ಮತ್ತೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಬೆಳಗಾವಿ ಡಿಸಿಸಿ ಬ್ಯಾಂಕ್ ಎಲೆಕ್ಷನ್: ಘಟಾನುಘಟಿಗಳು ಕಣಕ್ಕೆ

ಬೆಳಗಾವಿ ಜಿಲ್ಲೆಯಲ್ಲಿ ಎಂಎಲ್ಎ ಮತ್ತು ಎಂಪಿ ಚುನಾವಣೆಯನ್ನ ಮೀರಿಸುವ ಮಟ್ಟಿಗೆ ಡಿಸಿಸಿ ಬ್ಯಾಂಕ್ ಚುನಾವಣೆ ನಡೆಯುತ್ತಿದೆ. ಮೊನ್ನೆಯಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು ಘಟಾನುಘಟಿ ನಾಯಕರೇ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಜಾರಕಿಹೊಳಿ ಬಣದಿಂದ ಇಂದು ನಾಮಪತ್ರ ಸಲ್ಲಿಕೆ ಆಗಿದ್ದರೆ, ಇದಕ್ಕೆ ಕೌಂಟರ್ ಆಗಿ ಕಿತ್ತೂರು, ರಾಮದುರ್ಗ, ನಿಪ್ಪಾಣಿ, ಹುಕ್ಕೇರಿ ತಾಲೂಕಿನಿಂದ ನಾಮಪತ್ರ ಸಲ್ಲಿಕೆ ಆಗಿವೆ. ಹೀಗಾಗಿ ಜಾರಕಿಹೊಳಿ ಬ್ರದರ್ಸ್ ನಿದ್ದೆಗೆಡಸಿದೆ. ಅಷ್ಟಕ್ಕೂ ಹೇಗಿದೆ ಬೆಳಗಾವಿಯಲ್ಲಿ ಡಿಸಿಸಿ ಬ್ಯಾಂಕ್ ಗದ್ದುಗೆ ಗುದ್ದಾಟ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಮತ್ತೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಬೆಳಗಾವಿ ಡಿಸಿಸಿ ಬ್ಯಾಂಕ್ ಎಲೆಕ್ಷನ್: ಘಟಾನುಘಟಿಗಳು ಕಣಕ್ಕೆ
Belagavi Dcc Bank
Updated By: ರಮೇಶ್ ಬಿ. ಜವಳಗೇರಾ

Updated on: Oct 09, 2025 | 10:19 PM

ಬೆಳಗಾವಿ, (ಅಕ್ಟೋಬರ್ 09): ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ (Belagavi BDCC bank election) ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತೆ. ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಜಾರಕಿಹೊಳಿ ಬ್ರದರ್ಸ್ ನಡುವೆ ಕಿಚ್ಚು ಹೊತ್ತಿಸಿದ್ದುಇದೇ ಡಿಸಿಸಿ ಬ್ಯಾಂಕ್. ಈ ಹಿಂದೆ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ರಾಜ್ಯ ರಾಜಕಾರಣವನ್ನೇ ಅಲ್ಲೋಲ ಕಲ್ಲೋಲ ಮಾಡಿತ್ತು. ಈಗ ಮತ್ತೆ ಜಿಲ್ಲೆಯ ಡಿಸಿಸಿ ಬ್ಯಾಂಕ್​ ಚುನಾವಣೆ ಎದುರಾಗಿದ್ದು, ಮತ್ತೊಮ್ಮೆ ಘಟಾನುಘಟಿ ನಾಯಕರ ಜಿದ್ದಾಜಿದ್ದಿ ವೇದಿಕೆಯಾಗುತ್ತಿದೆ. ಹೌದು…ಕತ್ತಿ ಕುಟುಂಬ ಹಾಗೂ ಜಾರಕಿಹೊಳಿ ಫ್ಯಾಮಿಲಿ ನಡುವೆ ಪೈಪೋಟಿ ಏರ್ಪಟ್ಟಿದೆ. ಹೀಗಾಗಿ ಈ ಬಾರಿ ಬೆಳಗಾವಿ ಮತ್ತೆ ರಾಜಕೀಯವಾಗಿ ಸದ್ದು ಮಾಡುತ್ತಿದೆ.

