ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಎಲೆಕ್ಷನ್‌ನಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಎಂಇಎಸ್ ಎಂಬ ಕನ್ನಡಿಗರ ವಿರೋಧಿ ತರಲೆ ಸಂಘಟನೆ ಹೀನಾಯ ಸೋಲುಂಡಿದೆ. ಆದರೆ ಹೀನಾಯ ಸೋಲಿನ ಬೆನ್ನಲ್ಲೇ ಎಂಇಎಸ್ ಹೊಸ ಕ್ಯಾತೆ ತೆಗೆದಿದೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಪರಾಜಯ ಅನುಭವಿಸುತ್ತಿದ್ದಂತೆ ಅಲವತ್ತುಕೊಳ್ಳುವಂತೆ ಪಾಲಿಕೆ ಚುನಾವಣಾ ಪ್ರಕ್ರಿಯೆ ಕಾನೂನು ಬಾಹಿರವಾಗಿದೆ, ವಿವಿ ಪ್ಯಾಟ್ ಬಳಸದೆ ಚುನಾವಣೆಯಲ್ಲಿ ಅಕ್ರಮ ಎಸಗಲಾಗಿದೆ ಎಂದು ಆರೋಪ ಮಾಡಿದೆ.
ಈ ಹಿನ್ನೆಲೆಯಲ್ಲಿ ನಿನ್ನೆ ತಡರಾತ್ರಿ ಜಿಲ್ಲಾಧಿಕಾರಿ ನಿವಾಸಕ್ಕೆ ತೆರಳಿದ್ದ ಎಂಇಎಸ್ (Maharashtra Ekikaran Samiti -MES) ಪುಂಡರು ಅಲ್ಲಿ ಹೈಡ್ರಾಮಾ ನಡೆಸಿದ್ದಾರೆ. ಪಾಲಿಕೆ ಚುನಾವಣಾ ಪ್ರಕ್ರಿಯೆ ಕಾನೂನು ಬಾಹಿರವಾಗಿದೆ. ವಿವಿ ಪ್ಯಾಟ್ ಬಳಸದೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ನಿವಾಸದ ಮುಂದೆ MES ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಬೆಳಗಾವಿಯ ವಿಶ್ವೇಶ್ವರಯ್ಯ ನಗರದಲ್ಲಿನ ಜಿಲ್ಲಾಧಿಕಾರಿ ( Belagavi Deputy Commissioner M G Hiremath) ನಿವಾಸದಲ್ಲಿ ಎಂಇಎಸ್ ಪುಂಡರು ಹೈಡ್ರಾಮಾ ನಡೆಸಿದ್ದು, ಬೆಳಗಾವಿ ಮಹಾನಗರ ಪಾಲಿಕೆಗೆ ಮರುಚುನಾವಣೆಗೆ ಮನವಿ ಮಾಡಿದ್ದಾರೆ.
ಚುನಾವಣೆಯಲ್ಲಿ ವಿವಿ ಪ್ಯಾಟ್ ಬಳಸದ ಬಗ್ಗೆ ಕೆಲ ಅಭ್ಯರ್ಥಿಗಳು ಆಗಸ್ಟ್ 31ರಂದೇ ತಕರಾರು ಅರ್ಜಿ ಸಲ್ಲಿಸಿದ್ರು. ಆದರೂ ಇದನ್ನು ಗಮನಕ್ಕೆ ತಗೆದುಕೊಳ್ಳದೇ ಚುನಾವಣೆ ನಡೆಸಲಾಗಿದೆ ಅಂತಾ ಎಂಇಎಸ್ ಪುಂಡರು ಆರೋಪ ಮಾಡಿದ್ದಾರೆ. ಸಮಸ್ಯೆ ಬಗೆಹರಿಯುವವರೆಗೂ ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರ ಮಾಡಿಸದಂತೆಯೂ ಮನವಿ ಮಾಡಿದ್ದಾರೆ. ಇಲ್ಲವಾದರೆ, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹೀನಾಯ ಸೋಲಿನಿಂದ ಕಂಗಾಲಾಗಿರುವ ಎಂಇಎಸ್ ಪುಂಡರು ಪ್ರತಿಭಟನೆ ನಡೆಸೋದಾಗಿ ಬೆದರಿಕೆಯೊಡ್ಡಿದ್ದಾರೆ.
ಅನುಮತಿ ಪಡೆಯದೇ ಅಳವಡಿಸಿದ್ದ ನಾಮಫಲಕ ತೆರವುಗೊಳಿಸಿದ ಪೊಲೀಸರು:
ಬೆಳಗಾವಿ ಆರ್‌ಪಿಡಿ ವೃತ್ತದಲ್ಲಿ ರಾಜವೀರ ಮದಕರಿ ನಾಯಕ ವೃತ್ತ ನಾಮಫಲಕ ಅಳವಡಿಕೆ ಹಿನ್ನೆಲೆ ನಗರ ಪೊಲೀಸರು ಶ್ರೀ ರಾಜವೀರ ಮದುಕರಿ ನಾಯಕ ನಾಮಫಲಕ ತೆರವುಗೊಳಿಸಿದ್ದಾರೆ. ಅನುಮತಿ ಪಡೆಯದೇ ಅಳವಡಿಸಿದ್ದ ನಾಮಫಲಕವನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಸದ್ಯ ಆರ್‌ಪಿಡಿ ವೃತ್ತದಲ್ಲಿ ಪೊಲೀಸ್ ಬಿಗಿ ಭದ್ರತೆ ಹಾಕಲಾಗಿದೆ. 50ಕ್ಕೂ ಅಧಿಕ ಪೊಲೀಸರು, ಒಂದು ಕೆಎಸ್‌ಆರ್‌ಪಿ ತುಕಡಿ ನಿಯೋಜನೆಗೊಂಡಿದೆ.
ನಾಯಕ ಸಮುದಾಯದ ಯುವಕರು ಸೇರಿಕೊಂಡು ವೀರ ಮದಕರಿ ಅಭಿಮಾನಿ ಬಳಗದವರು ಫಲಕ ಅಳವಡಿಸಿದ್ದರು. 20ಕ್ಕೂ ಹೆಚ್ಚು ಯುವಕರು ಸೇರಿಕೊಂಡು ಬೆಳ್ಳಂಬೆಳಗ್ಗೆ ನಾಮಫಲಕ ಅಳವಡಿಸಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ನಾಮಫಲಕ ತೆರವುಗೊಳಿಸಿ ಯುವಕರನ್ನು ಚದುರಿಸಿದ್ದರು. ಬೆಳಗಾವಿ ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
(Belagavi City Corporation polls MES wants reelections)
Published On - 9:11 am, Tue, 7 September 21