ಬೆಳಗಾವಿಯಲ್ಲಿ ಜೋರಾಯ್ತು ಜಗದೀಶ್ ಶೆಟ್ಟರ್ ಸ್ಪರ್ಧೆಗೆ ವಿರೋಧ: ರಾಜ್ಯ ನಾಯಕರು, ಹೈಕಮಾಂಡ್ ಭೇಟಿಗೆ ಮುಂದಾದ ಸ್ಥಳೀಯರು

| Updated By: ಗಣಪತಿ ಶರ್ಮ

Updated on: Mar 19, 2024 | 9:04 AM

ಹಾವೇರಿ ಮತ್ತು ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್ ಕೈತಪ್ಪಿ ಅಸಮಾಧಾನಗೊಂಡಿದ್ದ ಜಗದೀಶ್ ಶೆಟ್ಟರ್​ಗೆ ಇದೀಗ ಬೆಳಗಾವಿ ಕ್ಷೇತ್ರದಿಂದ ಟಿಕೆಟ್ ದೊರೆಯುವುದು ಬಹುತೇಕ ಖಚಿತವಾಗಿದೆ. ಆದರೆ ಅಲ್ಲಿ ಅವರಿಗೆ ಬಂಡಾಯದ ಬಿಸಿ ತಟ್ಟಲಾರಂಬಿಸಿದೆ. ಶೆಟ್ಟರ್ ಸ್ಪರ್ಧೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಸ್ಥಳೀಯ ನಾಯಕರು ಮುಂದಾಗಿದ್ದು, ಫಲ ಕೊಡದಿದ್ದರೆ ಹೈಕಮಾಂಡ್ ಬಳಿ ಮಾತನಾಡಲೂ ಸಿದ್ದರಾಗಿದ್ದಾರೆ.

ಬೆಳಗಾವಿಯಲ್ಲಿ ಜೋರಾಯ್ತು ಜಗದೀಶ್ ಶೆಟ್ಟರ್ ಸ್ಪರ್ಧೆಗೆ ವಿರೋಧ: ರಾಜ್ಯ ನಾಯಕರು, ಹೈಕಮಾಂಡ್ ಭೇಟಿಗೆ ಮುಂದಾದ ಸ್ಥಳೀಯರು
ಜಗದೀಶ್ ಶೆಟ್ಟರ್​
Follow us on

ಬೆಳಗಾವಿ, ಮಾರ್ಚ್​ 19: ಬೆಳಗಾವಿ ಲೋಕಸಭಾ ಕ್ಷೇತ್ರದಿಂದ (Belagavi Lok Sabha Constituency) ಮಾಜಿ ಸಿಎಂ ಜಗದೀಶ್ ಶೆಟ್ಟರ್​ಗೆ (Jagadish Shettar) ಬಿಜೆಪಿ (BJP) ಟಿಕೆಟ್ ದೊರೆಯುವುದು ಬಹುತೇಕ ಖಚಿತ ಎಂಬ ವರದಿಗಳ ಬೆನ್ನಲ್ಲೇ ಸ್ಥಳೀಯ ನಾಯಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಶೆಟ್ಟರ್ ಬದಲಿಗೆ ಸ್ಥಳೀಯರಿಗೆ ಟಿಕೆಟ್ ಕೊಡಬೇಕು ಎಂದು ಬೆಳಗಾವಿ ಬಿಜೆಪಿ ನಾಯಕರು ಆಗ್ರಹಿಸಿದ್ದು ಈ ವಿಚಾರವಾಗಿ ರಾಜನಾಯಕರನ್ನು ಭೇಟಿಯಾಗಿ ಮನವಿ ಸಲ್ಲಿಸಲು ಮುಂದಾಗಿದ್ದಾರೆ. ಒಂದು ವೇಳೆ ಇದು ಫಲ ಕೊಡದಿದ್ದರೆ, ದೆಹಲಿಗೆ ತೆರಳಿ ಹೈಕಮಾಂಡ್ ಅನ್ನು ಕೂಡ ಭೇಟಿಯಾಗುವ ಬಗ್ಗೆ ಸ್ಥಳೀಯ ನಾಯಕರು ಚಿಂತನೆ ನಡೆಸಿದ್ದಾರೆ.

