Belagavi Assembly Session Updates: ಬೆಳಗಾವಿ ಸುವರ್ಣ ವಿಧಾನಸೌಧ (Belagavi Suvarna Vidhana Soudha)ದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶ (Belagavi Winter Session)ನ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. 10 ದಿನಗಳ ಕಾಲ ನಡೆಯಲಿರುವ ಈ ಅಧಿವೇಶನದಲ್ಲಿ ವಿಪಕ್ಷಗಳು ಜನರ ಭಾವನೆಯನ್ನು ಕೆರಳಿಸುವಂತಹ ವಿಷಯಗಳನ್ನು ಬದಿಗಿಟ್ಟು ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿವೆ. ಇದಕ್ಕೆ ಪ್ರತಿಯಾಗಿ ಆಡಳಿತರೂಢ ಬಿಜೆಪಿ ನಾಯಕರೂ ತಯಾರಿ ನಡೆಸಿದ್ದಾರೆ. ಸದ್ಯ ಮಹಾರಾಷ್ಟ್ರ-ಕರ್ನಾಟಕ ರಾಜ್ಯಗಳ ನಡುವಿನ ಗಡಿ ವಿವಾದ, ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ, ಬೆಂಗಳೂರಿನಲ್ಲಿ ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ವಿಚಾರ, ರಾಜ್ಯ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ, ಬಿಜೆಪಿಗೆ ರೌಡಿಶೀಟರ್ಗಳ ಸೇರ್ಪಡೆ, ಪಿಎಸ್ಐ ನೇಮಕಾತಿ ಹಗರಣ, ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳವು ರಾಜ್ಯದಲ್ಲಿ ನಡೆಯುತ್ತಿರುವ ಬಿಸಿಬಿಸಿ ಚರ್ಚೆಗಳಾಗಿವೆ. ಈ ಎಲ್ಲಾ ಅಸ್ತ್ರಗಳನ್ನು ಒಂದೊಂದಾಗಿಯೇ ಸರ್ಕಾರದ ವಿರುದ್ಧ ಪ್ರಯೋಗಿಸಲು ಅಣಿಯಾಗಿದೆ. ಇದರೊಂದಿಗೆ ಎಸ್‌ಸಿ, ಎಸ್‌ಟಿ ಸಮುದಾಯದ ಮೀಸಲಾತಿ ಹೆಚ್ಚಳ ವಿಧೇಯಕ (SC ST Reservation hike Bill) ಹಾಗೂ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ವಿಧೇಯಕ ಸೇರಿ ಒಟ್ಟು 4 ಮಸೂದೆ ಮಂಡನೆಯಾಗಲಿವೆ.
ವಿಧಾನಸಭೆ ಕಲಾಪ ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿಕೆ.
ವಿಧಾನಸಭೆಯಲ್ಲಿ ನಿಯಮ 69ರಡಿ ಗಡಿ ವಿವಾದ ಕುರಿತು ಚರ್ಚೆ ನಡೆಯುತ್ತಿದ್ದು, ನಾಳೆ ಸರ್ಕಾರದ ಉತ್ತರ ಕೊಡುವಾಗ ಗಡಿ ವಿಚಾರದಲ್ಲಿ ನಿರ್ಣಯವನ್ನು ಅಂಗೀಕರಿಸಿ ಕೇಂದ್ರಕ್ಕೆ ಕಳಿಸೋಣ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಸಿಎಂ ಹೇಳಿಕೆಗೆ ಧ್ವನಿಗೂಡಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಾಳೆ ನಿರ್ಣಯ ತನ್ನಿ ಅಂಗೀಕರಿಸಿ ಕಳಿಸೋಣವೆಂದು ಹೇಳಿದರು.
ಗಡಿ ವಿಷಯದಲ್ಲಿ ನಾನು ಒಂದೇ ಧ್ವನಿಯಲ್ಲಿ ಮಾತಾಡಿದ್ದೇನೆ ಎಂದು ವಿಧಾನಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಅತ್ಯಂತ ಜವಾಬ್ದಾರಿಯಿಂದ ಮಾತಾಡ್ತಿದ್ದೇನೆ. ಸ್ವಲ್ಪ ಸಮಸ್ಯೆಯಾದ್ರೂ ಏನಾಗುತ್ತೆ ಎಂದು ನಿಮಗೂ ಗೊತ್ತಿದೆ. ಮಹಾರಾಷ್ಟ್ರ ಕೇಸ್ ಗೊತ್ತಾದ ಮೇಲೆ ತೀಕ್ಷ್ಣವಾಗಿ ಉತ್ತರಿಸಿದ್ದೆ. ಮಹಾರಾಷ್ಟ್ರ ಸಚಿವರ ಭೇಟಿ ಕುರಿತು ಸೂಕ್ಷ್ಮವಾಗಿ ಹೇಳಿದ್ದೆ. ಆದ್ರೆ ಅವರು ಬರಲು ತವಕಿಸಿದಾಗ ಸಿಎಸ್ ಮೂಲಕ ಹೇಳಿಸಿದೆ. ನಮ್ಮ ಕಡೆಯಿಂದ ಯಾವುದೇ ತಪ್ಪು ಆಗಿಲ್ಲ ಎಂದು ಹೇಳಿದ್ದೆ ಎಂದು ಹೇಳಿದರು.
ಸುವರ್ಣಸೌಧದ ಬಳಿ ನೇಕಾರ ಸಂಘದಿಂದ ಪ್ರತಿಭಟನೆ ಮಾಡಲಾಗುತ್ತಿದ್ದು, ನಟಿ ಹಾಗೂ ಮಾಜಿ ಸಚಿವೆ ಉಮಾಶ್ರೀ ಭಾಗಿಯಾಗಿದ್ದಾರೆ. ನೇಕಾರರ ಹಕ್ಕೊತ್ತಾಯಗಳ ಜಾರಿಗಾಗಿ ಪ್ರತಿಭಟನೆ ಮಾಡಲಾಗುತ್ತಿದ್ದು, ಸರ್ಕಾರದ ಪರ ಸಚಿವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಇಲ್ಲವಾದಲ್ಲಿ ಸುವರ್ಣಸೌಧ ಮುತ್ತಿಗೆ ಹಾಕುತ್ತೇವೆ ಎನ್ನುತ್ತಿರುವ ಪ್ರತಿಭಟನಾಕಾರರು.
ರಾಜ್ಯದಲ್ಲಿ ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ಬೆಳಗಾವಿಯ ಸುವರ್ಣಸೌಧದ ಬಳಿ ನೂರಾರು ರೈತರು ಪ್ರತಿಭಟನೆ ಮಾಡಲಾಗುತ್ತಿದೆ. ಪ್ರತಿ ಟನ್ ಕಬ್ಬಿಗೆ 5,500 ರೂ. ನಿಗದಿ ಮಾಡುವಂತೆ ರೈತರು ಆಗ್ರಹಿಸಿದ್ದಾರೆ. ರೈತರು ರೊಚ್ಚಿಗೇಳುತ್ತಿದ್ದಂತೆ ಸ್ಥಳಕ್ಕೆ ಇಂಧನ, ಕನ್ನಡ & ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಆಗಮಿಸಿದರು. ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಬರುವಂತೆ ರೈತರು ಪಟ್ಟುಹಿಡಿದಿದ್ದಾರೆ.
ರಾಜ್ಯದಲ್ಲಿ ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ಬೆಳಗಾವಿಯ ಸುವರ್ಣಸೌಧದ ಬಳಿ ರೈತರಿಂದ ಪ್ರತಿಭಟನೆ ಮಾಡಲಾಗುತ್ತಿದೆ. ಪ್ರತಿಭಟನಾ ಸ್ಥಳಕ್ಕೆ ಸಚಿವರು ಬರುವುದು ತಡವಾಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಗೇಟ್ ಮುರಿದು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಯತ್ನ. ಪೊಲೀಸರು, ರೈತ ಸಮೂಹದ ನಡುವೆ ತಳ್ಳಾಟ, ನೂಕಾಟ ಮಾಡಲಾಗಿದೆ. ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ರೈತರ ಆಕ್ರೋಶ ವ್ಯಕ್ತಪಡಿಸಲಾಗಿದೆ. ಹಾಗಾಗಿ ಕೊಂಡಸಕೊಪ್ಪ ಬಳಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ.
ಮಹಾರಾಷ್ಟ್ರ ಒತ್ತಾಯ ಮೇರೆಗೆ ಮಹಾಜನ್ ಆಯೋಗ ರಚನೆ ಆಯ್ತು. 1967ರ ಆಗಸ್ಟ್ನಲ್ಲಿ ಮಹಾಜನ್ ಆಯೋಗವು ವರದಿಯನ್ನು ನೀಡಿತು. ಮಹಾರಾಷ್ಟ್ರ ವರದಿಯನ್ನ ತಿರಸ್ಕರಿಸಿತು, ಕರ್ನಾಟಕ ಸ್ವಾಗತ ಮಾಡಿತ್ತು. ಮಹಾರಾಷ್ಟ್ರದವರು ರಾಜಕೀಯಕ್ಕೆ ಗಡಿ ವಿಚಾರ ಜೀವಂತವಾಗಿಟ್ಟಿದ್ದಾರೆ. ಯಾವುದೇ ಗಡಿ ವಿವಾದ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ವಿಧಾನ ಪರಿಷತ್ ಕಲಾಪ ಮಧ್ಯಾಹ್ನ 3.30ಕ್ಕೆ ಮುಂದೂಡಿಕೆಯಾಗಿದೆ. ಭೋಜನ ವಿರಾಮ ಹಿನ್ನೆಲೆ ಮುಂದೂಡಿಕೆಯಾಗಿದೆ.
