗೆ ಠರಾವ್ ಪಾಸ್ ಮಾಡಿದ ಮೇಯರ್
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಮತ್ತೆ ಬೆಳಗಾವಿ ಜಿಲ್ಲಾ ವಿಭಜನೆ ಕೂಗು ಮುನ್ನಲೆಗೆ ಬಂದಿದೆ. ಇತ್ತೀಚೆಗೆ ನಡೆದ ಜಿಲ್ಲಾವಾರು ಕಾಂಗ್ರೆಸ್ ಶಾಸಕರ ಸಭೆಯಲ್ಲಿ ಜಿಲ್ಲೆ ವಿಭಜನೆ ಬಗ್ಗೆ ಒತ್ತಡ ಕೇಳಿ ಬಂದಿದೆ. ಈ ಮಾತನ್ನು ಸ್ವತಃ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯವರೇ ಹೇಳಿದ್ದು, ತಾವು ಸಹ ಬೆಳಗಾವಿ ಜಿಲ್ಲೆ ವಿಭಜಿಸಿ ಚಿಕ್ಕೋಡಿ, ಗೋಕಾಕ್ ಜಿಲ್ಲೆ ಮಾಡಲು ಆಗ್ರಹಿಸುವುದಾಗಿ ತಿಳಿಸಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ಚಿಕ್ಕೋಡಿ ಬಿಜೆಪಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಸಹ ದನಿಗೂಡಿಸಿದ್ದು, ಅವರು ಯಾವದ್ದು ಮಾಡ್ತಾರೋ ಬಿಡ್ತಾರೋ ಗೊತ್ತಿಲ್ಲ ಚಿಕ್ಕೋಡಿ ಜಿಲ್ಲೆ ಆಗಲಿ ಎಂಬುದು ನಮ್ಮ ಆಸೆ. ಮೂರನೆಯದ್ದು ಮಾಡ್ತಿರೋ ನಾಲ್ಕನೆಯದ್ದು ಮಾಡ್ತಿರೋ ಗೊತ್ತಿಲ್ಲ. ಚಿಕ್ಕೋಡಿ ಮಾತ್ರ ಜಿಲ್ಲೆ ಆಗಲೇಬೇಕು . ಎಲ್ಲಾ ವಿಭಾಗೀಯ ಕಚೇರಿಗಳು ಈಗಾಗಲೇ ಚಿಕ್ಕೋಡಿಯಲ್ಲಿ ಇವೆ. ಎಸ್‌ಪಿ, ಡಿಸಿ ಕಚೇರಿ ಬಿಟ್ರೆ ಎಲ್ಲಾ ರೀತಿಯ ಕಚೇರಿಗಳು ಇವೆ. ಚಿಕ್ಕೋಡಿ ಮಾತ್ರ ಜಿಲ್ಲೆ ಆಗಲೇಬೇಕು ಅದರಲ್ಲಿ ಎರಡು ಮಾತಿಲ್ಲ ಎಂದಿದ್ದಾರೆ.
ಬೆಳಗಾವಿ ಜಿಲ್ಲೆ ವಿಭಜನೆಗೆ ಪಕ್ಷಾತೀತವಾಗಿ ರಾಜಕೀಯ ನಾಯಕರು ಆಗ್ರಹಿಸುತ್ತಿದ್ದು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಮುಖಂಡರಲ್ಲಿ ಹೊಸ ಆಶಾಭಾವ ಮೂಡಿದೆ. ಚಿಕ್ಕೋಡಿಯಲ್ಲಿ ಮಾತನಾಡಿರುವ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಪ್ರೊಫೆಸರ್ ಎಸ್.ವಾಯ್. ಹಂಜಿ, ಕಳೆದ ಮೂರು ದಶಕಗಳಿಂದ ಚಿಕ್ಕೋಡಿ ಜಿಲ್ಲೆಗಾಗಿ ಹೋರಾಡಿದ್ದೇವೆ. ಅನೇಕ ಮಹನೀಯರು ಚಿಕ್ಕೋಡಿ ಜಿಲ್ಲಾ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಚಿಕ್ಕೋಡಿ, ಗೋಕಾಕ ಜಿಲ್ಲೆ ಮಾಡುವ ಆಶ್ವಾಸನೆ ನೀಡಿದ್ದಾರೆ.