ಘಟಾನುಘಟಿ ನಾಯಕರು ನಾಮಪತ್ರ ಸಲ್ಲಿಕೆ

ಮೊನ್ನೆಯಷ್ಟೇ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಜೋರು ಸದ್ದು ಮಾಡಿತ್ತು. ಇದಾದ ಬೆನ್ನಲ್ಲೇ ಇದೀಗ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ಶುರುವಾಗಿದ್ದು, ಇದು ಕೂಡ ರಾಜ್ಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹದಿನೈದು ತಾಲೂಕುಗಳಿಂದ ಒಬ್ಬೊಬ್ಬರನ್ನ ನಿರ್ದೇಶಕರನ್ನಾಗಿ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರು ಆಯ್ಕೆ ಮಾಡಿ ಕಳುಹಿಸುತ್ತಾರೆ. ಇದೇ ಚುನಾವಣೆ ಅಕ್ಟೋಬರ್ 19ರಂದು ನಡೆಯುತ್ತಿದ್ದು. ಮೊನ್ನೆಯಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ. ಶನಿವಾರ ನಾಮಪತ್ರ ಕೊನೆಯ ದಿನವಾಗಿದೆ. ಹೀಗಾಗಿ ಇಂದು ಘಟಾನುಘಟಿ ನಾಯಕರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ರಾಜಾರೋಷವಾಗಿ ಲಾಂಗು, ಮಚ್ಚು ಹಿಡಿದು ಓಡಾಡ್ತಿರುವ ಪುಢಾರಿಗಳು, ವಿಡಿಯೋ ವೈರಲ್

ಚುಕ್ಕಾಣಿ ಹಿಡಿಯಲು ಜಾರಕಿಹೊಳಿ ಬ್ರದರ್ಸ್ ತಂತ್ರ

ಈಗಾಗಲೇ ಡಿಸಿಸಿ ಬ್ಯಾಂಕ್ ಚುಕ್ಕಾಣಿ ಹಿಡಿಯಲು ಜಾರಕಿಹೊಳಿ ಬ್ರದರ್ಸ್ 13 ತಾಲೂಕುಳಲ್ಲಿ ತಮ್ಮದೇ ಅಭ್ಯರ್ಥಿಗಳನ್ನ ಆಯ್ಕೆ ಮಾಡಿ ಕಣಕ್ಕಿಳಿಸಿದ್ದು ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಕಷ್ಟು ತಂತ್ರಗಾರಿಕೆ ಮಾಡ್ತಿದ್ದಾರೆ. ಇಂದು ಏಳು ಜನ ಅಭ್ಯರ್ಥಿಗಳ ಸಮೇತ ಆಗಮಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಳಗಾವಿಯಲ್ಲಿರುವ ಡಿಸಿಸಿ ಬ್ಯಾಂಕ್ ಗೆ ಆಗಮಿಸಿ ನಾಮ ಪತ್ರ ಸಲ್ಲಿಕೆ ಮಾಡಿದ್ದಾರೆ. ನಿಪ್ಪಾಣಿಯಿಂದ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಯರಗಟ್ಟಿಯಿಂದ ಶಾಸಕ ವಿಶ್ವಾಸ್ ವೈದ್ಯ, ಬೈಲಹೊಂಗಲದಿಂದ ಮಾಜಿ ಶಾಸಕ ಮಹಾಂತೇಶ್ ದೊಡ್ಡಗೌಡರ್, ಖಾನಾಪುರದಿಂದ ಮಾಜಿ ಶಾಸಕ ಅರವಿಂದ್ ಪಾಟೀಲ್, ಕಿತ್ತೂರಿನಿಂದ ವಿಕ್ರಮ್ ಇನಾಮದಾರ್, ರಾಯಬಾಗದಿಂದ ಅಪ್ಪಾಸಾಬ್ ಕುಲಗೋಡೆ, ಸವದತ್ತಿಯಿಂದ ವಿರೂಪಾಕ್ಷ ಮಾಮನಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಇನ್ನೂ ಅ.11ರಂದು ಇನ್ನೂಳಿದ ಆರು ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಇತ್ತ ವೈಯಕ್​ತಿಕವಾಗಿ ನಾವು ಯಾರನ್ನ ಟೀಕೆ ಮಾಡುವುದಿಲ್ಲ. ವೈಯಕ್ತಿಕ ಟೀಕೆ ಮಾಡುತ್ತಿರುವ ಕತ್ತಿ ವಿರುದ್ದ ಕಾನೂನು ರೀತಿ ಹೋರಾಟ ಮಾಡ್ತೇವಿ ಎಂದು ಹೇಳಿದ್ದಾರೆ.