ಪ್ರತಿಭಟನೆಯಲ್ಲಿ ಭಾಷಣಕ್ಕೆ ಅಡ್ಡಿ ಪಡಿಸಿರುವ ವಿಚಾರವಾಗಿ ಮಾತನಾಡಿದ ಸತೀಶ್ ಜಾರಕಿಹೊಳಿ, ಸಮುದಾಯದ ಬೇಡಿಕೆ ಸಂಬಂಧ ಪ್ರತಿಭಟನೆಗೆ ಬೆಂಬಲ ಕೊಡಲು ಬಂದಿದ್ದೆ. ಯಾರೋ ವಿರೋಧಿಗಳು ಈ ರೀತಿ ಮಾಡಿದ್ದಾರೆ. ನಾಯಕನಾದವನಿಗೆ ಜಿಂದಾಬಾದ್ ಮತ್ತು ಮುರ್ದಾಬಾದ್ ಇರಬೇಕು. ಈ ರೀತಿ ಮಾಡಿದವರು ಬಿಜೆಪಿಯವರು ಇರಬಹುದು. ಯಾರೋ ಕೆಲವರು ಈ ರೀತಿ ಮಾಡಿದ್ದಾರೆ ನನ್ನ ಬೆಂಬಲ ಸಮುದಾಯಕ್ಕೆ ಇರುತ್ತದೆ. ನಾನು ಯಾರಿಗೂ ಅವಮಾನ ಆಗುವಂತೆ ಮಾಡಿಲ್ಲ. ಈ ಬಗ್ಗೆ ರೆಕಾರ್ಡಗಳು ಇವೆ, ಅವರಿಗೆ ಮಾಹಿತಿ ಇಲ್ಲ ಎಂದರು.
ಸುವರ್ಣಸೌಧದ ಬಳಿ ಮರಾಠ ಸಮುದಾಯದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಭಾಷಣ ಮಾಡಲು ಮುಂದಾಗಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಅಡ್ಡಿಪಡಿಸಿದರು. ಹಿಂದೂ ಪದ, ಸಂಭಾಜಿ ಮಹಾರಾಜ ಬಗ್ಗೆ ಹೇಳಿಕೆ ನೀಡಿದ್ದ ಸತೀಶ್ ಅವರಿಗೆ ಭಾಷಣ ಮಾಡಲು ಬಿಡದೆ ಶಿವಾಜಿ ಮಹಾರಾಜ್ ಪರ ಘೋಷಣೆ, ಹರ ಹರ ಮಹದೇವ್, ಜೈಶ್ರೀರಾಮ್ ಎಂದು ಘೋಷಣೆಗಳನ್ನುಕೂಗಿದರು. ಈ ವೇಳೆ ಘೋಷಣೆ ಕೂಗದಂತೆ ಮುಖಂಡರು ಮನವಿ ಮಾಡಿದರೂ ಕೇಳದ ಪ್ರತಿಭಟನಾಕಾರರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು. ಈ ವೇಳೆ ಆ ವಿಷಯ ಬೇರೆ, ಈ ವಿಷಯವೇ ಬೇರೆ ಎಂದು ಸತೀಶ್ ಪ್ರತಿಭಟನಾಕಾರರ ಮನವೋಲಿಸಲು ಯತ್ನಿಸಿದರು.
2ಎ ಮೀಸಲಾತಿ ಬಗ್ಗೆ ನಾನು ಮಾತು ಕೊಟ್ಟಿಲ್ಲ ಎಂದು ಹೇಳಿಕೆ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತಿನಿಂದ ಬೇಸರವಾಗಿದೆ. ಮುಖ್ಯಮಂತ್ರಿಯವರು ಮಾತು ಕೊಟ್ಟಿದ್ದು ಸತ್ಯ. ಸಿಎಂ ವಿನಾಕಾರಣ ಸುಳ್ಳು ಹೇಳುವ ಪ್ರಯತ್ನವನ್ನು ಮಾಡಬಾರದು. ನಿಮ್ಮ ಮೇಲೆ ನಂಬಿಕೆ ಇಟ್ಟು ನ್ಯಾಯಯುತವಾಗಿ ಮೀಸಲಾತಿ ಕೇಳುತ್ತಿದ್ದೇವೆ ಎಂದರು. ನಿನ್ನೆ ಸವದತ್ತಿಯಲ್ಲಿ ನಡೆದ ಸಮಾವೇಶದಲ್ಲಿ ಬಸನಗೌಡ ಪಾಟೀಲ ಯತ್ನಾಳ್ ಭಾಷಣದಲ್ಲಿ ಸಕಾರಾತ್ಮಕವಾಗಿ ಹೇಳಿದ್ದಾರೆ. ನಿಮ್ಮ ಮೇಲೆ ಇನ್ನಷ್ಟು ಗೌರವ ಹೆಚ್ಚಾಗಿದೆ. ಆ ಗೌರವವನ್ನು ಉಳಿಸಿಕೊಂಡು ಪಂಚಮಸಾಲಿ ಇತಿಹಾಸ ಪುಟದಲ್ಲಿ ಸೇರ್ಪಡೆಗೊಳ್ಳುವಮಟ್ಟಿಗೆ ನಿರೀಕ್ಷೆ ಇದೆ ಎಂದರು.
ಬೆಳಗಾವಿ: 2ಎ ಮೀಸಲಾತಿ ವಿಚಾರವಾಗಿ ಸವದತ್ತಿ ತಾಲೂಕಿನ ಸುತಗಟ್ಟಿ ಗ್ರಾಮದಲ್ಲಿ ಟಿವಿ9 ಜೊತೆ ಮಾತನಾಡಿದ ಜಯ ಮೃತ್ಯುಂಜಯ ಸ್ವಾಮೀಜಿ, ಡಿಸೆಂಬರ್ 19ರ ವರೆಗೆ ಸರ್ಕಾರ ಗಡುವು ನೀಡಿತ್ತು. ಕೊಟ್ಟ ಮಾತಿಗೆ ತಪ್ಪಿದ ಕಾರಣ ಸವದತ್ತಿಯಿಂದ ಪಾದಯಾತ್ರೆ ಆರಂಭಿಸಿದ್ದೇವೆ. ಮಾಜಿ ಸಿಎಂ ಯಡಿಯೂರಪ್ಪ ಅವರು ಫೆಬ್ರವರಿ ತಿಂಗಳಲ್ಲಿ 2 ಎ ಮೀಸಲಾತಿಗಾಗಿ ಶಿಫಾರಸ್ಸು ಮಾಡಿದ್ದರು. ಶಿಫಾರಸ್ಸು ಮಾಡಿ 1 ವರ್ಷ 8 ತಿಂಗಳು ಮುಗಿದರೂ ಸರ್ಕಾರ ವರದಿ ತರಿಸಿಕೊಂಡಿಲ್ಲ. ಆಯೋಗದ ವರದಿಯನ್ನ ನೆಪವಾಗಿಸಿಕೊಂಡು ಮುಂದೆ ತಳ್ಳುವ ಪ್ರಯತ್ನ ಮಾಡಬೇಡಿ. ಈಗಾಗಲೇ 18 ಜಿಲ್ಲೆಗಳಲ್ಲಿ ಈಗಾಗಲೇ ಸರ್ವೆ ಮಾಡಿದ್ದಾರೆ. ಸರ್ಕಾರ ಮನಸ್ಸು ಮಾಡಿದರೆ 24 ಗಂಟೆಯಲ್ಲಿ ವರದಿ ತರಿಸಿಕೊಳ್ಳಬಹುದು, ಮೀನಾಮೇಶ ಮಾಡಬಾರದು ಎಂದರು. ಅಲ್ಲದೆ, 22ರಂದು ಪಾದಯಾತ್ರೆ ಕಿತ್ತೂರು ತಲುಪಿ, ಅಲ್ಲಿಂದ ಸುವರ್ಣ ಸೌಧ ತಲುಪುದರೊಳಗಾಗಿ ಪಂಚಾಸಾಲಿ ಸಮುದಾಯಕ್ಕೆ ಸಿಹಿ ಸುದ್ದಿ ಕೊಡಬೇಕು. ಈ ಹಿಂದೆ ನಿಮ್ಮ ಮಾತಿಗೆ ಬೆಲೆಕೊಟ್ಟು ವಿಧಾನಸೌಧ ಮುತ್ತಿಗೆ ಹಿಂಪಡೆದಿದ್ದೇವು. ಈ ಬಾರಿ ಬೆಳಗಾವಿ ತಲಪುವುದರೊಳಗಾಗಿ ಮೀಸಲಾತಿ ಘೋಷಣೆಯಾಗದಿದ್ದಲ್ಲಿ ಸೌವರ್ಣಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.
ಭೋಜನ ವಿರಾಮ ಹಿನ್ನೆಲೆ ವಿಧಾನಸಭೆ ಕಲಾಪ ಮುಂದೂಡಲಾಯಿತು. ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಧ್ಯಾಹ್ನ 3ಕ್ಕೆ ಮುಂದೂಡಿಕೆ ಮಾಡಿದರು.