ಶಾಸಕರ ಸಭೆಯಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಚಿಕ್ಕೋಡಿ ಬಿಜೆಪಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಸಹ ಹೇಳಿಕೆ ಕೊಟ್ಟಿದ್ದಾರೆ. ಚಿಕ್ಕೋಡಿ ಉಪವಿಭಾಗದ 20 ಲಕ್ಷ ಜನರ ಹಲವು ದಿನಗಳ ಬೇಡಿಕೆಗೆ ಪೂರಕವಾದ ಹೇಳಿಕೆ ಬರ್ತಿದ್ದು ನೆಮ್ಮದಿ ತಂದಿದೆ. ಚಿಕ್ಕೋಡಿಗೆ ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಬೇಕು. ಬೆಳಗಾವಿ ಜಿಲ್ಲೆಗೆ ಕೊಡುವ ಅನುದಾನ ಏತಕ್ಕೂ ಸಾಕಾಗಲ್ಲ. ಚಿಕ್ಕೋಡಿಗೆ ಸುಸಜ್ಜಿತ ಆಸ್ಪತ್ರೆ ಬೇಕು. ಚಿಕ್ಕೋಡಿ ಭಾಗದಲ್ಲಿ ಐದು ನದಿಗಳು ಹರಿಯುತ್ತಿದ್ದು ಪ್ರವಾಹ ಬಂದಾಗ ಸಮಸ್ಯೆ ಆಗುತ್ತೆ.
ನದಿ ತೀರದ ಆಚೆಗೆ ಬರಗಾಲದ ಛಾಯೆ ಇದೆ. ಚಿಕ್ಕೋಡಿ ಜಿಲ್ಲೆ ಆದ್ರೆ ಹೆಚ್ಚಿನ ಅನುದಾನ ಸಿಗುತ್ತೆ. ಈ ಹಿಂದೆಯೂ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಮುಖಂಡರು ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ಮನವಿ ಮಾಡಿದ್ದೇವೆ. ಬೆಳಗಾವಿ ಜಿಲ್ಲಾ ವಿಭಜನೆಗೆ ಬೆಳಗಾವಿಯ ಕನ್ನಡಪರ ಹೋರಾಟಗಾರರದ್ದು ಅಭ್ಯಂತರ ಇಲ್ಲ. ಸಚಿವ ಸತೀಶ್ ಜಾರಕಿಹೊಳಿ ತಮ್ಮ ಪ್ರಯತ್ನ ಮುಂದುವರಿಸಲಿ ಎಂದು ತಿಳಿಸಿದ್ದಾರೆ. ಇನ್ನೂ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ತುಕಾರಾಮ್ ಕೋಳಿ ಮಾತನಾಡಿ ಆದಷ್ಟು ಬೇಗ ಚಿಕ್ಕೋಡಿ ಜಿಲ್ಲೆ ಮಾಡಿ ಜನರಿಗೆ ಅನುಕೂಲ ಮಾಡಿಕೊಡಲಿ. ಸರ್ಕಾರ ಸಕಾರಾತ್ಮಕ ನಿಲುವು ತಗೆದುಕೊಳ್ಳೋದನ್ನು ಸ್ವಾಗತ ಮಾಡ್ತೀವಿ. ಈ ಭಾಗದ ಎಲ್ಲಾ ನಾಯಕರ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆ ವಿಭಜನೆ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ನೀಡಿದ ಹೇಳಿಕೆ ಚಿಕ್ಕೋಡಿ ಉಪವಿಭಾಗದ ಜನರಲ್ಲಿ ಹೊಸ ಆಶಾಭಾವನೆ ಮೂಡಿಸಿದ್ದಂತೂ ಸತ್ಯ. ರಾಜ್ಯ ರಾಜಕಾರಣದ ಪವರ್ ಸೆಂಟರ್ ಆಗಿರುವ ಬೆಳಗಾವಿಯನ್ನು ಜೋಡೆತ್ತು ಸರ್ಕಾರ ವಿಭಜನೆ ಮಾಡುತ್ತಾ, ಮೂರು ದಶಕಗಳ ಹೋರಾಟಕ್ಕೆ ಜಯ ಲಭಿಸುತ್ತಾ ಇದಕ್ಕೆ ಕಾಲವೇ ಉತ್ತರಿಸಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:36 pm, Thu, 17 August 23