ಬೆಳಗಾವಿ: ನಗರದ ಹಿಂದವಾಡಿ ಪೋಸ್ಟ್ ಆಫೀಸ್ ಬಳಿ ಮೊನ್ನೆ(ಜು.11) ಸಂಜೆ 10 ವರ್ಷದ ಬಾಲಕಿ ಶಾಲೆಗೆ ಹೋಗಿ ಮನೆಗೆ ಬಂದು ಫ್ರೆಶ್ ಆಗಿ ಎಂದಿನಂತೆ ಪಕ್ಕದ ಕಾಲೋನಿಯಲ್ಲಿದ್ದ ಟ್ಯೂಶನ್ಗೆ ತೆರಳಿದ್ದಾಳೆ. ತಮ್ಮ ಮನೆಯ ಪಕ್ಕದ ರಸ್ತೆಗೆ ಬರುತ್ತಿದ್ದಂತೆ ಏಕಾಏಕಿ ಹಿಂದಿನಿಂದ ಬಂದ ಓರ್ವ ವ್ಯಕ್ತಿ ಬಾಲಕಿಯನ್ನ ಹೆಗಲ ಮೇಲೆ ಹೊತ್ತುಕೊಂಡು(Kidnap) ಓಡಲು ಶುರು ಮಾಡಿದ್ದಾನೆ. ಈ ವೇಳೆ ಬಾಲಕಿ ಕಿರುಚಾಡಿದ್ದಾಳೆ. ಅಷ್ಟೇ ಅಲ್ಲದೇ ಪಾಪಿಯ ಕಪಾಳಕ್ಕೂ ಹೊಡೆದಿದ್ದಾಳೆ. ಗಾರ್ಡನ್ನಲ್ಲಿ ವಾಕಿಂಕ್ ಮಾಡುತ್ತಿದ್ದ ಕೆಲವರು ಬಾಲಕಿ ಕಿರುಚುತ್ತಿದ್ದ ಧ್ವನಿ ಕೇಳಿ ಕೂಡಲೇ ಓಡೋಡಿ ಬಂದಿದ್ದಾರೆ. ಸಾರ್ವಜನಿಕರು ಬರುತ್ತಿದ್ದನ್ನ ಗಮನಿಸಿದ ಅಪರಿಚಿತ ವ್ಯಕ್ತಿ ಕೂಡಲೇ ಬಾಲಕಿಯನ್ನ ಕೆಳಗಿಳಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಇತ್ತ ಬಾಲಕಿಯನ್ನ ರಕ್ಷಣೆ ಮಾಡಿ ಪೋಷಕರಿಗೆ ಹೇಳಿದ ಸ್ಥಳೀಯರು ನಂತರ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ಗೆ ಯತ್ನ ಎಂದು ಕೇಸ್ ದಾಖಲಿಸಿದ್ದಾರೆ.
ಇನ್ನು ಮೊನ್ನೆ ಸಂಜೆ ನಡೆದ ಅಪಹರಣಕ್ಕೆ ಯತ್ನ ಮಾಡಿರುವ ಕೃತ್ಯ ಕಾಲೋನಿಯ ಮನೆಗಳಿಗೆ ಅಳವಡಿಸಿರುವ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದನ್ನ ಆಧರಿಸಿ ತಂಡಗಳನ್ನ ಮಾಡಿ ತನಿಖೆಯನ್ನ ಆರಂಭಿಸಿದ್ದ ಪೊಲೀಸರು ದೂರು ದಾಖಲಾದ 24 ಗಂಟೆಯೊಳಗೆ ಆರೋಪಿಯನ್ನ ಸೆರೆ ಹಿಡಿದಿದ್ದಾರೆ. ಮಾರ್ಕೆಟ್ ಠಾಣೆ ವ್ಯಾಪ್ತಿಯ ಖಡೇಬಜಾರ್‌ನಲ್ಲಿ ಆರೋಪಿ ಪೊಲೀಸರ ವಶಕ್ಕೆ ಪಡೆದಿದ್ದು, ಬೆಳಗಾವಿಯ ಮಾರುತಿ ನಗರದ ಗಜಾನನ ಪಾಟೀಲ್ (35) ಬಂಧಿತ ಆರೋಪಿ. ಖಡೇಬಜಾರ್ ವಿಭಾಗದ ಎಸಿಪಿ ಅರುಣ್‌ಕುಮಾರ ಕೋಳೂರ ಅವರಿಂದ ಆರೋಪಿ ವಿಚಾರಣೆ. ಈ ವೇಳೆ ತನಗೆ ಮದುವೆ ಆಗಿರಲಿಲ್ಲ, ಹೀಗಾಗಿ ಬಾಲಕಿಯನ್ನ ಎತ್ತಿಕೊಂಡು ಹೋಗುತ್ತಿದ್ದಾಗಿ ಬಾಯಿ ಬಿಟ್ಡ ಪಾಪಿ.
ಇದನ್ನೂ ಓದಿ:ಮಾಲೂರಿನಲ್ಲಿ ಉದ್ಯಮಿ ಬಾಬು ಅಪಹರಣ ಪ್ರಕರಣ ಸುಖಾಂತ್ಯ; ಉದ್ಯಮಿಯನ್ನ ಬಿಟ್ಟು ಕಳುಹಿಸಿದ ಕಿಡ್ನಾಪರ್ಸ್, ಕಾರಣ ಇಲ್ಲಿದೆ
ಇನ್ನು ಘಟನೆಯನ್ನ ಕಣ್ಣಾರೆ ಕಂಡಿರುವ ಕಾಲೋನಿ ನಿವಾಸಿಗಳು ಬೆಚ್ಚಿ ಬಿದ್ದಿದ್ದು ಮಕ್ಕಳನ್ನ ಹೊರ ಬಿಡಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಅಪಹರಣ ಯತ್ನ ದೂರು ದಾಖಲಿಸಿದಾಗ ಪ್ರತಿಕ್ರಿಯೆ ನೀಡಿದ್ದ ಉತ್ತರ ವಲಯ ಐಜಿಪಿ ವಿಕಾಸ್ ಕುಮಾರ್ ಕಿಡ್ನಾಪ್ಗೆ ಯತ್ನ ಕೇಸ್ ಟಿಳಕವಾಡಿಯಲ್ಲಿ ದಾಖಲಿಸಿಕೊಂಡು ತಂಡ ರಚನೆ ಮಾಡಿ ಆರೋಪಿಗೆ ಶೋಧ ಕಾರ್ಯ ನಡೆಸುತ್ತಿದ್ದೇವೆ. ಆರೋಪಿಯ ಸುಳಿವು ಸಿಕ್ಕಿದ್ದು ಶಿಘ್ರದಲ್ಲಿ ಆರೋಪಿಯನ್ನ ಬಂಧಿಸಲಾಗುವುದು ಎಂದು ಹೇಳಿದ್ದು, ಅದರಂತೆ ನಿನ್ನೆ ಬಂಧಿಸಲಾಗಿ ವಿಚಾರಣೆ ಕೂಡ ನಡೆಯುತ್ತಿದೆ ಎನ್ನಲಾಗಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:02 am, Thu, 13 July 23