ಕರ್ನಾಟಕದ ಸಕ್ಕರೆ ಕಾರ್ಖಾನೆಗಳಲ್ಲಿ ರಾಜಕಾರಣಿಗಳದ್ದೇ ಪಾರಮ್ಯ: ಈ ನಾಯಕರೆಲ್ಲ ಮಾಲೀಕರೇ!
ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಕಬ್ಬು ಬೆಳೆಗಾರರು ಕ್ವಿಂಟಾಲ್‌ಗೆ 3,500 ರೂ. ಬೆಲೆಗೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಹೆಚ್ಚಿನ ಸಕ್ಕರೆ ಕಾರ್ಖಾನೆಗಳು ಪ್ರಭಾವಿ ರಾಜಕಾರಣಿಗಳ ಒಡೆತನದಲ್ಲಿರುವುದೇ ರೈತರ ಹಿತಾಸಕ್ತಿಯನ್ನು ಕಡೆಗಣಿಸಲು ಕಾರಣ ಎಂಬ ಆರೋಪ ಕೇಳಿಬಂದಿದೆ. ಹಾಗಾದರೆ, ಯಾವೆಲ್ಲ ರಾಜಕಾರಣಿಗಳ, ಸಚಿವರ ಒಡೆತನದಲ್ಲಿ ಸಕ್ಕರೆ ಕಾರ್ಖಾನೆಗಳಿವೆ? ಮಾಹಿತಿ ಇಲ್ಲಿದೆ.

ಬೆಳಗಾವಿ, ನವೆಂಬರ್ 7: ಕ್ವಿಂಟಲ್ ಕಬ್ಬಿಗೆ 3,500 ರೂ. ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ಬೆಳಗಾವಿ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕಬ್ಬು ಬೆಳೆಗಾರರ ಹೋರಾಟ (Farmers Protest) ತೀವ್ರಗೊಂಡಿದೆ. ಇದರ ಬೆನ್ನಲ್ಲೇ, ರಾಜ್ಯ ಸರ್ಕಾರ ಇಂದು ಸಕ್ಕರೆ ಕಾರ್ಖಾನೆ (Sugar Factory) ಮಾಲೀಕರ ಜತೆ ಸಭೆ ನಡೆಸುತ್ತಿದೆ. ಮತ್ತೊಂದೆಡೆ, ಕರ್ನಾಟಕದ ಸಕ್ಕರೆ ಕಾರ್ಖಾನೆಗಳ ಪೈಕಿ ಹೆಚ್ಚಿನವು ಪ್ರಭಾವಿ ನಾಯಕರ ಒಡೆತನದಲ್ಲಿರುವುದು ಗುಟ್ಟಾಗಿ ಉಳಿದಿಲ್ಲ. ಹಾಗಾದರೆ, ಯಾವೆಲ್ಲ ರಾಜಕಾರಣಿಗಳು ಸಕ್ಕರೆ ಕಾರ್ಖಾನೆಗಳ ಮಾಲೀಕರಾಗಿದ್ದಾರೆ? ಯಾವ ಪ್ರಭಾವಿ ನಾಯಕರ ಒಡೆತನದಲ್ಲಿ ಎಷ್ಟು ಸಕ್ಕರೆ ಕಾರ್ಖಾನೆಗಳಿವೆ? ಬೆಳಗಾವಿ ಜಿಲ್ಲೆಯೊಂದರಲ್ಲೇ 10ಕ್ಕೂ ಹೆಚ್ಚು ಮಂದಿ ರಾಜಕೀಯ ನಾಯಕರು ಸಕ್ಕರೆ ಕಾರ್ಖಾನೆ ಮಾಲೀಕರಾಗಿದ್ದಾರೆ ನೀವು ನಂಬಲೇಬೇಕು!
ಬೆಳಗಾವಿ ಜಿಲ್ಲೆಯಲ್ಲಿವೆ 26 ಸಕ್ಕರೆ ಕಾರ್ಖಾನೆ: ರಾಜಕಾರಣಿಗಳ ಪಾಲೆಷ್ಟು?
ಬೆಳಗಾವಿ ಜಿಲ್ಲೆ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಒಡೆತನದಲ್ಲಿ 2 ಸಕ್ಕರೆ ಕಾರ್ಖಾನೆಗಳಿವೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಒಡೆತನದ 1, ಅವರ ಸಹೋದರ ಚನ್ನರಾಜ್ ಹಟ್ಟಿಹೊಳಿ ಅಧ್ಯಕ್ಷತೆಯಲ್ಲಿ 1 ಕಾರ್ಖಾನೆ ಇದೆ. ಕತ್ತಿ ಕುಟುಂಬದ 1, ಸವದಿ ಕುಟುಂಬದ ಹಿಡಿತದಲ್ಲಿ 1, ರಮೇಶ್ ಜಾರಕಿಹೊಳಿ ಒಡೆತನದಲ್ಲಿ 1, ಬಾಲಚಂದ್ರ ಜಾರಕಿಹೊಳಿ ಹಿಡಿತದಲ್ಲಿ 1, ಜೊಲ್ಲೆ ಹಿಡಿತದಲ್ಲಿರುವ 2, ಶಾಸಕ ವಿಠ್ಠಲ್ ಹಲಗೇಕರ್ ಒಡೆತನದ 1, ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಹಿಡಿತದಲ್ಲಿ 3, ಮಾಜಿ ಸಚಿವ ಶ್ರೀಮಂತ್ ಒಡೆತನದಲ್ಲಿ 1, ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಹಿಡಿತದಲ್ಲಿ 1 ಸೇರಿ ಬೆಳಗಾವಿ ಜಿಲ್ಲೆಯಲ್ಲಿ 26 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ.