ಮರಾಠಿಗರ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಕನ್ನಡದಲ್ಲಿ ಭಾಷಣ ಆರಂಭಿಸಿ ನಂತರ ಮರಾಠಿಯಲ್ಲಿ ಭಾಷಣ ಮುಂದುವರಿಸಿದರು. ತದನಂತರ ಮತ್ತೆ ಕನ್ನಡದಲ್ಲಿ ಭಾಷಣ ಮಾಡಿದರು. ನಿಮ್ಮ ಸಮಾಜದ ಬಗ್ಗೆ ಗೌರವ ಕಾಳಜಿಯಿಂದ ಬಂದಿದ್ದೇನೆ. ನನಗೆ ರಾಜಕೀಯ ಪುನರ್ಜನ್ಮ ನೀಡಿದ ಸಮುದಾಯ ನಿಮ್ಮದು. ನಿಮ್ಮ ಜೊತೆ ನಾನು ಸದಾ ನಿಂತುಕೊಳ್ಳುತ್ತೇನೆ. 2ಎ ಮೀಸಲಾತಿ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಬಳಿ ಮನವಿ ಮಾಡುತ್ತೇನೆ. ಸದನದಲ್ಲಿ ಅವಕಾಶ ಸಿಕ್ಕರೆ ಈ ಬಗ್ಗೆ ಮಾತನಾಡುತ್ತೇನೆ ಎಂದರು. ಕೊನೆಯಲ್ಲೂ ಮರಾಠಿಯಲ್ಲಿ ಮಾತನಾಡಿ ಭಾಷಣ ಮುಗಿಸಿದರು.
ಶಿವಮೊಗ್ಗದಲ್ಲಿ ಎರಡು ವರ್ಷ ನೆರೆಹಾನಿಗೆ ಅಪಾರ ಪ್ರಮಾಣದ ನಷ್ಟವಾಗಿದೆ. ಈಶ್ವರಪ್ಪ ಅವರು ಕಲಾಪಕ್ಕೆ ಪಾಲ್ಗೊಂಡರೆ ಮಾತ್ರ ಅನುದಾನ ಸಿಗುತ್ತದೆ. ಇನ್ನೊಂದು ಬಜೆಟ್ ಅಧಿವೇಶನ ಬಾಕಿ ಇದೆ. ಎರಡು ಅಧಿವೇಶನ ತಪ್ಪಿಸಿಕೊಂಡ ಈಶ್ವರಪ್ಪ ಇನ್ನೇನು ಮಾತನಾಡುತ್ತಾರೆ ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ವಾಗ್ದಾಳಿ ನಡೆಸಿದರು. ಬ್ಲಾಕ್ಮೇಲ್ ತಂತ್ರ ನಿಮ್ಮ ಪಕ್ಷದಲ್ಲಿ ಇಟ್ಟುಕೊಳ್ಳಿ. ಬಿಜೆಪಿ ಹೊಸ ಮೋರ್ಚಾಗಳನ್ನ ಹುಟ್ಟು ಹಾಕಿದೆ ಎಂಬ ಅನುಮಾನ ಇದೆ. ಇ.ಡಿ, ಐಟಿ ಮೋರ್ಚಾಗಳನ್ನ ಬಳಸಿ ಕಾಂಗ್ರೆಸ್ ನಾಯಕರ ಮೇಲೆ ದಾಳಿ ನಡೆಸಲಾಗುತ್ತಿದೆ. ಬಿಜೆಪಿ ನಾಯಕರು ಇವರ ಕಣ್ಣಿಗೆ ಬಿದ್ದಿಲ್ವಾ? ಈಶ್ವರಪ್ಪ ಮನೆಯಲ್ಲಿ ನೋಟ್ ಎಣಿಸುವ ಮಷಿನ್ ಸಿಕ್ಕಿತ್ತು. ಈಶ್ವರಪ್ಪ ಮೇಲೆ ಯಾವುದೇ ದಾಳಿ ಮಾಡಿಲ್ಲ, ಈಶ್ವರಪ್ಪಗೆ ಕ್ಲೀನ್ ಚಿಟ್ ನೀಡಿರುವುದು ಪೊಲೀಸರು, ನ್ಯಾಯಾಲಯದಿಂದ ಕ್ಲೀಚ್ ಚಿಟ್ ಸಿಕ್ಕಿಲ್ಲ ಎಂದರು.
ಶಿವಮೊಗ್ಗ ಮಾಜಿ ಶಾಸಕ ಕೆ.ಬಿ ಪ್ರಸನ್ನಕುಮಾರ್ (B.K.Prasanna Kumar) ಪತ್ರಿಕಾಗೋಷ್ಠಿ ನಡೆಸಿ ಬೆಳಗಾವಿ ಕಲಾಪಕ್ಕೆ ಗೈರಾಗಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (K.S.Eshwarappa) ವಿರುದ್ಧ ವಾಗ್ದಾಳಿ ನಡೆಸಿದರು. ಈಶ್ವರಪ್ಪ ಕಳೆದ ವಿಧಾನಸಭಾ ಅಧಿವೇಶನಕ್ಕೂ ಹೋಗಲಿಲ್ಲ, ಜನ ಆರೋಗ್ಯ ಸಮಸ್ಯೆ ಎಂದು ತಿಳಿದುಕೊಂಡರು. ಈಗ ಪುನಃ ಅಧಿವೇಶನ ನಡೆಯುತ್ತಿದೆ, ಅಧಿವೇಶನಕ್ಕೆ ಗೈರಾಗಿದ್ದಾರೆ. ಬೆಳಗಾವಿಗೆ ಹೋದರೂ ಅಧಿವೇಶನಕ್ಕೆ ಹೋಗಿಲ್ಲ. ತಮ್ಮ ಮೌನ ಪ್ರತಿಭಟನೆ ಎಂದು ಹೇಳಿಕೊಂಡಿದ್ದಾರೆ. ಇದು ಈಶ್ವರಪ್ಪ ಶಿವಮೊಗ್ಗ ಜನತೆಗೆ ಮಾಡುತ್ತಿರುವ ದ್ರೋಹ. ಬಿಜೆಪಿ ಕ್ಷುಲ್ಲಕ ಕಾರಣದಿಂದ ಮಂತ್ರಿ ಪದವಿ ನೀಡಿಲ್ಲ ಎಂದರು. ಇಂದು ತುರ್ತು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಸಿಎಂ ಬೊಮ್ಮಾಯಿ ಅವರು ಸಚಿವ ಸ್ಥಾನಕ್ಕೆ ವಾಪಸ್ ತೆಗೆದುಕೊಳ್ಳಲು ಭರವಸೆ ನೀಡಿದ್ದಾರೆ ಎಂದಿದ್ದಾರೆ. ಪಕ್ಷದವರೇ 40 ಪರ್ಸೆಂಟ್ ಅಪವಾದಕ್ಕೆ ಬರಬೇಡಿ ಎಂದಿದ್ದಾರೋ ಎಂಬ ಅನುಮಾನ ಇದೆ ಎಂದರು.
ಬೆಳಗಾವಿ ಸುವರ್ಣ ಸೌಧದ ಬಳಿ ಮರಾಠ ಸಮುದಾಯದ ಪ್ರತಿಭಟನೆ ನಡೆಯುತ್ತಿದ್ದು, ಪ್ರತಿಭಟನಾ ಸ್ಥಳಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್,
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೋಳಿ ಆಗಮಿಸಿದರು. ನಿನ್ನೆ ಲಿಂಗಾಯತ ಪಂಚಮಶಾಲಿ ಹೋರಾಟದಲ್ಲಿ ಭಾಗಿಯಾಗಿದ್ದ ಲಕ್ಷ್ಮಿ ಹೆಬ್ಬಾಳ್ಕರ್, ಇದೀಗ ಕ್ಷೇತ್ರದಲ್ಲಿರುವ ಮರಾಠ ಸಮುದಾಯದವನ್ನು ಓಲೈಸಲು ಮುಂದಾಗಿದ್ದಾರೆ. ಇನ್ನು ಹಿಂದೂ ಪದದ ಹೇಳಿಕೆ ಹಾಗೂ ಶಂಭಾಜಿ ಮಹಾರಾಜ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸತೀಶ್ ಜಾರಕಿಹೋಳಿ, ಮರಾಠ ಪ್ರತಿಭಟನೆಯಲ್ಲಿ ಭಾಗಿಯಾಗುವ ಮೂಲಕ ಇಮೇಜ್ ಡ್ಯಾಮೇಜ್ ಅನ್ನು ಸರಿಪಡಿಸಲು ಮುಂಗಿದ್ದಾರೆ.
ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ಸುವರ್ಣಸೌಧದ ಬಳಿ ಇರುವ ಬಸ್ತವಾಡದಲ್ಲಿ ವಿಕಲಚೇತನರು ಪ್ರತಿಭಟನೆ ನಡೆಸಿದರು. ರಾಜ್ಯದ ವಿವಿಧ ಮೂಲೆಗಳಿಂದ ವಿಕಲಚೇತನರು ಪ್ರತಿಭಟನೆಗೆ ಆಗಮಿಸಿದರು. ಗೌರವಧನ ಕಾರ್ಯಕರ್ತರ ಹುದ್ದೆಯನ್ನ ಖಾಯಂಗೊಳಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. 2007 ರಿಂದ ಈವರೆಗೆ 6500 ವಿಕಲಚೇತನರಿಂದ ಸೇವೆ ಸಲ್ಲಿಸಲಾಗುತ್ತಿದೆ. ವಿಕಲಚೇತನರಿಗೆ ಸರ್ಕಾರಿ ಸೇವೆಗಳನ್ನ 6500 ವಿಕಲಚೇತನ ಗೌರವ ಕಾರ್ಯಕರ್ತರು ತಲುಪಿಸುತ್ತಿದ್ದಾರೆ. ನಾವೂ ಕೂಡ ವಿಕಲಚೇತನರು. ಕುಂಟುತ್ತಾ, ತೆವಳುತ್ತ ಸರ್ಕಾರದ ಯೋಜನೆಗಳನ್ನ ವಿಕಲಚೇತನರ ಮನೆಗಳಿಗೆ ತಲುಪಿಸುತ್ತೇವೆ. ಆದರೆ ನಮಗೆ ಸೂಕ್ತ ಸೌಲಭ್ಯಗಳಿಲ್ಲ. ಕೂಡಲೇ ತಮ್ಮನ್ನ ಖಾಯಂ ನೌಕರರನ್ನಾಗಿಸುವಂತೆ ಒತ್ತಾಯಿಸಿದರು.
ವಿಧಾನಸಭೆ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ (Karnataka-Maharashtra Border Dispute) ಕುರಿತ ಚರ್ಚೆ ವೇಳೆ ಸದನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಅನುಪಸ್ಥಿತಿ ಹೊಂದಿದ್ದಾರೆ. ಇದಕ್ಕೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದರು. ಪರಿಷತ್ನಲ್ಲಿ ಕೂಡಾ ಗಡಿ ವಿಚಾರ ಇರುವ ಕಾರಣ ಸಿಎಂ ಅಲ್ಲಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಸಮರ್ಥನೆ ನೀಡಿದರು. ಸಿಎಂ ಇಲ್ಲದ ಕಾರಣ ಭೋಜನದ ಬಳಿಕ ಸಿಎಂ ಉಪಸ್ಥಿತಿಯಲ್ಲಿ ಚರ್ಚೆ ಮುಂದುವರಿಸಲು ನಿರ್ಧಾರ ಮಾಡಲಾಗಿದೆ. ನೀವು ಮಹಾರಾಷ್ಟ್ರ ಉಸ್ತುವಾರಿ ಇದ್ದಿರಿ, ನಿಮ್ಮನ್ನು ಬಿಡುಗಡೆ ಮಾಡಿದ್ದಾರೋ ಅಥವಾ ಅಲ್ಲೇ ಇದ್ದೀರೋ ಎಂದು ಕಾಂಗ್ರೆಸ್ ಶಾಸಕ ಹೆಚ್.ಕೆ. ಪಾಟೀಲ್ ಅವರನ್ನು ಸ್ಪೀಕರ್ ಕಿಚಾಯಿಸಿದರು. ಬಹುಷ: ಅವರು ಸ್ಪೀಕರ್ ಪತ್ರಕ್ಕಾಗಿ ಕಾಯುತ್ತಿರಬಹುದು ಎಂದು ಹೆಚ್.ಕೆ. ಪಾಟೀಲ್ ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನ ಪರಿಷತ್ ಕಲಾಪದಲ್ಲೂ ಭಾಗಿಯಾದರು. ಸದನದಲ್ಲಿ ಮಾತನಾಡಿದ ಅವರು, ಕಬ್ಬು ಬೆಳೆಗಾರರ ಸಮಸ್ಯೆಗೆ ಹತ್ತು ಹಲವು ಆಯಾಮಗಳಿವೆ. ಅದಕ್ಕೆ ಪ್ರಶ್ನೋತ್ತರಕ್ಕೆ ಮಾತ್ರ ಸೀಮಿತ ಮಾಡಲು ಸಾಧ್ಯವಿಲ್ಲ. ಬೇರೆ ನಿಯಮದ ಮೇಲೆ ಚರ್ಚೆಗೆ ಅವಕಾಶ ನೀಡಿದರೆ ಉತ್ತಮ ಎಂದರು.
ವಿಧಾನ ಪರಿಷತ್: ವಶಿಷ್ಟ ಕೋಆಪರೇಟಿವ್ ಸೊಸೈಟಿ ವಂಚನೆ ಕುರಿತು ಯುಬಿ ವೆಂಕಟೇಶ ಹಾಗೂ ಸಚಿವ ಎಸ್.ಟಿ ಸೋಮಶೇಖರ್ ಮಧ್ಯೆ ಮಾತಿನ ಜಟಾಪಟಿ ನಡೆಯಿತು. ದಯವಿಟ್ಟು ಪ್ರಕರಣ ಸಿಬಿಐಗೆ ವಹಿಸಿ ಸಚಿವರ ಕಾಲಿಗೆ ಬೀಳುತ್ತೇನೆ ಎಂದು ವೆಂಕಟೇಶ್ ಅವರು ಹೇಳಿದರು. ಅವರ ಕಾಲಿಗ್ಯಾಕೆ ಬೀಳುತ್ತೀರಿ? ಅದು ಸರ್ಕಾರದ ಜವಾಬ್ದಾರಿ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು. ಈ ವೇಳೆ ಉತ್ತರಿಸಿದ ಸಚಿವರು, ನಾವು ಕಾನೂನು ಪ್ರಕಾರವೇ ತನಿಖೆ ಮಾಡಬೇಕಾಗುತ್ತದೆ, ಸಿಓಡಿ ನೀಡಿದ್ದೇವೆ, ಏಕಾಏಕಿ ಹೋಗಿ ನೇಣಿಗೆ ಹಾಕಲು ಆಗತ್ತಾ ಎಂದು ಹೇಳಿದರು.
ವಿಧಾನ ಪರಿಷತ್: ವಸಿಷ್ಟ ಸೌಹಾರ್ದ ಸಹಕಾರ ಸೊಸೈಟಿಯಿಂದ ಅನ್ಯಾಯ ಆಗಿದೆ. ಪ್ರಭಾವಿ ವ್ಯಕ್ತಿಗಳನ್ನು ರಕ್ಷಣೆ ಮಾಡಲು ಸಚಿವರು ಸರ್ಕಾರ ಮುಂದಾಗಿದೆ ಎಂದು ಯುಬಿ ವೆಂಕಟೇಶ್ ಆರೋಪಿಸಿದರು. ಈ ವೇಳೆ ಎದ್ದುನಿಂತು ಉತ್ತರಿಸಿದ ಸಚಿವ ಎಸ್.ಟಿ ಸೋಮಶೇಖರ್, ವಸಿಷ್ಠ ಸೊಸೈಟಿಯ ಹಗರಣ ಸಿಐಡಿಗೆ ವಹಿಸಿ ಸೀಜ್ ಮಾಡಲು ಮುಂದಾಗಿದ್ದೇವೆ. 27 ಕೋಟಿ ಹಣ ರಿಕವರಿ ಮಾಡಲಾಗಿದೆ, 729 ಮಂದಿಗೆ ಮರು ಪಾವತಿ ಮಾಡಲಾಗಿದೆ. ಸಕ್ಷಮ ಪ್ರಾಧಿಕಾರ ರಚನೆ ಮಾಡಿ ಆಡಿಟ್ ಮರುಪರಿಶೀಲನೆ ಮಾಡಲು ಹೊರಟಿದ್ದೇವೆ ಎಂದರು. ಈ ವೇಳೆ ಮಾತನಾಡಿದ ವೆಂಕಟೇಶ್, ತಾತ್ಕಾಲಿಕವಾಗಿ 280 ಕೋಟಿ ವಸಿಷ್ಠ ಸೊಸೈಟಿಯಿಂದ ಅನ್ಯಾಯ ಆಗಿದೆ ಎನ್ನುವ ಮಾಹಿತಿ ಇದೆ. ಅಕ್ರಮದಲ್ಲಿ ಭಾಗಿಯಾದವರ ಸುಸ್ತಿದಾರರ ಲಿಸ್ಟ್ ಯಾಕೆ ಸರ್ಕಾರ ಘೋಷಣೆ ಮಾಡುತ್ತಿಲ್ಲ. 280 ಕೋಟಿ ಹಗರಣ ಯಾಕೆ ಸರ್ಕಾರ ಸಿಬಿಐಗೆ ಕೊಡುವುದಿಲ್ಲ? 12 ಕೋಟಿ ಹಗರಣದ್ದು ಸಿಬಿಐಗೆ ಕೊಡುತ್ತೀರಿ, ಇಷ್ಟು ದೊಡ್ಡ ಹಗರಣದ್ದು ಯಾಕೆ ಸಿಬಿಐಗೆ ಕೊಡಲ್ಲ? ಯಾವ ಪ್ರಭಾವಿಗಳು ಸರ್ಕಾರದ ಕೈ ಕಟ್ಟಿ ಹಾಕಿದ್ದಾರೆ ಎಂದು ಪ್ರಶ್ನಿಸಿದರು.
