ತರಾತುರಿಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ: ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ

ತರಾತುರಿಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ: ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ

ವಿಧೇಯಕ ಮೇಲಿನ ಚರ್ಚೆಯಲ್ಲಿ ಭಾಗಿಯಾಗಿ ಸರ್ಕಾರದ ಬಣ್ಣ ಬಯಲು ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 21, 2021 | 5:50 PM


ಬೆಳಗಾವಿ: ಸರ್ಕಾರವು ಮತಾಂತರ ನಿಷೇಧ ವಿಧೇಯಕವನ್ನು ವಿಧಾನಸಭೆಯಲ್ಲಿ ಏಕಾಏಕಿ ಮಂಡಿಸಿದೆ. ವಿಧೇಯಕ ಮಂಡನೆ ಬಗ್ಗೆ ಅಜೆಂಡಾದಲ್ಲಿ ಯಾವುದೇ ಮಾಹಿತಿ ಇರಲಿಲ್ಲ. ಸಚಿವರು ಉತ್ತರ ನೀಡುವಾಗ ಅರ್ಧಕ್ಕೆ ನಿಲ್ಲಿಸಿ ಮತಾಂತರ ನಿಷೇಧ ವಿಧೇಯಕ ಮಂಡನೆ ಕುರಿತು ಪ್ರಸ್ತಾಪಿಸಿದರು. ಕದ್ದು ಮುಚ್ಚಿ ವಿಧೇಯಕ ಮಂಡಿಸಿದ್ದು ಏಕೆ. ನಾವು ಇಲ್ಲದಿದ್ದಾಗ ವಿಧೇಯಕ ಮಂಡನೆ ಮಾಡಿದ್ದಾರೆ. ಈಗಾಗಲೇ ಇಂಥ ವಿಧೇಯಕಕ್ಕೆ ಗುಜರಾತ್‌ ಹೈಕೋರ್ಟ್‌ನಲ್ಲಿ ತಡೆ ನೀಡಲಾಗಿದೆ. ವಿಧೇಯಕ ಮೇಲಿನ ಚರ್ಚೆಯಲ್ಲಿ ನಾಳೆ (ಡಿ.22) ಭಾಗಿಯಾಗಿ ಸರ್ಕಾರದ ಬಣ್ಣ ಬಯಲು ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ನ್ಯಾಯಾಲಯಕ್ಕೆ ಹೋಗುವುದು ನಂತರದ ವಿಚಾರ. ಆದರೆ ಇವರು ಸಂವಿಧಾನದ ಪ್ರಕಾರವೇ ನಡೆದುಕೊಳ್ಳಬೇಕಲ್ಲವೇ? ಚರ್ಚೆಯ ವೇಳೆ ಈ ಸರ್ಕಾರವನ್ನು ಬೆತ್ತಲೆ ಮಾಡುತ್ತೇವೆ ಎಂದರು. ಕಲಾಪವನ್ನು ಏಕೆ ಶುಕ್ರವಾರವೇ ಮುಗಿಸಬೇಕು? ಇನ್ನೂ ಒಂದು ವಾರ ಇದನ್ನು ವಿಸ್ತರಿಸಬಹುದಲ್ಲವೇ? ಇಲ್ಲವೇ ಈ ವಿಧೇಯಕವನ್ನು ಕೊನೆಯಲ್ಲಿ ತರಬಹುದಿತ್ತಲ್ಲವೇ? ಕೊನೆಯಲ್ಲಿ ಮಂಡಿಸುತ್ತಿದ್ದರೆ ಯಾರಾದ್ರೂ ಹೋಗಿಬಿಡ್ತಿದ್ರಾ? ಎಂದು ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಸಂವಿಧಾನ ಪ್ರಕಾರ ಭಾರತೀಯರು ಯಾವ ಧರ್ಮವನ್ನಾದರೂ ಒಪ್ಪಿಕೊಳ್ಳಬಹುದು. ಇವರು ತಂದಿರುವ ವಿಧೇಯಕ ಸಂವಿಧಾನ ವಿರೋಧಿಯಾಗಿದೆ. ಈಗಾಗಲೇ ಒಂದು ಕಡೆ ಹೈಕೋರ್ಟ್ ಸ್ಟೇ ತಂದುಬಿಟ್ಟಿದೆ. ಮದುವೆಯಾಗುವುದು ಅವರ ಹಕ್ಕು. ಈ ವಿಧೇಯಕವು ಆರ್‌ಎಸ್ಎಸ್ ಅಜೆಂಡಾ. ಆರ್‌ಎಸ್ಎಸ್ ಹೇಳಿದಂತೆ ರಾಜ್ಯ ಸರ್ಕಾರ ನಡೆಯುತ್ತಿದೆ. ಈ ವಿಧೇಯಕ ಮಂಡನೆ ಮಾಡಿ, ಇಲ್ಲದಿದ್ದರೆ ನಿಮ್ಮ ಮಾನ ಮರ್ಯಾದೆ ಹೋಗುತ್ತದೆ ಎಂಬ ಮಾತಿಗೆ ಅನುಗುಣವಾಗಿ ಸರ್ಕಾರ ವರ್ತಿಸುತ್ತಿದೆ. ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಇಷ್ಟೆಲ್ಲಾ ಮಾಡುತ್ತಿದ್ದಾರೆ ಎಂದು ದೂರಿದರು.

ಸದನದಲ್ಲಿ ಪಾಕಿಸ್ತಾನದ ಬಗ್ಗೆ ಮಾತನಾಡಿದ ಈಶ್ವರಪ್ಪ ಅವರ ಮಾತಿನ ವೈಖರಿಯನ್ನೂ ಸಿದ್ದರಾಮಯ್ಯ ಖಂಡಿಸಿದರು. ಪಾಕಿಸ್ತಾನದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನೋಡಿಕೊಂಡು ನಾವು ವಿಧೇಯಕ ಮಂಡಿಸಲು ಆಗುವುದಿಲ್ಲ. ನಮ್ಮ ಸಂವಿಧಾನದ ಆಶಯಗಳಿಗೆ ತಕ್ಕಂತೆ ನಾವು ನಡೆದುಕೊಳ್ಳಬೇಕಾಗುತ್ತದೆ. ಈಶ್ವರಪ್ಪಗೆ ಸಂವಿಧಾನ, ಆರ್ಟಿಕಲ್ 25 ಬಗ್ಗೆ ಗೊತ್ತಿದೆಯೇ ಎಂದು ಪ್ರಶ್ನಿಸಿದರು.

ಒಂದು ಸಂಸ್ಥೆ ನಡೆಸುವವರ ವಿರುದ್ಧ ಆಮಿಷ ಅಂದರೆ ಹೇಗೆ? ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಲಾಗಿದೆ. ಇದನ್ನು ವಿರೋಧಿಸಿ ನಾವು ಜನತಾ ಕೋರ್ಟ್‌ಗೆ ಹೋಗುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಘೋಷಿಸಿದರು.

ಇದನ್ನೂ ಓದಿ: Anti Conversion Bill Highlights: ಮತಾಂತರ ನಿಷೇಧ ಕಾಯ್ದೆಯ ಮುಖ್ಯ ಅಂಶಗಳು, ಪ್ರತಿಪಕ್ಷಗಳ ಆಕ್ಷೇಪಗಳಿವು
ಇದನ್ನೂ ಓದಿ: Anti Conversion Bill 2021: ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ

Follow us on

Related Stories

Most Read Stories

Click on your DTH Provider to Add TV9 Kannada