ಇನ್ನು ಬೇರೆ ಜಿಲ್ಲೆಗಳ ಮತ್ತು ಇತರ ನಾಯಕರಿಗೆ ಸಂಬಂಧಿಸಿದಂತೆ, ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಚಿವ ಎಂಬಿ ಪಾಟೀಲ್ ಅವರೂ ಸಹ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಕ್ಕರೆ ಕಾರ್ಖಾನೆಗಳ ಮೇಲೆ ಹಿಡಿತ ಹೊಂದಿದ್ದಾರೆ. ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತ ಸಕ್ಕರೆ ಕಾರ್ಖಾನೆ ನಡೆಸುತ್ತಿರುವ ಸಹಕಾರಿ ಬ್ಯಾಂಕ್ನ ಅಧ್ಯಕ್ಷರಾಗಿಯೂ ಬಸನಗೌಡ ಪಾಟೀಲ್ ಯತ್ನಾಳ್ ಕಾರ್ನಿರ್ವಹಿಸುತ್ತಿದ್ದಾರೆ. ಬೆಳಗಾವಿ ಪ್ರದೇಶದ ಪಾಟೀಲ್ ಒಡೆತನದ ವಿವಿಧ ಸಕ್ಕರೆ ಕಂಪನಿಗಳೊಂದಿಗೆ ಸಚಿವ ಎಂಬಿ ಪಾಟೀಲ್ ಸಂಬಂಧ ಹೊಂದಿದ್ದಾರೆ.
ಪ್ರಮುಖ ಸಕ್ಕರೆ ಕಾರ್ಖಾನೆಗಳು, ಮಾಲೀಕರ ವಿವರ
- ಮಲ್ಲಿಕಾರ್ಜುನ ಕೋರೆ – ಚಿದಾನಂದ ಪ್ರಭು ಕೋರೆ ಸಹಕಾರಿ ಕಾರ್ಖಾನೆ
- ಸತೀಶ್ ಜಾರಕಿಹೊಳಿ – ಬೆಳಗಾಂ ಶುಗರ್ಸ್, ಸತೀಶ್ ಶುಗರ್ಸ್
- ರಮೇಶ್ ಜಾರಕಿಹೊಳಿ – ಗೋಕಾಕ್ ಸಕ್ಕರೆ ಕಾರ್ಖಾನೆ, ಹಿರೇನಂದಿ ಸೌಭಾಗ್ಯಲಕ್ಷ್ಮೀ ಕಾರ್ಖಾನೆ
- ಲಕ್ಷ್ಮೀ ಹೆಬ್ಬಾಳ್ಕರ್ – ಹರ್ಷ ಶುಗರ್ಸ್, ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ
- ಪ್ರಭಾಕರ್ ಕೋರೆ – ಶಿವಶಕ್ತಿ ಶುಗರ್ಸ್
- ಶಾಮನೂರು ಶಿವಶಂಕರಪ್ಪ – ಬೀರೇಶ್ವರ್ ಸಕ್ಕರೆ ಕಾರ್ಖಾನೆ
- ಶ್ರೀಮಂತ ಪಾಟೀಲ್ – ಅಥಣಿ ಫಾರ್ಮರ್ಸ್ ಶುಗರ್ಸ್
- ನಿಖಿಲ್ ಕತ್ತಿ – ವಿಶ್ವರಾಜ್ ಶುಗರ್ಸ್
- ರಮೇಶ್ ಕತ್ತಿ – ಹಿರಣ್ಯಕೇಶಿ ಸಹಕಾರ ಸಕ್ಕರೆ ಕಾರ್ಖಾನೆ
- ಅಣ್ಣಸಾಹೇಬ್ ಜೊಲ್ಲೆ – ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆ
- ಲಕ್ಷ್ಮಣ್ ಸವದಿ – ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆ
- ಬಾಲಚಂದ್ರ ಜಾರಕಿಹೊಳಿ – ದಿ. ಘಟಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ
ಇದನ್ನೂ ಓದಿ: ಬೆಳಗಾವಿ ಕಬ್ಬು ಬೆಳೆಗಾರರ ಕಿಚ್ಚು ಹೆಚ್ಚಾಗುತ್ತಿದ್ದಂತೆಯೇ ಸ್ಥಳಕ್ಕೆ ಓಡೋಡಿ ಬಂದ ಸಚಿವ ಹೇಳಿದ್ದೇನು?
ಕರ್ನಾಟಕದಲ್ಲಿ ಕಬ್ಬಿನ ದರ ವಿಚಾರವಾಗಿ ಆಗಾಗ ಹಿತಾಸಕ್ತಿ ಸಂಘರ್ಷಗಳು ಉದ್ಭವಿಸುತ್ತಿವೆ. ಈ ಬಾರಿ ರೈತರ ಹೋರಾಟ ತೀವ್ರಗೊಂಡಿದೆ. ಹೆಚ್ಚಿನ ಸಂಖ್ಯೆಯ ಸಕ್ಕರೆ ಕಾರ್ಖಾನೆಗಳು ರಾಜಕಾರಣಿಗಳ ಒಡೆತನದಲ್ಲೇ ಇದ್ದು, ರೈತರ ಹಿತಾಸಕ್ತಿ ಕಡೆಗಣಿಸುತ್ತಿವೆ ಎಂಬ ಆರೋಪವಿದೆ. ಇದೀಗ, ಪ್ರಭಾವಿ ನಾಯಕರ ಸಕ್ಕರೆ ಕಾರ್ಖಾನೆಗಳ ಲಾಬಿಗೆ ಸರ್ಕಾರ ಮಣಿಯುತ್ತಿದೆ ಎಂಬ ಆರೋಪಗಳೂ ಕೇಳಿಬಂದಿವೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:44 am, Fri, 7 November 25