ವಿಧಾನ ಪರಿಷತ್: ಗದಗ ಬೆಟಗೇರಿ ಅವಳಿ ನಗರಕ್ಕೆ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ, 10-12 ದಿನಕ್ಕೆ ನೀರು ಬರುವ ಗಂಭೀರ ಸ್ಥಿತಿ ಇದೆ ಎಂದು ಎಸ್.ವಿ.ಸಂಕನೂರು ಹೇಳಿದರು. ಮೂರು ತಿಂಗಳಲ್ಲಿ ಮುಗಿಬೇಕಾಗಿದ್ದ ಕಾಮಗಾರಿ 10 ವರ್ಷ ಆದರೂ ಮುಗಿದಿಲ್ಲ ಎಂದು ಸರ್ಕಾರದ ವಿರುದ್ದ ಆಡಳಿತ ಪಕ್ಷದ ಸದಸ್ಯರಿಂದಲೇ ಆಕ್ರೋಶ ವ್ಯಕ್ತವಾಯಿತು. ಈ ವೇಳೆ ಮಾತನಾಡಿದ ಸಚಿವ ಭೈರತಿ ಬಸವರಾಜ, ಗುತ್ತಿಗೆದಾರರನ್ನು ಟರ್ಮಿನೇಟ್ ಮಾಡುವ ಕೆಲಸ ಮಾಡುತ್ತೇವೆ ಎಂದರು.
ವಿಧಾನ ಪರಿಷತ್: ಕಬ್ಬು ಬೆಳೆಗಾರರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂದು ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಸದಸ್ಯ ಲಕ್ಷ್ಮಣ ಸವದಿ ಹೇಳಿದರು. ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ಮಾಡುವ ಧೈರ್ಯವನ್ನು ಸಚಿವರು ತೋರಿಸಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸಕ್ಕರೆ ಕಾರ್ಖಾನೆಗಳು ತೂಕದಲ್ಲಿ ಮೋಸ ಮಾಡುತ್ತಿರುವುದು ನಿಜ. ಕೆಲ ದಿನಗಳ ಹಿಂದೆ ಮಹಾರಾಷ್ಟ್ರದಿಂದ ಕಬ್ಬು ಕಟಾವಿಗೆ ಬಂದಿದ್ದ ಮಹಿಳೆಗೆ ಕಬ್ಬಿನ ಹೊಲದಲ್ಲಿಯೇ ಹೆರಿಗೆ ಆಗಿದೆ. ಅವರು 3 ದಿನಗಳ ನಂತರ ತನ್ನ ಮಗುವನ್ನು ಬಿಟ್ಟು ಕಬ್ಬು ಕಟಾವಿಗೆ ಹೋಗಿದ್ದಾಳೆ. ಅಂತಹ ಮಹಿಳೆಯರು ಕಟಾವು ಮಾಡುವ ಕಬ್ಬಿನ ತೂಕದಲ್ಲಿ ನೀವು ಮೋಸಮಾಡಿದರೆ ನಿಮಗೆ ಒಳ್ಳೆಯದಾಗುವುದಿಲ್ಲ. 20 ಟನ್ ತೂಕದಲ್ಲಿ 2 ಟನ್ ಹೊಡೆದು ಬರಿ 18 ಟನ್ ತೋರಿಸುತ್ತೀರಿ. ನಿಮಗೆ ಒಳ್ಳೆಯದಾಗಯತ್ತದೆಯಾ? ಎಂದ ಸವದಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸಚಿವ ಮುರುಗೇಶ್ ನಿರಾಣಿ ಮಧ್ಯೆ ಪ್ರವೇಶ ಮಾಡಿ ಮಾತನಾಡಲು ಮುಂದಾದಾಗ ನಿರಾಣಿಗೆ ಮಾತನಾಡಲು ಸಭಾಪತಿ ಮಲಕಾಪೂರೆ ಅವಕಾಶ ನಿರಾಕರಿಸಿದರು. ಈ ವೇಳೆ ಸಚಿವರಿಗೆ ಮಾತನಾಡಲು ಅವಕಾಶ ಕೊಡಬೇಕು ಎಂದು ಮರಿತಿಬ್ಬೆಗೌಡ ಅವರು ಸದನದ ಬಾವಿಗೆ ಇಳಿದು ಧರಣಿ ನಡೆಸಿದರು. ಇವರಿಗೆ ಬೆಂಬಲವಾಗಿ ಕಾಂಗ್ರೆಸ್ ಸದಸ್ಯರು ಕೂಡ ಬಾವಿಗಿಳಿದರು.
ವಿಧಾನಸಭೆ: ಕೆಪಿಟಿಸಿಎಲ್ ಪರೀಕ್ಷೆ ಕೀ ಉತ್ತರಗಳ ಬಿಡಗಡೆ ವಿಳಂಭದ ಬಗ್ಗೆ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಅವರು ವಿಧಾನಸಭೆ ಶೂನ್ಯವೇಳೆಯಲ್ಲಿ ಪ್ರಸ್ತಾಪ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವ ಸುನೀಲ್ ಕುಮಾರ್, ಈ ತಿಂಗಳಿನಲ್ಲೇ ಕೀ ಆನ್ಸರ್ ಕೊಡಿಸಿ ಜನವರಿ ತಿಂಗಳಿನಲ್ಲಿ ಫಲಿತಾಂಶ ಕೊಡಿಸುವುದಾಗಿ ಭರವಸೆ ನೀಡಿದರು.
ಬೆಳಗಾವಿ: ರೈತ ಪ್ರತಿಭಟನೆ ವೇಳೆ ಗೊಂದಲ, ಗಲಾಟೆ ಏರ್ಪಟ್ಟಿದೆ. ಮಂಜುಳಾ ಪೂಜಾರಿಗೆ ವೇದಿಕೆ ಅವಕಾಶ ಕೊಡದ ಹಿನ್ನಲೆ ಕೆಲವು ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ರೈತ ಮುಖಂಡರು ತರಾಟೆಗೆ ತೆಗೆದುಕೊಂಡರು. ನಾವು ಹೋರಾಟ ಮಾಡುವುದೇ ಈ ರೀತಿ, ಇರುವುದಾದರೆ ಇರಿ, ಇಲ್ಲ ಇಲ್ಲಿಂದ ಹೋಗಿ ಅಂತಾ ತಾಕೀತು ಮಾಡಿದರು. ಇದರಿಂದ ಅಸಮಾಧಾನಗೊಂಡ ಮಂಜುಳಾ ಪೂಜಾರಿ ಹಾಗೂ ಕೆಲ ಬೆಂಬಲಿಗರು ಹೊರಗೆ ನಡೆದರು. ನಾವು ರೈತರಿಗೆ ನೆರಳು ಕಲ್ಪಿಸುವಂತೆ ಕೇಳಿದೆವು ಅಷ್ಟೇ, ಬೇರೆ ಯಾವುದೇ ಗೊಂದಲ ಇಲ್ಲ ಹೀಗಾಗಿ ನಾನು ವಾಪಸ್ಸು ಬಂದೆ, ರೈತರಲ್ಲಿ ಒಗ್ಗಟ್ಟಿಲ್ಲ ಭೇದ ಭಾವ ಮಾಡಿದರೆ ಹೋರಾಟ ಗೆಲ್ಲಲು ಸಾಧ್ಯವಿಲ್ಲ. ವೇದಿಕೆಯಲ್ಲಿ ಕುಳಿತವರು ಯಾರು ಉದ್ದಾರ ಆಗಲ್ಲ, ನಾನು ಪ್ರತಿಭಟನೆಯಲ್ಲಿ ಭಾಗಿಯಾಗಲ್ಲ ಅಂತಾ ವಾಪಸ್ಸಾದ ಮಂಜುಳಾ ಪೂಜಾರಿ.
ಬಂಧಿಗಳ ಗುರುತಿಸುವಿಕೆ ಕರ್ನಾಟಕ ತಿದ್ದುಪಡಿ ವಿಧೇಯಕವನ್ನು ರಾಜ್ಯ ಸರ್ಕಾರವು ವಿಧಾನಸಭೆಯಲ್ಲಿ ವಾಪಸ್ ಪಡೆಯಿತು. ಕೇಂದ್ರದಿಂದ ಕ್ರಿಮಿನಲ್ ಪ್ರೊಸೀಜರ್ ಐಡೆಂಟಿಫಿಕೇಷನ್ ಆ್ಯಕ್ಟ್ ಜಾರಿ ಹಿನ್ನಲೆ 2021ನೇ ಸಾಲಿನ ಬಂದಿಗಳ ಗುರುತಿಸುವಿಕೆ ತಿದ್ದುಪಡಿ ಬಿಲ್ ವಾಪಸ್ ಪಡೆಯಿತು.
ಬೆಳಗಾವಿ: ರೈತರ ಪ್ರತಿಭಟನಾ ಸ್ಥಳಕ್ಕೆ ತೆರಳಲು ಪೋಲಿಸರು ವಿಪರೀತ ತಪಾಸಣೆ ನಡೆಸುತ್ತಿದ್ದಾರೆ. ಪೊಲೀಸರ ನಡೆಗೆ ಬೇಸತ್ತ ಹಿರಿಯ ರೈತರೊಬ್ಬರು ಪೊಲೀಸರಿಗೆ ಆವಾಜ್ ಹಾಕಿದ್ದಾರೆ. ಬೆಳಗಾವಿ ಸುವರ್ಣ ಸೌಧದ ಮುಂದಿನ ಕೊಂಡಸಕೊಪ್ಪ ಪ್ರತಿಭಟನಾ ಸ್ಥಳದ ಬಳಿ ಆವಾಜ್ ಹಾಕಿದ್ದಾರೆ. ಇಂದು ಏಕಕಾಲದಲ್ಲಿ ರೈತ ಸಂಘಟನೆ ಮತ್ತು ಮರಾಠ ಸಮುದಾಯದಿಂದ ಪ್ರತಿಭಟನೆ ಆಯೋಜಿಸಿದ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಆಗಮಿಸಿದ್ದರು. ಭದ್ರತಾ ದೃಷ್ಟಿಯಿಂದ ಜನರನ್ನು ಒಂದೇ ಒಂದು ಗೇಟ್ನಲ್ಲಿ ತಪಾಸಣೆ ಮಾಡಿ ಒಳಬಿಡಲಾಗುತ್ತಿದೆ. ಇದರಿಂದ ಸರತಿ ಸಾಲಿನಲ್ಲಿ ಕಾದು ಕಾದು ಬೇಸರಗೊಂಡ ರೈತರು ಹಿರಿಯ ಅಧಿಕಾರಗಳ ಜೊತೆಗೆ ವಾಗ್ವಾದಕ್ಕಿಳಿದರು.
