ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ ಮತ್ತೆ ರೀ ಓಪನ್ ಮಾಡುತ್ತಾ ಸರ್ಕಾರ..?
ಸದ್ಯ ಕರ್ನಾಟಕದಲ್ಲಿ ಗುತ್ತಿಗೆದಾರರ ಸಂಘ ಹಾಗೂ ಸರ್ಕಾರದ ವಿರುದ್ಧ ಜಟಾಪಟಿ ಜೋರಾಗಿದೆ. ಇದರ ಮಧ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದ ಗುತ್ತಿಗೆದಾರ ಸಂತೋಷ್ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದೆ. ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ಸರ್ಕಾರ ಮತ್ತೆ ರೀ ಓಪನ್ ಮಾಡುತ್ತಾ? ಎನ್ನುವ ಸುದ್ದಿ ಹಬ್ಬಿದೆ.
ಬೆಳಗಾವಿ, (ಆಗಸ್ಟ್ 11): ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ(Santosh Suicide Case) ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಅಲ್ಲದೇ ಈ ಪ್ರಕರಣ ಕೆಎಸ್ ಈಶ್ವರಪ್ಪ (KS Eshwarappa) ತಲೆದಂಡಕ್ಕೂ ಕಾರಣವಾಗಿತ್ತು. ನಂತರ ಈ ಪ್ರಕರಣದಲ್ಲಿ ಈಶ್ವರಪ್ಪಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಕ್ಲೀನ್ಚಿಟ್ ನೀಡಿತ್ತು. ಇದೀಗ ಈ ಕೇಸ್ ಮತ್ತೆ ಮರು ಜೀವ ಪಡೆಯುತ್ತಾ? ಎನ್ನುವ ಚರ್ಚೆಗಳು ಶುರುವಾಗಿವೆ. ಹೌದು.. ಇದಕ್ಕೆ ಪೂರಕವೆಂಬಂತೆ ಸಂತೋಷ ಕುಟುಂಬಸ್ಥರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಭೇಟಿಗೆ ಮುಂದಾಗಿದ್ದಾರೆ.
ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ನಿಯೋಗ ಈ ಹಿಂದೆ ಸಂತೋಷ ನಿವಾಸಕ್ಕೆ ಭೇಟಿ ನೀಡಿ ನ್ಯಾಯ ಕೊಡಿಸುವ ಭರವಸೆ ನೀಡಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದರಿಂದ ಸಂತೋಷ ಕುಟುಂಬಸ್ಥರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಭೇಟಿಗೆ ಮುಂದಾಗಿದ್ದಾರೆ. ಸಂತೋಷ ಪಾಟೀಲ್ ಪತ್ನಿ ಜಯಶ್ರೀ, ಪುತ್ರ ರಚೇತ್‌ಗೌಡ, ತಾಯಿ ಪಾರ್ವತಿ, ಸಹೋದರ ಪ್ರಶಾಂತ್ ಅವರು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಲು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಸಂತೋಷ ಪಾಟೀಲ್ ಪ್ರಕರಣ ಬಿ ರಿಪೋರ್ಟ್ ಸಲ್ಲಿಕೆಯಿಂದ ಅನ್ಯಾಯ ಆಗಿದೆ. ಪ್ರಕರಣವನ್ನ ಸಿಬಿಐ ಇಲ್ಲವೇ ಸಿಐಡಿಗೆ ವಹಿಸಬೇಕೆಂದು ಮನವಿ ಮಾಡಲಿದ್ದಾರಂತೆ. ಹೀಗಾಗಿ ಸಂತೋಷ್ ಕುಟುಂಬಸ್ಥರ ಮನವಿ ಮೇರೆ ಸರ್ಕಾರ ಪ್ರಕರಣವನ್ನು ಮತ್ತೆ ರೀ ಓಪನ್ ಮಾಡಿಸಿ ಸಿಬಿಐ ಅಥವಾ ಸಿಐಡಿ ತನಿಖೆಗೆ ವಹಿಸುತ್ತಾ ಎಂದು ಕಾದು ನೋಡಬೇಕಿದೆ.
2022ರ ಏಪ್ರಿಲ್ 13 ರಂದು ಉಡುಪಿಯ ಲಾಡ್ಜ್‌ವೊಂದರಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಸಂತೋಷ, ಡೆತ್ನೋಟ್ನಲ್ಲಿ ಅಂದಿನಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಹೆಸರು ಉಲ್ಲೇಖಿಸಿ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದರು. ಕಾಮಗಾರಿ ನಡೆಸಿದ ಸಂಬಂಧ ಸರ್ಕಾರದಿಂದ ಬಿಲ್ ಮಂಜೂರು ಮಾಡಲು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ಅವರು ಶೇ.40ರಷ್ಟು ಕಮೀಷನ್ ಕೇಳಿದ್ದರು ಎಂದು ಮೃತ ಸಂತೋಷ್ ಪಾಟೀಲ್ ಆರೋಪಿಸಿದ್ದರು. ಇದರಿಂದಾಗಿ ಈಶ್ವರಪ್ಪ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಪ್ರಕರಣದ ತನಿಖೆ ಬಳಿಕ ಮಾಜಿ ಸಚಿವ ಈಶ್ವರಪ್ಪಗೆ ಕ್ಲೀನ್ ಚಿಟ್ ಸಿಕ್ಕಿತ್ತು.
ಇನ್ನಷ್ಟು ರಾಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