ಬೆಳಗಾವಿಯ ಬಿಜೆಪಿ ನಾಯಕರು ಸಾಂಬ್ರಾ ವಿಮಾನ ನಿಲ್ದಾಣ ಮೂಲಕ ಬೆಂಗಳೂರಿಗೆ ತೆರಳಿದ್ದು, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸರವಾಲ್, ಸಂಘಟನಾ ಕಾರ್ಯದರ್ಶಿ ರಾಜೇಶ್ ಭೇಟಿಗೆ ಸಮಯ ಕೋರಿದ್ದಾರೆ. ಈ ನಾಯಕರನ್ನು ಭೇಟಿಯಾಗಲಿರುವ ಬೆಳಗಾವಿ ಮುಖಂಡರು ಶೆಟ್ಟರ್ ಬದಲು ಸ್ಥಳೀಯ ನಾಯಕರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಲಿದ್ದಾರೆ. ರಾಜ್ಯ ನಾಯಕರ ಪ್ರತಿಕ್ರಿಯೆ ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲು ಅವರು ನಿರ್ಧರಿಸಿದ್ದಾರೆ. ಒಂದು ವೇಳೆ ರಾಜ್ಯ ನಾಯಕರಿಂದ ಸಕಾರಾತ್ಮಕ ಸ್ಪಂದನೆ ಸಿಗದಿದ್ದರೆ, ದೆಹಲಿಗೆ ತರಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್​ ಸಂತೋಷ್ ಭೇಟಿಯಾಗಿ ಒತ್ತಡ ಹೇರಲು ನಿರ್ಧರಿಸಿದ್ದಾರೆ.

ವಿಧಾನಸಭಾ ಚುನಾವಣೆ ನಂತರ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಜಗದೀಶ್ ಶೆಟ್ಟರ್ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಮರಳಿ ಮಾತ್ರ ಪಕ್ಷ ಸೇರಿದ್ದರು. ಲೋಕಸಭೆ ಚುನಾವಣೆ ಟಿಕೆಟ್ ದೃಷ್ಟಿಯಲ್ಲಿ ಇಟ್ಟುಕೊಂಡು ಅವರು ಮತ್ತೆ ಬಿಜೆಪಿ ಸೇರಿರುವ ಸಾಧ್ಯತೆ ಇದೆ ಎನ್ನಲಾಗಿತ್ತು. ಅದರಂತೆ ಅವರು, ಧಾರವಾಡ ಮತ್ತು ಹಾವೇರಿ ಕ್ಷೇತ್ರದ ಟಿಕೆಟ್​ಗೆ ಬೇಡಿಕೆ ಇಟ್ಟಿದ್ದರು. ಆದರೆ, ಧಾರವಾಡದಿಂದ ಹಾಲಿ ಸಂಸದ, ಕೇಂದ್ರ ಸಚಿವರು ಆಗಿರುವ ಪ್ರಲ್ಹಾದ್ ಜೋಶಿಯನ್ನು ಹೈಕಮಾಂಡ್ ಕಣಕ್ಕಿಳಿಸಿದ್ದರೆ ಮತ್ತೊಂದೆಡೆ ಹಾವೇರಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಇದರಿಂದ ಶೆಟ್ಟರ್ ಅಸಮಾಧಾನಗೊಂಡಿದ್ದರು. ಅವರಿಗೆ ಖುದ್ದು ಕರೆ ಮಾಡಿದ್ದ ಕೇಂದ್ರ ಗ್ರಹ ಸಚಿವ, ಬೆಳಗಾವಿಯಿಂದ ಸ್ಪರ್ಧಿಸುವಂತೆ ಸೂಚನೆ ನೀಡಿದ್ದರು.

ಇದನ್ನೂ ಓದಿ: ಜಗದೀಶ್ ಶೆಟ್ಟರ್​ಗೆ ಬೆಳಗಾವಿ ಬಿಜೆಪಿ ಟಿಕೆಟ್ ಫಿಕ್ಸ್; ಮಂಗಳಾ ಅಂಗಡಿಗೆ ನಿರಾಸೆ

ಹೈಕಮಾಂಡ್ ಸೂಚನೆ ಇದ್ದರೂ ಕೂಡ ಬೆಳಗಾವಿಯಿಂದ ಶೆಟ್ಟರ್ ಸ್ಪರ್ಧೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಯಾವುದಕ್ಕೂ ಕ್ಯಾರೆ ಅನ್ನದ ಸ್ಥಳೀಯ ನಾಯಕರು ಶೆಟ್ಟರ್ ಬದಲು ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಇದು ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