ವಿಧಾನಸಭೆ: ರಾಜ್ಯಾದ್ಯಂತ ಪೆನ್ಷನ್ ಸ್ಕೀಮ್ (NPS) ವಿಚಾರವನ್ನು ಶೂನ್ಯವೇಳೆಯಲ್ಲಿ ಬೇಲೂರು ಶಾಸಕ ಲಿಂಗೇಶ್ ಪ್ರಸ್ತಾಪಿಸಿದರು. ಈ ವೇಳೆ ಇತರೆ ಶಾಸಕರು ಕೂಡ ಧ್ವನಿಗೂಡಿಸಿ ಹಳೆ ಪೆನ್ಶನ್ ಸ್ಕೀಮ್ ಜಾರಿಗೆ ತರುವಂತೆ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ಇದೊಂದು ಗಂಭೀರವಾದ ವಿಚಾರ. ಇಡೀ ರಾಜ್ಯದ ಜನರ ಶ್ರಮದಿಂದ ಬೊಕ್ಕಸಕ್ಕೆ ಹಣ ಬರುತ್ತದೆ. ರಾಜ್ಯದ ಸರ್ಕಾರಿ ನೌಕರರಿಗೆ ಹಲವು ಸೌಲಭ್ಯ ನೀಡಿದ್ದೇವೆ. ಟಿಎ, ಡಿಎ ಕಾಲಕಾಲಕ್ಕೆ ನೀಡುತ್ತಿದ್ದೇವೆ. 7ನೇ ಪೇ ಕಮಿಷನ್ ನೇಮಕ ಮಾಡುವ ಡಿಮ್ಯಾಂಡ್ ಇತ್ತು, ಮಾಡಿದ್ದೇವೆ. ಎನ್ಪಿಎಸ್ ಸಾಧಕ ಬಾಧಕ ಚರ್ಚೆ ಮಾಡಬೇಕು. ಏಕಪಕ್ಷೀಯವಾಗಿ ಕ್ರಮ ತೆಗೆದುಕೊಳ್ಳುವುದು ಸರ್ಕಾರದ ಅಧಿಕಾರ ಇರಬಹುದು. ಸಾರ್ವಜನಿಕ ವಲಯದಲ್ಲಿ ಇದರ ಪರಿಣಾಮ ಹೇಗೆ ಅನ್ನೋದು ಚರ್ಚೆ ಆಗಬೇಕು. ಇದನ್ನ ಪ್ರತ್ಯೇಕ ಚರ್ಚೆ ಮಾಡಿ ಅಭಿಪ್ರಾಯ ಪಡೆಯುವಂತೆ ಸ್ಪೀಕರ್‌ಗೆ ಸಿಎಂ ಮನವಿ ಮಾಡಿದರು. ಈ ವಿಚಾರದ ಚರ್ಚೆಗೆ ಮುಕ್ತ ಅವಕಾಶ ನೀಡುದಾಗಿ ಸ್ಪೀಕರ್ ಭರವಸೆ ನೀಡಿದರು.
ಬೆಳಗಾವಿ: ಡಿ.22ರಂದು ಸುವರ್ಣಸೌಧ ಬಳಿ ಪಂಚಮಸಾಲಿ ಸಮಾವೇಶ ವಿಚಾರವಾಗಿ ಮಾತನಾಡಿದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ (Basavana Gowda Patil Yatnal), ಡಿ.22ರೊಳಗೆ ಮುಖ್ಯಮಂತ್ರಿಯವರು ಸ್ಪಷ್ಟ ನಿಲುವು ಪ್ರಕಟಿಸುತ್ತಾರೆ ಎಂಬ ವಿಶ್ವಾಸ ಇದೆ. ಅಷ್ಟು ವಿಶ್ವಾಸ ಇದ್ದೂ ಆಗದಿದ್ದರೆ ರಾಜೀನಾಮೆ ನೀಡುತ್ತೇನೆ. ಪ್ರಾಣ ಕೊಡುತ್ತೇನೆ,ಬಲಿದಾನ ಕೊಡುತ್ತೇನೆ ಅಂತಾ ದೊಡ್ಡ ಡೈಲಾಗ್ ಹೊಡೆಯಲ್ಲ. ರಾಜಕೀಯ ಲಾಭಕ್ಕೆ ದೊಡ್ಡ ಡೈಲಾಗ್ ಹೊಡೆಯುವವನು ನಾನಲ್ಲ.ನನಗೆ ನೂರಕ್ಕೆ ನೂರು ವಿಶ್ವಾಸ ಇದೆ. ನೂರಕ್ಕೆ ನೂರು ಸಕಾರಾತ್ಮಕ ನಿರ್ಣಯ ಬೊಮ್ಮಾಯಿ ಕೊಟ್ಟೇ ಕೊಡುತ್ತಾರೆ. ಅಷ್ಟು ವಿಶ್ವಾಸ ಇದ್ದಾಗ ಹಿರೋ ಆಗಲು ಪ್ರಾಣ ಕೊಡುತ್ತೇನೆ ಅಂತಾ ದೊಡ್ಡ ಡೈಲಾಗ್ ಹೇಳಲ್ಲ ಎಂದರು.
ವಿಧಾನಸಭೆ: ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಕುರಿತು ನಿಲುವಳಿ ಮೇಲೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಚರ್ಚೆಗೆ ಅವಕಾಶ ಕೋರಿದರು. ವಿಧೇಯಕ ಕೂಡಾ ಇರುವ ಕಾರಣ ವಿಧೇಯಕದ ಮೇಲೆ ಚರ್ಚೆ ವೇಳೆ ಮಾತನಾಡಿ ಎಂದು ವಿಧಾನಸಭೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಈ ವೇಳೆ ಪ್ರತ್ಯೇಕ ಚರ್ಚೆಗೆ ಅವಕಾಶ ಕೊಡಬೇಕು ಎಂದು ಸಿದ್ದರಾಮಯ್ಯ ಹೇಳಿದರು. ನಾಳೆ ಅಥವಾ ನಾಡಿದ್ದು ನಿಯಮ 69 ರಡಿ ಚರ್ಚೆಗೆ ಅವಕಾಶ ಕೊಡುವುದಾಗಿ ಹೇಳಿದ ಸಭಾಪತಿ ಹೇಳಿದರು. ಇದಕ್ಕೆ ಸಿದ್ದರಾಮಯ್ಯ ಅವರು ಇಂದೇ ಚರ್ಚೆಗೆ ಕೊಡಬೇಕು ಎಂದು ಒತ್ತಾಯಿಸಿದರು. ಈ ವೇಳೆ ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಮಧ್ಯಪ್ರವೇಶಿಸಿದಾಗ, ಯಾಕಪ್ಪಾ ಮಾಧುಸ್ವಾಮಿ (J.C.Madhuswamy) ಎಲ್ಲದಕ್ಕೂ ಅಡ್ಡಿ ಪಡಿಸುತ್ತಿಯಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಈ ವೇಳೆ ಎದ್ದುನಿಂತ ಸಚಿವ ಗೋವಿಂದ ಎಂ ಕಾರಜೋಳ (Govinda M Karajola), ಮಾಧುಸ್ವಾಮಿ ಅಡ್ಡಿಪಡಿಸಿಲ್ಲ, ಮೀಸಲಾತಿ ಹೆಚ್ಚಳಕ್ಕೆ ಕಾಂಗ್ರೆಸ್ ಅಡ್ಡಿಪಡಿಸುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ನನ್ನ ಕ್ಷೇತ್ರದಲ್ಲಿರುವ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಅನುದಾನ ಕೊಟ್ಟಿಲ್ಲ, ಅನುದಾನವನ್ನೂ ತಡೆ ಹಿಡಿಯುವ ಕೆಲಸ ಮಾಡಲಾಗಿದೆ ಎಂದು ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಹೇಳಿದರು. ಮೈತ್ರಿ ಸರ್ಕಾರ ಬಂದಾಗ 5 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು ಎಂದರು. ಇದಕ್ಕೆ ಉತ್ತರಿಸಿದ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai), ಅಲ್ಪಸಂಖ್ಯಾತರ ಯೋಜನೆಗಳಡಿ ಅನುದಾನ ಬಿಡುಗಡೆ ಮಾಡುತ್ತೇವೆ. ಈಗಾಗಲೇ ಹಂತ ಹಂತವಾಗಿ 5 ಕೋಟಿ ರೂ. ಬಿಡುಗಡೆ ಆಗುತ್ತಿದೆ. ಕೊವಿಡ್ನಿಂದ ಕೆಲವು ಇಲಾಖೆಗಳಲ್ಲಿ ಅನುದಾನ ಕಡಿತ ಆಗಿತ್ತು. ಶಾಸಕರು ವಿವರ ಕೊಟ್ಟರೆ ಅನುದಾನ ಬಿಡುಗಡೆಗೆ ಕ್ರಮ ವಹಿಸುತ್ತೇವೆ ಎಂದರು.