ಜಾರಕಿಹೊಳಿ ಸಹೋದರರ ವಿರುದ್ದ ಸಡ್ಡು

ಇನ್ನೂ ಬಾಲಚಂದ್ರ ಜಾರಕಿಹೊಳಿ ಬಣಕ್ಕೆ ವಿರೋಧವಾಗಿ ಕಿತ್ತೂರು, ರಾಮದುರ್ಗ, ಬೈಲಹೊಂಗಲ, ನಿಪ್ಪಾಣಿ, ಹುಕ್ಕೇರಿ ಕ್ಷೇತ್ರದಿಂದ ಸ್ಪರ್ಧೆಗಳಿದಿದ್ದಾರೆ ಮಾಡ್ತಿದ್ದಾರೆ. ಕಿತ್ತೂರಿನಿಂದ ಶಾಸಕ ಬಾಬಾಸಾಹೇಬ್ ಪಾಟೀಲ್ ಸಹೋದರ ನಾನಾಸಾಹೇಬ್ ಪಾಟೀಲ್ ನಾಮ ಪತ್ರ ಸಲ್ಲಿಕೆ ಮಾಡಿದ್ದಾರೆ. ಇತ್ತ ರಾಮದುರ್ಗದಲ್ಲಿ ಹಾಲಿ ಮಾಜಿ ಶಾಸಕರು ಸ್ಪರ್ಧೆಗಿಳಿದಿದ್ದು, ಜಾರಕಿಹೊಳಿ ಸಹೋದರರ ವಿರುದ್ದ ಸಡ್ಡು ಹೊಡೆದಿದ್ದಾರೆ.

ರಾಮದುರ್ಗದಿಂದ ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಹಾಗೂ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಸಹೋದರ ಮಲ್ಲನ್ನ ಯಾದವಾಡ ಇಬ್ಬರು ಸ್ಪರ್ಧೆ ಮಾಡಿದ್ದು ಇಂದು ಇಬ್ಬರು ಪ್ರತ್ಯೇಕವಾಗಿ ಒಂದು ನಾಮ ಪತ್ರ ಸಲ್ಲಿಕೆ ಮಾಡಿದ್ದಾರೆ. ನಿಪ್ಪಾಣಿಯಿಂದ ಅಣ್ಣಾಸಾಹೇಬ್ ವಿರುದ್ದ ಉತ್ತಮ್ ಪಾಟೀಲ್, ಹುಕ್ಕೇರಿಯಲ್ಲಿ ಮಾಜಿ ಸಂಸದ ರಮೇಶ್ ಕತ್ತಿ, ಬೈಲಹೊಂಗಲದಿಂದ ವಿ.ಆಯ್ ಪಾಟೀಲ್ ನಾಮ ಪತ್ರ ಸಲ್ಲಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಶಾಸಕ ಬಾಬಾಸಾಹೇಬ್ ಪಾಟೀಲ್ ಮತ್ತು ಅಶೋಕ ಪಟ್ಟಣ ತಮ್ಮದು ಯಾವ ಬಣವಲ್ಲ. ಸ್ವತಂತ್ರ ಬಣ. ರೈತರ ಹಿತದೃಷ್ಟಿಯಿಂದ ಸ್ಪರ್ಧೆ ಮಾಡಿದ್ದೇವೆ. 19ರಂದು ಫಲಿತಾಂಶ ಬಂದ ಬಳಿಕ ಎಲ್ಲವೂ ಗೊತ್ತಾಗುತ್ತೆ ಎಂದಿದ್ದಾರೆ.

ಒಟ್ಟಿನಲ್ಲಿ ಸದ್ಯ ಡಿಸಿಸಿ ಬ್ಯಾಂಕ್ ಚುನಾವಣೆ ಕಾವು ರಂಗೇರುತ್ತಿದ್ದು, ಜಿಲ್ಲೆಯ ಘಟಾನುಘಟಿ ನಾಯಕರೇ ಅಖಾಡಕ್ಕಿಳಿದಿದ್ದರಿಂದ ಮತ್ತುಷ್ಟು ರಂಗು ಬರುವಂತೆ ಮಾಡಿದೆ. ಒಂದು ಕಡೆ ಜಾರಕಿಹೊಳಿ ಬಣ ಮತ್ತೊಂದು ಕಡೆ ಅವರ ವಿರೋಧಿ ಬಣಗಳು ಸಾಕಷ್ಟು ತಂತ್ರಗಾರಿಕೆ ಮಾಡುತ್ತಿದ್ದು , ಅ.19ರ ರಾತ್ರಿ ಎಲ್ಲದಕ್ಕೂ ಉತ್ತರ ಸಿಗಲಿದೆ.

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.