ಹೊಳೆನರಸೀಪುರ (Holenarasipura) ಕ್ಷೇತ್ರದ ಕಾಮಗಾರಿಗೆ ಬಿಲ್ ಬಿಡುಗಡೆ ಮಾಡಿಲ್ಲ. ಕಳೆದ ಎರಡು ವರ್ಷಗಳಿಂದ ಯಾವುದೇ ಹಣ ಬಿಡುಗಡೆ ಆಗಿಲ್ಲ. ಸರ್ಕಾರ ಕೂಡಲೇ ಸಣ್ಣ ಗುತ್ತಿಗೆದಾರರ ಹಣ ಬಿಡುಗಡೆ ಮಾಡಬೇಕು ಎಂದು ಪ್ರಶ್ನೋತ್ತರ ಕಲಾದಲ್ಲಿ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ (H.D.Revanna) ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ (C.C.Patil), ದೊಡ್ಡ ಗುತ್ತಿಗೆದಾರರ ಹಣವನ್ನು ಆದ್ಯತೆ ಮೇಲೆ ನೀಡಲಾಗುತ್ತಿದೆ. ಶೀಘ್ರವೇ ಸಣ್ಣ ಗುತ್ತಿಗೆದಾರರ ಹಣವನ್ನೂ ಬಿಡುಗಡೆ ಮಾಡುತ್ತೇವೆ ಎಂದರು.
ವಿಧಾನ ಪರಿಷತ್ನಲ್ಲಿ ಗಡಿ ವಿವಾದ ಕುರಿತು ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರು ನಿಲುವಳಿ ಸೂಚನೆ ನೀಡಿದ್ದಾರೆ. ಸರ್ಕಾರ ಗಡಿ ವಿವಾದವನ್ನು ಪರಿಹರಿಸುವಲ್ಲಿ ವಿಫಲವಾಗಿದೆ. ಈ ವಿಷಯ ಮಹತ್ವದಾದ್ದರಿಂದ ನಿಯಮ 59ರ ಅಡಿ ನಿಲುವಳಿ ಸೂಚನೆ ನೀಡಿದ್ದಾರೆ.
ಸುವರ್ಣಸೌಧದಲ್ಲಿ ವೀರಸಾವರ್ಕರ್ ಅವರ ಭಾವಚಿತ್ರ ಇಟ್ಟಿರುವುದಾಗಿ ಕಾಂಗ್ರೆಸ್ ಒಳಗೊಳಗಿಂದಲೇ ಕುದಿಯುತ್ತಿದೆ. ಈ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿದ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಸರ್ಕಾರ ತೀರ್ಮಾನ ಮಾಡಿದಾಗ ಸರ್ಕಾರದ ಕತ್ತಿನ ಪಟ್ಟಿ ಹಿಡಿಯಲು ಸಾಧ್ಯವಿಲ್ಲ ಎಂದರು. ಕೊಲೆ ಮಾಡಿ ಜೈಲಿಗೆ ಹೋದವರು ಅವರು ಸ್ವತಂತ್ರಕ್ಕಾಗಿ ಹೋಗಿಲ್ಲ. ಸುಮಾರು 6 ಬಾರಿ ಕ್ಷಮಾಪಣ ಪತ್ರ ಬ್ರಿಟಿಷರಿಗೆ ಬರೆದಿದ್ದಾರೆ. ಇಡೀ ಕರ್ನಾಟಕಕ್ಕೆ ರಾಜ್ಯ ಸರ್ಕಾರ ಅವಮಾನ ಮಾಡಿದ್ದಾರೆ. ಸ್ವತಂತ್ರ ವಿರುದ್ದವಾಗಿ ಇದ್ದವರ ಫೋಟೋ ಹಾಕಿರುವುದು ರ್ನಾಟಕಕ್ಕೆ ಅವಮಾನ. ದೇಶದ ಮೊದಲು ಪ್ರಧಾನಿಯಾಗಿದ್ದ ನೆಹರು ಫೋಟೋ ಹಾಕಿಲ್ಲ ಎಂದರು.
ಬೆಳಗಾವಿ ಸುವರ್ಣ ವಿಧಾನಸೌಧ (Belagavi Suvarna Vidhana Soudha)ದಲ್ಲಿ ಎರಡನೇ ದಿನ ಚಳಿಗಾಲದ ಅಧಿವೇಶನ ಆರಂಭಗೊಂಡಿದೆ.
ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ್ ಹೊರಟ್ಟಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಬಿ.ಎಸ್ ಯಡಿಯೂರಪ್ಪ ಜೊತೆಗೆ ಆಗಮಿಸಿದ ಹೊರಟ್ಟಿ, ಪರಿಷತ್ ಸಚಿವಾಲಯದ ಕಾರ್ಯದರ್ಶಿ ಕೆ.ಆರ್ ಮಹಾಲಕ್ಷ್ಮಿಗೆ ನಾಮಪತ್ರ ಸಲ್ಲಿಕೆ ಮಾಡಿದರು. ನಾಳೆ ಪರಿಷತ್ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಮಾಜಿ ಸಚಿವರಾಗಿರುವ ಕೆ.ಎಸ್.ಈಶ್ವರಪ್ಪ (K.S.Eshwarappa) ಮತ್ತು ರಮೇಶ್ ಜಾರಕಿಹೊಳಿ (Ramesh Jarakiholi) ಸಚಿವ ಸ್ಥಾನ ಸಿಗದ ಹಿನ್ನೆಲೆ ಅಸಮಾಧಾನಗೊಂಡಿದ್ದಾರೆ. ಇಂದು ಮಧ್ಯಾಹ್ನ ಈಶ್ವರಪ್ಪ ಅವರು ಸುದ್ದಿಗೋಷ್ಠಿ ಕೂಡ ನಡೆಸುತ್ತಿದ್ದಾರೆ. ಇಬ್ಬರು ನಾಯಕರ ಅಸಮಾಧಾನದ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಅವರ ಭಾವನೆ ನನಗೆ ಅರ್ಥವಾಗಿದೆ. ಸಂಪುಟ ಕುರಿತು ಹೈಕಮಾಂಡ್ ಜೊತೆ ನಾನು ಮಾತನಾಡಿದ್ದೇನೆ. ವರಿಷ್ಠರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈಶ್ವರಪ್ಪ, ರಮೇಶ್ ಜಾರಕಿಹೊಳಿ ಜೊತೆ ನಾನು ಮಾತನಾಡುತ್ತೇನೆ ಎಂದರು.
ಬೆಳಗಾವಿ: ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲ ಅಧಿವೇಶನ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ನಿನ್ನೆಯಂತೆ ಇಂದು ಕೂಡ ಸರಣಿ ಪ್ರತಿಭಟನೆಗಳು ಮುಂದುವರಿದಿದೆ. 2 ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಮರಾಠ ಸಮುದಾಯವು ಸುವರ್ಣ ಸೌಧದ ಬಳಿ ಇರುವ ಕೊಂಡಸ್ ಕೊಪ್ಪ ಬಳಿ ಪ್ರತಿಭಟನೆ ನಡೆಸುತ್ತಿದೆ. ಸುವರ್ಣ ಸೌಧ ಮುತ್ತಿಗೆ ಹಾಕುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅಲ್ಲದೆ ರೈತ ವಿರೋಧಿ ಕಾಯ್ದೆ ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದೆ.
ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ವಿಚಾರವಾಗಿ ಬೆಳಗಾವಿಯಲ್ಲಿ ಮಾತನಾಡಿದ ಸಚಿವ ಸುನೀಲ್ ಕುಮಾರ್, ಸರ್ಕಾರ ಗಡಿ ವಿಚಾರಕ್ಕೆ ಕನ್ನಡಿಗರ ಭಾವನೆಗಳಿಗೆ ಗರಿಷ್ಠ ಆದ್ಯತೆ ಕೊಡುತ್ತದೆ. ಕನ್ನಡಿಗರ ಯಾವುದೇ ಭಾವನೆಯನ್ನ ಧಿಕ್ಕರಿಸುವ ಪ್ರಯತ್ನ ಮಾಡಿಲ್ಲ, ಮಾಡುವುದೂ ಇಲ್ಲ. ಗಡಿ ವಿವಾದ ವಿಚಾರವಾಗಿ ಇಬ್ಬರು ಮುಖ್ಯಮಂತ್ರಿಯವರು ಕೇಂದ್ರ ಗೃಹ ಸಚಿವರ ಜತೆಗೆ ಮಾತನಾಡಿದ್ದಾರೆ. ಏನೇ ಮಾತುಕತೆ ಇದ್ದರೂ ಕನ್ನಡಿಗರ, ಕರ್ನಾಟಕದ ಹಿತ ಪ್ರಮುಖವಾದದ್ದು. ಕರ್ನಾಟಕದ ಹಿತವನ್ನ ಬಿಟ್ಟು ಬೇರೆ ಯಾವುದೇ ಪ್ರಮುಖವಲ್ಲ. ಇವತ್ತು ವಿಧಾನಸಭೆಯಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರ ಸಂಬಂಧಿಸಿದಂತೆ ಮಸೂದೆ ಮಂಡನೆ ಮಾಡುತ್ತಿದ್ದೇವೆ. ಯಾವುದೇ ಹೊಸ ತಾಲೂಕು ರಚನೆ ಆಗಿದೆ, ಅದನ್ನ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸುವ ಮಸೂದೆ ಮಂಡನೆ ಮಾಡುತ್ತೇವೆ. ನಮ್ಮ ಸರ್ಕಾರ ಗಡಿಯಲ್ಲಿ ಶಾಲಾ, ಕಾಲೇಜುಗಳ ಅಭಿವೃದ್ಧಿಗೆ ಆದ್ಯತೆ ಕೊಡಲಿದೆ. ಗಡಿಯಷ್ಟೇ ಅಲ್ಲ ಜಗತ್ತಿನ ಯಾವುದೇ ಭಾಗದಲ್ಲಿ ಇರುವ ಕನ್ನಡಿಗರ ರಕ್ಷಣೆ ಮಾಡುವ ಜವಾಬ್ದಾರಿ ನಮ್ಮ ಸರ್ಕಾರದ್ದು, ಸದನದಲ್ಲೂ ಈ ಬಗ್ಗೆ ಪ್ರಸ್ತಾಪ ಮಾಡಿದರೆ ನಾವು ಮಾತನಾಡುತ್ತೇವೆ ಎಂದರು.
ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ವಿಚಾರವಾಗಿ ಬೆಳಗಾವಿಯಲ್ಲಿ ಹೇಳಿಕೆ ನೀಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ (J.C.Madhuswamy), ಗಡಿ ಮತ್ತು ಭಾಷೆ ವಿಚಾರದಲ್ಲಿ ನಾವು ರಾಜಿ ಆಗುವುದಿಲ್ಲ. ಮೊದಲಿನಿಂದಲೂ ನಾವು ಮಹಾಜನ್ ವರದಿ (Mahajan Report) ಅಂತಿಮ ಅಂತಾ ಹೇಳಿಕೊಂಡು ಬಂದಿದ್ದೇವೆ. ಮಹಾಜನ್ ವರದಿಯನ್ನ ಡಿಮ್ಯಾಂಡ್ ಮಾಡಿ ಮಾಡಿಸಿದ್ದು ಮಹಾರಾಷ್ಟ್ರ ಸರ್ಕಾರ. ಇಂದು ಕನ್ನಡ ಭಾಷೆ ಸಮಗ್ರ ಅಭಿವೃದ್ಧಿಗೆ ಮಂಡಿಸುತ್ತಿದ್ದೇವೆ ಎಂದರು.
ಗಡಿ ವಿಚಾರದಲ್ಲಿ ಸರ್ಕಾರಕ್ಕೆ ಗಂಭೀರತೆ, ಕಾಳಜಿ ಕಾಣುತ್ತಿಲ್ಲ ಎಂದು ಬೆಳಗಾವಿಯಲ್ಲಿ ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಹೇಳಿಕೆ ನೀಡಿದ್ದಾರೆ. ಕೇಂದ್ರ ಗೃಹ ಸಚಿವ ಸಭೆಯನ್ನು ಮುಖ್ಯಮಂತ್ರಿಯವರು ತಿರಸ್ಕಾರ ಮಾಡಬೇಕಿತ್ತು. ನಮ್ಮ ಕರ್ನಾಟಕ ಸರ್ಕಾರಕ್ಕೆ ಶಾಂತಿ ಕಾಪಾಡಲು ಆಗುವುದಿಲ್ವಾ? ಬೆಳಗಾವಿಯಲ್ಲಿ ಅಶಾಂತಿ ಇದೆಯಾ? ಪುರಾವೆಗಳನ್ನ ನೀವೆ ಸೃಷ್ಟಿ ಮಾಡುತ್ತಿದ್ದೀರಿ ಎಂದ ಅವರು, ತಪ್ಪು ಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರ ಜನರ ಕ್ಷಮೆ ಕೇಳಬೇಕು. ವಿಧಾನಸಭೆಯಲ್ಲಿ ಗಡಿ ವಿವಾದ ಕುರಿತ ಚರ್ಚೆ ಮಾಡುತ್ತೇವೆ. ತಕ್ಷಣ ಸರ್ವಾನುಮತದ ನಿರ್ಣಯ ಮಾಡಿ ದಿಟ್ಟ ಹೆಜ್ಜೆ ತೆಗೆದುಕೊಳ್ಳಬೇಕು ಮತ್ತೊಮ್ಮೆ ನಮ್ಮ ನಿಲವು ಗೊತ್ತುಪಡಿಸಬೇಕು ಎಂದರು.
ಎಸ್‌ಸಿ ಎಸ್‌ಟಿ ಮೀಸಲಾತಿ (SC/ST Reservation) ಹೆಚ್ಚಳ ವಿಚಾರವಾಗಿ ಅಧಿವೇಶನದಲ್ಲಿ ಕಾಂಗ್ರೆಸ್ (Congress) ನಿಲುವಳಿ ಸೂಚನೆ ಮಂಡಿಸಿದೆ. ಸರ್ಕಾರ ದಮನಿತ ವರ್ಗಗಳಿಗೆ ಅನ್ಯಾಯ ಮಾಡುತ್ತಿದೆ. ಮೀಸಲಾತಿ ಪ್ರಮಾಣವನ್ನು ಶೇ.50 ಕ್ಕಿಂತ ಹೆಚ್ಚು ಏರಿಸಲು ಸಾಧ್ಯವಿಲ್ಲ. ಸರ್ಕಾರದ ಪ್ರಸ್ತಾವನೆಯಂತೆ ಮೀಸಲಾತಿ ಪ್ರಮಾಣ ಶೇ.56 ಕ್ಕೆ ಏರಿಸಬೇಕಾಗುತ್ತದೆ. ಕೇವಲ ರಾಜಕೀಯ ಲಾಭಕ್ಕಾಗಿಯೇ ಮೀಸಲಾತಿ ಹೆಚ್ಚಳ ಮಾಡಿದೆ. ಸರ್ಕಾರಕ್ಕೆ ಯಾವುದೇ ನೈಜ ಕಾಳಜಿ ಇಲ್ಲ. ಈ ಕುರಿತು ನಿಯಮ 60 ರ ಮೇರೆಗೆ ಸದನದಲ್ಲಿ ಪ್ರಸ್ತಾಪಿಸಲು ನಿಲುವಳಿ ಸೂಚನೆ ನೀಡಿದೆ.
ಬೆಳಗಾವಿ ಅಧಿವೇಶನ (Belagavi Session)ದಲ್ಲಿ ಎಸ್‌ಸಿ, ಎಸ್‌ಟಿ ಮೀಸಲಾತಿ (SC/ ST reservation) ಸ್ಪಷ್ಟನೆಗೆ ಕಾಂಗ್ರೆಸ್ ಪಟ್ಟು ಹಿಡಿಯುವ ಸಾಧ್ಯತೆ ಇದೆ. ವಿಧಾನಸಭೆಯಲ್ಲಿ ಚರ್ಚೆಗೆ ಬರಲಿರುವ ಮಹತ್ವದ ವಿಚಾರಗಳಲ್ಲಿ ಎಸ್, ಎಸ್‌ಟಿ ಮೀಸಲಾತಿ ಇಂದಾಗಿದೆ. ನಿಯಮ 60ರ ಅಡಿಯಲ್ಲಿ ಚರ್ಚೆಗೆ ಅವಕಾಶ ನೀಡಲು ಸ್ಪೀಕರ್‌ಗೆ ಮನವಿ ಮಾಡಿ ಚರ್ಚೆಗೆ ಅವಕಾಶ ನೀಡುವಂತೆ ಕಾಂಗ್ರೆಸ್ ಮನವಿ ಸಲ್ಲಿಸುವ ಸಾಧ್ಯತೆ ಇದೆ. ಮೀಸಲಾತಿ ವಿಚಾರವಾಗಿ ಸರ್ಕಾರ ಸುಳ್ಳು ಹೇಳುತ್ತಿದೆ. ಚುನಾವಣೆಯಲ್ಲಿ ಲಾಭ ಪಡೆಯಲು ಹುನ್ನಾರ ನಡೆಸಿದೆ. ಮೀಸಲಾತಿ ನೀಡುವುದೆ ಆದರೆ ಕೇಂದ್ರದ 9ನೇ ಶೆಡ್ಯೂಲ್ನಲ್ಲಿ ಸೇರಿಸಲಿ. ಮೀಸಲಾತಿ ವಿಚಾರವಾಗಿ ಕೇಂದ್ರ ಸರ್ಕರದಿಂದ ಉತ್ತರ ಕೊಡಿಸಲಿ ಎಂದು ಉಭಯ ಸದನದಲ್ಲಿ ಕಾಂಗ್ರೆಸ್ ಪಟ್ಟು ಹಿಡಿಯುವು ಸಾಧ್ಯತೆ ಇದೆ. ಆ ಮೂಲಕ ಬಿಜೆಪಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ರಣತಂತ್ರ ರೂಪಿಸಿದೆ.
Published On - 8:41 am, Tue, 20 December 22